Monday, 25th November 2024

Namma Metro: ಹೊಸ ವರ್ಷದ ಆರಂಭದಲ್ಲಿ ನಮ್ಮ ಮೆಟ್ರೋದಿಂದ ಹಳದಿ ಮಾರ್ಗದ ಸಂಚಾರ ಕೊಡುಗೆ

namma metro yellow line

ಬೆಂಗಳೂರು: ‘ನಮ್ಮ ಮೆಟ್ರೊ’ದ (Namma Metro) ನೂತನ ಹಳದಿ ಮಾರ್ಗದಲ್ಲಿ (Yellow Line) ಮುಂದಿನ ವರ್ಷದ ಆರಂಭದಿಂದ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಆರ್‌ ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ (Bengaluru news) ಇದಾಗಿದೆ.

ಮುಂದಿನ ತಿಂಗಳು ಒಂದು, ಜನವರಿಯಲ್ಲಿಇನ್ನೊಂದು ರೈಲುಗಳು ಇದಕ್ಕೆ ಸೇರ್ಪಡೆಯಾಗಲಿದ್ದು, ಒಟ್ಟು ಮೂರು ರೈಲುಗಳೊಂದಿಗೆ ಜನವರಿ ಅಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ. ಈ ಮಾರ್ಗದ ಶುರುವಾತಿನೊಂದಿಗೆ ಎಲೆಕ್ಟ್ರಾನಿಕ್ ಸಿಟಿಯ ಐಟಿ ಹಬ್‌ಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೆ ಎಲೆಕ್ಟ್ರಾನಿಕ್ ಸಿಟಿಯ ಟ್ರಾಫಿಕ್‌ನಿಂದ ಸಾಮಾನ್ಯ ಜನರ ಓಡಾಟಕ್ಕೂ ಮೆಟ್ರೋ ಆರಾಮದಾಯಕವಾಗಲಿದೆ.

ಈ ಮಾರ್ಗದ ಸಿವಿಲ್‌, ಎಲೆಕ್ಟ್ರಿಕಲ್‌, ಸಿಗ್ನಲಿಂಗ್‌ ಸೇರಿದಂತೆ ಎಲ್ಲಾ ಕೆಲಸಗಳು ಮುಗಿದ್ದು, ಬೋಗಿಗಳ ಕೊರತೆಯಿಂದ ವಾಣಿಜ್ಯ ಸಂಚಾರ ಆರಂಭವಾಗಿಲ್ಲ. ಈ ಮಾರ್ಗಕ್ಕೆ ಬೇಕಾದ ರೈಲುಗಳನ್ನು ಪೂರೈಸಬೇಕಿದ್ದ ಟಿಟಾಗರ್‌ ವ್ಯಾಗನ್ಸ್‌ ಸಂಸ್ಥೆಯ ವಿಳಂಬದಿಂದ ರೈಲುಗಳು ಇನ್ನೂ ನಮ್ಮ ಮೆಟ್ರೊಗೆ ಬಂದಿಲ್ಲ. ಟಿಟಾಗರ್‌ ಸಂಸ್ಥೆ ಮುಂದಿನ ತಿಂಗಳು ಆರು ಬೋಗಿಗಳ ಒಂದು ಸೆಟ್‌, ಜನವರಿಯಲ್ಲಿಇನ್ನೊಂದು ಸೆಟ್‌ (18 ಬೋಗಿ) ಅನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಒಂದು ರೈಲಿನ (ಆರು ಬೋಗಿ) ಮೂಲಕ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಟಿಟಾಗರ್‌ ಸಂಸ್ಥೆಯಿಂದ ಎರಡು ರೈಲುಗಳು ನಮ್ಮ ಮೆಟ್ರೊ ಸೇರಿದ ಬಳಿಕ, ರೈಲ್ವೆ ಸುರಕ್ಷತಾ ಆಯುಕ್ತರ ನೇತೃತ್ವದ ತಂಡ ಈ ಮಾರ್ಗದಲ್ಲಿ ಸುರಕ್ಷತೆಯ ಪರಿಶೀಲನೆ ನಡೆಸಲಿದೆ. ಡಿಸೆಂಬರ್‌ ಅಂತ್ಯ ಅಥವಾ ಜನವರಿ ಮೊದಲ ವಾರದಲ್ಲಿಈ ಪ್ರಕ್ರಿಯೆ ನಡೆಸುವ ಸಾಧ್ಯತೆ ಇದೆ.

ಆರಂಭದಲ್ಲಿ ಮೂರು ರೈಲುಗಳನ್ನು ಮಾತ್ರ ಓಡಿಸಲು ನಿರ್ಧರಿಸಲಾಗಿದೆ. ಪ್ರತಿ 30 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ. 2025ರ ಆಗಸ್ಟ್‌ ವೇಳೆಗೆ ತಲಾ 6 ಬೋಗಿಯ 15 ರೈಲುಗಳು ಸರಬರಾಜಾಗಲಿವೆ. ಪೂರ್ಣ ಪ್ರಮಾಣದಲ್ಲಿರೈಲು ಬೋಗಿಗಳು ಪೂರೈಕೆಯಾದ ಬಳಿಕ ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಸಿವಿಲ್‌ ಕಾಮಗಾರಿ ಪೂರ್ಣಗೊಂಡಿದ್ದು, ಚಾಲಕ ರಹಿತ ಮೆಟ್ರೊ ರೈಲು ಪರೀಕ್ಷಾರ್ಥವಾಗಿ ಸಂಚರಿಸುತ್ತಿದೆ. ರೈಲ್ವೆ ಸುರಕ್ಷತಾ ಮಂಡಳಿಯು ಈ ಗಾಗಲೇ ಸಿಗ್ನಲಿಂಗ್‌, ಟ್ರ್ಯಾಕ್ಷನ್‌ ಮತ್ತು ಬ್ರೇಕಿಂಗ್‌ ಪರೀಕ್ಷೆಗಳಿಗೆ ತಾಂತ್ರಿಕ ಮಂಜೂರಾತಿ ನೀಡಿದೆ. ಬಹುನಿರೀಕ್ಷಿತ ಆರ್‌ವಿ ರಸ್ತೆ- ಬೊಮ್ಮಸಂದ್ರ ನಡುವಿನ (ಹಳದಿ ಮಾರ್ಗ) 18.82 ಕಿ.ಮೀ. ಮಾರ್ಗದಲ್ಲಿಒಟ್ಟು 16 ನಿಲ್ದಾಣಗಳಿವೆ.

ಇದನ್ನೂ ಓದಿ: Namma Metro: ನಾಗಸಂದ್ರ – ಮಾದಾವರ ನಮ್ಮ ಮೆಟ್ರೋ ಹಸಿರು ಮಾರ್ಗ ಸಂಚಾರಕ್ಕೆ ಮುಕ್ತ