ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
ಸಹೋದರ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾಗಿದ್ದ ವಯನಾಡು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪ್ರಿಯಾಂಕಾ ಗಾಂಧಿ
ಅವರು ಸುಮಾರು ನಾಲ್ಕು ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದಾರೆ. ಈ ಗೆಲುವಿನ ಸಮಯದಲ್ಲಿ, ಪ್ರಿಯಾಂಕಾ ಗಾಂಧಿ ಅವರಿಗೆ ಮಾಜಿ ಪ್ರಧಾನ ಮಂತ್ರಿ, ಅಜ್ಜಿ ಇಂದಿರಾ ಗಾಂಧಿ ನೀಡಿದ ಉಂಗುರದ ಸ್ವಾರಸ್ಯಕರ ಘಟನೆಯೊಂದು ನೆನಪಿಗೆ ಬಂತು.
ಇಂದಿರಾ ಗಾಂಧಿ-ಮೇನಕಾ ಗಾಂಧಿ-ಸೋನಿಯಾ ಗಾಂಧಿ ನಡುವಿನ ಸಂಬಂಧದ ಬಗ್ಗೆ ಅನೇಕ ಪುಸ್ತಕಗಳಲ್ಲಿ ರೋಚಕ ವರ್ಣನೆಯಿದೆ. ಅತ್ತೆ ಸೊಸೆಯಂದಿರ ಸಂಬಂಧ ಮತ್ತು ಸೊಸೆ-ಸೊಸೆಯರ ನಡುವಿನ ಕಿತ್ತಾಟ ಎಂಥ ಸಿನಿಮಾ ಕತೆಯನ್ನಾದರೂ ಸಪ್ಪೆಗೊಳಿಸಬಹುದು. ಜನತಾ ಪಕ್ಷದ ಸರಕಾರ ಇಂದಿರಾ ಗಾಂಧಿಯವರನ್ನು ಬಂಧಿಸಿ ತಿಹಾರ್ ಜೈಲಿಗೆ ಹಾಕಿತ್ತು. ಇಂದಿರಾಗೆ ಮನೆಯ ಆಹಾರ, ಊಟಕ್ಕೆ ಅನುಮತಿ ನೀಡಲಾಗಿತ್ತು. ಪ್ರತಿದಿನ ಮೂರು ಹೊತ್ತು ಸೋನಿಯಾ ಗಾಂಧಿಯವರು ಟಿಫಿನ್ ಬಾಕ್ಸ್ಗಳಲ್ಲಿ ಆಹಾರವನ್ನು ಕಟ್ಟಿಕೊಂಡು ಹೋಗುತ್ತಿದ್ದರು. ಹೋಗುವಾಗ ಜತೆಯಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ಅವರನ್ನೂ ಕರೆದುಕೊಂಡು ಹೋಗಲು ಮರೆಯುತ್ತಿರಲಿಲ್ಲ.
ಇಡೀ ಕುಟುಂಬ ಇಂದಿರಾ ಜತೆಗಿದೆಯೆಂಬುದನ್ನು ತೋರಿಸುವುದರ ಜತೆಗೆ, ಸಾರ್ವಜನಿಕ ಅನುಕಂಪ ಗಿಟ್ಟಿಸಿಕೊಳ್ಳುವುದೂ ಇದರ ಹಿಂದಿನ ಉದ್ದೇಶವಾಗಿರಬಹುದು. ಜೀವನದಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಸೋನಿಯಾ ತಮ್ಮ ಮಕ್ಕಳಿಗೆ ಈ ಸಂದರ್ಭದಲ್ಲಿ ಹೇಳುತ್ತಿದ್ದರು. ತಿಹಾರ್ ಜೈಲಿನಿಂದ ಇಂದಿರಾ ಬಿಡುಗಡೆಯಾಗಿ ಬಂದಾಗ, ಸೋನಿಯಾ ಮಾಡಿದ ಸೇವೆಯನ್ನು ವಿಶೇಷವಾಗಿ
ಸ್ಮರಿಸಿಕೊಂಡರು. ಅಪ್ಪಿತಪ್ಪಿಯೂ ಮೇನಕಾರ ಹೆಸರನ್ನು ಹೇಳಲಿಲ್ಲ. ಅದಕ್ಕೆ ಕಾರಣವಿಷ್ಟೇ- ಇಂದಿರಾ ಜೈಲಿನಲ್ಲಿದ್ದಾಗ, ಮೇನಕಾ ಒಮ್ಮೆಯೂ ಅತ್ತೆಯನ್ನು ನೋಡಲು ಹೋಗಲಿಲ್ಲ. ಮನೆಯಲ್ಲಿ ಕುಳಿತು ವಿಡಿಯೊ ಫಿಲ್ಮ್ ನೋಡುತ್ತಿದ್ದರು.
ಗಂಡ ಸಂಜಯ್ ಗಾಂಧಿಯವರ ಜತೆಗೆ ಕ್ಷುಲ್ಲಕ ಕಾರಣಗಳಿಗೆ ಜಗಳವಾಡುತ್ತಿದ್ದರು. ಅವರಿಬ್ಬರ ಜಗಳಕ್ಕೆ ಸಾಕ್ಷಿಯಾಗಿದ್ದವನು ಮಹಮ್ಮದ್ ಯೂನಸ್. ಈತ ಮೇನಕಾ-ಸಂಜಯ್ ಇಬ್ಬರಿಗೂ ಆಪ್ತ. ಯೂನಸ್ ಈ ಬಗ್ಗೆ ಹೇಳಿದ್ದನ್ನು ಅಲಿ ಸಿದ್ದಿಕಿ ಬರೆದ ‘ಸನ್ ಆಫ್ ಇಂಡಿಯಾ’ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ. ‘ಮೇನಕಾ-ಸಂಜಯ್ ನಡುವೆ ಆಗಾಗ ಜಗಳವಾಗುತ್ತಿದ್ದವು. ಆಕೆ ಸದಾ ಅವನ ಬಗ್ಗೆ ದೂರುತ್ತಿದ್ದಳು.
ಸಂಜಯ್ನ ಬಿಂದಾಸ್ ನಡವಳಿಕೆ ಅವಳಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ. ಕೆಲವೊಮ್ಮೆ ಗಂಡನನ್ನು ಏಕವಚನದಲ್ಲಿ ಸಂಬೋಧಿಸುತ್ತಿದ್ದಳು. ಸದಾ ಸಂಜಯ್ನನ್ನು ಒಂದಿಂದು ವಿಷಯ ಕುರಿತಂತೆ ಹಳಿಯುತ್ತಿದ್ದಳು. ಅವಳಿಗೆ ಅವನ ಮುಖ ಕಂಡರೆ ಆಗುತ್ತಿರಲಿಲ್ಲ’ ಎಂದು ಯೂನಸ್ ಹೇಳಿದ್ದಾನೆ. ಮೇನಕಾ-ಸಂಜಯ್ ನಡುವಿನ ಸಂಬಂಧ ಅಷ್ಟು ಹಳಸಿರಬಹುದೆಂದು ಇಂದಿರಾಗೂ ಗೊತ್ತಿರಲಿಲ್ಲ. 1976ರ ಒಂದು ದಿನ ಗಂಡ-ಹೆಂಡತಿ ಜೋರಾಗಿ ಜಗಳವಾಡಿಕೊಂಡರು. ಕೋಪದ ಭರದಲ್ಲಿ ಮದುವೆ ನಿಶ್ಚಿತಾರ್ಥ ಸಂದರ್ಭದಲ್ಲಿ ನೀಡಿದ ಉಂಗುರವನ್ನು ಮೇನಕಾ ತೆಗೆದು ಬೀಸಿ ಎಸೆದಳು. ಆ ದೃಶ್ಯ ಕಂಡು ಸ್ವತಃ ಇಂದಿರಾ ಸ್ತಂಭೀಭೂತರಾದರು! ‘ಈ ಕ್ಷುಲ್ಲಕ ಉಂಗುರವನ್ನು ನಾನು ಇನ್ನು ಮುಂದೆ ಧರಿಸಲಾರೆ’ ಎಂಬ ಮೇನಕಾ ಕಿರುಚಾಟ ಕೇಳಿ ಇಂದಿರಾರ ಬಾಯಿಯಿಂದ ಮಾತೇ ಹೊರಡದಂತಾಗಿತ್ತು.
ಕಾರಣ, ಅದು ಸಾಮಾನ್ಯ ಉಂಗುರವಲ್ಲ! ಜವಾಹರಲಾಲ್ ನೆಹರು ತಮ್ಮ ಮದುವೆ ನಿಶ್ಚಿತಾರ್ಥದ ಸಂದರ್ಭದಲ್ಲಿ ಕಮಲಾ ನೆಹರು ಅವರಿಗೆ
ತೊಡಿಸಿದ್ದ ಉಂಗುರವದು. ಆ ಉಂಗುರವನ್ನು ಕಮಲಾ ತಮ್ಮ ಏಕೈಕ ಮಗಳಾದ ಇಂದಿರಾಗೆ ಮದುವೆ ಸಂದರ್ಭದಲ್ಲಿ ಪ್ರೀತಿಯಿಂದ ಕೊಟ್ಟಿದ್ದರು. ಇಂದಿರಾ ಅದನ್ನು ಅಷ್ಟೇ ಪ್ರೀತಿಯಿಂದ ಮೇನಕಾಗೆ ಕೊಟ್ಟಿದ್ದರು. ಮೇನಕಾ ಆ ಉಂಗುರವನ್ನು ಬಿಸಾಕಿದ ರೀತಿ ಕಂಡು
ಸಂಜಯ್ ಸಹ ಕಲ್ಲವಿಲರಾಗಿದ್ದರು. ತಾಯಿಯ ಮುಂದೆ ಹೆಂಡತಿ ವರ್ತಿಸಿದ ರೀತಿಯಿಂದಾಗಿ ಅವರು ತೀವ್ರ ಅವಮಾನಕ್ಕೊಳಗಾಗಿದ್ದರು. ಮೂಲೆಯಲ್ಲಿ ಬಿದ್ದಿದ್ದ ಉಂಗುರವನ್ನು ಎತ್ತಿಕೊಂಡ ಸಂಜಯ್, ಅದನ್ನು ಇಂದಿರಾ ಕೈಗೆ ಕೊಡುತ್ತಾ, ‘ಇದನ್ನು ನೀವೇ ಇಟ್ಟುಕೊಳ್ಳಿ,
ಇದನ್ನು ಧರಿಸಲು ಮೇನಕಾ ಅರ್ಹಳಲ್ಲ. ಯಾಕೆಂದರೆ ಅವಳಿಗೆ ಇದರ ಮಹತ್ವ ಗೊತ್ತಿಲ್ಲ’ ಎಂದರು.
ಈಗ ಈ ಉಂಗುರ ಪ್ರಿಯಾಂಕ ಬೆರಳಿನಲ್ಲಿದೆ! ರಶೀದ್ ಕಿದ್ವಾಯಿ ಬರೆದ ‘24 ಅಕ್ಬರ್ ರೋಡ್’ ಪುಸ್ತಕವನ್ನು ಓದಿದಾಗ ಮನದಾಳದಲ್ಲಿ ಗಟ್ಟಿಯಾಗಿ ನಿಂತಿದ್ದ ಈ ಘಟನೆ, ವಯನಾಡು ಉಪಚುನಾವಣಾ ಫಲಿತಾಂಶವನ್ನು ನೋಡುವ ಸಮಯದಲ್ಲಿ ನೆನಪಿಗೆ ಬಂತು!
ಕಣ್ಣಿಗೆ ಕಾಣದ ಕರಡು ದೋಷಗಳು
‘ಪತ್ರಕರ್ತನಾಗುವ ಮುನ್ನ ಪ್ರೂಫ್ ರೀಡರ್ ಆಗು!’ ಎಂದು ಪ್ರೂಫ್ ರೀಡಿಂಗ್ (ಕರಡು ತಿದ್ದುವುದು) ಮಹತ್ವದ ಬಗ್ಗೆ ಅನೇಕ ಸಮಯದಲ್ಲಿ ಬರೆದಿದ್ದೆ. ‘ಉತ್ತಮ ಪ್ರೂಫ್ ರೀಡರ್ ಆಗದೇ ಉತ್ತಮ ಪತ್ರಕರ್ತರಾಗುವುದು ಸಾಧ್ಯವೇ ಇಲ್ಲ’ ಎಂಬುದು ಆ ಲೇಖನಗಳ ಆಶಯವಾಗಿತ್ತು. ಯಾವುದೇ ಪತ್ರಿಕೆ ತೆರೆದರೂ, ಕರಡು ದೋಷ ಸಿಗುತ್ತದೆ. ಇವಿಲ್ಲದೇ ಪತ್ರಿಕೆ ಹೊರತರುವುದು ಕಷ್ಟಸಾಧ್ಯ.
ಪತ್ರಿಕೆಯಲ್ಲಿರುವ ಎಲ್ಲರೂ ಅತ್ಯುತ್ತಮ ಪ್ರೂಫ್ ರೀಡರ್ ಆಗಿದ್ದರೆ ಅಥವಾ ಈ ದೋಷದ ಬಗ್ಗೆ ಎಚ್ಚರ ಹಾಗೂ ಎಚ್ಚರಿಕೆ ವಹಿಸಿದರೆ ಮಾತ್ರ ಈ ನಿಟ್ಟಿನಲ್ಲಿ ಯಶಸ್ವಿಯಾಗಬಹುದು. ಹಾಲನ್ನು ಕೆಡಿಸಲು ಒಂದು ಹನಿ ಹುಳಿ ಸಾಕು ಎಂಬಂತೆ, ಒಬ್ಬರು ಯಡವಟ್ಟು ಮಾಡಿದರೆ, ಅದನ್ನು ಬೇರೆಯವರು ಗಮನಿಸದಿದ್ದರೆ, ಆ ದೋಷ ಪತ್ರಿಕೆಯಲ್ಲಿ ಹಾಗೇ ಪ್ರಕಟವಾಗಬಹುದು.
ಕೆಲ ವರ್ಷದ ಹಿಂದೆ ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ‘ರಾಮುಲು ಭಾಷಣಕ್ಕೆ ಭಾರಿ ಕೆರತಾಡನ’ ಎಂದು ಪ್ರಕಟವಾಗಿತ್ತು. ಅದು ಕರತಾಡನ (ಚಪ್ಪಾಳೆ) ಎಂದಾಗಬೇಕಿತ್ತು. ರಾಜ್ಯದ ಹಲವು ಗ್ರಾಮೀಣ ಭಾಗಗಳಲ್ಲಿ ಚಪ್ಪಲಿಗೆ ‘ಕೆರ’ ಎಂದು ಹೇಳುತ್ತಾರೆ. ‘ಕ’ ಎಂಬ ಅಕ್ಷರ ‘ಕೆ’ ಎಂದಾದರೆ, ಎಂಥ ಅರ್ಥವ್ಯತ್ಯಾಸವಾಗಬಹುದು ಎಂಬುದಕ್ಕೆ ಇದೊಂದು ನಿದರ್ಶನ. ಎಷ್ಟೇ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೂ, ಒಮ್ಮೊಮ್ಮೆ ತಪ್ಪುಗಳು ಕಣ್ಣಿಗೆ ಬೀಳದಂತೆ ಉಳಿದುಬಿಡುತ್ತವೆ. ನೋಡುವಾಗ ಸರಿ ಇತ್ತು, ಪ್ರಿಂಟಾದ ಬಳಿಕ ದೋಷವಾಗಿದೆ ಎಂದು ಸುದ್ದಿಮನೆಯಲ್ಲಿ ಕೆಲವು ಉಪಸಂಪಾದಕರು ವಾದ ಮಾಡುತ್ತಾರೆ. ಪ್ರಿಂಟ್ ಆಗುವಾಗ ಮಾಟ- ಮಂತ್ರವೇನೂ ಆಗುವುದಿಲ್ಲವಲ್ಲ. ಕರಡು ತಿದ್ದುವಾಗ ಕಾಣದ ದೋಷ ಪ್ರಿಂಟ್ ಆದ ನಂತರ ಓದುವಾಗ ಕಂಡಾಗ ಹೀಗೆ ಅನಿಸುತ್ತದೆ.
ಕೆಲ ವರ್ಷಗಳ ಹಿಂದೆ, ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ನಾಯಕ ಲಾಲೂ ಪ್ರಸಾದ್ ಯಾದವ್ಗೆ ಜೈಲುಶಿಕ್ಷೆ ತೀರ್ಪು ಹೊರಬಿದ್ದಾಗ
ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡುತ್ತಾ ‘ಸತ್ಯಕ್ಕೆ ಜಯವಾಗುತ್ತದೆ. ಸತ್ಯಮೇವ ಜಯತೆ’ ಎಂದು ಹೇಳಿದ್ದರು. ಲಾಲೂ ಅವರ ಪ್ರತಿಕ್ರಿಯೆ ಬಾಕ್ಸ್ ಐಟಂ ಆಗಿ ಪ್ರಕಟಗೊಂಡಿತ್ತು. ಅದಕ್ಕೆ ನೀಡಿದ ಶೀರ್ಷಿಕೆ ‘ಸತ್ಯಮೇವು ಜಯತೆ’ ಉದ್ದೇಶಪೂರ್ವಕವಾಗಿ, ಪನ್ ಮಾಡಲು ಬರೆದ ಶೀರ್ಷಿಕೆ ಇದಾಗಿರಲಿಲ್ಲ. ಮೇವಿನ ಹಗರಣದ ಕುರಿತಾದ ಸುದ್ದಿ ಬರೆಯುವಾಗ ‘ಸತ್ಯಮೇವ’ ಎಂಬುದು ಕಣ್ತಪ್ಪಿನಿಂದ ‘ಸತ್ಯಮೇವು’ ಆಗಿತ್ತು. ಈ ಪುಟವನ್ನು ಮೂವರು ಗಮನಿಸಿ, ಮುದ್ರಣಕ್ಕೆ ಕಳಿಸಿದರೂ ಅವರ್ಯಾರಿಗೂ ಈ ಪ್ರಮಾದ ಕಣ್ಣಿಗೆ ಬಿದ್ದಿರಲಿಲ್ಲ.
ಮಾತಿನಿಂದ ದೊಡ್ಡವರೆನಿಸಿದರು
ಯೋಗಿ ದುರ್ಲಭಜೀ ಅವರು ಹೇಳಿದ ಪ್ರಸಂಗವಿದು. ಒಮ್ಮೆ ಖ್ಯಾತ ಶಾಸ್ತ್ರೀಯ ಸಂಗೀತಗಾರ ಪಂಡಿತ ಓಂಕಾರನಾಥ ಠಾಕೂರ್ ಅವರು ಸಂಗೀತ ಕಾರ್ಯಕ್ರಮಕ್ಕೆ ಹೊರಟಿದ್ದರು. ಬಾಗಿಲ ಬಳಿ ಇಬ್ಬರು ಸಂಗೀತಪ್ರೇಮಿಗಳು ನಿಂತಿದ್ದರು. ಠಾಕೂರರ ಲಕ್ಷ್ಯ ಅವರ ಕಡೆಗೆ ಹೋಯಿತು. ಓಡೋಡಿ ಬಂದ ಅವರು, ‘ಠಾಕೂರ್ಜೀ, ನಿಮ್ಮ ಸಂಗೀತ ಕಛೇರಿಯಲ್ಲಿ ಪಾಲ್ಗೊಳ್ಳಲೆಂದು ಪಕ್ಕದ ಊರಿನಿಂದ ಬಂದಿದ್ದೇವೆ. ಆದರೆ ನಮ್ಮಲ್ಲಿ ಹಣವಿಲ್ಲ. ನಮಗೆ ಒಳಹೋಗಲು ನೆರವಾಗಿ’ ಎಂದು ಕೇಳಿಕೊಂಡರು.
ಅದಕ್ಕೆ ಠಾಕೂರ್, ‘ನಾನು ನನ್ನ ಕಾರ್ಯಕ್ರಮಕ್ಕೆ ಸಂಘಟಕರಿಂದ ಹಣ ಪಡೆದಿದ್ದೇನೆ. ಅವರಿಗೆ ಹೇಳಿ ನಿಮ್ಮನ್ನು ಒಳಕ್ಕೆ ಕಳಿಸಬಹುದು. ಇದರಿಂದ ಸಂಘಟಕರಿಗೆ ಹಾನಿಯಾಗುತ್ತದೆ. ನನಗೆ ಅದು ಇಷ್ಟವಿಲ್ಲ. ಒಂದು ಕೆಲಸ ಮಾಡಿ, ನಾನು ಇಲ್ಲಿಗೆ ಸನಿಹದ ಗೆಸ್ಟ್ಹೌಸ್ನಲ್ಲಿ ಉಳಿದುಕೊಂಡಿದ್ದೇನೆ. ನೀವು ನಾಳೆ ಬೆಳಗ್ಗೆ ಎಂಟು ಗಂಟೆಗೆ ಬಂದರೆ, ನಿಮ್ಮಿಬ್ಬರಿಗಾಗಿ ಹಾಡುತ್ತೇನೆ’ ಎಂದು ಒಳನಡೆದರು. ಇಬ್ಬರಿಗೂ ನಿರಾಸೆಯಾಯಿತು. ಆದರೆ ನಾಳೆ ತಮಗಾಗಿ ಹಾಡುತ್ತೇನೆಂದು ಹೇಳಿದ್ದಕ್ಕೆ ಸಮಾಧಾನವಾಯಿತು. ಅಷ್ಟು ದೊಡ್ಡ ಸಂಗೀತಗಾರ ಇಬ್ಬರಿಗಾಗಿ
ಹಾಡುವುದುಂಟಾ? ಸಾಧ್ಯವೇ ಇಲ್ಲ. ನಮ್ಮನ್ನು ಸಾಗಹಾಕಲು ಹಾಗೆ ಹೇಳಿರಬೇಕು ಎಂದು ಅಂದುಕೊಂಡರು. ಆದರೂ ಅವರನ್ನು ಪರೀಕ್ಷಿಸಲು ಸರಿಯಾಗಿ ಬೆಳಗ್ಗೆ ಎಂಟು ಗಂಟೆಗೆ ಗೆಸ್ಟ್ಹೌಸ್ಗೆ ಹೋದರು. ಠಾಕೂರ್ ಪಕ್ಕವಾದ್ಯ ಕಲಾವಿದರೊಂದಿಗೆ ಆ ಇಬ್ಬರು ‘ವಿಶೇಷ ಅತಿಥಿ’ಗಳಿಗಾಗಿ ದಾರಿನೋಡುತ್ತಿದ್ದರು. ಇವರಿಬ್ಬರೂ ಹೋಗುತ್ತಲೇ ಸಂತಸದಿಂದ ಬರಮಾಡಿಕೊಂಡ ಅವರು, ತಮ್ಮ ಅತಿಥಿಗಳು ಬಯಸಿದ ರಾಗವನ್ನು ಹಾಡಿ
ರಂಜಿಸಿದರು.
ಯೋಗಿಜೀ, ಇದು ನಿಜವಾಗಿಯೂ ನಡೆದ ಘಟನೆಯಾ?’ ಎಂದು ಕೇಳಿದೆ. ಅವರು ಹೇಳಿದರು- ‘ಸಂಗೀತಗಾರರು ನುಡಿದಂತೆ ನಡೆಯಬಾರ ದೆಂದೇನೂ ಇಲ್ಲವಲ್ಲ. ಠಾಕೂರರು ದೊಡ್ಡವರೆನಿಸಿಕೊಂಡಿದ್ದು ತಮ್ಮ ಕಂಠದಿಂದ ಮಾತ್ರ ಅಲ್ಲ, ಬಾಯಿ ಮಾತಿನಿಂದಲೂ’.
ಇದನ್ನೂ ಓದಿ: @vishweshwarbhat