ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಪಾನ್ ಪ್ರಾಚೀನ ದೇಗುಲಗಳಿಗೆ, ಗಗನಚುಂಬಿ ಕಟ್ಟಡಗಳಿಗೆ, ಸುಷಿ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಪ್ರಸಿದ್ಧ ಎಂದು ಯಾರಾದರೂ
ಹೇಳಿದರೆ, ಆ ದೇಶದ ಬಗ್ಗೆ ಸಂಪೂರ್ಣ ಚಿತ್ರಣವನ್ನು ನೀಡಿದಂತೆ ಆಗುವುದಿಲ್ಲ. ಜಪಾನಿನ ಬಗ್ಗೆ ಎಲ್ಲವನ್ನೂ ವಿವರಿಸಿ, ‘ಶಿಂಕನ್ಸೆನ್’ ಎಂದು ಕರೆಯುವ‘ಬುಲೆಟ್ ಟ್ರೇನ್’ ಬಗ್ಗೆ ಹೇಳದಿದ್ದರೆ, ಅದು ಅಪೂರ್ಣವೇ. ಬುಲೆಟ್ ಟ್ರೇನ್ ಅಂದಕೂಡಲೇ ಎಲ್ಲರಿಗೂ ಥಟ್ಟನೆ ಕಣ್ಮುಂದೆ ಬರುವುದು ಜಪಾನೇ.
ಜಪಾನ್ ಮತ್ತು ಬುಲೆಟ್ ಟ್ರೇನ್ ಒಂದೇ ನಾಣ್ಯದ ಎರಡು ಮುಖಗಳು. ಅಷ್ಟರಮಟ್ಟಿಗೆ ಅವು ಒಂದರೊಳಗೊಂದು ಮಿಳಿತವಾಗಿವೆ. ಜಪಾನ್‌ನಲ್ಲಿ
ಬುಲೆಟ್ ರೈಲುಗಳು ತಾಂತ್ರಿಕ ಪ್ರಗತಿ, ವೇಗ ಮತ್ತು ಕಾರ್ಯಕ್ಷಮತೆಯ ಸಂಕೇತವಾಗಿವೆ. ಶಿಂಕನ್ಸೆನ್ ಎಂಬುದು ಜಪಾನ್‌ನ ವೇಗದ ರೈಲುಗಳ
ಜಾಲಕ್ಕೆ ಕೊಟ್ಟ ಹೆಸರು. ಇದನ್ನು ಮೊದಲ ಬಾರಿಗೆ 1964ರಲ್ಲಿ ಟೋಕಿಯೋ ಒಲಿಂಪಿಕ್‌ಗಾಗಿ ಆರಂಭಿಸಲಾಯಿತು. ಜಪಾನಿನ ರಾಜಧಾನಿ ಟೋಕಿಯೋ ನಗರ ಮತ್ತು ದೇಶದ ಇತರ ಪ್ರಮುಖ ನಗರಗಳ ನಡುವೆ ಅತಿವೇಗದ ಸಂಪರ್ಕ ಬೆಸೆಯುವುದು ಬುಲೆಟ್ ಟ್ರೇನ್ ಉದ್ದೇಶ. ಜಪಾನ್ ರೈಲ್ವೆ ನಿರ್ಮಾಣ ಸಂಸ್ಥೆ, ಟ್ರಾನ್ಸ್‌ಪೋರ್ಟ್ ಮತ್ತು ಟೆಕ್ನಾಲಜಿ ಏಜನ್ಸಿ ಹಾಗೂ ಜಪಾನಿನ 5 ರೈಲ್ವೆ ಗ್ರೂಪ್‌ಗಳು ಇದರ ಮಾಲೀಕತ್ವ ವನ್ನು ಹೊಂದಿವೆ.
ಬುಲೆಟ್ ರೈಲುಗಳು ಗಂಟೆಗೆ 320 ಕಿ.ಮೀ. ವೇಗದಲ್ಲಿ ಓಡುತ್ತವೆ. ಇವು ಭೂಮಿಯಲ್ಲಿನ ಕೆಲವು ವೇಗದ ರೈಲುಗಳಲ್ಲಿ ಒಂದು. ಮೊದಲ ಶಿಂಕನ್ಸೆನ್ ‘ಟೋಕೈಡೋ ಶಿಂಕನ್ಸೆನ್’ ಮೊದಲು ಆರಂಭವಾದ ಬುಲೆಟ್ ಟ್ರೇನ್. ಅದು ಗಂಟೆಗೆ 210 ಕಿ.ಮೀ. ವೇಗದಲ್ಲಿ ಓಡುತ್ತಿತ್ತು. ಆರಂಭದಲ್ಲಿ 515 ಕಿ. ಮೀ. ರೈಲು ಮಾರ್ಗವಿತ್ತು. ಅದು ಈಗ ಸುಮಾರು 3000 ಕಿ.ಮೀ.ಗೆ ವಿಸ್ತರಿಸಿದೆ. ಬುಲೆಟ್ ಟ್ರೇನ್ ಹೆಸರಿಗೆ ಅನ್ವರ್ಥಕ. ಅದರ ವೇಗವೇ ಪ್ರಧಾನ.
ಜತೆಗೆ ಅದರ ಸಮಯಪಾಲನೆ ಜಗತ್ಪ್ರಸಿದ್ಧ. ನಿಖರ ಮತ್ತು ಕರಾರುವಾಕ್ಕು ಕಾರ್ಯನಿರ್ವಹಣೆಗೆ ಈಗಲೂ ಬುಲೆಟ್ ಟ್ರೇನ್ ಉದಾಹರಣೆ ನೀಡುವುದುಂಟು. ಅದು ಯಾವುದೇ ಮಾರ್ಗವಿರಬಹುದು, ಬುಲೆಟ್ ಟ್ರೇನ್ ಐದಾರು ಸೆಕೆಂಡ್ ಸಹ ತಡವಾಗಿ ಆಗಮಿಸುವುದಿಲ್ಲ. ಟೈಮ್ ಅಂದ್ರೆ ಟೈಮು. ಹತ್ತು ಗಂಟೆ ಒಂದು ನಿಮಿಷಕ್ಕೆ ಟ್ರೇನು ಆಗಮಿಸುವುದೆಂದು ತಿಳಿಸಿದರೆ, ಸರಿಯಾಗಿ ಅದೇ ಸಮಯಕ್ಕೆ ಆಗಮಿಸುತ್ತದೆ. ಸಾಕ್ಷಾತ್
ಯಮಧರ್ಮರಾಜನೇ ತಡವಾಗಿ ಬಂದಾನು. ಆದರೆ ಬುಲೆಟ್ ಟ್ರೇನು ಮಾತ್ರ ತಲೆ ಮೇಲೆ ಹೊಡೆದವರಂತೆ, ಹತ್ತು ಗಂಟೆ ಒಂದು ನಿಮಿಷಕ್ಕೆ
ಆಗಮಿಸುತ್ತದೆ. ನಿಸ್ಸಂದೇಹವಾಗಿ ಇದು ಜಪಾನ್‌ನ ಜನರ ದಿನನಿತ್ಯದ ಜೀವನವನ್ನು ನಿಖರ ಮತ್ತು ಅನುಕೂಲಕರವಾಗಿ ಪರಿವರ್ತಿಸಿದೆ. ಜಪಾನ್‌ನ ಬುಲೆಟ್ ರೈಲುಗಳು ವಿಶ್ವದ ಅತ್ಯಂತ ಸುರಕ್ಷಿತ ಸಾರಿಗೆ ವ್ಯವಸ್ಥೆಗಳಲ್ಲಿ ಒಂದು ಎಂಬ ಅಗ್ಗಳಿಕೆಗೆ ಪಾತ್ರವಾಗಿವೆ. 1964ರಿಂದ ಇಂದಿನವರೆಗೆ ಒಮ್ಮೆಯೂ ಪ್ರಯಾಣಿಕರ ಪ್ರಾಣಹಾನಿ ಪ್ರಕರಣ ಸಂಭವಿಸಿಲ್ಲ ಮತ್ತು ಗಂಭೀರ ಅಪಘಾತವಾಗಿಲ್ಲ. ಕಾರು ಅಥವಾ ವಿಮಾನಕ್ಕೆ ಹೋಲಿಸಿದರೆ ಬುಲೆಟ್ ಟ್ರೇನು ಹೆಚ್ಚು ಪರಿಸರ ಸ್ನೇಹಿ. ಇದು ವಿದ್ಯುತ್ ಶಕ್ತಿಯ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಕಡಿಮೆ ಕಾರ್ಬನ್ ವಿಸರ್ಜನೆ ಮಾಡುತ್ತದೆ.
ಶಿಂಕನ್ಸೆನ್ ಅನ್ನು ಜಪಾನಿನ ಜೀವನಾಡಿ ಅಂತಾನೂ ಕರೆಯುತ್ತಾರೆ. ಕಾರಣ ಪ್ರತಿದಿನ ಒಂದು ಕೋಟಿಗೂ ಅಧಿಕ ಜನ ಅದರಲ್ಲಿ ಓಡಾಡುತ್ತಾರೆ. ಬೇಸಿಗೆ ದಿನಗಳು ಮತ್ತು ಉತ್ಸವಗಳ ಸಮಯದಲ್ಲಿ ಈ ಪ್ರಮಾಣ ಶೇ.೮೦ರಷ್ಟು ಜಾಸ್ತಿಯಾಗಿರುತ್ತದೆ. ಜಪಾನ್ ಭೂಕಂಪಗಳಿಗೆ ಕುಖ್ಯಾತ. ಆದರೂ ಶಿಂಕನ್ಸೆನ್‌ಗಳು ‘ಭೂಕಂಪ ಪತ್ತೆ ವ್ಯವಸ್ಥೆ’ (Earthquake Detection System) ಹೊಂದಿವೆ. ಜಪಾನ್‌ನ ಬುಲೆಟ್ ರೈಲು ತಂತ್ರeನ ವಿಶ್ವದ ಅನೇಕ ದೇಶಗಳಿಗೆ ಮಾದರಿಯಾಗಿದೆ. ಭಾರತ ಕೂಡ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಪ್ರಾಜೆಕ್ಟ್ ಗೆ ಶಿಂಕನ್ಸೆನ್‌ನ ತಂತ್ರಜ್ಞಾನವನ್ನು ಆಧಾರವಾಗಿ ಬಳಸುತ್ತಿದೆ. ಹಾಗೆ ನೋಡಿದರೆ, ಶಿಂಕನ್ಸೆನ್ ಕೇವಲ ಒಂದು ಸಾರಿಗೆ ಮಾರ್ಗವಲ್ಲ, ಅದು ಜಪಾನಿನ ಸಂಸ್ಕೃತಿ, ತಂತ್ರಜ್ಞಾನ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ.
ಇದನ್ನೂ ಓದಿ: @vishweshwarbhat