ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ (Channapatna Bypoll) ಸೋಲು ಕಂಡಿರುವ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಪರೋಕ್ಷವಾಗಿ ಮುಸ್ಲಿಂ ಸಮುದಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಾತ ದೇವೇಗೌಡರು (HD Deve gowda) ಆ ಸಮುದಾಯಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರೂ, ಅದನ್ನು ಮರೆತುಬಿಟ್ಟಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಚನ್ನಪಟ್ಟಣದಲ್ಲಿ ನಮ್ಮ ಸಾಂಪ್ರದಾಯಕ ಮತಗಳು ಹೆಚ್ಚಾಗಿದ್ದರೂ, ನಾವು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಸಾಕಷ್ಟು ಪ್ರಯತ್ನ ಪಟ್ಟರೂ ಆ ಒಂದು ಸಮುದಾಯ ಮಾತ್ರ ನಮ್ಮ ಅವಶ್ಯಕತೆ ಅವರಿಗಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದೆ’ ಎಂದು ನಿಖಿಲ್ ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ಆ ಒಂದು ಸಮುದಾಯದ ಪರವಾಗಿ ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿದ್ದರು. ಅವರ ಪರವಾಗಿ ಅನೇಕ ನಿರ್ಣಯಗಳನ್ನು ಕೈಗೊಂಡಿದ್ದರು. ಮೀಸಲಾತಿ ನೀಡಿದ್ದರು ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಯಾವುದೇ ಕಾರ್ಯಕರ್ತ ನಿಂತರೂ ಸಾಂಪ್ರದಾಯಿಕವಾಗಿ ಕೊನೇಪಕ್ಷ ನಮ್ಮ 60 ಸಾವಿರ ಮತಗಳು ಬರುತ್ತಿದ್ದವು. ಈಗ ಆ ಪ್ರಮಾಣ 87 ಸಾವಿರಕ್ಕೆ ಹೋಗಿ ಮುಟ್ಟಿದೆ. ಅಂದರೆ ಜನ ನಮ್ಮನ್ನು ಕೈ ಬಿಟ್ಟಿಲ್ಲ. ಆದರೆ, ಆ ಒಂದು ಸಮುದಾಯ ಮಾತ್ರ ನಮ್ಮ ಅವಶ್ಯಕತೆ ಅವರಿಗಿಲ್ಲ ಎಂದು ಸಂದೇಶ ನೀಡಿದೆ. ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ಪಕ್ಷದ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನಿಖಿಲ್, ಅವರು ಹಿರಿಯರು. ರಾಜಕೀಯದಲ್ಲಿ ಅವರಿಗೆ ಬಹಳ ಅನುಭವ ಇದೆ. ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ. ಅವರು ನಮ್ಮ ಪಕ್ಷದ ಕೋರ್ ಕಮಿಟಿ ನಾಯಕರು. ಅವರಿಗೆ ಯಾವ ಗೌರವ ಕೊಡಬೇಕೋ ಅದನ್ನು ನಾವು ಕೊಡುತ್ತೇವೆ ಎಂದು ಹೇಳಿದರು.
ದೇವೇಗೌಡರು ರಾಜಕೀಯ ನಿವೃತ್ತಿ ಪಡೆಯಬೇಕು ಎಂಬ ಚನ್ನಪಟ್ಟಣದ ನೂತನ ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿಕೆ ಕುರಿತಂತೆ ಮಾತನಾಡಿದ ನಿಖಿಲ್, ಮಾಜಿ ಪ್ರಧಾನಿ ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡುತ್ತಿಲ್ಲ. ದೇಶ ಮತ್ತು ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಎಂದು ಅನೇಕ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿದ್ದಾರೆ. ಇದನ್ನು ಆ ವ್ಯಕ್ತಿ ಅರ್ಥ ಮಾಡಿಕೊಳ್ಳಬೇಕು ಎಂದರು.