ನವದೆಹಲಿ: ಹೃದಯಾಘಾತಕ್ಕೀಡಾಗಿ 70 ವರ್ಷದ ಪ್ರಯಾಣಿಕನನ್ನು ಆಪದ್ಬಾಂದವನಂತೆ ಬಂದ ಟಿಟಿಇ ಜೀವ ಉಳಿಸಿರೋ ಘಟನೆ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಟಿಟಿಇ ಪ್ರಯಾಣಿಕನಿಗೆ ಸಿಪಿಆರ್ ಮಾಡುತ್ತಿರುವ ವಿಡಿಯೊವನ್ನು ರೈಲ್ವೆ ಸಚಿವಾಲಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಈ ವಿಡಿಯೊ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ, ರೈಲಿನಲ್ಲಿ ಲೋವರ್ ಬರ್ತ್‍ನಲ್ಲಿ ಮಲಗಿದ್ದ ವೃದ್ಧರೊಬ್ಬರಿಗೆ ಹೃದಯಾಘಾತವಾಗಿದೆ. ಆಗ ವೃದ್ಧ ವ್ಯಕ್ತಿಯ ಎದೆಯನ್ನು ಒತ್ತುವುದರ ಮೂಲಕ ಸಿಪಿಆರ್ ಮಾಡಿದ ಟಿಟಿಇ ಬಾಯಿಂದ ಬಾಯಿಗೆ ಉಸಿರಾಟವನ್ನು ಸಹ ಮಾಡಿದ್ದಾರೆ. ಇದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದಾಗಿ ಅವರನ್ನು ಜನರು ರೈಲ್ವೆ “ಜೀವರಕ್ಷಕ” ಎಂದು ಶ್ಲಾಘಿಸಿದ್ದಾರೆ.
टीटीई की तत्परता से मिला ‘जीवनदान’
— Ministry of Railways (@RailMinIndia) November 23, 2024
ट्रेन संख्या 15708 'आम्रपाली एक्सप्रेस' के जनरल कोच में सफ़र के दौरान 70 वर्षीय एक यात्री को हार्ट अटैक आने पर तैनात टीटीई ने बिना समय गंवाए CPR दिया और यात्री की जान बचाई। तत्पश्चात छपरा रेलवे स्टेशन पर यात्री को अस्पताल भेज दिया गया। pic.twitter.com/vxqsTEkir7
“ರೈಲು ಸಂಖ್ಯೆ 15708 ‘ಅಮ್ರಪಾಲಿ ಎಕ್ಸ್‌ಪ್ರೆಸ್‌ನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ, 70 ವರ್ಷದ ಪ್ರಯಾಣಿಕನಿಗೆ ಹೃದಯಾಘಾತವಾಗಿದೆ. ಅಲ್ಲಿ ನಿಯೋಜಿಸಲಾದ ಟಿಟಿಇ ತಕ್ಷಣ ಸಿಪಿಆರ್ ನೀಡಿ ಆ ವೃದ್ಧರ ಜೀವವನ್ನು ಉಳಿಸಿದ್ದಾರೆ. ನಂತರ ಅವರನ್ನು ಛಾಪ್ರಾ ರೈಲ್ವೆ ನಿಲ್ದಾಣದ ಆಸ್ಪತ್ರೆಗೆ ಕಳುಹಿಸಲಾಯಿತು” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ರೈಲ್ವೆ ಅಧಿಕಾರಿ ಮಾಡಿದ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರೆ ವೈದ್ಯರು ಮಾತ್ರ ಟಿಟಿಇಯ ಕ್ರಮಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ತಪ್ಪು ಕ್ರಮ ಪಾಲಿಸಿದ್ದಕ್ಕಾಗಿ ರೈಲ್ವೆ ಅಧಿಕಾರಿಯ ವಿರುದ್ಧ ಕಿಡಿಕಾರಿದ್ದಾರೆ.
ವೈದ್ಯರಿಗೆ ಗರಂ ಆಗಲು ಕಾರಣವೇನು?
“ಎಚ್ಚರವಾಗಿರುವ” ಯಾರಿಗಾದರೂ ಸಿಪಿಆರ್ ಮಾಡುವುದು ವೈದ್ಯಕೀಯ ಪ್ರೋಟೋಕಾಲ್‍ಗಳ ಉಲ್ಲಂಘನೆಯಾಗಿದೆ ಮತ್ತು ರೋಗಿಗೆ ಹಾನಿ ಮಾಡುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ. ಅಲ್ಲದೇ ಈ ವಿಡಿಯೊ ತಪ್ಪು ಮಾಹಿತಿಯನ್ನು ಸಾರಿದೆ. ಜೀವ ಉಳಿಸುವ ಕಾರ್ಯವಿಧಾನವಾದ ಸಿಪಿಆರ್ ಬಗ್ಗೆ ಬಳಕೆದಾರರು ತಪ್ಪು ಮಾಹಿತಿಯನ್ನು ಕಲಿಯದಂತೆ ತಡೆಯಲು ಅದನ್ನು ಡಿಲೀಟ್ ಮಾಡುವಂತೆ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ. “ಪ್ರಜ್ಞೆ ಇರುವ ರೋಗಿಯ ಮೇಲೆ ಸಿಪಿಆರ್ ಮಾಡುವುದು ತುಂಬಾ ಅಪಾಯಕಾರಿ ಮತ್ತು ತಪ್ಪು. ಇದು ತಮಾಷೆಯಲ್ಲ. ಸಿಪಿಆರ್ ಜೀವ ಉಳಿಸುವ ಕಾರ್ಯವಿಧಾನವಾಗಿದೆ. ದಯವಿಟ್ಟು ಈ ವೀಡಿಯೊವನ್ನು ತೆಗೆದುಹಾಕಿ ಎಂದಿದ್ದಾರೆ.
ಮತ್ತೊಬ್ಬ ವೈದ್ಯ ಡಾ.ನವಾಜಿಶ್ ಖಾನ್, ಪ್ರಜ್ಞೆ ಇರುವ ರೋಗಿಗಳ ಮೇಲೆ ಸಿಪಿಆರ್ ಮಾಡಲಾಗುವುದಿಲ್ಲ. ಎಚ್ಚರವಿರುವ ರೋಗಿಯ ಮೇಲೆ ಸಿಪಿಆರ್ ಮಾಡುವುದು ವೈದ್ಯಕೀಯ ಪ್ರೋಟೋಕಾಲ್‍ಗಳನ್ನು ಉಲ್ಲಂಘಿಸುತ್ತದೆ ಮತ್ತು ಇದನ್ನು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ. ಹೃದ್ರೋಗ ತಜ್ಞ ಡಾ.ಶಾರಿಕ್ ಶಮೀಮ್, “ಎಚ್ಚರವಾಗಿರುವ ವ್ಯಕ್ತಿಯ ಮೇಲೆ ಸಿಪಿಆರ್ ಮಾಡುವುದಿಲ್ಲ. ಸರ್ಕಾರಿ ಅಧಿಕಾರಿಗಳು ಇಂತಹ ದಾರಿತಪ್ಪಿಸುವ ಪೋಸ್ಟ್ ಮಾಡಬಾರದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು; ವಿಡಿಯೊ ನೋಡಿ