ಇಂಫಾಲ್ : ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಗಲಾಟೆಗಳು (Manipur Violence) ಮೇಲ್ನೋಟಕ್ಕೆ ಕಡಿಮೆ ಆಗಿವೆ ಎಂದು ಕಂಡು ಬಂದರೂ ಬೂದಿ ಮುಚ್ಚಿದ ಕೆಂಡದಂತಿದೆ. ಇತ್ತೀಚೆಗಷ್ಟೆ ಜಿರಿಬಾಮ್ ಜಿಲ್ಲೆಯ ಇಬ್ಬರು ಮಹಿಳೆಯರು ಮತ್ತು ಮಗುವನ್ನು ಕುಕಿ ಉಗ್ರರು (Kuki Militants) ಅಪಹರಿಸಿ ಅವರನ್ನು ಕೊಲೆ ಮಾಡಿದ್ದರು. ಸದ್ಯ ಅದರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು. ಅಧಿಕಾರಿಗಳು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ಭದ್ರತಾ ಪಡೆಗಳೊಂದಿಗೆ ನಡೆದ ಸಂಘರ್ಷದಲ್ಲಿ ಕುಕಿ ಸಮುದಾಯದ 10 ಯುವಕರು ಮೃತಪಟ್ಟಿದ್ದರು. ಅದರ ಪ್ರತೀಕಾರವನ್ನು ತೀರಿಸಿಕೊಳ್ಳಲು ನವೆಂಬರ್ 10 ರಂದು ಮೈತೇಯಿ ಸಮುದಾಯದ ಇಬ್ಬರು ಮಹಿಳೆಯರು ಹಾಗೂ ಮಕ್ಕಳನ್ನು ಅಪಹರಣ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಅಸ್ಸಾಂ – ಮಣಿಪುರ ಗಡಿಯಲ್ಲಿ ಕೊಲೆಯಾದವರ ಮೃತದೇಹ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಗಾಗಿ ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, 3 ವರ್ಷದ ಚಿಂಗ್ಖೇಯ್ ನಗಾನ್ಬಾ ಸಿಂಗ್ ತಲೆಬುರುಡೆಯಲ್ಲಿ ಗುಂಡಿನ ಗಾಯ, ಎದೆಯಲ್ಲಿ ಇರಿತದ ಗಾಯಗಳು ಮತ್ತು ಮುರಿತಗಳು ಮತ್ತು ಮುಂದೋಳಿನ ಮತ್ತು ದೇಹದ ಇತರ ಭಾಗಗಳಲ್ಲಿ ಸೀಳಿ ಹೋಗಿವೆ. ಆತನ ಬಲಗಣ್ಣು ಕಾಣೆಯಾಗಿದೆ ಎಂದು ತಿಳಿದು ಬಂದಿದೆ. ಆತನ ತಾಯಿ, 25 ವರ್ಷದ ಎಲ್ ಹೈಟೊನ್ಬಿ ದೇವಿಗೆ ಎದೆಯಲ್ಲಿ ಮೂರು ಮತ್ತು ಪೃಷ್ಠದಲ್ಲಿ ಒಂದು ಗುಂಡು ತಗುಲಿದೆ ಎಂದು ತಿಳಿದು ಬಂದಿದೆ. ಅವರ ಅಜ್ಜಿ ವೈ ರಾಣಿ ದೇವಿ (60) ಅವರಿಗೆ ಐದು ಗುಂಡುಗಳು ತಗುಲಿದ್ದು, ತಲೆಬುರುಡೆಯಲ್ಲಿ ಒಂದು, ಎದೆಯಲ್ಲಿ ಎರಡು, ಹೊಟ್ಟೆಗೆ ಒಂದು ಮತ್ತು ತೋಳಿಗೆ ಒಂದು ಗುಂಡು ತಗುಲಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಇನ್ನೂ ಮೂರು ಶವಗಳ ಮರಣೋತ್ತರ ಪರೀಕ್ಷೆ ಬಾಕಿ ಇದ್ದು, ನ್ಯಾಯಾಲದ ಅನುಮತಿಗಾಗಿ ಕಾಯಾಲಾಗುತ್ತಿದೆ.
ಮೈತೇಯಿ ಸಮುದಾಯದ ಆರು ಮಂದಿಯ ಶವ ಪತ್ತೆಯಾಗುತ್ತಿದ್ದಂತೆ ಇಡೀ ಮಣಿಪುರದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಉದ್ವಿಕ್ತರ ಗುಂಪು ಶಾಸಕರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದ್ದವು . ಈ ಸಂಬಂಧ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಇನ್ನೂ ಹಲವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್, ಹತ್ಯೆಗೆ ಕಾರಣರಾದವರನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ. ಇತ್ತೀಚಿನ ನಡೆದ ಸಭೆಯಲ್ಲಿ, ಎನ್ಡಿಎ ಶಾಸಕರು ಕುಕಿ ಉಗ್ರಗಾಮಿಗಳನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಇದನ್ನೂ ಓದಿ : Manipur Violence: ಮಣಿಪುರದಲ್ಲಿ ಸಂಘರ್ಷ ನಿಯಂತ್ರಿಸಲು ಕೇಂದ್ರ ಹರಸಾಹಸ; ಮತ್ತೆ 20,000 ಅರೆಸೇನಾ ಸಿಬ್ಬಂದಿ ನಿಯೋಜನೆ
ಏತನ್ಮಧ್ಯೆ, ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಸೋಮವಾರ ಪುನರಾರಂಭಗೊಂಡಿದೆ. ಸರ್ಕಾರಿ, ಅನುದಾನಿತ, ಖಾಸಗಿ ಮತ್ತು ಕೇಂದ್ರೀಯ ಶಾಲೆಗಳು ನವೆಂಬರ್ 25 ರಂದು ಪುನಾರಾರಂಭಗೊಳ್ಳುತ್ತವೆ ಎಂದು ಸರ್ಕಾರ ಆದೇಶಿಸಿದೆ.