Monday, 25th November 2024

IND vs AUS: ಪರ್ತ್‌ನಲ್ಲಿ ಆಸೀಸ್‌ ಪತನ; ಭಾರತಕ್ಕೆ ದಾಖಲೆಯ ಗೆಲುವು

ಪರ್ತ್‌: ತವರಿನಲ್ಲಿ ನಡೆದಿದ್ದ ನ್ಯೂಜಿಲ್ಯಾಂಡ್‌ ವಿರುದ್ದದ ಹೀನಾಯ ಸೋಲಿನಿಂದ ಭಾರೀ ಟೀಕೆಗೆ ಗುರಿಯಾಗಿದ್ದ ಟೀಮ್‌ ಇಂಡಿಯಾ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ಕೃಷ್ಟ ಪ್ರದರ್ಶನ ತೋರುವ ಮೂಲಕ ಬೋರ್ಡರ್‌-ಗಾವಸ್ಕರ್‌ ಟ್ರೋಫಿಯ ಮೊದಲ ಪಂದ್ಯದಲ್ಲಿ(IND vs AUS) ಭರ್ಜರಿ 295 ರನ್‌ಗಳ ಗೆಲುವು ಸಾಧಿಸಿ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. 47 ವರ್ಷದ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಸಾಧಿಸಿದ ಗರಿಷ್ಠ ಮೊತ್ತದ ಗೆಲುವು ಇದಾಗಿದೆ. ನಾಯಕ ರೋಹಿತ್‌ ಶರ್ಮ, ಗಾಯಾಳು ಶುಭ್‌ಮನ್‌ ಗಿಲ್‌ ಅನುಪಸ್ಥಿತಿಯ ಮಧ್ಯೆಯೂ ಭಾರತ ಸಾಧಿಸಿದ ಈ ಅಭೂತಪೂರ್ವ ಗೆಲುವು ನಿಜಕ್ಕೂ ಶ್ಲಾಘನೀಯ.

ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗೆ ಕುಸಿದಿದ್ದ ಭಾರತ, ಸಂಘಟಿತ ಬೌಲಿಂಗ್‌ ದಾಳಿ ನಡೆಸಿ ಆಸೀಸ್‌ ತಂಡವನ್ನು 104 ರನ್‌ಗೆ ಕಟ್ಟಿ ಹಾಕಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ವಿರಾಟ್‌ ಕೊಹ್ಲಿಯ ಅಮೋಘ ಶತಕದ ನೆರವಿನಿಂದ 6 ವಿಕೆಟ್‌ಗೆ 487 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿ ಆತಿಥೇಯ ಆಸೀಸ್‌ಗೆ 534ರನ್‌ಗಳ ಬೃಹತ್‌ ಗೆಲುವಿನ ಗುರಿ ನೀಡಿತು. ಈ ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಆಸ್ಟ್ರೇಲಿಯಾ, 3ನೇ ದಿನದಾಟದ ಅಂತ್ಯಕ್ಕೆ 12 ರನ್‌ಗೆ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಸೋಲಿನ ಸೂಚನೆ ನೀಡಿತು.

ಅದರಂತೆ 3 ವಿಕೆಟ್‌ಗೆ 12 ರನ್‌ ಗಳಿಸಿದ್ದಲ್ಲಿಂದ ಸೋಮವಾರ ನಾಲ್ಕನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ಟ್ರಾವಿಸ್‌ ಹೆಡ್‌(89) ಮತ್ತು ಮಿಚೆಲ್‌ ಮಾರ್ಷ್‌(47) ಬ್ಯಾಟಿಂಗ್‌ ಹೋರಾಟದ ಹೊರತಾಗಿಯೂ 238 ರನ್‌ಗೆ ಆಲೌಟ್‌ ಆಗುವ ಮೂಲಕ ಸೋಲಿಗೆ ತುತ್ತಾಯಿತು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್‌ ಗೊಂಚಲು ಪಡೆದಿದ್ದ ಉಸ್ತುವಾರಿ ನಾಯಕ ಜಸ್‌ಪ್ರೀತ್‌ ಬುಮ್ರಾ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಇದೇ ಪ್ರದರ್ಶನ ಮುಂದುವರಿಸಿ ಮೂರು ವಿಕೆಟ್‌ ಕಿತ್ತರು. ಮತೋರ್ವ ವೇಗಿ ಮೊಹಮ್ಮದ್‌ ಸಿರಾಜ್‌ ಕೂಡ ಮೂರು ವಿಕೆಟ್‌ ಉರುಳಿಸಿದರು. ಸ್ಪಿನ್ನರ್‌ ವಾಷಿಂಗ್ಟನ್‌ ಸುಂದರ್‌ 2 ವಿಕೆಟ್‌ ಕಿತ್ತರು.

ಇದನ್ನೂ ಓದಿ IND vs AUS: ತಮ್ಮ 81ನೇ ಶತಕ ಸಿಡಿಸಿ ಟೀಕೆಗಳಿಗೆ ತಿರುಗೇಟು ನೀಡಿದ ಕಿಂಗ್‌ ಕೊಹ್ಲಿ!

ದೊಡ್ಡ ಮೊತ್ತವನ್ನು ಬೆನ್ನಟ್ಟುವ ವೇಳೆ ಆಸೀಸ್‌ಗೆ ಆಸರೆಯಾದದ್ದು ಟ್ರಾವಿಸ್‌ ಹೆಡ್‌, ಮಿಚೆಲ್‌ ಮಾರ್ಷ್‌ ಮತ್ತು ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಮಾತ್ರ. ಟ್ರಾವಿಸ್‌ ಹೆಡ್‌ ಅರ್ಧಶತಕ ಬಾರಿಸಿದರೆ, ಮಾರ್ಷ್‌ 47 ರನ್‌ಗೆ ವಿಕೆಟ್‌ ಕೈಚೆಲ್ಲಿ ಕೇವಲ ಮೂರು ರನ್‌ ಅಂತರದಿಂದ ಅರ್ಧಶತಕ ವಂಚಿತರಾದರು. ಈ ವಿಕೆಟ್‌ ಚೊಚ್ಚಲ ಪಂದ್ಯವನ್ನಾಡಿದ ಆಂಧ್ರ ಮೂಲದ ನಿತೀಶ್‌ ರೆಡ್ಡಿ ಪಾಲಾಯಿತು. ಈ ವಿಕೆಟ್‌ನೊಂದಿಗೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಕೆಟ್‌ ಖಾತೆ ತೆರೆದರು. 8ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಕ್ಯಾರಿ ಸಣ್ಣ ಮಟ್ಟದ ಬ್ಯಾಟಿಂಗ್‌ ಹೋರಾಟ ನಡೆಸಿದರೂ ಅವರಿಗೆ ಮತ್ತೊಂದು ಬದಿಯಲ್ಲಿ ಉತ್ತಮ ಸಾಥ್‌ ಸಿಗಲಿಲ್ಲ. ಅಂತಿಮವಾಗಿ ಅವರು 36 ರನ್‌ ಗಳಿಸಿ ಹರ್ಷಿತ್‌ ರಾಣಾಗೆ ವಿಕೆಟ್‌ ಒಪ್ಪಿಸಿದರು. ಇವರ ವಿಕೆಟ್‌ ಬೀಳುತ್ತಿದ್ದಂತೆ ಆಸೀಸ್‌ ಕೂಡ ಸರ್ವಪತನ ಕಂಡಿತು.

ಪರ್ತ್‌ನಲ್ಲಿ 2ನೇ ಗೆಲುವು

ಇದು ಭಾರತ ತಂಡ ಪರ್ತ್‌ನಲ್ಲಿ ಸಾಧಿಸಿದ 2ನೇ ಗೆಲುವು. ಇದಕ್ಕೂ ಮುನ್ನ ಭಾರತ ಇಲ್ಲಿ 5 ಪಂದ್ಯಗಳನ್ನಾಡಿ ಒಂದನ್ನಷ್ಟೇ ಜಯಿಸಿತ್ತು. ಉಳಿದ ನಾಲ್ಕನ್ನು ಆಸ್ಟ್ರೇಲಿಯ ಗೆದ್ದಿತ್ತು. ಇದೀಗ ಭಾರತ ಮತ್ತೊಂದು ಗೆಲುವು ಕಂಡಿದೆ. ಭಾರತದ ಮೊದಲ ಗೆಲುವು ದಾಖಲಾಗಿದ್ದು 2008ರಲ್ಲಿ. ಧೋನಿ ಸಾರಥ್ಯದ ಟೀಮ್‌ ಇಂಡಿಯಾ 72 ರನ್‌ ಅಂತರದ ಗೆಲುವು ಸಾಧಿಸಿತ್ತು.

ಸಂಕ್ಷಿಪ್ತ ಸ್ಕೋರ್‌

ಭಾರತ: ಮೊದಲ ಇನಿಂಗ್ಸ್‌ 150(ಕೆ.ಎಲ್‌ ರಾಹುಲ್‌ 26, ರಿಷಭ್‌ ಪಂತ್‌ 37, ನಿತೀಶ್‌ ರೆಡ್ಡಿ 41, ಜೋಶ್‌ ಹ್ಯಾಜಲ್‌ವುಡ್‌ 67 ಕ್ಕೆ 4, ಮಿಚೆಲ್‌ ಸ್ಟಾರ್ಕ್‌ 14ಕ್ಕೆ 2). ದ್ವಿತೀಯ ಇನಿಂಗ್ಸ್‌-6 ವಿಕೆಟ್‌ಗೆ 487 ಡಿಕ್ಲೇರ್‌( ಯಶಸ್ವಿ ಜೈಸ್ವಾಲ್‌ 161, ವಿರಾಟ್‌ ಕೊಹ್ಲಿ 100*, ರಾಹುಲ್‌ 77, ನಿತೀಶ್‌ ರೆಡ್ಡಿ 38*, ನಥಾನ್‌ ಲಿಯೋನ್‌ 99ಕ್ಕೆ 2).

ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌-104(ಅಲೆಕ್ಸ್‌ ಕ್ಯಾರಿ 21, ಮಿಚೆಲ್‌ ಸ್ಟಾರ್ಕ್‌ 26, ಜಸ್‌ಪ್ರೀತ್‌ ಬುಮ್ರಾ 30ಕ್ಕೆ 5, ಸಿರಾಜ್‌ 20 ಕ್ಕೆ 2, ಹರ್ಷಿತ್‌ ರಾಣಾ 48ಕ್ಕೆ 3). ದ್ವಿತೀಯ ಇನಿಂಗ್ಸ್‌-238 (ಟ್ರಾವಿಸ್‌ ಹೆಡ್‌ 89, ಮಿಚೆಲ್‌ ಮಾರ್ಷ್‌ 47, ಕ್ಯಾರಿ 36, ಬುಮ್ರಾ 42 ಕ್ಕೆ3, ಸಿರಾಜ್‌ 51 ಕ್ಕೆ 3, ಸುಂದರ್‌ 48 ಕ್ಕೆ 2). ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ.