Saturday, 23rd November 2024

Jofra Archer: ಐಪಿಎಲ್‌ ಮೆಗಾ ಹರಾಜಿನ ಪಟ್ಟಿಗೆ ಸೇರ್ಪಡೆಯಾದ ಇಂಗ್ಲೆಂಡ್‌ ಮಾರಕ ವೇಗಿ!

England star Jofra Archer among notable inclusions in the IPL 2025 players’ auction list

ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025 Mega Auction) ಟೂರ್ನಿಯ ಮೆಗಾ ಹರಾಜಿಗೆ ಇನ್ನು ಎರಡು ದಿನಗಳು ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿಗ ಸಜ್ಜಾಗುತ್ತಿವೆ. ಇದರ ನಡುವೆ ಇಂಗ್ಲೆಂಡ್‌ ತಂಡದ ಮಾರಕ ವೇಗಿ ಜೋಫ್ರಾ ಆರ್ಚರ್‌ ಅವರು ಮೆಗಾ ಹರಾಜು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಆ ಮೂಲಕ ಈ ಬಾರಿ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್‌ ವೇಗಿ ಸಂಚಲನ ಮೂಡಿಸುವ ಸಾಧ್ಯತೆ ಇದೆ.

ಅಂದ ಹಾಗೆ ಆರಂಭದಲ್ಲಿ ಜೋಫ್ರಾ ಆರ್ಚರ್‌ ಅವರ ಹೆಸಗು ಹರಾಜು ಪಟ್ಟಿಯಲ್ಲಿ ಇರಲಿಲ್ಲ. ಆದರೆ, ಇದೀಗ ಹರಾಜು ಆಟಗಾರರ ಪಟ್ಟಿಗೆ ಸೇರಿರುವ ಬಗ್ಗೆ ಐಪಿಎಲ್‌ ಗುರುವಾರ ಅಧಿಕೃತವಾಗಿ ಪ್ರಕಟಿಸಿದೆ.29ರ ಪ್ರಾಯದ ಇಂಗ್ಲೆಂಡ್‌ ವೇಗಿ ಹರಾಜಿನ ಫಾಸ್ಟ್‌ ಬೌಲರ್‌ಗಳ ವಿಭಾಗದ ಆರನೇ ಸೆಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಆ ಮೂಲಕ ಅವರ ಹೆಸರು ಮೊದಲನೇ ದಿನ ಹರಾಜಿನಲ್ಲಿ ಮುನ್ನೆಲೆಗೆ ಬರಲಿದೆ.

ಜೋಫ್ರಾ ಆರ್ಚರ್‌ ಅವರು ಒಂದು ವರ್ಷದ ಬಳಿಕ ಗಾಯದಿಂದ ಗುಣಮುಖರಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದಾರೆ. ಆ ಮೂಲಕ ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಯ ಇಂಗ್ಲೆಂಡ್‌ ತಂಡದ ರೇಸ್‌ನಲ್ಲಿದ್ದಾರೆ. ತಮ್ಮ ಮಾರಕ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ಸಿಲುಕಿಸಬಲ್ಲ ಸಾಮರ್ಥ್ಯ ಜೋಫ್ರ ಆರ್ಚರ್‌ ಅವರಲ್ಲಿದೆ. ಈ ಹಿನ್ನೆಲೆಯಲ್ಲಿ ಜೋಫ್ರಾ ಆರ್ಚರ್‌ ಅವರನ್ನು ಹರಾಜಿನಲ್ಲಿ ಖರೀದಿಸಲು ಫ್ರಾಂಚೈಸಿಗಳ ನಡುವೆ ಬಿಡ್‌ವಾರ್‌ ನಡೆಯಬಹುದು.

IPL 2025 Auction: ನ. 24, 25ರಂದು ಐಪಿಎಲ್ ಮೆಗಾ ಹರಾಜು

ಮೆಗಾ ಹರಾಜಿಗೆ ಬಂದ ಯುಎಸ್‌ಎ ವೇಗಿ

ಜೋಫ್ರಾ ಆರ್ಚರ್‌ ಅವರ ಜೊತೆಗೆ ಅಮೆರಿಕ ತಂಡದ ವೇಗಿ ಸೌರಭ್‌ ನೇತ್ರವಾಳ್ಕರ್‌ ಅವರು ಕೂಡ ಐಪಿಎಲ್‌ ಆಟಗಾರರ ಮೆಗಾ ಹರಾಜಿನ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಭಾರತದ ಮೂಲದ ನೇತ್ರವಳ್ಕರ್‌ ಅವರು ಈ ಹಿಂದೆ ಅಂಡರ್‌-19 ಟೀಮ್‌ ಇಂಡಿಯಾದಲ್ಲಿ ಆಡಿದ್ದರು. ನಂತರ ಅವರು ಉದ್ಯೋಗದ ಕಾರಣ ಯುಎಸ್‌ಎ ಸ್ಥಳಾಂತರವಾಗಿದ್ದರು ಹಾಗೂ ಅಲ್ಲಿಯೂ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ. ಕಳೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಸೌರಭ್‌ ತಮ್ಮ ಬೌಲಿಂಗ್‌ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಇಲ್ಲಿಯವರೆಗೂ ಅವರು 36 ಟಿ20ಐ ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಹಾಗೂ 56 ಏಕದಿನ ಪಂದ್ಯಗಳ ಮೂಲಕ 88 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

IPL 2025 Auction: ಐಪಿಎಲ್‌ ಹರಾಜಿನಲ್ಲಿ ರಾಜ್ಯದ 24 ಆಟಗಾರರು ಭಾಗಿ

ಮುಂಬೈ ವಿಕೆಟ್‌ ಕೀಪರ್‌ಗೆ ಅವಕಾಶ

ಮುಂಬೈ ತಂಡದ ವಿಕೆಟ್‌ ಕೀಪರ್‌ ಹಾರ್ದಿಕ್‌ ತಾಮೋರ್‌ ಅವರು ಕೂಡ ಮೆಗಾ ಹರಾಜಿನ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ತಮ್ಮ ಅತ್ಯುತ್ತಮ ಬ್ಯಾಟಿಂಗ್‌ ಕೌಶಲ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುವ ಮೂಲಕ ಹಾರ್ದಿಕ್‌ ತಾಮೋರ್‌ ಎಲ್ಲರ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಬ್ಯಾಕ್‌ ಅಪ್‌ ವಿಕೆಟ್‌ ಕೀಪರ್‌ ಆಗಿ ಇವರನ್ನು ಖರೀದಿಸಬಹುದು.

ತಾಮೋರ್‌ ಅವರ ವಿಕೆಟ್‌ ಕೀಪಿಂಗ್‌ ಕೌಶಲ ಹಾಗೂ ಬ್ಯಾಟಿಂಗ್‌ನಲ್ಲಿ ಆಂಕರ್‌ ಪಾತ್ರವನ್ನು ನಿರ್ವಹಿಸುತ್ತಾರೆ. ಆ ಮೂಲಕ ತಂಡಕ್ಕೆ ಮೌಲ್ಯಯುವ ಆಯ್ಕೆಯನ್ನು ತಂದುಕೊಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮುಂಬೈನ ವಿಕೆಟ್‌ ಕೀಪರ್ ಕಡೆಗೆ ಆಸಕ್ತಿಯನ್ನು ತೋರಬಹುದು.

2025ರ ಐಪಿಎಲ್‌ ಮೆಗಾ ಹರಾಜು ಯಾವಾಗ?

ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮೆಗಾ ಹರಾಜು ನವೆಂಬರ್‌ 24 ಮತ್ತು 25ರಂದು ಸೌದಿ ಅರೇಬಿಯಾದ ಜಡ್ಡಾದಲ್ಲಿ ನಡೆಯಲಿದೆ. ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಜೋಸ್‌ ಬಟ್ಲರ್‌, ಕೆಎಲ್‌ ರಾಹುಲ್‌, ಮೊಹಮ್ಮದ್‌ ಸಿರಾಜ್‌, ಫಿಲ್‌ ಸಾಲ್ಟ್‌ ಸೇರಿದಂತೆ ವಿಶ್ವದ ಕೆಲ ಸ್ಟಾರ್‌ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.