Monday, 25th November 2024

IPL Schedule: ಮುಂದಿನ ಮೂರು ಆವೃತ್ತಿಯ ಐಪಿಎಲ್‌ ವೇಳಾಪಟ್ಟಿ ಪ್ರಕಟ

ಮುಂಬಯಿ: ಮುಂದಿನ ಮೂರು ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ವೇಳಾಪಟ್ಟಿಯೊಂದು(IPL Schedule) ಪ್ರಕಟಗೊಂಡಿದೆ. ಈ ವೇಳಾಪಟ್ಟಿ ಪ್ರಕಾರ 2025 ಮತ್ತು 2027ರ ಋತುಗಳ ಐಪಿಎಲ್‌ ಟೂರ್ನಿ ಮಾರ್ಚ್‌ 14 ರಂದು, 2026 ಆವೃತ್ತಿ ಮಾರ್ಚ್‌ 15 ರಂದು ಆರಂಭಗೊಳ್ಳಲಿದೆ. ಬಿಸಿಸಿಐ(BCCI announces IPL schedules) ಈ ವೇಳಾಪಟ್ಟಿಯನ್ನು ಪ್ರಕಟಿಸಿರುವುದಾಗಿ ಕ್ರಿಕ್‌ಬಜ್‌ ವರದಿ ಮಾಡಿದೆ.

ಜೂನ್ 2025 ರಲ್ಲಿ ನಿಗದಿಯಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ಡಬ್ಲ್ಯುಟಿಸಿ) ಸೈಕಲ್ 2023-25 ಫೈನಲ್‌ಗೆ ತಯಾರಿ ನಡೆಸಲು ಆಟಗಾರರಿಗೆ ಸಾಕಷ್ಟು ಸಮಯವನ್ನು ನೀಡಲು ಬಿಸಿಸಿಐ ಐಪಿಎಲ್‌ ಋತುವನ್ನು ಮುಂಚಿತವಾಗಿ ಪ್ರಾರಂಭಿಸಲು ನಿರ್ಧರಿಸಿದೆ ಎನ್ನಲಾಗಿದೆ. ಈ ಹಿಂದೆ ಮಾರ್ಚ್‌ ಅಂತ್ಯದಲ್ಲಿ ಐಪಿಎಲ್‌ ಪಂದ್ಯಾವಳಿಗಳು ಆರಂಭವಾಗುತ್ತಿತ್ತು.

ಈ ವೇಳಾಪಟ್ಟಿ ಪ್ರಕಾರ 2025ರ ಐಪಿಎಲ್ ಟೂರ್ನಿ ಮಾರ್ಚ್ 14ರಿಂದ ಮೇ 25ರವರೆಗೆ ನಡೆಯಲಿದೆ. ಐಪಿಎಲ್ ಆಡಳಿತ ಮಂಡಳಿಯು ಎಲ್ಲಾ ಹತ್ತು ಫ್ರಾಂಚೈಸಿಗಳಿಗೆ ಅಧಿಕೃತ ಸಂವಹನವನ್ನು ಕಳುಹಿಸಿದ್ದರಿಂದ ಮುಂದಿನ ಮೂರು ಋತುಗಳ ದಿನಾಂಕಗಳನ್ನು ಖಚಿತಪಡಿಸಲಾಗಿದೆ. 2026ರ ಆವೃತ್ತಿಯು ಮಾರ್ಚ್ 15ರಿಂದ ಮೇ 31ರವರೆಗೆ ನಡೆಯಲಿದ್ದು, 2027ರ ಆವೃತ್ತಿಯು ಮಾರ್ಚ್ 14ರಿಂದ ಮೇ 30ರವರೆಗೆ ನಡೆಯಲಿದೆ.

18ನೇ ಆವೃತ್ತಿಯ ಐಪಿಎಲ್‌(IPL Auction 2025) ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನ.24 ಮತ್ತು 25 ರಂದು ಸೌದಿ ಅರೇಬಿಯದ ಜೆಡ್ಡಾದಲ್ಲಿ ಹರಾಜು ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಹರಾಜಿನಲ್ಲಿ ದೊಡ್ಡ ಕ್ರಿಕೆಟ್ ತಾರೆಗಳಿಗಾಗಿ ಫ್ರಾಂಚೈಸಿಗಳು ಬಿಡ್ಡಿಂಗ್‌ ನಡೆಸಲಿದೆ. ರಿಷಭ್‌ ಪಂತ್‌, ಕೆ.ಎಲ್‌.ರಾಹುಲ್‌, ಶ್ರೇಯಸ್‌ ಅಯ್ಯರ್‌, ಅರ್ಶದೀಪ್‌ ಸಿಂಗ್‌ ದೊಡ್ಡ ಮೊತ್ತಕ್ಕೆ ಹರಾಜಾಗುವ ಎಲ್ಲ ಸಾಧ್ಯತೆಗಳಿವೆ.

ಮೆಗಾ ಹರಾಜಿನಲ್ಲಿ ಒಟ್ಟು 574 ಮಂದಿ ಆಟಗಾರರಿದ್ದಾರೆ.  66 ಮಂದಿ ಭಾರತೀಯರಾದರೆ, 208 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಒಟ್ಟು 1,574 ಮಂದಿ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದರು.

ಹರಾಜು ಪ್ರಕ್ರಿಯೆಯ ನೇರ ಪ್ರಸಾರ ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಪ್ರಸಾರಗೊಳ್ಳಲಿದೆ. ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಜಿಯೋ ಸಿನಿಮಾದಲ್ಲಿ ನೋಡಬಹುದು. ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 12.30ಕ್ಕೆ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ.