Monday, 25th November 2024

Vinayaka M Bhatta Column: ಜೀವನಧರ್ಮಯೋಗ ಎಂಬ ಗೀತಾರ್ಥ ಗಂಧೋತ್ಕಟ

ವಿದ್ಯಮಾನ

ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

ಡಿವಿಜಿಯವರ ‘ಜ್ಞಾಪಕ ಚಿತ್ರಶಾಲೆ’ ಮುಂತಾದ ಕೃತಿಗಳಂತೆ ‘ಜೀವನಧರ್ಮಯೋಗ’ ಸರಳವಾಗಿ ಓದಿಸಿಕೊಂಡು ಹೋಗುವ ಗ್ರಂಥವಲ್ಲ;
ಓದಿದ್ದನ್ನೇ ಮತ್ತೆ ಮತ್ತೆ ಓದಿ, ಅರ್ಥಮಾಡಿಕೊಳ್ಳಬೇಕಾದ ಕೃತಿಯಿದು. ಕನ್ನಡದ ಆಸ್ತಿಕ ಜನರು ಒಮ್ಮೆಯಾದರೂ ಓದಲೇಬೇಕಾದ ಗ್ರಂಥವಿದು.

ಗುಂಡೋಪನಿಷತ್ತು ಎಂದೇ ಪ್ರಸಿದ್ಧವಾಗಿರುವ ‘ಮಂಕುತಿಮ್ಮನ ಕಗ್ಗ’ ಕಾವ್ಯದಿಂದಲೇ ಲೋಕವಿಖ್ಯಾತರಾದವರು ಡಿವಿಜಿ (ದೇವನಹಳ್ಳಿ
ವೆಂಕಟರಮಣಯ್ಯ ಗುಂಡಪ್ಪ). ಅವರ ಕೃತಿಶ್ರೇಣಿಯಲ್ಲಿ ಅಷ್ಟೇ ಜನಪ್ರಿಯವಾಗಿರುವ ಮತ್ತೊಂದು ಕೃತಿಯೆಂದರೆ ‘ಭಗವದ್ಗೀತಾ ತಾತ್ಪರ್ಯ’ ಅಥವಾ ‘ಜೀವನಧರ್ಮಯೋಗ’. ಇದಕ್ಕೆ 1967ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರವೂ ದೊರೆಯಿತು. ಇದು ಭಗವದ್ಗೀತೆಯ
ಕುರಿತಾಗಿ ಕನ್ನಡದಲ್ಲಿ ಬಂದ ಕೃತಿಗಳ ಪೈಕಿ ಗಾತ್ರದಲ್ಲೂ ಗುಣದಲ್ಲೂ ಮೂರ್ಧನ್ಯ ಸ್ಥಾನ ಪಡೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಲೋಕಾನುಭವಿಯೂ ಬಹುಶ್ರುತರೂ ಆಗಿದ್ದ ಡಿವಿಜಿ ಈ ಕೃತಿಯನ್ನು ನೋಡಿದ ರೀತಿ ವಿಭಿನ್ನವೂ ವಿಶಿಷ್ಟವೂ ಆಗಿದೆ. ಹಾಗಂತ ಅವರು ವ್ಯಾಖ್ಯಾನ ಸಂಪ್ರದಾಯವನ್ನೂ ಪರಂಪರೆಯನ್ನೂ ಬಿಟ್ಟು ತಮ್ಮದೇ ವ್ಯಾಖ್ಯೆಗಳನ್ನು ಇಲ್ಲಿ ಕೊಟ್ಟಿದ್ದಾರೆ ಎಂದು ಅರ್ಥೈಸಲಾಗದು.
ತ್ರಿಮತಾಚಾರ್ಯರುಗಳ ಅಭಿಪ್ರಾಯಗಳನ್ನು ಗೌರವಿಸುತ್ತಾ, ಅವರುಗಳ ಭಾಷ್ಯದ ಬುನಾದಿಯ ಮೇಲೆಯೇ ತಮ್ಮ ಸುಂದರ-ಸದೃಢ ಇಮಾರತನ್ನು ಕಟ್ಟಿ ತೋರಿಸಿದ್ದಾರೆ. ಒಟ್ಟಿನಲ್ಲಿ, ಆಧುನಿಕ ಜನರಿಗೆ ಗೀತೋಪದೇಶವು ಸ್ವೀಕಾರಾರ್ಹವಾಗುವ ರೀತಿಯಲ್ಲಿನ ಸಾರ್ಥಕ ಪ್ರಯೋಗ
ಈ ಕೃತಿಯಲ್ಲಾಗಿದೆ.

ಗೀತೆಯನ್ನು ‘ಭವದ್ವೇಷಿಣಿ’ಯೆಂದು, ಅಂದರೆ ಬರೀ ‘ಮೋಕ್ಷಶಾಸ’ವೆಂದು ಪರಿಗಣಿಸಿ, ಅದರ ಉಪದೇಶವನ್ನು ಮೋಕ್ಷಾರ್ಥಿಗಳಿಗಷ್ಟೇ ಮೀಸಲಿಡುವುದು ಡಿವಿಜಿಯವರಿಗೆ ಸುತರಾಂ ಇಷ್ಟವಿದ್ದಂತಿಲ್ಲ. ಹಾಗೆ ನೋಡಿದರೆ, ಅದು ಗೀತಾಚಾರ್ಯನ ಹೃದಯವೂ ಆಗಿರಲಿಲ್ಲವೇನೋ! ಇರಲಿ, ಜೀವನವೆಂಬುದು ಸದಾಚಾರದಿಂದ ಸಮೃದ್ಧವಾಗಿದ್ದರೆ, ಮೋಕ್ಷವೆಂಬುದು ಸ್ವತಃ ಸಿದ್ಧವಾಗಿಯೂ ಸ್ವಾಭಾವಿಕವಾಗಿಯೂ ದೊರೆಯುವಂಥದ್ದು ಎಂಬುದು ಡಿವಿಜಿಯವರ ಪ್ರಬೋಧನೆ.

‘ಧರ್ಮದ ಫಲಪರಿಪೂರ್ಣತೆಯೇ ಮೋಕ್ಷ ಮತ್ತು ಮೋಕ್ಷಕ್ಕಾಗಿ ಮಾಡಿಕೊಳ್ಳುವ ಪೂರ್ವತಯಾರಿಯೇ ಧರ್ಮ’ ಎಂಬ, ಧರ್ಮ ಮತ್ತು ಮೋಕ್ಷಕ್ಕೆ ಅತ್ಯಂತ ಸರಳ-ಸಮಂಜಸ ವ್ಯಾಖ್ಯಾನವನ್ನು ಅವರು ನೀಡಿದ್ದಾರೆ. ಅಂಥ ಧರ್ಮಸಂಪಾದನೆ ಆಗಬೇಕಿರುವುದು ಜೀವನಾವಧಿಯಲ್ಲೇ ಆಗಿರುವು ದರಿಂದ, ಧರ್ಮದ ಆಧಾರದ ಮೇಲೆ ಅಥವಾ ಜೀವನಾನ್ವಯದ ಮೂಸೆಯಿಂದಲೇ ಗೀತೆಯನ್ನು ಅವಲೋಕಿಸುವುದು ಸಮಂಜಸ ಎಂಬ ಕಾರಣದಿಂದಲೋ ಏನೋ, ಜೀವನ ಅಥವಾ ಧರ್ಮ ಭೂಯಿಷ್ಠವಾದ ಅರ್ಥಕೊಡುವ ‘ಜೀವನಧರ್ಮಯೋಗ’ ಎಂಬ ಸಾರ್ಥಕ ಶೀರ್ಷಿಕೆಯನ್ನೇ ಡಿವಿಜಿಯವರು ಭಗವದ್ಗೀತೆಗೆ ನೀಡಿದ್ದಾರೆ.

ಯುದ್ಧೋನ್ಮಾದದಲ್ಲಿರುವ ಎರಡು ಸೇನೆಗಳ ಮಧ್ಯೆ ನಿಂತು ಶ್ರೀಕೃಷ್ಣನು ಗೀತೆಯನ್ನು ಅರ್ಜುನನಿಗೆ ಉಪದೇಶಿಸಿದ್ದಾನೆ ಎಂಬುದು ನಿಜವಾದರೂ, ಅರ್ಜುನ ಮಾತ್ರವೇ ಅವನ ಲಕ್ಷ್ಯವಾಗಿರಲಿಲ್ಲ; ಅರ್ಜುನನನ್ನು ನಿಮಿತ್ತವಾಗಿಸಿಕೊಂಡು ಸಮಸ್ತ ಮನುಕುಲವನ್ನು ಉದ್ದೇಶಿಸಿಯೇ ಶ್ರೀಕೃಷ್ಣನ ಈ ಪ್ರತಿಬೋಧನೆಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಮತ್ತೊಂದು ವಿಶೇಷವೆಂದರೆ, ಗೀತೆಯಲ್ಲಿನ ಎಲ್ಲ ಉಪದೇಶಗಳೂ ಎಲ್ಲರಿಗೂ ಸಮನಾಗಿ ಉಪಯೋಗ ಆಗುವಂಥವಲ್ಲ; ಪ್ರತಿಯೊಬ್ಬನಿಗೂ ಅವನವನ ಜೀವನ ಪರಿಶೋಧನೆಗೂ ಅಧ್ಯಾತ್ಮ ಪ್ರಗತಿಗೂ ಸಾಧಕವಾಗುವ ಉಪದೇಶ ಯಾವುದುಂಟೋ ಅದೇ ಅವನಿಗೆ ಶ್ರೇಷ್ಠವಾಗುತ್ತದೆ. ಅವರವರ ಯೋಗ್ಯತೆಗೆ ತಕ್ಕಂತೆ ಮತ್ತು ಉಪಯೋಗಕ್ಕೆ ಬರುವಷ್ಟು ಧರ್ಮಮಾರ್ಗಗಳು ಹಾಗೂ ಯುಕ್ತಿಗಳು ಗೀತೆಯಲ್ಲಿ ಉಕ್ತವಾಗಿದ್ದು, ವ್ಯಕ್ತಿಯೊಬ್ಬ ತನಗೆ ಬೇಕಾದ್ದನ್ನು ಎತ್ತಿಕೊಂಡು ಸಮನ್ವಯಗೊಳಿಸಿಕೊಂಡರೆ ಅವನ ಜೀವನ ಸಾರ್ಥಕವೇ ಸರಿ ಎಂಬುದು ಡಿವಿಜಿಯವರ ಅಭಿಪ್ರಾಯ.

ಮೂಲಗೀತೆಯ ಅಧ್ಯಾಯಗಳ ಹೆಸರುಗಳಿಗೆ ಅರ್ಥಬಾಧಕವಾಗದಂತೆ ತಮ್ಮ ಕಾವ್ಯದಲ್ಲಿ ನವೀನ ಹೆಸರುಗಳನ್ನು ಕೊಟ್ಟಿರುವುದು ಡಿವಿಜಿ ಯವರ ವೈಶಿಷ್ಟ್ಯ; ಪ್ರಾರಂಭದ ‘ಅರ್ಜುನ ವಿಷಾದಯೋಗ’ಕ್ಕೆ ‘ಪ್ರಾಕೃತ ಕಾರುಣ್ಯಯೋಗ’ ವೆಂತಲೂ, ಕೊನೆಯ ‘ಮೋಕ್ಷ ಸನ್ಯಾಸಯೋಗ’ಕ್ಕೆ ‘ತದೇಕ ಶರಣತಾಯೋಗ’ವೆಂತಲೂ ಜೀವನ ಪ್ರಸ್ತುತಿ ಹೊಂದಿರುವ ಹೊಸ ಹೆಸರುಗಳನ್ನು ಅವರು ನೀಡಿರುವುದು ಇದಕ್ಕೆ ಸಾಕ್ಷಿ. ಅಂತೂ, ಈ ‘ಜೀವನಧರ್ಮಯೋಗ’ದಲ್ಲಿ ಕನ್ನಡನಾಡಿನ ಗೀತಾಧ್ಯಯನಶೀಲರಿಗೆ ಸಿಕ್ಕಬಹುದಾದಷ್ಟು ಹೂರಣ ಬೇರೆಲ್ಲೂ ಸಿಗಲಿಕ್ಕಿಲ್ಲ ಎಂದು, ಕನ್ನಡದಲ್ಲಿ ಗೀತಾರ್ಥವನ್ನು ರಚಿಸಿದ ಎಲ್ಲರನ್ನೂ ಗೌರವಿಸುತ್ತಾ ಹೇಳಬಹುದಾಗಿದೆ. ಯಾರು ಲೋಕಜೀವನದ ಕಷ್ಟ, ಇಕ್ಕಟ್ಟು-ಬಿಕ್ಕಟ್ಟುಗಳನ್ನು ಅನುಭವ ದಿಂದ ಕಂಡು, ಭೋಗ-ಲಾಭಗಳಲ್ಲಿ ಆಸೆಯನ್ನು ಮಿತಪಡಿಸಿಕೊಳ್ಳಬಲ್ಲವನಾಗಿ, ಸಕಲ ಜನಾನುಭೂತಿಯುಳ್ಳವನಾಗಿ, ಜೀವನದಲ್ಲಿ ಹೇಗೆ ನಡೆದುಕೊಂಡರೆ ಜನ್ಮ ಸಾರ್ಥಕವಾದೀತು ಎಂಬುದನ್ನು ಅರಿಯಲು ತೀವ್ರ ಕುತೂಹಲಿಯಾಗಿರುತ್ತಾನೋ, ಆತ ಗೀತೆಯ ವ್ಯಾಸಂಗಕ್ಕೆ ತಕ್ಕ ಅಧಿಕಾರಿ.

ಆಶಾ ಪರಿಮಿತಿ, ಸಂಯಮ, ತತ್ತ್ವಜ್ಞಾನೇಚ್ಛೆ ಇವು ಗೀತಾವ್ಯಾಸಂಗಿಗೆ ಇರಬೇಕಾದ ಅಂತರಂಗದ ಸ್ಥಿತಿ ಎಂಬುದು ಡಿವಿಜಿಯವರ ಸ್ಪಷ್ಟ ಅಭಿಮತ. ಡಿವಿಜಿಯವರ ‘ಜ್ಞಾಪಕ ಚಿತ್ರಶಾಲೆ’ ಮುಂತಾದ ಕೃತಿಗಳಂತೆ ‘ಜೀವನಧರ್ಮಯೋಗ’ ಸರಳವಾಗಿ ಓದಿಸಿಕೊಂಡು ಹೋಗುವ ಗ್ರಂಥವಲ್ಲ; ಓದಿದ್ದನ್ನೇ ಮತ್ತೆ ಮತ್ತೆ ಓದಿ, ತತ್ತ್ವಗಳನ್ನು ಅನುಸಂಧಾನ ಮಾಡಿ ಅರ್ಥಮಾಡಿಕೊಳ್ಳಬೇಕಾದ ಕೃತಿಯಿದು. ಮೂಲಗೀತೆಯ ‘ವಿಷಯ ಕಾಠಿಣ್ಯತೆ’ಯೇ ಹಾಗಿರುವಾಗ, ಓದುಗರು ಡಿವಿಜಿಯವರನ್ನು ದೂಷಿಸುವ ಹಾಗಿಲ್ಲ. ಆದರೂ, ಕನ್ನಡದ ಆಸ್ತಿಕ ಜನರು ಒಮ್ಮೆಯಾದರೂ ಓದಲೇಬೇಕಾದ ಗ್ರಂಥವಿದು.

ಸದ್ಯಕ್ಕೆ ಇದರ ವಸ್ತು-ವಿಷಯಗಳನ್ನು ಪಕ್ಕಕ್ಕಿಡೋಣ. ಈ ಗ್ರಂಥದ ಆದಿಯಲ್ಲಿ ಡಿವಿಜಿಯವರೇ ಬರೆದ ಮುನ್ನುಡಿ, ವಿಸ್ತೃತ ಭೂಮಿಕೆ ಮತ್ತು ಅಂತ್ಯದಲ್ಲಿನ ಉಪಸಂಹಾರಗಳನ್ನಾದರೂ ನಾವು ಓದಲೇಬೇಕು. ಇಷ್ಟು ಸಮಗ್ರ, ಚಿಂತನಾರ್ಹ ಭೂಮಿಕೆ ಮತ್ತು ಉಪಸಂಹಾರಗಳು ಇನ್ನಾವ
ಕೃತಿಯಲ್ಲೂ ಸಿಗುವುದಿಲ್ಲ. ಒಬ್ಬ ಸಾಮಾನ್ಯ ಓದುಗ ಯಾವ ಪೂರ್ವತಯಾರಿಯಿಂದ ಗೀತಾಧ್ಯಯನವನ್ನು ಆರಂಭಿಸಬೇಕು? ಅವನಿಗಿರಬೇಕಾದ ಸಿದ್ಧತೆ-ಬದ್ಧತೆ ಏನು? ಮುಂತಾದ ಮಾಹಿತಿಯನ್ನು ಡಿವಿಜಿಯವರು ತಮ್ಮ ಭೂಮಿಕಾ ಪ್ರಕರಣಗಳಲ್ಲಿ ಒದಗಿಸುತ್ತಾರೆ.

ವಯಸ್ಸಿನಲ್ಲಿ ಕಿರಿಯರಾಗಿದ್ದರೂ, ತಾವು ಅತ್ಯಂತ ಗೌರವಿಸುತ್ತಿದ್ದ ವ್ಯಾಕರಣ ಪಂಡಿತ ಮಹಾಮಹೋಪಾಧ್ಯಾಯ ಶ್ರೀ ರಂಗನಾಥ ಶರ್ಮರು ತಮ್ಮ ಪ್ರಾರ್ಥನೆಯನ್ನು ಮನ್ನಿಸಿ, ಗ್ರಂಥದ ಸಾಹಿತ್ಯವನ್ನು ಶುದ್ಧಿಮಾಡಿಕೊಟ್ಟು ಉಪಕರಿಸಿದ್ದಾರೆ ಎಂದು ಅವರನ್ನು ಡಿವಿಜಿ ಆದಿಯಲ್ಲಿ ಸ್ಮರಿಸುತ್ತಾರೆ. ಹಾಗಿದ್ದರೂ, ‘ಈ ಗ್ರಂಥದ ಅಭಿಪ್ರಾಯ ಮತ್ತು ಪದಪ್ರಯೋಗಗಳಿಗೆ ಸಂಬಂಧಪಟ್ಟ ಜವಾಬ್ದಾರಿ ಪೂರ್ಣವಾಗಿ ನನ್ನದೇ ಆಗಿದೆ, ಅದನ್ನು ನನಗೆ ಸಹಾಯ ಮಾಡಿದ ಶರ್ಮರ ಮೇಲೆ ಹೊರಿಸಲಾರೆ’ ಎಂದು ವಿನೀತಭಾವದಿಂದ ಮುನ್ನುಡಿಯಲ್ಲಿ ಬರೆಯುತ್ತಾರೆ.

‘ಇದೊಂದು ಅರೆಕುರುಡನ ಕೆಲಸವಾಗಿದ್ದು, ನ್ಯೂನಾತಿರೇಕಗಳು ಇಲ್ಲದಿದ್ದರೆ ಆಶ್ಚರ್ಯವೇ ಹೊರತು, ಉಳಿದುಕೊಂಡಿದ್ದರೆ ಆಶ್ಚರ್ಯವಲ್ಲ’
ಎನ್ನುತ್ತಾರೆ. ಈ ಕೃತಿಗಿಂತ ಪೂರ್ವದಲ್ಲಿ ಕನ್ನಡದಲ್ಲಿ ಗೀತಾರ್ಥ ಚಿಂತನೆ ಮಾಡಿದ ರಾಮಕೃಷ್ಣಾಶ್ರಮದ ಶ್ರೀ ಆದಿದೇವಾನಂದಜೀ ಅವರ ಮತ್ತು ಶ್ರೀ ಸಚ್ಚಿದಾನಂದ ಸರಸ್ವತಿಗಳವರ ಕೃತಿಗಳ ಉತ್ತಮಿಕೆಯನ್ನೂ ಡಿವಿಜಿ ಇಲ್ಲಿ ಸ್ಮರಿಸುತ್ತಾರೆ.

ಇದು ಒಬ್ಬ ಪಂಡಿತ ತದೇಕಚಿತ್ತದಿಂದ ಕುಳಿತು ಮಾಡಿದ ಕೆಲಸವಲ್ಲ; ವಾರಕ್ಕೊಮ್ಮೆ ಮಾಡಿದ ಪ್ರವಚನದ ಸಾರಸಂಗ್ರಹ ಇದಾಗಿರುವುದರಿಂದ ಗ್ರಂಥದಲ್ಲಿ ಸ್ಖಾಲಿತ್ಯ, ಅಸ್ಪುಟತೆ ಮುಂತಾದ ನ್ಯೂನತೆಗಳು ಇರುವುದು ಸ್ವಾಭಾವಿಕವಾಗಿದೆ ಎನ್ನುವುದು ಅವರ ಅಭಿಪ್ರಾಯ. ಮೊದಲೇ ಹೇಳಿದಂತೆ, ಗೀತೆಯ ಎಲ್ಲ ಭಾಗಗಳೂ ಎಲ್ಲರಿಗೂ ಒಂದೇ ಸಮನಾಗಿ ಅರ್ಥವಾಗುವಂಥವಲ್ಲ; ಅದನ್ನು ಬಯಸುವವನ ಯೋಗ್ಯತೆ ಮತ್ತು ತಾಕತ್ತಿನ ಮಿತಿಗೆ ಅನ್ವಯವಾಗಿ ಅರ್ಥವಾಗುತ್ತದೆ. ಓದುಗನ ಶ್ರದ್ಧೆ-ನೀತಿ-ಸಿದ್ಧತೆಗಳು ಯಾವ ಮಟ್ಟದಲ್ಲಿವೆಯೋ ಆ ಮಟ್ಟಕ್ಕೆ ಗೀತಾರ್ಥವು ಅವನಿಗೆ ದೊರೆ ತೀತು ಎನ್ನುತ್ತಾರೆ. ನಮಗೆ ಮೊದಲ ಸಲಕ್ಕೇ ಅರ್ಥವಾಗಲಿಲ್ಲ ಎಂಬ ಕಾರಣಕ್ಕೆ ಗ್ರಂಥವನ್ನು ಬದಿಗೆ ತಳ್ಳಿಬಿಟ್ಟರೆ, ನಮಗೆ
ನಾವೇ ನಷ್ಟ ಮಾಡಿಕೊಂಡಂತಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಡಿವಿಜಿಯವರು ಭೂಮಿಕೆಯಲ್ಲಿ ನೀಡಿ, ಗೀತಾ ವ್ಯಾಸಂಗಕ್ಕೆ ಅಗತ್ಯವಿರುವ ಪೂರ್ವಸಿದ್ಧತೆಯನ್ನು ಒದಗಿಸುತ್ತಾರೆ.

ಈ ಗ್ರಂಥದ ಅಧ್ಯಯನಿಗಳಿಗೆ ಕೆಲವು ಗುಣಗಳಿರಬೇಕು ಎನ್ನುತ್ತಾರೆ ಡಿವಿಜಿ. ‘ಗಾಂಽಜಿ ಗೀತೆಯನ್ನು ತಾಯಿಗೆ ಹೋಲಿಸಿದ್ದಾರೆ, ಹಾಗಾಗಿ ತಾಯಿಯ ಮಾತಿನಲ್ಲಿ (ಆಪ್ತವಾಕ್ಯ) ಮಗುವಿಗಿರುವ ನಂಬಿಕೆಯೇ ಗೀತೆಯ ಕುರಿತಾಗಿಯೂ ಓದುಗನಿಗಿದ್ದರೆ ಮಾತ್ರ ಇಂಥ ಗಹನ, ಗುಣ ಪೂರಿತ ಮಹಾಗ್ರಂಥದ ಅಂತರಂಗದ ಅನುಭವವಾದೀತು. ಹೀಗಾಗಿ ಗೀತಾಭ್ಯಾಸಿಗೆ ಆತುರ-ಅವಸರ ಸಲ್ಲದು. ಮನಸ್ಸಮಾಧಾನ ಮತ್ತು ಸಾವಧಾನ ಈ ಎರಡೂ ಗೀತಾಭ್ಯಾಸಿಗೆ ಇರಬೇಕಾದ ಗುಣಗಳು’ ಎಂಬುದು ಡಿವಿಜಿಯವರ ಅಭಿಪ್ರಾಯ. ಮುಂದೆ, ಗೀತೆಯ ಗ್ರಂಥಸ್ವರೂಪ, ಮಿತ್ರ ಸಂಭಾಷಣೆಯ ಶೈಲಿ ಮತ್ತು ವಿಷಯ ಬೋಧನೆಗಳ ಮಾರ್ಗದ ಕುರಿತು ವಿವರಿಸುತ್ತಾ, ಗೀತೆಯು ಶಾಸವೇ ಅಥವಾ ಕಾವ್ಯವೇ? ಎನ್ನುವುದರ ವಿಶ್ಲೇಷಣೆಯನ್ನೂ ಮಾಡುತ್ತಾರೆ.

ಓದಿಗೆಂದು ನಾವು ಯಾವುದೇ ಗ್ರಂಥವನ್ನು ಆರಿಸಿಕೊಂಡರೂ, ಅದರಿಂದಾಗುವ ಪ್ರಯೋಜನವೇನು ಎಂಬುದನ್ನು ಮೊದಲೇ ಅರಿತರೆ ಆಮೇಲೆ ‘ನಮ್ಮ ವ್ಯಾಸಂಗದಿಂದ ಕೇವಲ ಕಾಲ ವ್ಯರ್ಥವಾಯಿತು’ ಎನ್ನುವ ದೂರಿಗೆ ಕಾರಣವಿಲಾರದು ಎನ್ನುತ್ತಾ, ಗೀತೆಯ ಅಧ್ಯಯನಕ್ಕೆ ಕೇವಲ ಅದರ ಲೋಕಪ್ರಸಿದ್ಧಿ ಮಾತ್ರ ಕಾರಣವೋ! ಅಥವಾ ನಮ್ಮ ಇಹಜೀವನದ ಹೊರೆಯನ್ನು ಇಳಿಸಿಕೊಳ್ಳಲು ಸಾಧನ ವಾಗಬಲ್ಲ ಉಪಾಯ ಗಳನ್ನು ಇಲ್ಲಿ ಹುಡುಕುತ್ತಿದ್ದೇವೋ ಎಂಬುದನ್ನು ಓದುಗನು ಆದಿಯಲ್ಲೇ ಇತ್ಯರ್ಥಪಡಿಸಿಕೊಳ್ಳಬೇಕು ಎಂಬ ವಿವೇಕವನ್ನೂ ಡಿವಿಜಿ ಹೇಳುತ್ತಾರೆ.

ಅಷ್ಟೇ ಅಲ್ಲದೆ, ಇಂಥ ಒಂದು ಘನಗ್ರಂಥವನ್ನು ಅಧ್ಯಯನಕ್ಕೆಂದು ಎತ್ತಿಕೊಂಡಾಗ, ಅದರ ಕಥಾಸಂಗತಿಗಳ ಕುರಿತಾಗಿ ಇರಬಹುದಾದ ಅಪನಂಬಿಕೆಗಳನ್ನು, ಓದಿ ಮುಗಿಸುವವರೆಗಾದರೂ ಅಮಾನತಿನಲ್ಲಿಡಬೇಕು ಎನ್ನುವ ಮುನ್ನೆಚ್ಚರಿಕೆಯ ಸಂದೇಶವನ್ನೂ ನೀಡುತ್ತಾರೆ. ಗೀತೆಯ ಕೇವಲ ಪಠಣ-ಪಾರಾಯಣ-ಅನುಸಂಧಾನ ಮಾತ್ರ ಸಾಲದು, ಅದರ ತತ್ತ್ವಗಳ ಜೀವನಾನ್ವಯವಾಗದ ಹೊರತು ಕೇವಲ ಓದು ವ್ಯರ್ಥ ಎಂಬುದು ಅವರ ತಿಳಿವಳಿಕೆಯ ಮಾತು.

‘ಗೀತೆಯ ಮಹೋಪದೇಶಗಳು ಮನುಷ್ಯನ ಪರಿಪೂರ್ಣ ಜೀವನಕ್ಕೆ ಯೋಗಸದೃಶವಾದದ್ದಾಗಿವೆ. ಜೀವನವೆನ್ನುವುದು ಕೆಟ್ಟದಲ್ಲ ಮತ್ತು ಜೀವನದ ವಿಷಯದಲ್ಲಿ ಅಸಹ್ಯಪಡತಕ್ಕದ್ದೂ ಇಲ್ಲ. ಬದಲಿಗೆ, ಅದರಲ್ಲಿರುವ ಕೋಟಲೆಗಳನ್ನು ಹೋರಾಟದಿಂದ ಎದುರಿಸಿ, ಭಗವತ್ ಪ್ರಾಪ್ತಿಯನ್ನು ಸಾಧಿಸಿ ಕೊಳ್ಳಬೇಕು ಎಂಬುದೇ ಗೀತೆಯ ಮೂಲಸಂದೇಶವಾಗಿದೆ’ ಎಂದು ಭೂಮಿಕಾ ಭಾಗಕ್ಕೆ ಡಿವಿಜಿ ಮಂಗಳ ಹಾಡುತ್ತಾರೆ.

ಇನ್ನು ಗ್ರಂಥದ ಉಪಸಂಹಾರ ಭಾಗ- ‘ಶ್ರವಣಂ ಲವಣವತ್’. ಅಂದರೆ, ಭೋಜನದಲ್ಲಿ ಉಪ್ಪಿಗೆ ಎಷ್ಟು ಜಾಗವೋ, ಆತ್ಮವಿದ್ಯಾ ಸಂಪಾದನೆಯಲ್ಲಿ ಶ್ರವಣಕ್ಕೂ ಅಷ್ಟೇ ಸ್ಥಾನ. ತತ್ತ್ವಾರ್ಥ ಮನನವು ಶ್ರವಣಕ್ಕಿಂತ ಮುಖ್ಯ, ಅದಕ್ಕಿಂತಲೂ ಮುಖ್ಯವಾದದ್ದು ಜೀವನಾನ್ವಯ. ಗೀತೆಯನ್ನು
ನಡವಳಿಕೆಯ ದೃಷ್ಟಿಯಿಂದಲೇ ನೋಡುವವರಿಗೆ ಗೀತಾವಾಕ್ಯಗಳಿಗಿಂತ ಅದರ ಭಾವಾನುಸಂಧಾನವೇ ಹೆಚ್ಚು ಎನ್ನುತ್ತಾರೆ. ‘ಜಗತಃ ಸ್ಥಿತಿಕಾರಣಮ್ ಪ್ರಾಣಿನಾಮ್ ಸಕಾದಭ್ಯುದಯ ನಿಃಶ್ರೇಯಸಹೇತುರ್ಯಃ ಸ ಧರ್ಮಃ’ ಎನ್ನುವ ಶ್ರೀ ಶಂಕರಾಚಾರ್ಯರ ವಾಕ್ಯದಂತೆ, ಜೀವಕ್ಕೆ ಉತ್ತಮ ಗತಿ ಉಂಟಾಗಬೇಕಾದರೆ ಅದಕ್ಕೆ ಕೆಲವು ಸಂಸ್ಕಾರಗಳ ಅಗತ್ಯವಿರುತ್ತದೆ; ಆ ಸಂಸ್ಕಾರಗಳ ಸಮೂಹವನ್ನೇ ಧರ್ಮವೆಂದು ಕರೆದಿದ್ದಾರೆ. ಭಗವದ್ಗೀತೆಯು ಅಂಥ ಸಂಸ್ಕಾರಗಳನ್ನು ಜನರಿಗೆ ಒದಗಿಸುವ ವಿಶ್ವಮಾನವ ಧರ್ಮವಾಗಿದೆ ಎನ್ನುತ್ತಾರೆ ಡಿವಿಜಿ. ಉಪಸಂಹಾರದ ಕೊನೆಯಲ್ಲಿ, ‘ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್’ ಎನ್ನುವುದು ಗೀತೆಯ ವೈಶಾಲ್ಯಪೂರ್ಣ ಮತವಾಗಿದೆ.

ವಿಚಾರಭೇದಗಳು ಇರಬಹುದು, ಆದರೆ ತತ್ತ್ವಭೇದವಿ ರಬಾರದು. ಹಾಗಂತ, ಭೇದಗಳು ವಿರೋಧವೆಂದು ಸಿದ್ಧವಾಗುವುದಿಲ್ಲ. ಹಾಲು- ಜೇನು ಎರಡೂ ಬೇರೆ ಬೇರೆಯಾದರೂ ವಿರೋಧಿಗಳಲ್ಲ, ಒಂದಕ್ಕೊಂದು ಸಹಕಾರಿಯೇ ಆಗಿವೆ. ಮನುಷ್ಯ ಮನುಷ್ಯರ ನಡುವಿನ ಭೇದ, ದೇಶ ದೇಶಗಳ ನಡುವಿನ ಭೇದವೂ ಹಾಗೆಯೇ. ಯಾವ ನಾಗರಿಕತೆಯೂ ಪರಿಪೂರ್ಣವಲ್ಲ; ಒಂದರಲ್ಲಿ ಗುಣಾಂಶಗಳ ಆಧಿಕ್ಯವಿದ್ದರೆ, ನ್ಯೂನತೆಗಳೂ ಇರುತ್ತವೆ. ಅವು ಒಂದಕ್ಕೊಂದು ಅನ್ಯೋನ್ಯವಾಗಿ ವ್ಯವಹರಿಸಿದಾಗ ಮಾತ್ರ ನಾಗರಿಕತೆಯ ಪ್ರಗತಿಗೆ ಕಾರಣವಾಗುತ್ತವೆ. ಅಂಥ ಪ್ರಗತಿಯನ್ನು ಕಾಣಲು ಇಂದು ವಿಶ್ವಕ್ಕೆ ಅಗತ್ಯವಿರುವುದು ಶಾಂತಿ. ಅದಿಲ್ಲದೆ ಸುಖವೆಂಬುದು ಸಾಧ್ಯವೇ ಇಲ್ಲ. ಹಾಗಾಗಿ, ಭಾರತಜಾತೆಯಾದ ಗೀತಾ ಮಾತೆಯು ವಿಶ್ವಕ್ಕೆ ಸಾರಿದ ಸಾಮರಸ್ಯ ಪ್ರಜ್ಞೆಯ ವಿಶ್ವಮಾನವ ಧರ್ಮದ ಸಂದೇಶಗಳಿಂದ, ವಿಶ್ವವು ಎದುರಿಸುತ್ತಿರುವ ಎಲ್ಲಾ ಸಮಸ್ಯೆ ಮತ್ತು ಅಶಾಂತಿಗಳಿಗೆ ಹೇಗೆ ಉತ್ತರ ದೊರಕುತ್ತದೆ ಎಂಬುದನ್ನು ಡಿವಿಜಿ ಇಲ್ಲಿ ಸಾಧಿಸಿ ತೋರಿಸುತ್ತಾರೆ.

ಅಂತೂ, ಗೀತೆಯ 18 ಅಧ್ಯಾಯಗಳಿಗೆ ಮೂಲಕ್ಕೆ ಪೂರಕ ವಾಗಿ ಜೀವನ್ಮುಖಿಯಾದ ಅರ್ಥವನ್ನು ಡಿವಿಜಿಯವರು ಕೊಟ್ಟಿರುವುದು ವಿಶೇಷ ವೆನಿಸಿದೆ; ಗ್ರಂಥದ ಉಪೋದ್ಘಾತ ಮತ್ತು ಉಪಸಂಹಾರಗಳು ಅನೇಕ ವಿಷಯಗಳಿಂದ ಮೈದುಂಬಿಕೊಂಡು ಅಧ್ಯಯನ ಯೋಗ್ಯವಾಗುವಷ್ಟು ಅರ್ಥಗರ್ಭಿತವಾಗಿವೆ. ಹಾಗಾಗಿ, ಇದು ತತ್ತ್ವಾರ್ಥಿಗಳಷ್ಟೇ ಅಲ್ಲದೆ ಸಾಹಿತ್ಯಾಸಕ್ತರೂ ಓದಲೇಬೇಕಾದ ಗ್ರಂಥವಾಗಿ ಕಾಣುತ್ತದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: vinayaka Bhatta, Amblihonda okj