ಮುಂಬೈ: ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಭಾರಿ ಗೆಲುವು ಸಾಧಿಸಿದ ನಂತರ ಇಂದು ಬೆಳಿಗ್ಗೆ ಭಾರತೀಯ ಷೇರು ಮಾರುಕಟ್ಟೆಗಳು(Stock Market) ಭಾರೀ ಏರಿಕೆ ಕಂಡವು. ಬಿಎಸ್ಇ ಸೆನ್ಸೆಕ್ಸ್(Sensex) ಸೂಚ್ಯಂಕ 1,200 ಪಾಯಿಂಟ್ಗಳು ಅಥವಾ ಶೇಕಡಾ 1.36 ರಷ್ಟು ಏರಿಕೆಯಾಗಿ 80,193.47 ಪಾಯಿಂಟ್ಗಳಲ್ಲಿ ವಹಿವಾಟು ಪ್ರಾರಂಭಿಸಿದೆ. ಇನ್ನು ನಿಫ್ಟಿ 50(Nifty 50) ಸೂಚ್ಯಂಕವು 1.45 ಶೇಕಡಾ ಅಥವಾ 346.30 ಪಾಯಿಂಟ್ಗಳಿಗಿಂತ ಹೆಚ್ಚು ಗಳಿಸಿ 24,253.55ಕ್ಕೆ ತಲುಪಿದೆ.
ಎರಡೂ ಮಾನದಂಡಗಳು ಶುಕ್ರವಾರದಂದು ಸುಮಾರು 1.5% ರಷ್ಟು ಏರಿದ್ದವು ಇದು ಜೂನ್ ಆರಂಭದಿಂದಲೂ ಅವರ ಅತ್ಯುತ್ತಮ ಪ್ರದರ್ಶವಾಗಿತ್ತು. ಆ ಮೂಲಕ ಎಲ್ಲಾ 13 ಪ್ರಮುಖ ವಲಯಗಳು ಲಾಭ ಗಳಿಸಿದವು. ವಿಶಾಲವಾದ, ಹೆಚ್ಚು ದೇಶೀಯವಾಗಿ ಕೇಂದ್ರೀಕೃತವಾಗಿರುವ ಸ್ಮಾಲ್- ಮತ್ತು ಮಿಡ್-ಕ್ಯಾಪ್ಗಳು ತಲಾ 2% ದಷ್ಟು ಏರಿದವು.
ಸಸತ ಇಳಿಕೆ ಕಂಡಿದ್ದ ಅದಾನಿ ಷೇರಿನ ಗಮನಾರ್ಹ ಏರಿಕೆ
ಲಂಚ ನೀಡಿಕೆ ಆರೋಪದಡಿ ಭಾರತದ ಉಧ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕದಲ್ಲಿ ದೋಷಾರೋಪಣೆಯಾದ ಬೆನ್ನಲ್ಲೇ ಇತ್ತ ಭಾರತೀಯ ಷೇರುಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಷೇರುಗಳ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದವು. ಇಂದು ಷೇರುಗಳಲ್ಲಿ ಶೇ.4ರಷ್ಟು ಏರಿಕೆ ಕಂಡಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ 50 ಶುಕ್ರವಾರದಂದು ಶೇಕಡಾ 2.5ರಷ್ಟು ಲಾಭ ಗಳಿಸಿತ್ತು. ಈ ಮೂಲಕ ವಾರಾಂತ್ಯ ಪಾಸಿಟೀವ್ ಆಗಿ ಕೊನೆಗೊಂಡಿತ್ತು. ಶುಕ್ರವಾರ ಸೆನ್ಸೆಕ್ಸ್ 1,961 ಅಂಕಗಳು ಅಥವಾ ಶೇಕಡಾ 2.54 ರಷ್ಟು ಜಿಗಿದು 79,117.11ಕ್ಕೆ ವಹಿವಾಟು ಮುಗಿಸಿತ್ತು. ನಿಫ್ಟಿ 50 557 ಪಾಯಿಂಟ್ ಅಥವಾ 2.39 ರಷ್ಟು ಏರಿಕೆಯಾಗಿ 23,907.25ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಬ್ಯಾಂಕ್ 763 ಪಾಯಿಂಟ್ಗಳು ಅಥವಾ ಶೇಕಡಾ 1.51 ರಷ್ಟು ಜಿಗಿದು 51,135.40ಕ್ಕೆ ತಲುಪಿದೆ. ಐಟಿ, ರಿಯಾಲ್ಟಿ ಮತ್ತು ಪಿಎಸ್ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇಕಡ 3ರಷ್ಟು ಏರಿಕೆ ಕಂಡಿವೆ.
ತಜ್ಞರ ಅವರ ಪ್ರಕಾರ ಇಂದು ಎಚ್ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್, ಆಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್, ಅರಬಿಂದೋ ಫಾರ್ಮಾ ಲಿಮಿಟೆಡ್, ಜೈೂಸ್ ಲೈಫ್ ಸೈನ್ಸಸ್ ಲಿಮಿಟೆಡ್ ಮತ್ತು ಕೋಲ್ ಇಂಡಿಯಾ ಲಿಮಿಟೆಡ್ ಷೇರು ಮೇಲೆ ಹೂಡಿಕೆ ಮಾಡಬಹುದು.
ಮಹಾರಾಷ್ಟ್ರ ಚುನಾವಣೆಯ ಫಲಿತಾಂಶವು ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಮೇಲೆಯೂ ಸಕಾರಾತ್ಮಕ ಪ್ರಭಾವ ಬೀರುವ ನಿರೀಕ್ಷೆ ಇದೆ. ಅವರು ಸಾಮಾನ್ಯವಾಗಿ ಕೇಂದ್ರದಲ್ಲಿ ಸ್ಥಿರ ಆಡಳಿತವನ್ನು ಬಯಸುತ್ತಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಜಯ ಗಳಿಸಿರುವುದರಿಂದ ಎನ್ಡಿಎಗೆ ಕೂಡ ಹೆಚ್ಚಿನ ಬಲ ಬಂದಂತಾಗಿದೆ.
ಈ ವಾರ ಡಿವಿಡೆಂಡ್ ಘೋಷಣೆ
ಷೇರು ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ಈ ವಾರ ಷೇರುದಾರರಿಗೆ ತಮ್ಮ ಡಿವಿಡೆಂಡ್ ನೀಡಲಿವೆ. ಅವುಗಳಲ್ಲಿ ಪಿಎಫ್ಸಿ, ವಿಆರ್ಎಲ್ ಲಾಜಿಸ್ಟಿಕ್ಸ್, ಹ್ಯಾಪಿಯೆಸ್ಟ್ ಮೈಂಡ್ಸ್ ಇತ್ಯಾದಿ ಪ್ರಮುಖ ಕಂಪನಿಗಳೂ ಇವೆ.
ನ. 25ರಂದು ಪಿಎಫ್ಸಿ ಕಂಪನಿಯು ಹೂಡಿಕೆದಾರರಿಗೆ ಪ್ರತಿ ಷೇರಿಗೆ 3.5 ರೂ. ಡಿವಿಡೆಂಡ್ ವಿತರಿಸಲಿದೆ.ಬಲರಾಂಪುರ್ ಚಿನಿ ಮಿಲ್ಸ್ ಪ್ರತಿ ಷೇರಿಗೆ 3 ರೂ. ಡಿವಿಡೆಂಡ್ ನೀಡಲಿದೆ.
ಇಪ್ಕಾ ಲ್ಯಾಬೊರೇಟರೀಸ್ ಪ್ರತಿ 3.5 ರೂ. ಡಿವಿಡೆಂಡ್ ನೀಡಲಿದೆ.
ನ. 26ರಂದು ಜಿಲೆಟ್ ಇಂಡಿಯಾ ಪ್ರತಿ ಷೇರಿಗೆ 45 ರೂ. ಡಿವಿಡೆಂಡ್ ನೀಡಲಿದೆ.
ಮೋರ್ಗಾನೈಟ್ ಕ್ರೂಸಿಬಲ್ ಪ್ರತಿ ಷೇರಿಗೆ 30 ರೂ. ಡಿವಿಡೆಂಡ್ ನೀಡಲಿದೆ.
ನ. 27ರಂದು ಹ್ಯಾಪಿಯೆಸ್ಟ್ ಮೈಡ್ಸ್ 2.5 ರೂ. ಡಿವಿಡೆಂಡ್ ನೀಡಲಿದೆ.
ನ. 29ರಂದು ವಿಆರ್ಎಲ್ ಲಾಜಿಸ್ಟಿಕ್ಸ್ ಪ್ರತಿ ಷೇರಿಗೆ 5 ರೂ.ಗಳ ಮಧ್ಯಂತರ ಡಿವಿಡೆಂಡ್ ನೀಡಲಿದೆ.
ಈ ಸುದ್ದಿಯನ್ನೂ ಓದಿ: ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಆದೇಶ ಹಿಂಪಡೆಯಲು ಆಗ್ರಹ
ಈ ನಡುವೆ ಆನ್ಲೈನ್ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊ, ಕ್ವಾಲಿಫೈಡ್ ಇನ್ಸ್ಟಿಟ್ಯೂಷನಲ್ ಪ್ಲೇಸ್ಮೆಂಟ್ (QIP) ಮೂಲಕ 8,500 ಕೋಟಿ ರೂ.ಗಳನ್ನು ಸಂಗ್ರಹಿಸಲು ಉದ್ದೇಶಿಸಿದೆ. ಕ್ಯೂಐಪಿ ಎಂದರೆ ಬ್ಯಾಂಕ್, ಮ್ಯೂಚುವಲ್ ಫಂಡ್ಗಳು ಇತ್ಯಾದಿ ಕಂಪೆನಿಗಳಿಗೆ ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಲಿದೆ. ದೇಶದಲ್ಲಿ ಕ್ವಿಕ್ ಕಾಮರ್ಸ್ ಇಂಡಸ್ಟ್ರಿ ಬೆಳೆಯುತ್ತಿರುವ ವೇಗವನ್ನು ಮತ್ತು ಅಲ್ಲಿ ನಡೆಯುತ್ತಿರುವ ಸ್ಪರ್ಧೆಯನ್ನು ಇದು ಬಿಂಬಿಸಿದೆ.