Monday, 25th November 2024

BPL Card: ಇಂದಿನಿಂದ ಬಿಪಿಎಲ್ ಕಾರ್ಡ್‌ ಮರುಪರಿಶೀಲನೆ, ಅನರ್ಹರಿಗೆ ಕತ್ತರಿ; ಅರ್ಹರು ಹೀಗೆ ಮಾಡಿ

bpl ration card

ಬೆಂಗಳೂರು: ಆಹಾರ ಇಲಾಖೆ ಪಡಿತರ ಚೀಟಿಗಳ (ration card) ಪರಿಷ್ಕರಣೆ ಮತ್ತು ತಿದ್ದುಪಡಿಯನ್ನು ಇಂದಿನಿಂದ ಆರಂಭಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ರದ್ದಾಗಿರುವ ಬಿಪಿಎಲ್‌ ಕಾರ್ಡ್‌ಗಳ (BPL Card, BPL ration card) ತಿದ್ದುಪಡಿ ಕಾರ್ಯ ನಡೆಯಲಿದೆ. ಆಧಾರ್ (Aadhar), ಪ್ಯಾನ್ ಕಾರ್ಡ್, ಐಟಿ ರಶೀದಿ ಮೂಲಕ ಅರ್ಹತೆ ಹೊಂದಿರುವವರು ಕಾರ್ಡ್‌ಗಳನ್ನು ಸರಿ ಪಡಿಸಿಕೊಳ್ಳಬಹುದಾಗಿದೆ‌.

ಈಗಾಗಲೇ ಲಕ್ಷಾಂತರ ಕಾರ್ಡ್‌ಗಳನ್ನು ರಾಜ್ಯದಲ್ಲಿ ರದ್ದುಪಡಿಸಲಾಗಿದೆ. ಈ ಪ್ರಕ್ರಿಯೆ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಒಂದು ವೇಳೆ ಅರ್ಹ ಫಲಾನುಭವಿಗಳ ಕಾರ್ಡ್‌ ರದ್ದುಗೊಂಡಿದ್ದರೆ ಮತ್ತೆ ನೀಡಲಾಗುವುದು ಎಂದು ತಿಳಿಸಿದ್ದರು. ಟ್ವೀಟ್ ಮೂಲಕವೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ, ನಾವು ಬಡವರ ಅನ್ನ ಕಿತ್ತುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ ಅರ್ಹರ ಕಾರ್ಡ್‌ಗಳು ರದ್ದುಗೊಂಡಿದ್ದರೆ ಒಂದು ವಾರದೊಳಗೆ ಸರಿಪಡಿಸುವುದಾಗಿ ಹೇಳಿದ್ದರು.

ಬಿಪಿಎಲ್ ಕಾರ್ಡ್ ತಿದ್ದುಪಡಿ ಹೇಗೆ?

ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಸರ್ಕಾರಿ ನೌಕರರ, ತೆರಿಗೆ ಪಾವತಿದಾರರ ಅನ್ನೋದನ್ನು ಪರಿಶೀಲಿಸಬೇಕು. ಕಾರ್ಡ್ ಹೊಂದಿರುವವರು ಬಡವರು ಇದ್ದಾರಾ? ಶ್ರೀಮಂತರು ಇದ್ದಾರಾ? ಅಂತ ಮನೆ ಪರಿಶೀಲಿಸಬೇಕು. ಆರ್‌ಡಿ ನಂಬರ್ ಪರಿಶೀಲನೆ ಮಾಡಬೇಕು. ಸ್ಥಳ ಪರಿಶೀಲನೆ ಜೊತೆಗೆ ದಾಖಲೆ ಪರಿಶೀಲನೆ ಮಾಡಬೇಕು. ಹೀಗೆ ಆಹಾರ ನಿರೀಕ್ಷಕರು ಒನ್ ಬೈ ಒನ್ ಆಗಿ ಕಾರ್ಡ್‌ಗಳನ್ನು ಪರಿವರ್ತನೆ ಮಾಡಬೇಕಿದೆ. ಏಕಾಏಕಿ ಮೂಲ ಸ್ಥಾನಕ್ಕೆ ಶಿಫ್ಟ್ ಮಾಡಲು ಆಗಲ್ಲ. ಎನ್‌ಐಸಿ ಸಾಫ್ಟ್‌ವೇರ್‌ ಮೂಲಕ ಕಾರ್ಡ್ ಕನ್ವರ್ಟ್ ಮಾಡಬೇಕು. ಕಾರ್ಡ್ ಬದಲಿಸಲು ಕನಿಷ್ಠ 10 ರಿಂದ 15 ದಿನ ಸಮಯಾವಕಾಶ ಬೇಕಾಗುತ್ತದೆ.

ಬೆಂಗಳೂರಿನಲ್ಲಿ ‌ಎಲ್ಲೆಲ್ಲಿ ಕಾರ್ಡ್ ತಿದ್ದುಪಡಿ?

ಪೂರ್ವ ವಲಯ- ರಾಜಾಜಿನಗರ ಐಆರ್‌ಐ
ಪಶ್ಚಿಮ ವಲಯ- ಬಸವನಗುಡಿ
ಉತ್ತರ ವಲಯ- ಮೆಜೆಸ್ಟಿಕ್ ಆಹಾರ ಇಲಾಖೆ ಕಚೇರಿ
ಕೆಂಗೇರಿ & ಬನಶಂಕರಿ-ಆಹಾರ ಇಲಾಖೆ ಕಚೇರಿ
ಆರ್‌ಟಿನಗರ-ಆಹಾರ ಇಲಾಖೆ ಕಚೇರಿ
ವಯ್ಯಾಲಿಕಾವಲ್-ಆಹಾರ ಇಲಾಖೆ ಕಚೇರಿ
ಯಲಹಂಕ- ಆಹಾರ ಇಲಾಖೆ ಕಚೇರಿ