Monday, 25th November 2024

Ganesh Bhat Column: ಗೆಲುವಿಗೆ ಸಾವಿರ ಅಪ್ಪಂದಿರು, ಸೋಲು ಅನಾಥನೇ !

ಸಾಧನೆ – ಶೋಧನೆ

ಗಣೇಶ್‌ ಭಟ್‌, ವಾರಣಾಸಿ

ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಯಶಸ್ಸು ಪಡೆದವರನ್ನು ನಾವಿಂದು ಹಾಡಿ ಹೊಗಳುತ್ತೇವೆ. ಅವರ ಸಾಧನೆಯ ಹಿಂದಿರುವ ಪರಿಶ್ರಮ ವನ್ನು ಶ್ಲಾಘಿಸುತ್ತೇವೆ. ಆದರೆ ಒಂದು ದಿನ ಯಶಸ್ಸಿನ ತುತ್ತತುದಿಗೇರಿದ್ದ ವ್ಯಕ್ತಿ, ಇನ್ನೊಂದು ದಿನ ವೈಫಲ್ಯದ ಪ್ರಪಾತಕ್ಕೆ ಬೀಳುವುದೂ ಇದೆ. ಔದ್ಯಮಿಕ ವಲಯದಲ್ಲಿ ಇದು ಸರ್ವೇಸಾಮಾನ್ಯ. ಅದೃಷ್ಟ ಚೆನ್ನಾಗಿದ್ದಾಗ ಎಲ್ಲವೂ ಸರಿಯಾಗಿರುತ್ತದೆ, ಕೈಕೊಟ್ಟಾಗ ಇದ್ದದ್ದೂ ಹೋಗುತ್ತದೆ.
ಚಿನ್ನಾಭರಣದ ಅಂಗಡಿಯನ್ನಿಟ್ಟುಕೊಂಡಿರುವ ಕೋಟ್ಯಧೀಶನು ನಷ್ಟ ಅನುಭವಿಸಿ ಬೀದಿಪಾಲಾಗುವುದೂ ಇದೆ, ಗುಜರಿ ಅಂಗಡಿ ನಡೆಸುತ್ತಿರು ವಾತ ಕೋಟ್ಯಧೀಶನಾಗುವುದೂ ಇದೆ ಎಂದು ಹಿರಿಯರೊಬ್ಬರು ಹೇಳುತ್ತಿದ್ದರು.

ಬೈಜು ರವೀಂದ್ರನ್ 2011ರಲ್ಲಿ ‘ಬೈಜುಸ್’ ಹೆಸರಿನ ಆನ್‌ಲೈನ್ ಕಲಿಕಾ ನವೋದ್ಯಮವನ್ನು ಆರಂಭಿಸಿದರು. 2018ರಲ್ಲಿ ಇದು ತನ್ನ ಮೌಲ್ಯವನ್ನು ಶತಕೋಟಿ ಡಾಲರ್ ಗಳಿಗೆ ಏರಿಸಿಕೊಂಡು ‘ಯುನಿಕಾರ್ನ್ ಸ್ಟಾರ್ಟಪ್’ ಎನಿಸಿಕೊಂಡಿತು. ತನಗೆ ಸಂಭಾವ್ಯ ಪ್ರತಿಸ್ಪಽಗಳಾದಾರು
ಎಂದು ಅನಿಸಿ ‘ವೈಟ್ ಹ್ಯಾಟ್ ಜೂನಿಯರ್’, ‘ಆಕಾಶ್’ ಮೊದಲಾದ ಸಂಸ್ಥೆಗಳನ್ನು ಬೈಜುಸ್ ಖರೀದಿಸಿತು. ಕರೋನಾ ಕಾಲದಲ್ಲಿ ಬೈಜುಸ್ ಉತ್ತುಂಗಕ್ಕೇರಿತು. ಲಾಕ್ ಡೌನ್ ಕಾರಣದಿಂದ ಪಾಠಗಳನ್ನು ತಪ್ಪಿಸಿಕೊಂಡ ಹತ್ತನೇ ಮತ್ತು ಹನ್ನೆರಡನೇ ತರಗತಿಗಳ ವಿದ್ಯಾರ್ಥಿಗಳು ಬೈಜುಸ್ ಆಪ್‌ನ ನೆರವನ್ನು ಪಡೆದುಕೊಂಡರು. ಸುಮಾರು 15 ಕೋಟಿ ವಿದ್ಯಾರ್ಥಿಗಳು ಬೈಜುಸ್‌ನಲ್ಲಿ ನೋಂದಾಯಿಸಿಕೊಂಡಿದ್ದರು. ಆದರೆ ಕರೋನಾದ ಭೀತಿ ಕಡಿಮೆಯಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಬೈಜುಸ್‌ನಿಂದ ದೂರ ಸರಿದು ಮುಖ್ಯವಾಹಿನಿ ಶಿಕ್ಷಣ ಸಂಸ್ಥೆಗಳಿಗೆ ತೆರಳತೊಡಗಿದರು.

ಖರೀದಿಸಿದ ಸಂಸ್ಥೆಗಳೆಲ್ಲಾ ಬೈಜುಸ್‌ಗೆ ಭಾರವಾಗತೊಡಗಿದವು. 2023ರಲ್ಲಿ ಬೈಜುಸ್‌ನ ಆದಾಯ ಕುಸಿದು ನಷ್ಟಕ್ಕೆ ಸಿಲುಕಿತು. ಇಂದು ಬೈಜುಸ್‌ನ ಮೌಲ್ಯ ಕೇವಲ ಒಂದು ಬಿಲಿಯನ್ ಡಾಲರ್‌ಗೆ ಇಳಿದಿದೆ. ಬೈಜುಸ್ ಆಪ್‌ಗೆ ಬೇಡಿಕೆ ಕುಸಿದಿದ್ದು, ಹೂಡಿಕೆದಾರರು ಹಿಂದೆ ಸರಿದುದು,
ಲೆಕ್ಕಪತ್ರದಲ್ಲಿನ ಅಕ್ರಮ, ಕೆಟ್ಟ ನಿರ್ವಹಣೆ ಮೊದಲಾದವುಗಳು ಬೈಜುಸ್‌ನ ಇಂದಿನ ಸ್ಥಿತಿಗೆ ಕಾರಣವಾಗಿವೆ. ಸಾಲದೆಂಬಂತೆ, ಅಮೆರಿಕದ ಹಣಕಾಸು ಸಂಸ್ಥೆಯೊಂದಕ್ಕೆ 1.5 ಶತಕೋಟಿ ಡಾಲರ್ ಸಾಲದ ಮರುಪಾವತಿಯಲ್ಲಿ ಬೈಜುಸ್ ವಿಫಲವಾಗಿದೆ. 2 ವರ್ಷಗಳ ಹಿಂದೆ ಯಶಸ್ವಿ
ಉದ್ಯಮಿ ಎಂದು ಹೊಗಳಿಸಿಕೊಂಡಿದ್ದ ಬೈಜು ರವೀಂದ್ರನ್ ಬಗ್ಗೆ ಇಂದು ಮಾತನಾಡುವವರೇ ಇಲ್ಲ!

ಒಂದು ಕಾಲದಲ್ಲಿ ಭಾರತದಲ್ಲಿ ಇನೋಸಿಸ್, ವಿಪ್ರೋಗಳಿಗೆ ಸರಿಸಮನಾಗಿದ್ದ ಸತ್ಯಂ ಕಂಪ್ಯೂಟರ‍್ಸ್ ಕಥೆಯೂ ಹೀಗೆಯೇ ಆಯಿತು. ಇದನ್ನು ಬೈರಾಜು ರಾಮಲಿಂಗರಾಜು ಅವರು 1987ರಲ್ಲಿ ಹುಟ್ಟುಹಾಕಿದರು. 90ರ ದಶಕದ ಉತ್ತರಾರ್ಧದಲ್ಲಿ ಒಂದೆಡೆ ಬೆಂಗಳೂರನ್ನು ದೇಶದ ‘ಐಟಿ ಹಬ್’ ಆಗಿಸಲು ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಶ್ರಮಿಸುತ್ತಿದ್ದರೆ, ಮತ್ತೊಂದೆಡೆ ಆಂಧ್ರಪ್ರದೇಶದ ಹೈದರಾಬಾದಿಗೆ ಇದೇ ಹೆಗ್ಗಳಿಕೆ ತಂದುಕೊಡಲು ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೂ ಕಸರತ್ತು ಮಾಡುತ್ತಿದ್ದರು. ನಾಯ್ಡು ಅವರ ಪ್ರೋತ್ಸಾಹವನ್ನು ಸದುಪಯೋಗಪಡಿಸಿಕೊಂಡು ರಾಮಲಿಂಗರಾಜು ಸತ್ಯಂ ಕಂಪನಿಯನ್ನು ಹೈದರಾಬಾದ್ ನಲ್ಲಿ ಬೆಳೆಸಿದರು. ಆದರೆ ಅತಿಯಾಸೆಗೆ ಬಿದ್ದು, ಸಂಸ್ಥೆಯು ಲಾಭದಲ್ಲಿದೆ ಎಂದು ಬಿಂಬಿಸಲು ‘ನಕಲಿ ಲಾಭ’ ತೋರಿಸಿ ಅವರು ಸಿಕ್ಕಿಬಿದ್ದರು.

ಸಂಸ್ಥೆಯಲ್ಲಿ 1.1 ಶತಕೋಟಿ ಡಾಲರ್ ಗಳಷ್ಟು ಹಣವು ನಗದು ರೂಪದಲ್ಲಿದೆ ಎಂಬ ಸುಳ್ಳು ಲೆಕ್ಕವನ್ನು ರಾಮಲಿಂಗರಾಜು ತೋರಿಸಿದ್ದರು. ಆದರೆ ಪರಿಶೀಲಿಸಿದಾಗ ಸಂಸ್ಥೆಯ ಬಳಿ ಇದ್ದ ನಗದು ಹಣ 78 ದಶಲಕ್ಷ ಡಾಲರ್ ಮಾತ್ರ ಎಂಬುದು ಕಂಡುಬಂತು. 2009ರ ಜನವರಿಯಲ್ಲಿ ರಾಮಲಿಂಗರಾಜು ಸತ್ಯಂ ಬೋರ್ಡಿನಿಂದ ಪದಚ್ಯುತರಾದರು. ಸತ್ಯಂನ ಷೇರುಮೌಲ್ಯ ತುಂಬಾ ಕುಸಿದು, ಹೂಡಿಕೆ ಮಾಡಿದ್ದ
ಷೇರುದಾರರು 7000 ಕೋಟಿ ರು. ನಷ್ಟವನ್ನು ಅನುಭವಿಸಬೇಕಾಯಿತು. 2009ರ ಏಪ್ರಿಲ್‌ನಲ್ಲಿ ಟೆಕ್ ಮಹೀಂದ್ರ ಕಂಪನಿಯು ಸತ್ಯಂ ಅನ್ನು ಖರೀದಿಸಿತು. ಆರ್ಥಿಕ ಅಪರಾಧವು ಸಾಬೀತಾಗಿ ರಾಮಲಿಂಗರಾಜು ಜೈಲುಪಾಲಾಗಬೇಕಾಯಿತು.

ಒಂದು ಕಾಲದಲ್ಲಿ ‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದು ಕರೆಸಿಕೊಂಡಿದ್ದ ಮದ್ಯದ ದೊರೆ ವಿಜಯ್ ಮಲ್ಯರ ಕಥೆಯೂ ಇದಕ್ಕಿಂತ ಭಿನ್ನವೇನಲ್ಲ. ‘ಮಲ್ಯ ಮುಟ್ಟಿದೆಲ್ಲಾ ಚಿನ್ನ’ ಎನ್ನುವ ಕಾಲವೊಂದಿತ್ತು. ಅವರು ಯುನೈಟೆಡ್‌ ಬ್ರಿವರೀಸ್, ಬರ್ಜರ್ ಪೇಂಟ್ಸ್, ಬೆಸ್ಟ್ ಆಂಡ್ ಕ್ರಾಂಪ್ಟನ್,
ದ ಏಷಿಯನ್ ಏಜ್ ಪತ್ರಿಕೆ, ಸಿನಿ ಬ್ಲಿಟ್ಜ್ ನಿಯತಕಾಲಿಕ, ಕಿಂಗ್‌ಫಿಶರ್ ಏರ್‌ಲೈನ್ಸ್, ರಾಯಲ್ ಚಾಲೆಂಜರ‍್ಸ್ ಐಪಿಎಲ್ ಕ್ರಿಕೆಟ್ ಟೀಮ್ ಮುಂತಾದವುಗಳ ಒಡೆತನವನ್ನು ಹೊಂದಿದ್ದರು. ಸದಾ ರೂಪದರ್ಶಿಗಳೊಡನೆ ಒಡನಾಟ, ವಿಲಾಸಿ ಜೀವನ ಅವರ ಜೀವನಶೈಲಿಯಾಗಿತ್ತು. ಏರ್
ಡೆಕ್ಕನ್ ಏರ್‌ಲೈನ್ ಅನ್ನು ಖರೀದಿಸುವವರೆಗೆ ಮಲ್ಯ ಜೀವನದಲ್ಲಿ ಎಲ್ಲವೂ ನಿರೀಕ್ಷಿಸಿದಂತೆಯೇ ಸಾಗಿತ್ತು.

ಏರ್ ಡೆಕ್ಕನ್‌ಗೆ ‘ಕಿಂಗ್‌ಫಿಶರ್ ಏರ್‌ಲೈನ್ಸ್’ ಎಂದು ಮಲ್ಯ ಮರುನಾಮಕರಣ ಮಾಡಿದರು. ಆದರೆ ತಪ್ಪು ನೀತಿಗಳು ಮತ್ತು ಅದಕ್ಷ ನಿರ್ವಹಣೆ ಯಿಂದಾಗಿ ಕಿಂಗ್‌ಫಿಶರ್ ನಷ್ಟದಲ್ಲಿ ಸಾಗಿ, ಮಲ್ಯರ ಎಲ್ಲಾ ಸಂಪತ್ತನ್ನೂ ನುಂಗಿ, ಅವರನ್ನು ಸಾಲದ ಬಲೆಯಲ್ಲಿ ಸಿಲುಕಿಸಿತು. ಭಾರತದ ಬ್ಯಾಂಕುಗಳಲ್ಲಿ ಭಾರಿ ಸಾಲಮಾಡಿ ದೇಶ ಬಿಟ್ಟು ಓಡಿದ ಮಲ್ಯರಿಗೆ, ಈಗ ಇಂಗ್ಲೆಂಡ್‌ನಲ್ಲಿ ತಲೆಮರೆಸಿಕೊಂಡು ಬದುಕುವ ಸ್ಥಿತಿ ಬಂದಿದೆ.

ಧೀರೂಬಾಯಿ ಅಂಬಾನಿಯವರ ನಿಧನದ ನಂತರ, ‘ರಿಲಯನ್ಸ್ ಸಾಮ್ರಾಜ್ಯವನ್ನು ಪಾಲುಮಾಡದೆ ಜತೆಯಾಗಿ ನಡೆಸೋಣ’ ಎಂದು ಅಣ್ಣ ಮುಕೇಶ್ ಅಂಬಾನಿ ಹೇಳಿದರೂ ಕೇಳದ ಅನಿಲ್ ಅಂಬಾನಿ, ತಮ್ಮ ಪಾಲಿಗಾಗಿ ಹಟಮಾಡಿದರು. ಕೊನೆಗೆ 2005ನೇ ಇಸವಿಯಲ್ಲಿ ತಾಯಿ ಕೋಕಿಲಾ ಬೆನ್ ಮಧ್ಯಸ್ಥಿಕೆಯಲ್ಲಿ ತಲಾ 40 ಸಾವಿರ ಕೋಟಿ ರು.ಗಳಷ್ಟು ಮೌಲ್ಯದ ಸಂಪತ್ತು ಅಣ್ಣ-ತಮ್ಮರಿಗೆ ಹಂಚಲ್ಪಟ್ಟಿತು. ಮುಕೇಶ್ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಾ ಸಾಗಿತು. ಅವರ ಸಂಪತ್ತು ಕಳೆದ 10 ವರ್ಷಗಳಲ್ಲಿ 250 ಪಟ್ಟು ಹೆಚ್ಚಾಗಿ ಪ್ರಸ್ತುತ ಅವರ ಆಸ್ತಿಯ ಮೌಲ್ಯ 10 ಲಕ್ಷ ಕೋಟಿಗಳನ್ನು ದಾಟಿದೆ. ಆಸ್ತಿ ವಿಭಜನೆಯಾಗುವಾಗ ರಿಲಯನ್ಸ್ ಕಮ್ಯುನಿಕೇಷನ್ಸ್‌ನಂಥ ಮೌಲ್ಯಯುತವಾದ ಆಸ್ತಿಯು ಅನಿಲ್ ಅಂಬಾನಿ ಯವರ ಪಾಲಾದರೂ, ಮುಂದೆ ಅವರು ತೆಗೆದುಕೊಂಡ ತಪ್ಪು ನಿರ್ಧಾರಗಳು, ಕಾನೂನು ತೊಡಕು, ಸಾಲದ ಸಮಸ್ಯೆ, ಆಡ್‌ಲ್ಯಾಬ್ಸ್, ಡ್ರೀಮ್‌ವರ್ಕ್‌ಗಳಂಥ ಯೋಜನೆಗಳು ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ತರಲು ವಿಫಲವಾಗಿದ್ದು ಮುಂತಾದ ಕಾರಣಗಳಿಂದಾಗಿ ಸಂಪತ್ತು
ಕರಗಿ ಕೊನೆಗೆ ಅವರು ‘ನಾನು ದಿವಾಳಿಯಾಗಿದ್ದೇನೆ’ ಎಂದು ಘೋಷಿಸಿಕೊಳ್ಳುವಂತಾಯಿತು.

ಶುರುವಿನಲ್ಲಿ 40 ಸಾವಿರ ಕೋಟಿ ರು. ಸಂಪತ್ತಿನ ಒಡೆಯರಾಗಿದ್ದ ಅನಿಲ್ ಬಳಿ ಇಂದು ಉಳಿದಿರುವ ಸಂಪತ್ತಿನ ಮೌಲ್ಯ 200 ಕೋಟಿ ರು. ಮಾತ್ರ! 10 ವರ್ಷಗಳ ಮೊದಲು ದೇಶದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದ ಮೊಬೈಲ್ ಫೋನ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಮೈಕ್ರೋಮ್ಯಾಕ್ಸ್ ಸಂಸ್ಥೆಯ ಮತ್ತು ಅದರ ಸ್ಥಾಪಕ ರಾಹುಲ್ ಶರ್ಮಾರ ಮಾರುಕಟ್ಟೆ ಮೌಲ್ಯವು ಅತ್ಯಂತ ನಾಟಕೀಯವಾಗಿ ಕುಸಿದಿದೆ. ಬದಲಾವಣೆಗೆ ಒಗ್ಗಿಕೊಳ್ಳುವಲ್ಲಿ ತಡವಾದುದು, ಚೀನಾ ಮೊಬೈಲ್ ಕಂಪನಿಗಳ ಜತೆಗೆ ಸ್ಪರ್ಧಿಸಲು ವಿಫಲವಾದುದು, ಸಂಶೋಧನೆ-ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು, ತೀರಾ ಕಳಪೆ ಯಾಗಿದ್ದ ಸೇವಾ ವ್ಯವಸ್ಥೆ, ಚೀನಿ ಕಂಪನಿಗಳನ್ನು ಅತಿಯಾಗಿ ಅವಲಂಬಿಸಿದ್ದು ಮುಂತಾದ ವಿಚಾರಗಳು ಮೈಕ್ರೋಮ್ಯಾಕ್ಸ್ ನ ವೈಫಲ್ಯಕ್ಕೆ ಕಾರಣವಾದವು.

ಭಾರತೀಯ ಮಾರುಕಟ್ಟೆಯಲ್ಲಿ 21000 ಕೋಟಿ ರು. ಮೌಲ್ಯವನ್ನು ಹೊಂದಿದ್ದ ಮೈಕ್ರೋಮ್ಯಾಕ್ಸ್ ಇಂದು 1500 ಕೋಟಿ ರು.ಗೆ ಕುಸಿದಿದೆ.
ಯಶಸ್ವಿ ಉದ್ಯಮಿಗಳ ಹೆಸರು ಎಲ್ಲ ಕಡೆ ರಾರಾಜಿಸುತ್ತದೆ, ಆದರೆ ಸೋತವರನ್ನು ಕೇಳುವವರೇ ಇರುವುದಿಲ್ಲ. ಇದು ಸಾಮಾನ್ಯ ಜನರಿಗೂ ಅನ್ವಯಿಸುವ ಸಂಗತಿ. ಅದಕ್ಕೇ ಹೇಳುವುದು- ಗೆಲುವಿಗೆ ಸಾವಿರ ಅಪ್ಪಂದಿರು ಇದ್ದರೆ, ಸೋಲು ಯಾವತ್ತಿಗೂ ಅನಾಥನೇ!

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)