ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಅವರ ಪ್ರವಾಸದ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ದಿನಾಂಕವನ್ನು ನಿರ್ಧರಿಸಲು ಈಗಾಗಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ತಿಳಿಸಿದೆ.
ʼʼಪುಟಿನ್ ಅವರ ಭಾರತ ಪ್ರವಾಸದ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದ್ದೇವೆ. ಈಗಾಗಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2 ಬಾರಿ ರಷ್ಯಾ ಭೇಟಿ ನೀಡಿದ್ದಾರೆ. ಇದೀಗ ರಷ್ಯಾ ಪ್ರಧಾನಿ ಭಾರತಕ್ಕೆ ಭೇಟಿ ನೀಡುವ ಸಮಯ. ಈ ದಿನಕ್ಕಾಗಿ ಎದುರು ನೋಡುತ್ತಿದ್ದೇವೆʼʼ ಎಂದು ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೊವ್ ಮಾಹಿತಿ ನೀಡಿದ್ದಾರೆ. ಮೋದಿ ಅವರು ಈ ವರ್ಷ ಜೂನ್ನಲ್ಲಿ ಮತ್ತು ಅಕ್ಟೋಬರ್ನಲ್ಲಿ ರಷ್ಯಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಭಯ ನಾಯಕರು ರಕ್ಷಣೆ ಮತ್ತು ಇತರ ಕ್ಷೇತ್ರಗಳಲ್ಲಿನ ಸಹಕಾರವನ್ನು ಪುನರುಚ್ಚಿಸಿದ್ದರು.
#WATCH | Delhi: On the visit of President Putin to India, Press secretary for Russian President, Dmitry Peskov says, "I hope soon we'll work out the precise dates of his visit… Of course, after two visits of Prime Minister Modi to Russia, now we have a visit of President to… pic.twitter.com/zhl5GSFtgm
— ANI (@ANI) November 19, 2024
“ಭಾರತ ಮತ್ತು ಚೀನಾ 2 ದೇಶಗಳ ಸಂಬಂಧವನ್ನು ರಷ್ಯಾ ಗೌರವಿಸುತ್ತದೆ. ಪ್ರಾದೇಶಿಕ ವ್ಯವಹಾರಗಳಲ್ಲಿ ರಷ್ಯಾ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಅಮೆರಿಕವೂ ಹಸ್ತಕ್ಷೇಪ ಮಾಡಬಾರದು” ಎಂದು ಪೆಸ್ಕೊವ್ ಹೇಳಿದ್ದಾರೆ. “ಚೀನಾದೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಾವು ಭಾರತಕ್ಕೆ ಸಲಹೆ ನೀಡುವುದಿಲ್ಲ ಮತ್ತು ಭಾರತದೊಂದಿಗೆ ಹೇಗೆ ವ್ಯವಹರಿಸಬೇಕೆಂದು ಚೀನಾಕ್ಕೆ ನಾವು ಹೇಳುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.
2022ರಿಂದ ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ಬಳಿಕ ಪುಟಿನ್ ಅವರ ಮೊದಲ ಭಾರತ ಭೇಟಿ ಇದಾಗಿದೆ. 2021ರ ಡಿ. 6ರಂದು ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಪುಟಿನ್ ಭಾಗವಹಿಸಿದ್ದರು.
ಭಾರತದ ಬೆಳವಣಿಗೆ ಶ್ಲಾಘಿಸಿದ್ದ ಪುಟಿನ್
ರಷ್ಯಾದ ಕಜಾನ್ನಲ್ಲಿ ಅಕ್ಟೋಬರ್ನಲ್ಲಿ ನಡೆದ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಅವರು ಭಾರತದ ಆರ್ಥಿಕ ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಜತೆಗೆ 3 ದಿನಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದರು. ಬ್ರಿಕ್ಸ್ ಶೃಂಗಸಭೆಯ ಹೊರತಾಗಿ ಪುಟಿನ್ ಅವರು ಅ. 2ರಂದು ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಕಳೆದ ವರ್ಷ ದ್ವಿಪಕ್ಷೀಯ ವ್ಯಾಪಾರ ವಹಿವಾಟು ದಾಖಲೆಯ ಗರಿಷ್ಠ 56.8 ಬಿಲಿಯನ್ ಡಾಲರ್ ತಲುಪಿದೆ. ಇದು ಶೇ. 60ಕ್ಕಿಂತ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ಈ ವರ್ಷದ ಜನವರಿ-ಆಗಸ್ಟ್ನಲ್ಲಿ ರಷ್ಯಾ ಮತ್ತು ಭಾರತದ ನಡುವಿನ ವ್ಯಾಪಾರ ವಹಿವಾಟು ಶೇ. 9ರಷ್ಟು ಹೆಚ್ಚಾಗಿದ್ದು, 37.4 ಬಿಲಿಯನ್ ಡಾಲರ್ ಆಗಿದೆ.
ರಷ್ಯಾ- ಉಕ್ರೇನ್ ಸಮಸ್ಯೆ ಪರಿಹಾರಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಎಲ್ಲ ಸಂಘರ್ಷಗಳನ್ನು ಮಾತುಕತೆಯಿಂದ ಪರಿಹರಿಸಬಹುದು ಎಂಬುದು ನಮ್ಮ ನಿಲುವಾಗಿದೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರಗಳು ಇರಬೇಕು ಎಂದು ನಾವು ನಂಬುತ್ತೇವೆ. ಶಾಂತಿ ಸ್ಥಾಪನೆಗೆ ಭಾರತ ಯಾವಾಗಲೂ ಸಿದ್ದ ಎಂದು ಪ್ರಧಾನಿ ಮೋದಿ ಹೇಳಿದ್ದರು. ಪುಟಿನ್ ಅವರ ಭಾರತ ಪ್ರವಾಸ ವೇಳೆಯೂ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ: Modi Visit Russia : ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ; ಪುಟಿನ್ಗೆ ಪ್ರಧಾನಿ ಮೋದಿ ಭರವಸೆ