Saturday, 23rd November 2024

ಕೊರೋನಾ ಲಸಿಕೆ ವಿತರಣೆ: ಡಿ.4ರಂದು ಸರ್ವಪಕ್ಷಗಳ ಸಭೆ

ನವದೆಹಲಿ: ಕೋವಿಡ್‌ ತಡೆಗಟ್ಟುವ ಸಲುವಾಗಿ ಶೀಘ್ರ ಲಸಿಕೆ ವಿತರಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ. ಈ ಕುರಿತಂತೆ ಸರ್ವಪಕ್ಷಗಳ ಸಭೆ ಕರೆದು ಅವರ ಅಭಿಪ್ರಾಯ ಪಡೆದುಕೊಳ್ಳಲು ಸರಕಾರ ಡಿಸೆಂಬರ್ 4ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಯಲಿದೆ. ಲಸಿಕೆ ಪೂರೈಸುವ ಸಂಸ್ಥೆಗಳ ಜತೆ ಸಭೆ ನಡೆಸಲಾದ ಬಳಿಕ ನಡೆಯುವ ಮಹತ್ವದ ಮೊದಲ ಸಭೆ ಇದಾಗಿದೆ. ಅಂದು ಶುಕ್ರವಾರ ಬೆಳಗ್ಗೆ ಸರ್ವಪಕ್ಷಗಳ ಸಭೆ ನಡೆಯಲಿದೆ. ಕೋವಿಡ್‌ ಕುರಿತು ಸರಕಾರ ಎರಡನೇ ಬಾರಿಗೆ ಸರ್ವಪಕ್ಷಗಳ ಸಭೆ ಕರೆದಿದೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷ್ ವರ್ಧನ್ ಕೂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ಸಂಸದೀಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಭಾಗಿಯಾಗಲಿದ್ದಾರೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣಗಳಿಂದಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಬಜೆಟ್ ಅಧಿವೇಶನ ದೊಂದಿಗೆ ವಿಲೀನಗೊಳಿಸುವ ಚರ್ಚೆ ನಡೆಯುತ್ತಿದೆ.

ಮೋದಿ ಅವರು ಸೋಮವಾರ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಜಿನೋವಾ ಬಯೋಫಾರ್ಮಾ, ಜೈವಿಕ ಇ ಮತ್ತು ಡಾ. ರೆಡ್ಡಿ ತಂಡಗಳೊಂದಿಗೆ ಚರ್ಚೆ ನಡೆಸಿದ್ದಾರೆ.