Monday, 25th November 2024

RCB IPL Auction: ವಿಜಯ್‌ ಮಲ್ಯ ಇರುತ್ತಿದ್ದರೆ ಆರ್‌ಸಿಬಿಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದ ಅಭಿಮಾನಿಗಳು

ಬೆಂಗಳೂರು: ಹರಾಜು ಪ್ರಕ್ರಿಯೆಯಲ್ಲಿ ಕೆ.ಎಲ್‌ ರಾಹುಲ್‌, ಪ್ರಸಿದ್ಧ್‌ ಕೃಷ್ಣ ಸೇರಿ ಹಲವು ಕನ್ನಡಿಗ ಆಟಗಾರರನ್ನು ಕಡೆಗಣಿಸಿದ ಆರ್‌ಸಿಬಿ(RCB IPL Auction) ಫ್ರಾಂಚೈಸಿ ವಿರುದ್ಧ ಅಭಿಮಾನಿಗಳಿಂದ ಈ ಬಾರಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಾಜಿ ಮಾಲಿಕರಾದ ವಿಜಯ್‌ ಮಲ್ಯ ಇರುತ್ತಿದ್ದರೆ ಆರ್‌ಸಿಬಿಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಜಗತ್ತಿನ ಯಾವುದೇ ಕ್ರೀಡೆಯ ಪ್ರೀಮಿಯರ್ ಲೀಗ್ ತಂಡವನ್ನು ಗಮನಿಸಿದಾಗ ಅ ತಂಡದ ನೆಲೆಯ ಒಬ್ಬ ಆಟಗಾರನಾದರೂ ಇದ್ದೇ ಇರುತ್ತಾನೆ. ಸ್ಥಳೀಯ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಫ್ರಾಂಚೈಸಿ ಮಾಲೀಕರು ಹೀಗೊಂದು ಅವಕಾಶ ಕಲ್ಪಿಸುತ್ತಾರೆ. ಆದರೆ, ಕನ್ನಡಿಗರ ನೆಚ್ಚಿನ ತಂಡವಾರ ಆರ್‌ಸಿಬಿ ಇದಕ್ಕೆ ತದ್ವಿರುದ್ಧ. ಪ್ರತಿ ಐಪಿಎಲ್‌ ಹರಾಜಿನ(ipl 2025 mega auction) ಆರಂಭದ ಸಂದರ್ಭದಲ್ಲಿ ಆರ್‌ಸಿಬಿ(RCB) ಕ್ರೇಜ್‌ ಹುಟ್ಟಿಸುತ್ತದೆ.  ದುರಾದೃಷ್ಟವಶಾತ್‌ ಈ ಕ್ರೇಜ್‌ ಬಹುಕಾಲ ಉಳಿಯುವುದಿಲ್ಲ. ಸ್ಥಳೀಯ ಆಟಗಾರರನ್ನು ಬಿಟ್ಟು ವಿದೇಶಿ ಆಟಗಾರರು ಮತ್ತು ಬೇರೆ ರಾಜ್ಯದ ಕಳಪೆ ಪ್ರದರ್ಶನ ತೋರುವ ಆಟಗಾರರಿಗೆ ಭಾರೀ ಮೊತ್ತ ನೀಡಿ ಖರೀದಿ ಮಾಡುತ್ತದೆ. ಈ ಬಾರಿಯ ಹರಾಜಿನಲ್ಲಿಯೂ ಆರ್‌ಸಿಬಿದ್ದು ಇದೇ ಕಥೆ.

ಆರ್‌ಸಿಬಿಯಲ್ಲಿ ಕನ್ನಡಿಗರಿಗೆ ಅವಕಾಶ ಕೊಡಿ ಎಂದು ಫ್ರಾಂಚೈಸಿ ಮೇಲೆ ರಾಜ್ಯ ಸರ್ಕಾರವೇ ಒತ್ತಡ ಹಾಕುತ್ತಿದೆ ಎಂದು ಹರಾಜಿಗೂ ಮುನ್ನ ಹೇಳಲಾಗಿತ್ತು. ಆದರೆ ಆರ್‌ಸಿಬಿ ಮೊದಲ ದಿನ ನಡೆದ ಹರಾಜಿನಲ್ಲಿ ಒಬ್ಬನೇ ಒಬ್ಬ ರಾಜ್ಯದ ಆಟಗಾರನನ್ನು ಖರೀದಿ ಮಾಡಿಲ್ಲ. ಹರಾಜಿನಲ್ಲಿ ಕರ್ನಾಟಕದ ಹಲವು ಪ್ರತಿಭಾನ್ವಿತ ಆಟಗಾರರಿದ್ದರೂ ಕೂಡ ಆರ್‌ಸಿಬಿ ಇವರನ್ನು ಖರೀದಿಸುವ ಪ್ರಯತ್ನವನ್ನೂ ನಡೆಸಲಿಲ್ಲ.

ಇದನ್ನೂ ಓದಿ MS Dhoni: ಐಪಿಎಲ್‌ ಆಡುವ ಬಗ್ಗೆ ಧೋನಿ ಮಹತ್ವದ ಹೇಳಿಕೆ

ಮಲ್ಯ ಇರುವಾಗ ಕನ್ನಡಿಗರಿಗೆ ಪ್ರಾಧಾನ್ಯತೆ

ವಿಯಜ್‌ ಮಲ್ಯ ಅವರು ಆರ್‌ಸಿಬಿಯ ಮಾಲಿಕರಾಗಿದ್ದಾಗ ತಂಡದ ತುಂಬ ಕನ್ನಡಿಗ ಆಟಗಾರರೇ ತುಂಬಿಕೊಂಡಿದ್ದರು. ಆಗ ಮಲ್ಯ ಮೊದಲ ಆಯ್ಕೆಯಾಗಿ ಕನ್ನಡಿಗರನ್ನೇ ಬಿಡ್‌ ಮಾಡಿ ಉಳಿದ ಹಣದಲ್ಲಿ ವಿದೇಶಿ ಮತ್ತು ಬೇರೆ ಆಟಗಾರರನ್ನು ಖರೀದಿ ಮಾಡುತ್ತಿದ್ದರು. ಹಿಂದೊಮ್ಮೆ ಅವರು ಆರ್‌ಸಿಬಿ ಪಾಡ್‌ ಕಾಸ್ಟ್‌ನಲ್ಲಿ ಕನ್ನಡಿಗ ಆಟಗಾರರನ್ನು ಬೇರೆ ಫ್ರಾಂಚೈಸಿಗೆ ಬಿಟ್ಟು ಕೊಡುವ ಮಾತೇ ಇಲ್ಲ. ಇವರು ನಮ್ಮ ಹುಡುಗರು ಎಂದು ಎದೆ ತಟ್ಟಿ ಹೇಳಿದ್ದರು. ಈ ವಿಡಿಯೊ ಈಗ ವೈರಲ್‌ ಆಗುತ್ತಿದೆ. ಆರ್‌ಸಿಬಿ ಅಭಿಮಾನಿಗಳು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನೀವು ಇರುತ್ತಿದ್ದರೆ ನಮ್ಮ ತಂಡಕ್ಕೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಮರುಗಿದ್ದಾರೆ.

ಮಲ್ಯ ಮಾಲಿಕರಾಗಿದ್ದ ವೇಳೆ ಆರ್‌ಸಿಬಿಯಲ್ಲಿ ಕನ್ನಡಿಗ ಆಟಗಾರರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸುನೀಲ್ ಜೋಶಿ, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ ಹಾಗೂ ಕೆ.ಪಿ. ಅಪ್ಪಣ್ಣ, ಕೆ.ಎಲ್‌ ರಾಹುಲ್‌, ಸಿ.ಎಂ. ಗೌತಮ್, ಕುರುಣ್ ನಾಯರ್ ಹಾಗೂ ಶ್ರೀನಾಥ್ ಅರವಿಂದ್ ಮೊದಲಾದ ಕನ್ನಡ ನೆಲದ ಆಟಗಾರರು ತಂಡದಲ್ಲಿ ಆಡುತ್ತಿದ್ದರು. ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಸುಸ್ತಿ ಇರಿಸಿ ಲಂಡನ್‌ಗೆ ಪಲಾಯನಗೈದ ಬಳಿಕ ಮಲ್ಯ ಆರ್‌ಸಿಬಿ ಫ್ರಾಂಚೈಸಿ ತೊರೆದರು.