Friday, 22nd November 2024

Mallikarjun Kharge: ಕಾನೂನುಬಾಹಿರ ಕೆಲಸ ಮಾಡುತ್ತಿರುವ ಅದಾನಿಗೆ ಮೋದಿ ರಕ್ಷಣೆ: ಖರ್ಗೆ ಆರೋಪ

Siddharth Vihar Trust

ಬೆಂಗಳೂರು: ಉದ್ಯಮಿ ಗೌತಮ್‌ ಅದಾನಿ (Gautam Adani) ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೂ ಅವರನ್ನು ಪ್ರಧಾನಿ ಮೋದಿಯವರು (PM Narendra Modi) ರಕ್ಷಣೆ ಮಾಡುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗಂಭೀರ ಆರೋಪ ಮಾಡಿದ್ದಾರೆ.

ಉದ್ಯಮಿ ಅದಾನಿ ತನ್ನ ಉದ್ಯಮಕ್ಕೆಂದು ದೇಶದ ಆಸ್ತಿಗಳನ್ನು ಸರ್ಕಾರದಿಂದ ಪಡೆದು ಅವುಗಳನ್ನೇ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆಯುತ್ತಾ ಕಾನೂನುಬಾಹಿರ ಕೆಲಸದಲ್ಲಿ ತೊಡಗಿದ್ದಾರೆ. ಆದರೂ, ಅವರನ್ನು ಮೋದಿ ರಕ್ಷಣೆ ಮಾಡುತ್ತಿದ್ದಾರೆ. ಈವರೆಗೆ ಅದಾನಿ ಬಗ್ಗೆ ಮೋದಿ ಒಂದು ಮಾತನ್ನೂ ಎತ್ತಿಲ್ಲ. ಭ್ರಷ್ಟಾಚಾರದ ಪ್ರಕರಣದಲ್ಲಿ ಅವರ ವಿರುದ್ಧ 5-6 ವರ್ಷಗಳಿಂದ ಸತತವಾಗಿ ವಿಷಯ ಎತ್ತಿದ್ದೇವೆ. ಆದರೂ ಕೂಡ ಮೋದಿ ಇಲ್ಲಿಯ ತನಕ ಚಕಾರ ಎತ್ತಿಲ್ಲ ಎಂದು ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅಮಿತ್ ಶಾ ಹೋಮ್ ಮಿನಿಸ್ಟರ್ ಆಗಿದ್ದಾರೆ. ಅವರ ಬಳಿ ಇಡಿ, ಸಿಬಿಐ ಇದೆ. ಇದೆಲ್ಲ ಇದ್ದರೂ ತನಿಖೆ ಮಾಡಿಲ್ಲ. ಹಿಂದೆ ಈ ವಿಚಾರ ಎತ್ತಿದಾಗ ಅದು ವಿದೇಶಿ ಸಂಚು ಅಂತೆಲ್ಲ ಹೇಳಿದ್ದರು. ಹಿಂಡನ್‌ಬರ್ಗ್ ವರದಿ ಬಗ್ಗೆಯೂ ನಕಾರಾತ್ಮಕವಾಗಿ ಮಾತನಾಡಿದರು. ನಾವು ಹೇಳೋದು ಇಲ್ಲಿ ಹೇಳಿಯೇ ಹೇಳುತ್ತೇವೆ ಎಂದರು.

ವಿದೇಶದಲ್ಲೂ ಕೂಡ ಇಂತಹ ಭ್ರಷ್ಟಾಚಾರದ ವಿಚಾರ ಹೊರಗೆ ಬರುತ್ತಿದೆ. ಇಲ್ಲದಿದ್ದರೆ ಇವರು ಮಾನಹಾನಿ ಕೇಸ್ ಹಾಕಲಿ. ನಾವು ರಾಜಕೀಯವಾಗಿ ಮಾತನಾಡುತ್ತೇವೆ ಅಂತ ನೀವು ಹೇಳಬಹುದು. ಆದರೆ, ಹೊರಗಿನವರೂ ಎಲ್ಲರೂ ಹೇಳುತ್ತಿದ್ದಾರೆ. ನಮಗೆ ಇರುವ ಕಳಕಳಿ ಏನೆಂದರೆ ನಮ್ಮ ದೇಶದ ಆಸ್ತಿಯನ್ನು ಅವರಿಗೆ ಕೊಡುತ್ತಿದ್ದೇವೆ. ಏರ್ಪೋರ್ಟ್, ಬಂದರು, ಸಾರ್ವಜನಿಕ ಸಂಸ್ಥೆಗಳು, ಸರ್ಕಾರಿ ಜಾಗಗಳನ್ನು ಅವರಿಗೆ ಕೊಡುತ್ತಿದ್ದೇವೆ. ನ್ಯಾಯವಾಗಿ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಸರ್ಕಾರಿ ಜಮೀನು ತೆಗೆದುಕೊಳ್ಳುವುದು, ಮಾರಿಕೊಳ್ಳುವುದು ಮಾಡುತ್ತಾರೆ. ಅದನ್ನೇ ಅಸ್ತಿ ಎಂದು ತೋರಿಸಿ ಸರ್ಕಾರಿ ಬ್ಯಾಂಕ್‌ಗಳಿಂದ ಸಾಲವನ್ನು ತೆಗೆದುಕೊಳ್ಳುತ್ತಾರೆ ಎಂದರು.

ಕೇಂದ್ರ ಸರ್ಕಾರ ಕೂಡ ಅವರನ್ನು ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮಾಡುತ್ತಿದೆ. ಅವರ ಮುಖಾಂತರ ಸರ್ಕಾರ ಕೂಡ ಸಹಾಯ ಪಡೆದುಕೊಳ್ಳುತ್ತಿದೆ. ಅವರ ಪಕ್ಷಕ್ಕೂ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಮೋದಿ ಹೊರಗಡೆ ಬಹಳ ನ್ಯಾಯ ಸ್ವಚ್ಛ ಅಂತ ಭಾಷಣ ಮಾಡುತ್ತಾರೆ. ನಿಮ್ಮ ನಡವಳಿಕೆ ಕೂಡ ಸ್ವಚ್ಛವಾಗಿ ಇರಬೇಕು. ಎಲ್ಲಾ ಹೂಡಿಕೆ ತಮಗೆ ಬೇಕಾದ ರಾಜ್ಯಗಳಿಗೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ಭಾರತ ಸಮಗ್ರ ಅಭಿವೃದ್ಧಿ ಆಗುವುದಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಏಳಿಗೆ ಆಗುತ್ತಾ? ಒಬ್ಬರಿಂದ ಸಣ್ಣಪುಟ್ಟ ಇಂಡಸ್ಟ್ರಿಗಳು ಕೂಡ ಸೊರಗುತ್ತಿವೆ. ಶೀಘ್ರವಾಗಿ ಕುಬೇರರಾಗಲು, ಪ್ರಪಂಚದಲ್ಲೇ ನಾನು ಶ್ರೀಮಂತ ಮನುಷ್ಯ ಅಂತ ಅನಿಸಿಕೊಳ್ಳಬೇಕು ಅಂತ ಅವರು ಇದನ್ನೆಲ್ಲಾ ಮಾಡುತ್ತಾರೆ ಎಂದು ಕಿಡಿಕಾರಿದರು.

ಈ ವಿಷಯವನ್ನು ನಾವು ಪಾರ್ಲಿಮೆಂಟ್‌ನಲ್ಲಿ ಎತ್ತುತ್ತೇವೆ. ಇದರ ಬಗ್ಗೆ ತನಿಖೆ ಆಗಬೇಕು. ಅವರು ಭಾರತದಲ್ಲಿ ಇರುವುದರಿಂದ ಅವರನ್ನು ಆರೆಸ್ಟ್ ಮಾಡುವುದು ಕ್ರಮ ತೆಗೆದುಕೊಳ್ಳುವುದು ಸರ್ಕಾರಕ್ಕೆ ಸಾಧ್ಯವಿದೆ. ಅದಕ್ಕೆ‌ ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಆರೋಪಿಸಿದರು.

ಇದನ್ನೂ ಓದಿ: ಅಂಬಾನಿ, ಅದಾನಿಯನ್ನೇಕೆ ಎಳೆದು ತರುತ್ತಿದ್ದೀರಿ ?