Friday, 22nd November 2024

ಚುನಾವಣೆಯಷ್ಟೇ ಮುಖ್ಯ ಚುನಾಯಿತರ ಆಯ್ಕೆ

ರಾಜ್ಯ ಸರಕಾರ ರಾಜಧಾನಿಯಿಂದಲೇ ಇಡೀ ರಾಜ್ಯದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಲಾರದು ಎಂಬ ಅಭಿಪ್ರಾಯ ಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತಗಳ ಸ್ಥಾಪನೆಯಾಯಿತು.

ಅಂತೆಯೇ ಗ್ರಾಮೀಣಾಭಿವೃದ್ಧಿ ಆಶಯದಿಂದ ಪಂಚಾಯತ್ ರಾಜ್ ಸ್ಥಾಪಿಸಲಾಯಿತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೊಂದು ಮಹತ್ವದ ಬೆಳವಣಿಗೆ. ಹೀಗೆ ರೂಪುಗೊಂಡ ಗ್ರಾಮ ಪಂಚಾಯ್ತಿಗಳು ಇದೀಗ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿವೆ. ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಬಹಳಷ್ಟು ಅನುದಾನಗಳನ್ನು ಘೋಷಿಸಿದರೂ ಸಹ ಅದರ ಅನುಷ್ಠಾನದ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಮಹತ್ವದ್ದಾಗಿದೆ.

ಇಂಥ ಮಹತ್ವದ ರಾಜಕೀಯ ಶಕ್ತಿಕೇಂದ್ರಗಳ ಚುನಾವಣೆಗೆ ಇದುವರೆಗೆ ಕರೋನಾ ಅಡ್ಡಿಯಾಗಿದ್ದು, ಇದೀಗ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಈ ಅನ್ವಯ ರಾಜ್ಯದ ೩೦ ಜಿಲ್ಲೆಗಳಲ್ಲಿನ ೫,೭೬೨ ಗ್ರಾಮ ಪಂಚಾಯ್ತಿಗಳಿಗೆ ಡಿ.೨೨ ಮತ್ತು ೨೭ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿರುವುದರಿಂದ ರಾಜಕೀಯ ಪಕ್ಷಗಳ ಚಟುವಟಿಕೆಗಳು ತೀವ್ರಗೊಂಡಿವೆ. ಅಭಿವೃದ್ಧಿ ನಿಟ್ಟಿನಲ್ಲಿ ಈ ಚುನಾವಣೆ ಮಹತ್ತರವೆಂದು ಭಾವಿಸಲಾಗುತ್ತದೆ. ಆದರೆ ಈ ಚುನಾವಣೆಗಿಂತಲೂ ಚುನಾಯಿತರ ಆಯ್ಕೆ ಮತ್ತಷ್ಟು ಮಹತ್ವದ್ದಾಗಿದೆ.

ಯಾವುದೇ ಸರಕಾರ ಆಡಳಿತದಲ್ಲಿದ್ದರೂ, ಗ್ರಾಪಂಗಳಿಗೆ ಅಭಿವೃದ್ಧಿಗೆ ಅನುಗುಣವಾಗಿ ಅನುದಾನ ಮಂಜೂರಾಗುತ್ತದೆ. ಪ್ರಸ್ತುತ ಆಡಳಿತದ ರಾಜ್ಯ ಸರಕಾರ ಸಹ ವರ್ಷಕ್ಕೆ ೧.೫ಕೋಟಿ ನೇರ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದೆ. ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯನ್ನು ಜಿಪಂ ಬದಲು ನೇರವಾಗಿ ಗ್ರಾಪಂಗೆ ವಹಿಸುವ ಪ್ರಯತ್ನಗಳು ಆರಂಭಗೊಂಡಿವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗ್ರಾಪಂನ ಪಾತ್ರ ಪ್ರಮುಖವಾಗಿರುವಷ್ಟೇ ಮುಖ್ಯವಾಗಿದೆ ಚುನಾಯಿತರ ಆಯ್ಕೆ.