Tuesday, 19th November 2024

Cyber ​​Crime: ಅಲರ್ಟ್‌… ಅಲರ್ಟ್..! ವಾಟ್ಸಾಪ್‌ನಲ್ಲಿ ಮದುವೆಯ ಆಮಂತ್ರಣ ಪತ್ರ ಬಂದರೆ ಡೌನ್‌ಲೋಡ್ ಮಾಡೋ ಮುನ್ನ ಎಚ್ಚರ

Cyber ​​Crime

ರಾಜಸ್ಥಾನ: ವಾಟ್ಸಾಪ್‌ (whatsapp invitation card) ಮೂಲಕ ಬರುವ ಮದುವೆ ಆಮಂತ್ರಣ ಪತ್ರಿಕೆಗಳನ್ನು ಡೌನ್‌ಲೋಡ್ ಮಾಡದಂತೆ ಹಿಮಾಚಲ ಪ್ರದೇಶದ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಇದೀಗ ರಾಜಸ್ಥಾನ ಪೊಲೀಸರು (rajasthan police) ವಾಟ್ಸ್‌ಆಪ್‌ ವಿವಾಹ ಆಹ್ವಾನದ ಸೈಬರ್ ವಂಚನೆಗಳ (Cyber ​​Crime) ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಎಪಿಕೆ ಫೈಲ್ ರೂಪದಲ್ಲಿ ಕಳುಹಿಸುವ ಯಾವುದೇ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಫೋನ್‌ಗಳಲ್ಲಿ ಡೌನ್‌ಲೋಡ್ ಮಾಡಬೇಡಿ ಎಂದು ರಾಜಸ್ಥಾನ ಪೊಲೀಸ್ ಸೈಬರ್ ಕ್ರೈಮ್ ಡೈರೆಕ್ಟರ್ ಜನರಲ್ ಹೇಮಂತ್ ಪ್ರಿಯದರ್ಶಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಜನರ ಖಾತೆಯಿಂದ ಹಣವನ್ನು ಲಪಟಾಯಿಸಲು ವಂಚಕರು ಮೊಬೈಲ್ ಸಾಧನಗಳಿಗೆ ಪ್ರವೇಶ ಪಡೆಯಲು ಮದುವೆಯ ಆಮಂತ್ರಣಗಳನ್ನು ಕಳುಹಿಸುತ್ತಿದ್ದಾರೆ ಎಂದು ರಾಜಸ್ಥಾನ ಪೊಲೀಸ್ ಸೈಬರ್ ಕ್ರೈಂ ಬ್ರಾಂಚ್ ಎಚ್ಚರಿಕೆ ನೀಡಿದೆ.

ಆಮಂತ್ರಣ ಪತ್ರಿಕೆಗಳನ್ನು ಎಪಿಕೆ ಫೈಲ್ ರೂಪದಲ್ಲಿ ಜನರಿಗೆ ಕಳುಹಿಸಲಾಗುತ್ತದೆ. ಇದನ್ನು ಡೌನ್‌ಲೋಡ್ ಮಾಡಿದಾಗ ಮೊಬೈಲ್ ಫೋನ್‌ಗಳಿಗೆ ಗೌಪ್ಯವಾಗಿ ಹಾನಿಕಾರಕ ಅಪ್ಲಿಕೇಶನ್‌ಗಳನ್ನು ಹಾಕಲಾಗುತ್ತದೆ. ಇದರ ಮೂಲಕ ವಂಚಕರು ಜನರ ಮೊಬೈಲ್ ಸಾಧನಗಳಿಗೆ ಪ್ರವೇಶ ಪಡೆದು ಗೌಪ್ಯ ಮಾಹಿತಿಗಳನ್ನು ಪಡೆಯುತ್ತಾರೆ ಎಂದು ಹೇಮಂತ್ ಪ್ರಿಯದರ್ಶಿ ತಿಳಿಸಿದ್ದಾರೆ.

ದುರುದ್ದೇಶಪೂರಿತ ಎಪಿಕೆ ಫೈಲ್‌ಗಳು ಸ್ವಯಂಚಾಲಿತವಾಗಿ ಫೋನ್‌ನಲ್ಲಿ ಹಾಕಲಾಗುತ್ತದೆ. ಬಳಿಕ ವಂಚಕರು ವೈಯಕ್ತಿಕ ಡೇಟಾ ಮತ್ತು ಸಂದೇಶಗಳಿಗೆ ಪ್ರವೇಶ ಪಡೆಯುತ್ತಾರೆ ಎಂದು ಹೇಳಿದರು. ಬ್ಯಾಂಕ್ ಗಳು ಕಳುಹಿಸುವ ಒಟಿಪಿಗಳನ್ನು ಇದರಿಂದ ವಂಚಕರು ಪಡೆಯುತ್ತಾರೆ. ಜನರ ಖಾತೆಗಳಿಂದ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಲು ಇದನ್ನು ಸಾಧನವನ್ನು ಬಳಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಏನು ಮಾಡಬಹುದು?

ಜನರು ತಮ್ಮ ವಾಟ್ಸಾಪ್‌ನಲ್ಲಿ ಎರಡು ಹಂತದ ಪರಿಶೀಲನೆಯನ್ನು ಸಕ್ರಿಯಗೊಳಿಸಲು ಸಲಹೆ ನೀಡಿರುವ ಅವರು, ಫೋನ್‌ನಲ್ಲಿ ತಪ್ಪಾಗಿ ಎಪಿಕೆ ಫೈಲ್ ಇನ್‌ಸ್ಟಾಲ್ ಆಗಿದ್ದರೆ ತಕ್ಷಣ ಇಂಟರ್ನೆಟ್ ಸಂಪರ್ಕವನ್ನು ಆಫ್ ಮಾಡಿ. ಜೊತೆಗೆ ಬ್ಯಾಂಕ್ ಖಾತೆಯನ್ನು ಸುರಕ್ಷತೆ ಕ್ರಮವಾಗಿ ಯಾರಿಗೂ ಪ್ರವೇಶಿಸದಂತೆ ತಕ್ಷಣ ತಡೆಯಿರಿ ಎಂದು ಪ್ರಿಯದರ್ಶಿ ಹೇಳಿದರು. ಕಳೆದ ಕೆಲವು ದಿನಗಳಿಂದ ರಾಜಸ್ಥಾನದಲ್ಲಿ ವಾಟ್ಸಾಪ್‌ ಆಹ್ವಾನ ವಂಚನೆಯ ಹಲವಾರು ಪ್ರಕರಣಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

Cyber ​​Crime: ನಿಮ್ಮ ವಾಟ್ಸಾಪ್‌ನಲ್ಲಿ ಮದುವೆಯ ಆಮಂತ್ರಣ ಬಂದರೆ ಹುಷಾರ್‌! ಹೇಗೆ ಮೋಸ ನಡೆಯುತ್ತದೆ ನೋಡಿ!

ವಂಚನೆಯಾದಾಗ ಏನು ಮಾಡಬೇಕು?

ಯಾವುದೇ ರೀತಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದ ತಕ್ಷಣ ರಾಷ್ಟ್ರೀಯ ಸಹಾಯವಾಣಿ 1930 ಅನ್ನು ಡಯಲ್ ಮಾಡಿ ಅಥವಾ ಅಧಿಕೃತ ಸರ್ಕಾರಿ ಪೋರ್ಟಲ್‌ ಗೆ https://cybercrime.gov.in ಭೇಟಿ ನೀಡಿ ದೂರನ್ನು ನೋಂದಾಯಿಸಿ.