Tuesday, 19th November 2024

BPL Ration Card: ಲಕ್ಷಾಂತರ ಬಿಪಿಎಲ್‌ ರೇಷನ್‌ ಕಾರ್ಡ್‌ ರದ್ದು, ಅನರ್ಹರು ಯಾರು?

bpl ration card

ಬೆಂಗಳೂರು: 14 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು (BPL Ration Card) ರದ್ದು ಮಾಡಲು ಉದ್ದೇಶಿಸಲಾಗಿದ್ದು, ಈವರೆಗೆ 3.63 ಲಕ್ಷ ಕಾರ್ಡ್‌ಗಳು ರದ್ದಾಗಿವೆ ಎಂದು ಆಹಾರ ಸಚಿವ ಕೆ.ಎಚ್‌. ಮುನಿಯಪ್ಪ (KH Muniyappa) ತಿಳಿಸಿದ್ದಾರೆ. ಅರ್ಹರಿಗೆ ಬಿಪಿಎಲ್​ ಕಾರ್ಡ್​ ವಿತರಣೆಗೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಅರ್ಹರಾಗಿದ್ದು, ಬಿಪಿಎಲ್‌ ಕಾರ್ಡ್‌ ರದ್ದಾಗಿದ್ದರೆ 24 ಗಂಟೆಯೊಳಗೆ ಬಿಪಿಎಲ್‌ ಕಾರ್ಡ್‌ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅವರು ಬಿಪಿಎಲ್‌ ಕಾರ್ಡ್‌ನಲ್ಲೇ ಮುಂದುವರೆಯಲಿದ್ದಾರೆ. ಆದರೆ, ಅನರ್ಹರು ಪಡೆದಿರುವ ಬಿಪಿಎಲ್‌ ಕಾರ್ಡ್‌ ರದ್ದಾಗಲಿದ್ದು, ಅದು ಎಪಿಎಲ್‌ ಕಾರ್ಡ್‌ ಆಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದ್ದಾರೆ. ‌

ಅನರ್ಹರು ಯಾರು?

ಅನರ್ಹರು ಹೊಂದಿರುವ ಅಂತ್ಯೋದಯ (ಎಎವೈ),ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹಿಂತಿರುಗಿಸುವ ಕುರಿತು ರಾಜ್ಯ ಸರ್ಕಾರವು ಈಗ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ಈ ಮೂಲಕ ಎಲ್ಲಾ ಪಡಿತರ ಚೀಟಿ ಬಳಕೆದಾರರಿಗೆ ತಿಳಿಸುವುದೇನೆಂದರೆ, ಈ ಕೆಳಕಂಡ ಕುಟುಂಬಗಳು ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಆದ್ಯತಾ (ಬಿಪಿಎಲ್)‌ ಪಡಿತರ ಚೀಟಿಯನ್ನು ಹೊಂದಲು ಅನರ್ಹರಾಗಿರುತ್ತಾರೆ.

1) ಸಂಬಳವನ್ನು ಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಖಾಯಂ ನೌಕರರು ಅಂದರೆ, ಸರ್ಕಾರದ ಅಥವಾ ಸರ್ಕಾರದಿಂದ ಅನುದಾನವನ್ನು ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು/ಮಂಡಳಿಗಳು/ನಿಗಮಗಳು/ಸ್ವಾಯತ್ತ ಸಂಸ್ಥೆಗಳು ಇತ್ಯಾದಿ

2) ಆದಾಯ ತೆರಿಗೆ (Income Tax) / ಸೇವಾ ತೆರಿಗೆ (Service Tax) / ವ್ಯಾಟ್ (Vat Tax)/ ವೃತ್ತಿ ತೆರಿಗೆ(Commercial Tax) ಪಾವತಿಸುವ ಎಲ್ಲಾ ಕುಟುಂಬಗಳು

3) ಗ್ರಾಮೀಣ ಪ್ರದೇಶದಲ್ಲಿ ಮೂರು ಎಕರೆ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು ಅಥವಾ ಗ್ರಾಮೀಣ ಪ್ರದೇಶವನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿ ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು

4) ಜೀವನ ನಿರ್ವಹಣೆಗಾಗಿ ಸ್ವತಃ ಓಡಿಸುವ ಒಂದು ವಾಣಿಜ್ಯ ವಾಹನವನ್ನು ಅಂದರೆ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿದ ಕುಟುಂಬವನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಎಲ್ಲಾ ಕುಟುಂಬಗಳು

5) ಕುಟುಂಬದ ವಾರ್ಷಿಕ ಆದಾಯವು ರು.1.20 ಲಕ್ಷಗಳಿಗಿಂತಲೂ ಹೆಚ್ಚು ಇರುವ ಕುಟುಂಬಗಳು

ಆದ್ದರಿಂದ ರಾಜ್ಯ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಅಥವಾ ಆದ್ಯತಾ (ಬಿಪಿಎಲ್) ಪಡಿತರ ಚೀಟಿ ಹೊಂದಿರುವವರು ತಕ್ಷಣವೇ ಚಿಕ್ಕಮಗಳೂರು ತಾಲ್ಲೂಕು ಕಛೇರಿಯ ಆಹಾರ ಶಾಖೆಗೆ ಪಡಿತರ ಚೀಟಿಯನ್ನು ಒಪ್ಪಿಸಲು ಕೋರಿದೆ. ಸರ್ಕಾರದ ಆದೇಶದ ಅನ್ವಯ ನಡೆದುಕೊಳ್ಳದಿದ್ದರೆ ಅಕ್ರಮ ಪಡಿತರ ಚೀಟಿ ಹೊಂದಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ಮತ್ತು ಕರ್ನಾಟಕ ಅನಧಿಕೃತ ಪಡಿತರ ಚೀಟಿ ಹೊಂದುವುದರ ತಡೆ ಆದೇಶ 1977ರ ಹಾಗೂ ಐ.ಪಿ.ಸಿ. ಕಲಂಗಳಡಿಯಲ್ಲಿ ಕ್ರಮ ಜರುಗಿಸಲಾಗುವುದು ಹಾಗೂ ಹಂಚಿಕೆ ಪಡೆದ ಆಹಾರಧಾನ್ಯಗಳ ಬಾಬು ಮುಕ್ತ ಮಾರುಕಟ್ಟೆ ದರದಂತೆ ಮೊಬಲಗನ್ನು ದಂಡದ ರೂಪದಲ್ಲಿ ಕಡ್ಡಾಯವಾಗಿ ವಸೂಲು ಮಾಡಲಾಗುವುದೆಂದು ತಿಳಿಸಲಾಗಿದೆ.

ಇದನ್ನೂ ಓದಿ: ಸರಕಾರದಿಂದ ಸದ್ದಿಲ್ಲದೆ ಬಿಪಿಎಲ್‌ ಕಾರ್ಡ್‌ ದಂಧೆ