ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಆಗ್ರಾಕ್ಕೆ ಹೋದವರು ತಾಜ್‌ಮಹಲ್ ನೋಡಿಯೇ ಮರಳುತ್ತಾರೆ. ಅಷ್ಟಕ್ಕೂ ಅಲ್ಲಿಗೆ ಹೋಗುವುದೇ ಅದಕ್ಕೆ. ಹಾಗೆಯೇ ಮಂತ್ರಾಲಯಕ್ಕೆ
ಹೋದವರು ಗುರು ರಾಘವೇಂದ್ರರ ಬೃಂದಾವನವನ್ನು ನೋಡದೇ ವಾಪಸ್ ಬರುವುದಿಲ್ಲ. ಅದೇ ರೀತಿ ದುಬೈಗೆ ಹೋದವರು ಅಲ್ಲಿನ ಬೃಹತ್ ಮಾಲ್ ಗಳಿಗೆ ಭೇಟಿ ನೀಡದೇ ಮರಳುವುದು ಸಾಧ್ಯವೇ ಇಲ್ಲ. ಅನೇಕರಿಗೆ ಬೇರೇನೂ ಕೆಲಸವಿಲ್ಲ, ಮಾಲ್‌ಗಳಲ್ಲಿ ಶಾಪಿಂಗ್ ಮಾಡಲೆಂದೇ ದುಬೈಗೆ ಹೋಗುತ್ತಾರೆ.
ಅಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ. ಆದರೆ ಅಲ್ಲಿನ ಲಕ್ಸುರಿ ಮಾಲ್‌ಗಳಿಗೆ ಹೋಗದೇ ಯಾರೂ ಬರುವುದಿಲ್ಲ. ಬರೀ ಮಾಲ್‌ಗಳನ್ನು ನೋಡುತ್ತಾ ಹತ್ತು ದಿನ ಕಳೆದುಬಿಡಬಹುದು. ಆದರೂ ಎಲ್ಲ ಮಾಲ್‌ಗಳನ್ನು ನೋಡಲು ಸಾಧ್ಯವಿಲ್ಲ. ಕೆಲವು ಮಾಲ್‌ನಲ್ಲಿ ಏನೂ ಖರೀದಿಸದೇ, ಸುಮ್ಮನೆ ಎಲ್ಲ ಅಂಗಡಿಗಳನ್ನು ನೋಡುತ್ತಾ ಒಂದು ಸುತ್ತು ಹಾಕಲು ಒಂದೆರಡು ದಿನಗಳಾದರೂ ಬೇಕು. ದುಬೈ ವಿಶ್ವದ ಪ್ರಮುಖ ಶಾಪಿಂಗ್ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿನ ಮಾಲ್‌ಗಳು ವೈಶಿಷ್ಟ್ಯಪೂರ್ಣ ಹಾಗೂ ಆಕರ್ಷಣೆಯ ಕೇಂದ್ರಗಳಾಗಿವೆ. ದುಬೈನಲ್ಲಿ ಹಲವಾರು ದೊಡ್ಡ ಮತ್ತು ಅತ್ಯಾಧುನಿಕ ಶಾಪಿಂಗ್ ಮಾಲ್‌ಗಳಿದ್ದು ಇವು ಪ್ರತಿ ವಯೋಮಾನದವರಿಗೆ ಆಕರ್ಷಕವಾಗಿವೆ. ದುಬೈನ ಶೇಖ್ ಝಾಯದ್ ರಸ್ತೆ ಬಳಿ, ಬುರ್ಜ್
ಖಲೀ-ದ ಪಕ್ಕದಲ್ಲಿರುವ ದುಬೈ ಮಾಲ್ (The Dubai Mall) ವಿಶ್ವದ ಅತಿದೊಡ್ಡ ಮಾಲ್‌ಗಳಲ್ಲಿ ಒಂದು.
ಇದು ಸುಮಾರು 50 ಫುಟ್ಬಾಲ್ ಕ್ರೀಡಾಂಗಣಕ್ಕೆ ಸಮ. ಇಲ್ಲಿ ಏನಿಲ್ಲವೆಂದರೂ 1200ಕ್ಕೂ ಹೆಚ್ಚು ಅಂಗಡಿಗಳಿವೆ. ಬೃಹತ್ ಅಕ್ವೇರಿಯಂ ಮತ್ತು ಅಂಡರ್‌ವಾಟರ್ ಝೂ ಇಲ್ಲಿನ ಪ್ರಮುಖ ಆಕರ್ಷಣೆ. ಒಲಿಂಪಿಕ್ ಗಾತ್ರದ ಐಸ್ ರಿಂಕ್ (Ice Rink), ವಿಆರ್ ಪಾರ್ಕ್, ಕಿಡ್ಝಾನಿಯಾ, ಬಾಸ್ಕೆಟ್ ಬಾಲ್ ಕೋರ್ಟ್ ಸೇರಿದಂತೆ ಹಲವು ಆಕರ್ಷಣೆಗಳಿವೆ. ಈ ಮಾಲ್‌ನಲ್ಲಿರುವ ಫ್ಯಾಶನ್ ಅವೆನ್ಯೂನಲ್ಲಿ ಜಗತ್ತಿನ ಲಕ್ಸುರಿ ಬ್ರ್ಯಾಂಡ್ ವಸ್ತುಗಳೆಲ್ಲ ಸಿಗುತ್ತವೆ. ಜಗತ್ತಿನ ಅತಿ ಗಣ್ಯ ವ್ಯಕ್ತಿಗಳನ್ನು, ಸಿನಿಮಾ ನಟ-ನಟಿಯರನ್ನು ಅಲ್ಲಿ ನೋಡಬಹುದು.
ಇತ್ತೀಚೆಗೆ ನಾನು ಅಲ್ಲಿ ಓಡಾಡುವಾಗ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಕುಟುಂಬ ಸದಸ್ಯರೊಂದಿಗೆ ಕಾಫಿ ಕುಡಿಯು ತ್ತಿದ್ದರು. ಪ್ರತಿದಿನ ದುಬೈ ಮಾಲ್‌ಗೆ ಕನಿಷ್ಠ 1 ಲಕ್ಷ ಜನರಾದರೂ ಭೇಟಿ ನೀಡುತ್ತಾರೆ. ಪ್ರತಿವರ್ಷ ಸುಮಾರು 75 ದಶಲಕ್ಷ ಜನ ಅಲ್ಲಿಗೆ ಭೇಟಿ ನೀಡುತ್ತಾರಂತೆ. ಅಲ್ಲಿ ಸುಮಾರು 14000 ಕಾರುಗಳ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ದುಬೈ ಮಾಲ್ ನಲ್ಲಿ ಜಗತ್ತಿನಲ್ಲಿಯೇ ದೊಡ್ಡದಾದ ಕ್ಯಾಂಡಿ ಶಾಪ್ ಇದೆ. ಅದನ್ನು 10 ಸಾವಿರ ಚದರಡಿ ಜಗದಲ್ಲಿ ನಿರ್ಮಿಸಲಾಗಿದೆ. ದುಬೈ ಮಾಲ್ ಅನ್ನು ಕೇವಲ ಮಾಲ್ ಎಂದು ಕರೆದರೆ ಅಪಚಾರವಾದೀತು. ಅದೇ ಒಂದು ಪ್ರೇಕ್ಷಣೀಯ ತಾಣ (Destination). Mall of the Emirates ಎಂಬ ಶಾಪಿಂಗ್ ಮಾಲ್‌ನಲ್ಲಿ 600ಕ್ಕೂ ಹೆಚ್ಚು ಅಂಗಡಿಗಳಿವೆ.
ಫ್ಯಾಶನ್, ಇಲೆಕ್ಟ್ರಾನಿಕ್ಸ್, ಜ್ಯುವೆಲ್ಲರಿ ಮತ್ತು ಅಂತಾ ರಾಷ್ಟ್ರೀಯ ಬ್ರ್ಯಾಂಡ್‌ಗಳು ಅಲ್ಲಿ ಲಭ್ಯ. ಉಷ್ಣಪ್ರದೇಶದಲ್ಲಿರುವ ಮೊದಲ ಆಂತರಿಕ ಹಿಮಾಲಯ ಪಾರ್ಕ್- ಸ್ಕಿ ದುಬೈ ಮತ್ತು ಹಲವಾರು ಅತಿಥಿ ಹೋಟೆಲ್‌ಗಳು ಹಾಗೂ ಉತ್ಕೃಷ್ಟ ರೆಸ್ಟೋರೆಂಟ್‌ಗಳು ಅಲ್ಲಿವೆ. ದುಬೈ ಮರೀನಾ ಮಾಲ್ ‘ಫ್ಯಾಮಿಲಿ ಮಾಲ್’ ಎಂದು ಕರೆಯಿಸಿಕೊಂಡಿದೆ. ಹಲವಾರು ರೆಸ್ಟೋರೆಂಟ್‌ಗಳು ಮತ್ತು ಕಾಫಿ ಶಾಪ್‌ಗಳಿರುವ ಈ ಮಾಲ್‌ನಲ್ಲಿ ಸುಮಾರು 140 ಅಂಗಡಿಗಳಿವೆ. ಇಬ್ನ್ ಬಟೂಟಾ ಮಾಲ್ ಅನ್ನು ಐತಿಹಾಸಿಕ ಪಠ್ಯಗಳಲ್ಲಿ ಪ್ರೇರಿತವಾಗಿರುವ ವಿವಿಧ ಥೀಮ್‌ಗಳ ಮೇಲೆ
ವಿನ್ಯಾಸಗೊಳಿಸಲಾಗಿದೆ. 270ಕ್ಕೂ ಹೆಚ್ಚು ಅಂಗಡಿಗಳಿರುವ ಅಲ್ಲಿ ಚೀನಾ, ಇಂಡಿಯಾ, ಪರ್ಸಿಯಾ, ಅರೇಬಿಯಾ, ಇಜಿಗಳ ಪ್ರತಿಕೃತಿಯನ್ನು
ನಿರ್ಮಿಸಲಾಗಿದೆ. ದುಬೈ ಕ್ರೀಕ್ ಬಳಿ ಇರುವ ಫೆಸ್ಟಿವಲ್ ಸಿಟಿ ಮಾಲ್, ಹೈಪರ್ ಮಾರ್ಕೆಟ್‌ಗಳು ಮತ್ತು ಪ್ರಸಿದ್ಧ ರೆಸ್ಟೋರೆಂಟ್‌ಗಳಿಗೆ ಪ್ರಸಿದ್ಧ.
ಇವಲ್ಲದೇ ಸಿಟಿ ಸೆಂಟರ್ ದೇರಾ, ಮಿರ್ಡಿ- ಸಿಟಿ ಸೆಂಟರ್, ದುಬೈ ಔಟ್ ಲೆಟ್ ಮಾಲ್, ವಾಫಿ ಸಿಟಿ ಮಾಲ್, ಬುರ್ಜುಮನ್ ಸೆಂಟರ್, ಮೆರ್ಕ್ಯಾಟೋ ಶಾಪಿಂಗ್‌ಮಾಲ್ ಸಹ ಪ್ರಮುಖ ಮಾಲ್‌ಗಳಾಗಿವೆ.
ಇದನ್ನೂ ಓದಿ: @vishweshwarbhat