Wednesday, 27th November 2024

Viral Video: ರೈಲಿನ ಬಾಗಿಲು ತೆರೆಯಲು ಮರೆತ ಸಿಬ್ಬಂದಿ; ಪ್ರಯಾಣಿಕರ ಪಾಡು ಹೇಳೋರಿಲ್ಲ… ಕೇಳೋರಿಲ್ಲ… ಆಮೇಲೇನಾಯ್ತು?

Viral Video

ಮುಂಬೈ: ರೈಲ್ವೆ ಗಾರ್ಡ್ ಬಾಗಿಲು ತೆರೆಯಲು ಮರೆತ ಕಾರಣ  ಟಿಟ್ವಾಲಾ-ಸಿಎಸ್ಎಂಟಿ ಎಸಿ ಲೋಕಲ್ ರೈಲಿನಲ್ಲಿ ನೂರಾರು ಪ್ರಯಾಣಿಕರು ಬೆಳಿಗ್ಗೆ ದಾದರ್ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ. ರೈಲು ವ್ಯವಸ್ಥಾಪಕ (ರೈಲ್ವೆ ಗಾರ್ಡ್) ಗೋಪಾಲ್ ಧಾಕೆ ಬಾಗಿಲುಗಳನ್ನು ತೆರೆಯಲು ಮರೆತಿದ್ದರಿಂದ ಪ್ರಯಾಣಿಕರು ಕೆಳಗಿಳಿಯಲಾರದೇ ರೈಲಿನೊಳಗೆ ಸಿಕ್ಕಿಬಿದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊವನ್ನು ಎಕ್ಸ್‌ನಲ್ಲಿ ಪ್ರಯಾಣಿಕರೊಬ್ಬರು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ ತಿಳಿಸಿದಂತೆ ರೈಲು ಎಂದಿನಂತೆ ದಾದರ್ ತಲುಪಿದೆ. ಆದರೆ ಎಸಿ ಲೋಕಲ್‍ನ ಆಟೋಮೇಟಿಕ್ ಡೋರ್ ತೆರೆಯಲು ವಿಫಲವಾಗಿತ್ತು. ಇದರ ಪರಿಣಾಮವಾಗಿ, ಹಲವಾರು ಪ್ರಯಾಣಿಕರು ರೈಲಿಗೆ ಹತ್ತಲು ಅಥವಾ ಇಳಿಯಲು ಸಾಧ್ಯವಾಗದೇ ಕಂಗೆಟ್ಟಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿರುವ ಪ್ರಯಾಣಿಕರೊಬ್ಬರು, ದಾದರ್‌ನಲ್ಲಿ ಇಳಿಯಬೇಕಿದ್ದವರು ಪರೇಲ್‍ನಲ್ಲಿ ಇಳಿಯಬೇಕಾಯಿತು ಎಂದು ಬರೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ, ರೈಲು ಬೆಳಿಗ್ಗೆ 10:05 ಕ್ಕೆ ದಾದರ್ ತಲುಪಿದೆ. ಮತ್ತು ಬೆಳಿಗ್ಗೆ 10:06 ಕ್ಕೆ ಮತ್ತೆ ಹೊರಟಿದೆ. ಕೇವಲ ಒಂದು ನಿಮಿಷದ ಕಾಲ ರೈಲು ನಿಂತಿದ್ದು, ಆದರೆ ಆ ಸಮಯದಲ್ಲಿ ಬಾಗಿಲುಗಳು ಮುಚ್ಚಿದ್ದರಿಂದ ಪ್ರಯಾಣಿಕರಿಗೆ ಇಳಿಯಲು ಸಾಧ್ಯವಾಗಲಿಲ್ಲ. ರೈಲು ಮತ್ತೆ ಚಲಿಸಲು ಪ್ರಾರಂಭಿಸುತ್ತಿದ್ದಂತೆ ಪ್ರಯಾಣಿಕರಲ್ಲಿ ಭೀತಿ ಶುರುವಾಗಿದೆ. ಹಾಗಾಗಿ ಪ್ರಯಾಣಿಕರು ಮುಂದಿನ ಪರೇಲ್‍ನಲ್ಲಿ ಇಳಿದಿದ್ದಾರಂತೆ.

ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಗಾರ್ಡ್ ವಿರುದ್ಧ ಕೇಂದ್ರ ರೈಲ್ವೆ (ಸಿಆರ್) ತ್ವರಿತ ಕ್ರಮ ಕೈಗೊಂಡಿದ್ದು, ಹೆಚ್ಚಿನ ತನಿಖೆ ನಡೆಯುವವರೆಗೂ ರೈಲ್ವೆ ಗಾರ್ಡ್ ಅನ್ನು ಅಮಾನತುಗೊಳಿಸಿದೆ. “ರೈಲು ವ್ಯವಸ್ಥಾಪಕ ಗೋಪಾಲ್ ಧಾಕೆ ದಾದರ್ ನಿಲ್ದಾಣದಲ್ಲಿ ಬಾಗಿಲು ತೆರೆಯಲು ಮರೆತಿದ್ದಾರೆ. ಅವರನ್ನು ಅಮಾನತುಗೊಳಿಸಲಾಗಿದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಸಿಆರ್ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಪೆಂಡೆಂಟ್ ಆರ್ಡರ್ ಮಾಡಿದ ಯುವತಿಗೆ ಸಿಕ್ಕಿದ್ದು ನಾಯಿಹಲ್ಲು!

ಮುಂಬೈ ಉಪನಗರ ವಿಭಾಗದಲ್ಲಿನ ಎಸಿ ಲೋಕಲ್ ರೈಲುಗಳು ಆಟೋಮೇಟಿಕ್ ಡೋರ್ ಕ್ಲೋಸರ್ ವ್ಯವಸ್ಥೆಯನ್ನು ಹೊಂದಿವೆ. ಇದನ್ನು ರೈಲ್ವೆ ಗಾರ್ಡ್ ನಿರ್ವಹಿಸುತ್ತಾರೆ. ಡೋರ್ ಕಂಟ್ರೋಲ್ ಪ್ಯಾನಲ್ ರೈಲ್ವೆ ಗಾರ್ಡ್ ಕ್ಯಾಬಿನ್‍ಗೆ ಕನೆಕ್ಟ್ ಮಾಡಲಾಗಿದೆ. ಹಾಗಾಗಿ  ರೈಲ್ವೆ ಗಾರ್ಡ್ ಆದೇಶದ ನಂತರವೇ ಬಾಗಿಲುಗಳು ತೆರೆಯುತ್ತವೆ ಮತ್ತು ಮುಚ್ಚುತ್ತವೆ.