ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ತನ್ನ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿಯ ಸಹಕಾರದಿಂದ ಭರ್ಜರಿಯಾದ ಗೆಲುವನ್ನು ಸಾಧಿಸಿದೆ. ಮಹಾಯುತಿ ಇದೀಗ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಈ ಮೂಲಕ ಬಿಜೆಪಿ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. ಹಾಗಿದ್ದರೆ ಮಹಾಯುತಿ ಮೈತ್ರಿಕೂಟವು ಪ್ರಚಂಡ ಗೆಲುವಿನ ಹಿಂದೆ ಇರೋ ಮಾಸ್ಟರ್ ಮೈಂಡ್ ಯಾರು? ಈ ಅಭೂತಪೂರ್ವ ವಿಕ್ಟರಿ ಹಿಂದೆ ಅತುಲ್ ಲಿಮಾಯೆ(Atul Limaya) ಎಂಬ ಚಾಣಕ್ಯನ ಮಾಸ್ಟರ್ ಪ್ಲ್ಯಾನ್ ಇದೆ ಎಂದರೆ ನಂಬಲೇ ಬೇಕು. ಯಾರು ಈ ಅತುಲ್ ಲಿಮಾಯೆ? ಇಲ್ಲಿದೆ ಸವಿಸ್ತಾರವಾದ ವರದಿ
ಮಹಾರಾಷ್ಟ್ರದ ಪ್ರಚಂಡದ ಗೆಲುವಿನ ನಂತರ 54 ವಯಸ್ಸಿನ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಜಂಟಿ ಕಾರ್ಯದರ್ಶಿಗಳಾದ ಅತುಲ್ ಲಿಮಾಯೆ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಲಿಮಾಯೆ ಅವರು ತಮ್ಮ ಕಾರ್ಯತಂತ್ರಗಳು ಮತ್ತು ಇನ್ನಿತರ ಯೋಜನೆಗಳ ಮೂಲಕ ಎಲ್ಲಾ ನಾಯಕರನ್ನು ಒಂದೆಡೆ ಸೇರಿಸಿ ಮಹಾಯುತಿ ಮೈತ್ರಿಕೂಟವನ್ನು ಬಲಿಷ್ಠಗೊಳಿಸುವಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. NDA ವಿರೋಧಿ ಆಡಳಿತವನ್ನು ನಿಭಾಯಿಸಲು ಅನುವು ಮಾಡಿಕೊಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಯಾರು ಈ ಅತುಲ್ ಲಿಮಾಯೆ?
ನಾಸಿಕ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಲಿಮಾಯೆ ಅವರು ಸರಿ ಸುಮಾರು 30 ವರ್ಷಗಳ ಹಿಂದೆ ದೊಡ್ಡ ಮೊತ್ತದ ವೇತನವನ್ನು ನೀಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಯನ್ನು ತೊರೆದು RSSಗೆ ಪೂರ್ಣಾವಧಿ ಪ್ರಚಾರಕನಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಆರಂಭದಲ್ಲಿ, ಮರಾಠವಾಡ ಮತ್ತು ಉತ್ತರ ಮಹಾರಾಷ್ಟ್ರ ಪ್ರದೇಶಗಳನ್ನು ಒಳಗೊಂಡಿರುವ ದೇವಗಿರಿ ಪ್ರಾಂತದಲ್ಲಿ ಸಹ ಪ್ರಾಂತ ಪ್ರಚಾರಕನಾಗಿ ಕೆಲಸ ಮಾಡಿದ್ದರು. ಮುಂದುವರೆದಂತೆ, ಪಶ್ಚಿಮ ಮಹಾರಾಷ್ಟ್ರದಲ್ಲಿನ ರಾಯಗಡ ಮತ್ತು ಕೊಂಕಣದಂತಹ ಪ್ರದೇಶಗಳಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ಸಂಘದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಮಧ್ಯೆ ರಾಜ್ಯ ಚುನಾವಣೆಗಳಲ್ಲಿ ಲಿಮಾಯೆ ತಮ್ಮದೇ ಪಾತ್ರವನ್ನು ನಿರ್ವಹಿಸುತ್ತಿದ್ದರು.
2014ರಲ್ಲಿ ಮಹಾರಾಷ್ಟ್ರ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾವನ್ನು ಒಳಗೊಂಡಿರುವ ಪಶ್ಚಿಮ ಮಹಾರಾಷ್ಟ್ರ ಪ್ರದೇಶವನ್ನು ಲಿಮಾಯೆ ನೋಡಿಕೊಳ್ಳುತ್ತಿದ್ದರು. ಸಹ ಪ್ರಾಂತ ಪ್ರಚಾರಕರಾಗಿದ್ದ ಅವಧಿಯಲ್ಲಿ ಲಿಮಾಯೆ ಅವರು ರಾಜ್ಯದ ಕೃಷಿ, ಆರ್ಥಿಕತೆ ಮತ್ತು ಪ್ರದೇಶದ ಸಾಮಾಜಿಕ-ರಾಜಕೀಯ ಚಲನಶೀಲತೆಯ ಸವಾಲುಗಳನ್ನು ಎದುರಿಸುವಲ್ಲಿಯೂ ತೊಡಗಿದ್ದರು. ಪಶ್ಚಿಮ ಪ್ರದೇಶದ ಮುಖ್ಯಸ್ಥರಾಗಿ ಲಿಮಾಯೆ ಅವರು ಬಿಜೆಪಿ ನಾಯಕರನ್ನು ಸೇರಿದಂತೆ ಪ್ರತಿಪಕ್ಷಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತುಕೊಳ್ಳುತ್ತಾ ಹೋದರು. ಮಹಾರಾಷ್ಟ್ರದ ರಾಜಕೀಯ ಭೂದೃಶ್ಯದ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಬೆಳೆಸಿಕೊಂಡರು.
ಇದೀಗ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟವು ದಾಖಲೆಯನ್ನು ಬರೆದಿದೆ. ಬಿಜೆಪಿ ಪಕ್ಷವು ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿ ಕುಳಿತಿದೆ. ಅದ್ಭುತ ಗೆಲುವಿನ ಹಿಂದೆ ಅತುಲ್ ಲಿಮಾಯೆ ಅವರ ಮಾಸ್ಟರ್ ಪ್ಲ್ಯಾನ್ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಒಟ್ಟು 288 ವಿಧಾನಸಭಾ ಸ್ಥಾನಗಳಿದ್ದು, ಬಿಜೆಪಿ ಪಕ್ಷವು 132 ಸ್ಥಾನಗಳನ್ನು ಗೆದ್ದಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 57 ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು 41 ಸ್ಥಾನಗಳನ್ನು ಗೆದ್ದಿದೆ.
ಈ ಸುದ್ದಿಯನ್ನೂ ಓದಿ: G Parameshwara: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮಾನನಷ್ಟ ಮೊಕದ್ದಮೆ: ಸಚಿವ ಪರಮೇಶ್ವರ್