ತುಮಕೂರು: ಸುಮಾರು 14 ವರ್ಷಗಳ ಹಿಂದೆ ನಡೆದಿದ್ದು ದಲಿತ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಸೆಷನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ(Dalit Woman Murder). ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 21 ಮಂದಿಯನ್ನು ಅಪರಾಧಿಗಳು ಎಂದು ಘೋಷಿಸಿ ತುಮಕೂರು ಜಿಲ್ಲಾ ಮೂರನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ತೀರ್ಪನ್ನು ಹೊರಡಿಸಿದೆ.
ಪ್ರಕರಣದಲ್ಲಿ ಈ ಹಿಂದೆ 26 ಆರೋಪಿಗಳಿದ್ದರು. 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿಯನ್ನು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿದೆ. ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?
ಸರಿ ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಅಂದರೆ 2014 ರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಗೋಪಾಲಪುರ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ್ದ ಹೊನ್ನಮ್ಮ ಎಂಬುವವರ ಕೊಲೆ ನಡೆದಿತ್ತು. ಸುದೀರ್ಘ ಒಂದೂವರೆ ದಶಕಗಳ ಕಾಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತು ವಿಚಾರಣೆಗಳು ನಡೆದಿದ್ದು, ಇದೀಗ ಅಪರಾಧ ಸಾಬೀತಾಗಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ.ಎಸ್ ಜ್ಯೋತಿ ತಿಳಿಸಿದ್ದಾರೆ.
ದಲಿತ ಸಮುದಾಯದ ಹೊನ್ನಮ್ಮ ಅವರು ಡಾಬಾ ನಡೆಸುತ್ತಿದ್ದರು. ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸುವ ಸಲುವಾಗಿ ಒಂದಷ್ಟು ಮರದ ತುಂಡುಗಳನ್ನು ಸಂಗ್ರಹಿಸಿ ಇಟ್ಟಿದ್ದರು. ಅವುಗಳನ್ನು ಗ್ರಾಮದ ಕೆಲವರು ಕಳವು ಮಾಡಿದ್ದರು. ಈ ಸಂಬಂಧ ಹೊನ್ನಮ್ಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರಿಂದಾಗಿ ಗ್ರಾಮದ ಜನರು ಹೊನ್ನಮ್ಮ ಅವರನ್ನು ದ್ವೇಷಿಸಲು ಶುರು ಮಾಡಿದ್ದರು. ಹೊನ್ನಮ್ಮ ಮತ್ತು ಗ್ರಾಮಸ್ಥರ ನಡುವೆ ಒಂದಿಲ್ಲೊಂದು ವಿಷಯಕ್ಕೆ ಜಗಳ ನಡೆಯುತ್ತಲೇ ಇತ್ತು. ಹೊನ್ನಮ್ಮ ತಮ್ಮ ವಿರುದ್ಧ ಜಗಳಕ್ಕೆ ಬಂದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಕೊನೆಗೆ ಹೊನ್ನಮ್ಮ ಅವರನ್ನು ಕಲ್ಲಿನಿಂದ ಜಜ್ಜಿ ಊರಿನಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
2010ರಲ್ಲಿ ನಡೆದ ಈ ಕೊಲೆ ಸಂಬಂಧ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈಗ 2024ರಲ್ಲಿ ತೀರ್ಪು ಪ್ರಕಟಗೊಂಡಿದೆ. ಪ್ರಕರಣದ ಆರೋಪಿಗಳಾಗಿದ್ದ ರಂಗನಾಥ, ಮಂಜುಳ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ (ಗಂಗಣ್ಣ), ನಂಜುಂಡಯ್ಯ (ಪರಿಶಿಷ್ಟ ಜಾತಿ), ಸತ್ಯಪ್ಪ-ಸತೀಶ (ಪರಿಶಿಷ್ಟ ಜಾತಿ), ಚಂದ್ರಶೇಖರ (ಚಂದ್ರಯ್ಯ), ರಂಗಯ್ಯ (ರಾಮಯ್ಯ), ಉಮೇಶ್, ಚನ್ನಮ್ಮ, ಮಂಜಣ್ಣ, ಮಂಜು, ಸ್ವಾಮಿ (ಮೋಹನ್ ಕುಮಾರ್) ಅವರನ್ನು ಅಪರಾಧಿಗಳೆಂದು ಘೋಷಿಸಿದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಇತರ 6 ಆರೋಪಿಗಳಾಗಿದ್ದ ಹನುಮಂತಯ್ಯ (ಪರಿಶಿಷ್ಟ ಜಾತಿ), ವೆಂಕಟೇಶ್, ರಾಮಯ್ಯ ,ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ 2014ರಲ್ಲಿ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದಲ್ಲಿ 98 ಮಂದಿಯನ್ನು ಜಿಲ್ಲಾ ನ್ಯಾಯಾಲಯ ಇತ್ತೀಚೆಗಷ್ಟೇ ಅಪರಾಧಿಗಳು ಎಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಆ ತೀರ್ಪಿನ ಬೆನ್ನಲ್ಲೇ, ತುಮಕೂರು ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪನ್ನು ಹೊರಡಿಸಿದೆ.
ಈ ಸುದ್ದಿಯನ್ನೂ ಓದಿ: Love Jihad: ʼಲವ್ ಜಿಹಾದ್ ದೇಶದ ಐಕ್ಯತೆಗೆ ದೊಡ್ಡ ಆತಂಕʼ ಎಂದ ನ್ಯಾಯಾಲಯ; ಅಪರಾಧಿಗೆ ಜೀವಾವಧಿ ಶಿಕ್ಷೆ