Tuesday, 19th November 2024

The Sabarmati Report: ʻದಿ ಸಬರಮತಿ ರಿಪೋರ್ಟ್‌ʼ ಚಿತ್ರಕ್ಕೆ ಮಧ್ಯಪ್ರದೇಶ ಸರ್ಕಾರದಿಂದ ಬೆಂಬಲ; ತೆರಿಗೆ ವಿನಾಯಿತಿ ಘೋಷಣೆ

The Sabarmati Report

ಭೋಪಾಲ್‌: ಇತ್ತೀಚೆಗೆ ತೆರೆಕಂಡ ಬಾಲಿವುಡ್‌ನ ʻದಿ ಸಬರಮತಿ ರಿಪೋರ್ಟ್‌ʼ (The Sabaramati Report) ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2 ದಶಕದ ಹಿಂದೆ ಗುಜರಾತ್‌ನ ಗೋದ್ರಾದಲ್ಲಿ ನಡೆದ ಹತ್ಯಾಕಾಂಡ ಘಟನೆಯನ್ನಿಟ್ಟುಕೊಂಡು ಧೀರಜ್ ಸರ್ನಾ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವಿಕ್ರಾಂತ್ ಮಾಸ್ಸಿ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಇದೀಗ ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ (Tax-free) ಘೋಷಿಸಿದೆ. ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav) ಅವರು ಈ ಘೋಷಣೆ ಹೊರಡಿಸಿದ್ದು, ಶೀಘ್ರದಲ್ಲಿ ತಾವು ಚಿತ್ರ ವೀಕ್ಷಿಸುವುದಾಗಿ ತಿಳಿಸಿದ್ದಾರೆ.

2002ರಲ್ಲಿ ಗುಜರಾತ್‌ನ ಗೋದ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚಿದ ಬಳಿಕ ಕಾಣಿಸಿಕೊಂಡ ಕೋಮು ಸಂಘರ್ಷದ ಮೇಲೆ ಈ ಚಿತ್ರ ಬೆಳಕು ಚೆಲ್ಲುತ್ತದೆ. ಮಧ್ಯಪ್ರದೇಶದ ಈ ನಿರ್ಧಾರಕ್ಕೆ ಸಿನಿಮಾ ತಂಡಕ್ಕೆ ಸಂತಸ ವ್ಯಕ್ತಪಡಿಸಿದೆ.

ʻʼದಿ ಸಬರಮತಿ ರಿಪೋರ್ಟ್‌ʼ ಉತ್ತುಮ ಚಿತ್ರ. ಶೀಘ್ರದಲ್ಲಿಯೇ ನಾನು ಸಿನಿಮಾ ನೋಡಲಿದ್ದೇನೆ. ಈ ಸಿನಿಮಾ ವೀಕ್ಷಿಸುವಂತೆ ಸಚಿವರು, ಶಾಸಕರು ಮತ್ತು ಸಂಸದರಿಗೆ ಸೂಚಿಸಿದ್ದೇನೆ. ಗರಿಷ್ಠ ಜನರಿಗೆ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಈ ಚಿತ್ರವನ್ನು ರಾಜ್ಯದಲ್ಲಿ ತೆರಿಗೆ ಮುಕ್ತವೆಂದು ಘೋಷಿಸುತ್ತಿದ್ದೇವೆʼʼ ಎಂದು ಮೋಹನ್ ಯಾದವ್ ತಿಳಿಸಿದ್ದಾರೆ.

ಗೋದ್ರಾ ಘಟನೆಯನ್ನು ಅವರು ಇತಿಹಾಸದ ಕರಾಳ ಅಧ್ಯಾಯವೆಂದು ಬಣ್ಣಿಸಿದ್ದಾರೆ ಮತ್ತು ಈ ಸಿನಿಮಾ ಮೂಲಕ ಸತ್ಯ ಹೊರಗೆ ಬರುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಪಕ್ಷಗಳು ಗೋದ್ರಾ ಘಟನೆಯನ್ನು ವೋಟು ಬ್ಯಾಂಕ್‌ ಆಗಿ ಪರಿವರ್ತಿಸಿದ್ದು, ಈ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಮತ್ತು ದೇಶದ ಗೌರವವನ್ನು ಉಳಿಸಿದ್ದಾರೆ ಎಂದು ಹೇಳಿದ್ದಾರೆ.

ಮೆಚ್ಚುಗೆ ಸೂಚಿಸಿದ್ದ ಮೋದಿ

ಭಾನುವಾರ (ನ. 17) ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ʼದಿ ಸಬರಮತಿ ರಿಪೋರ್ಟ್‌ʼ ಚಿತ್ರವನ್ನು ಹಾಡಿ ಹೊಗಳಿದ್ದ ಅವರು “ಸತ್ಯ ಹೊರಬರುತ್ತಿದೆ” ಎಂದು ಹೇಳಿದ್ದರು. ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಅವರು, “ಈ ಸತ್ಯ ಹೊರಬರುತ್ತಿರುವುದು ಒಳ್ಳೆಯದೇ. ಜನಸಾಮಾನ್ಯರಿಗೆ ಸತ್ಯ ತಿಳಿಯುವಂತಾಗಿದೆ. ಒಂದು ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ. ಅಂತಿಮವಾಗಿ, ಸತ್ಯಗಳು ಎಂದಾದರೂ ಒಂದು ದಿನ ಹೊರಬರುತ್ತವೆ” ಎಂದು ಹೇಳಿದ್ದರು.

ಉತ್ತಮ ಕಲೆಕ್ಷನ್‌

ನ. 15ರಂದು ತೆರೆಕಂಡ ಈ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್. ಕಪೂರ್, ಅಮುಲ್ ವಿ. ಮೋಹನ್ ಮತ್ತು ಅಂಶುಲ್ ಮೋಹನ್ ನಿರ್ಮಿಸಿದ್ದಾರೆ. ಸದ್ಯ ಈ ಚಿತ್ರ ಉತ್ತಮ ಕಲೆಕ್ಷನ್‌ ಮಾಡುತ್ತಿದೆ. ಈ ಸಿನಿಮಾ 4 ದಿನಗಳಲ್ಲಿ ಸುಮಾರು 7.32 ಕೋಟಿ ರೂ. ಬಾಚಿಕೊಂಡಿದೆ. ಶುಕ್ರವಾರ 1.25 ಕೋಟಿ ರೂ., ಶನಿವಾರ ಹಾಗೂ ಭಾನುವಾರ ಕ್ರಮವಾಗಿ 2.1 ಕೋಟಿ ರೂ. ಹಾಗೂ 3 ಕೋಟಿ ರೂ. ಗಳಿಸಿದೆ. ಸೋಮವಾರ ಈ ಚಿತ್ರಕ್ಕೆ 1.15 ಕೋಟಿ ರೂ. ಹರಿದು ಬಂದಿದೆ. ಮುಂದಿನ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ನಿರೀಕ್ಷೆ ಇದೆ. ಅಲ್ಲದೆ ಮಧ್ಯಪ್ರದೇಶ ಸರ್ಕಾರ ತೆರಿಗೆ ರದ್ದುಪಡಿಸಿರುವುದು ಪ್ಲಸ್‌ ಪಾಯಿಂಟ್‌ ಆಗಲಿದೆ.

ಈ ಸುದ್ದಿಯನ್ನೂ ಓದಿ: Vikrant Massey: ʻದಿ ಸಬರಮತಿ ರಿಪೋರ್ಟ್‌ʼ ಸಿನಿಮಾದ ನಂತರ ನನ್ನ 9 ತಿಂಗಳ ಮಗನಿಗೂ ಬೆದರಿಕೆ ಬರ್ತಾ ಇದೆ; ನಟ ವಿಕ್ರಾಂತ್ ಮಾಸ್ಸೆ ಆತಂಕ