ಮತದಾರ ಪ್ರಭುಗಳು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ‘ಮಹಾಯುತಿ’ ಮೈತ್ರಿಕೂಟಕ್ಕೆ ಮತ್ತೊಮ್ಮೆ ‘ಉಘೇ ಉಘೇ’ ಎಂದಿದ್ದರೆ, ಜೆಎಂಎಂ ಪಕ್ಷವನ್ನೊಳಗೊಂಡ ‘ಇಂಡಿಯಾ’ ಮೈತ್ರಿಕೂಟದ ಪರವಾಗಿ ಜಾರ್ಖಂಡ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಕರ್ನಾಟಕದ ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಈ ಎಲ್ಲ ಗೆಲುವುಗಳಿಗೆ ಕಾರಣವೇನು? ಹಿನ್ನೆಲೆಯಲ್ಲಿ ಕೆಲಸ ಮಾಡಿದ ಅಂಶಗಳಾವುವು? ಎಂಬೆಲ್ಲದರ ವಿಶ್ಲೇಷಣೆಗಳು ಈಗಾಗಲೇ ವಿವಿಧ ಮಾಧ್ಯಮಗಳ ಮೂಲಕ ಬಯಲಾಗಿವೆ.
ನಿರ್ದಿಷ್ಟವಾಗಿ ಕರ್ನಾಟಕದ ಈ ಮೂರು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಚರ್ಚೆಗೆ ಬಂದಾಗ, ‘ಹಣದ ಹೊಳೆ ಹರಿಸಿ ಕಾಂಗ್ರೆಸ್
ಗೆಲುವು ಸಾಧಿಸಿದೆ’, ‘ಸರಕಾರದ ಗ್ಯಾರಂಟಿ ಯೋಜನೆಗಳು ಗೆಲುವಿಗೆ ಸಹಕಾರಿಯಾಗಿವೆ’, ‘ಈ ಫ ತಾಂಶವು 2028ರ ಚುನಾವಣೆಗೆ ದಿಕ್ಸೂಚಿ’,
‘ದೋಸ್ತಿಗಳ ಕನಸು ಛಿದ್ರ, ಕಾಂಗ್ರೆಸ್ ಮತ್ತಷ್ಟು ಭದ್ರ’ ಹೀಗೆ ಏನೆಲ್ಲಾ ಅಭಿಪ್ರಾಯಗಳು ಹೊರಹೊಮ್ಮಿವೆ. ಆಯಾ ಪಕ್ಷದವರು ತಮ್ಮನ್ನು
ಸಮರ್ಥಿಸಿಕೊಳ್ಳುವ ಪರಿ ಪಾಠದ ಭಾಗವಾಗಿ ಹೀಗೆ ಹೇಳಿಕೊಳ್ಳುವುದು ಸಹಜವೇ. ಆದರೆ, ಸೋತ ಅಭ್ಯರ್ಥಿಯಲ್ಲಿ ಇಲ್ಲದ ಯಾವ ಶಿಷ್ಟ್ಯವನ್ನು ತಮ್ಮಲ್ಲಿ ಕಂಡು ಮತ ದಾರರು ನಮಗೆ ಓಗೊಟ್ಟು ಚುನಾಯಿಸಿದ್ದಾರೆ ಎಂಬುದನ್ನು ಕೂಡ ಗೆದ್ದ ಅಭ್ಯರ್ಥಿಗಳು ಒಮ್ಮೆ ಮನನ ಮಾಡಿಕೊಳ್ಳಬೇಕಿದೆ, ಜನರ ಆಶೋತ್ತರಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ.
ಇಲ್ಲವಾದಲ್ಲಿ, ದೋಸೆ ಯನ್ನು ಮಗುಚಿದಷ್ಟೇ ಸಹಜವಾಗಿ ಮತದಾರರು, ಈಗ ಗೆದ್ದಿರುವವರನ್ನೂ ಮುಂದೊಮ್ಮೆ ತಿರಸ್ಕರಿಸಬಲ್ಲರು ಎಂಬ ಎಚ್ಚರಿಕೆಯನ್ನು ಸಂಬಂಧಪಟ್ಟವರು ಮನದಟ್ಟು ಮಾಡಿಕೊಳ್ಳಬೇಕಿದೆ. ಇಂದ್ರನ ಅಮರಾವತಿಯ ವೈಭವವನ್ನೇ ಧರೆಗಿಳಿಸಿ ಬಿಡಬೇಕು ಎಂದೇನೂ ನಮ್ಮ ಶ್ರೀಸಾಮಾನ್ಯರು ನಿರೀಕ್ಷಿಸುತ್ತಿಲ್ಲ; ದೈನಂದಿನ ಬದುಕು ಸಾಗಿಸುವುದಕ್ಕೆ ಮತ್ತು ಭವಿಷ್ಯವನ್ನು ಕಟ್ಟಿಕೊಳ್ಳುವುದಕ್ಕೆ
ಅನುವುಮಾಡಿಕೊಡುವಂಥ ವಾತಾವರಣ ಬೇಕು ಎಂಬುದನ್ನಷ್ಟೇ ಅವರು ಬಯಸುತ್ತಿರುವುದು. ಇಂಥ ಕನಿಷ್ಠ ಅಗತ್ಯಗಳ ಈಡೇರಿಕೆಗಾದರೂ ಜನಪ್ರತಿನಿಧಿಗಳು ಶ್ರಮಿಸುವಂತಾಗಲಿ ಎಂಬುದು ಸಹಜ ನಿರೀಕ್ಷೆ, ಅಷ್ಟೇ.
ಇದನ್ನೂ ಓದಿ: #editorial