ಕಾನ್ಪುರ: ಅದೃಷ್ಟ ಇದ್ದರೆ ಸಾವಿನ ಬಾಯಿಯಿಂದಲೂ ಬದುಕಿ ಬರಬಹುದೆಂಬ ಮಾತಿದೆ. ಅದನ್ನು ನಿಜ ಎಂದು ರೂಪಿಸುವ ಘಟನೆಗಳು ನಿತ್ಯ ನಡೆಯುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ಕಾನ್ಪುರದಲ್ಲಿ ನಡೆದಿದೆ. ಇತ್ತೀಚೆಗೆ ಕಾನ್ಪುರ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವವನ್ನು ಇಬ್ಬರು ರೈಲ್ವೆ ಪೊಲೀಸ್ ಅಧಿಕಾರಿಗಳು ರಕ್ಷಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಸರ್ಕಾರಿ ರೈಲ್ವೆ ಪೊಲೀಸ್ (GRP) ಅಧಿಕಾರಿಗಳು ತಿಳಿಸಿದ ಪ್ರಕಾರ, ಮಹಿಳೆ ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆಯಂತೆ. ಮಹಿಳೆ ಶ್ರಮಶಕ್ತಿ ಎಕ್ಸ್ಪ್ರೆಸ್ ಹತ್ತಿದ್ದಾರೆ. ಆದರೆ ಅವರ ಮಕ್ಕಳು ರೈಲು ಹತ್ತದೆ ಅಲ್ಲಿಯೇ ಉಳಿದಿದ್ದಾರಂತೆ. ರೈಲು ಚಲಿಸಲು ಶುರುವಾದಾಗ ಆಘಾತಗೊಂಡ ಮಹಿಳೆ ಬೋಗಿಯ ಬಾಗಿಲಿನ ಹೊರಗೆ ಬಾಗಿ ಮಕ್ಕಳನ್ನು ಕರೆದಿದ್ದಾರೆ. ಆದರೆ ಅವರಿಗೆ ಕೇಳದೆ ಕಾರಣ ನಂತರ ಮಹಿಳೆ ರೈಲಿನ ಬೋಗಿಯಿಂದ ಜಿಗಿದ ಪರಿಣಾಮ ಅವರು ರೈಲು ಮತ್ತು ಪ್ಲಾಟ್ಫಾರ್ಮ್ ನಡುವಿನ ಅಂತರಕ್ಕೆ ಸಿಲುಕಿದ ಕಾರಣ ರೈಲು ಅವರನ್ನು ಎಳೆದುಕೊಂಡು ಹೋಗಿದೆ. ನಂತರ GRP ಸಬ್ಇನ್ಸ್ಪೆಕ್ಟರ್ ಶಿವ ಸಾಗರ್ ಶುಕ್ಲಾ ಮತ್ತು ಕಾನ್ಸ್ಟೇಬಲ್ ಅನೂಪ್ ಕುಮಾರ್ ಪ್ರಜಾಪತಿ ತಕ್ಷಣ ಅವರನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ರೈಲಿನ ಬಾಗಿಲು ತೆರೆಯಲು ಮರೆತ ಸಿಬ್ಬಂದಿ; ಪ್ರಯಾಣಿಕರ ಪಾಡು ಹೇಳೋರಿಲ್ಲ… ಕೇಳೋರಿಲ್ಲ… ಆಮೇಲೇನಾಯ್ತು?
ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಚಲಿಸುತ್ತಿದ್ದ ರೈಲನ್ನು ಹತ್ತುವಾಗ ಜಾರಿ ಬಿದ್ದ ಮಹಿಳೆಯ ಜೀವವನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಅಧಿಕಾರಿಯೊಬ್ಬರು ರಕ್ಷಿಸಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ, ದಂಪತಿ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲಿನತ್ತ ಓಡಿದ್ದಾರೆ. ರೈಲು ಹತ್ತುವ ಪ್ರಯತ್ನದಲ್ಲಿ, ಮಹಿಳೆ ಹ್ಯಾಂಡಲ್ ಹಿಡಿದು ಬೋಗಿಯ ಕಡೆಗೆ ಹಾರಿದ್ದಾಳೆ. ಆಗ ಇದ್ದಕ್ಕಿದ್ದಂತೆ, ಅವಳು ಜಾರಿ ಬಿದ್ದಿದ್ದಾಳೆ. ಆರ್ಪಿಎಫ್ ಮಹಿಳಾ ಅಧಿಕಾರಿ ತಕ್ಷಣ ಅವಳನ್ನು ರಕ್ಷಿಸಿದ್ದಾರೆ.