ನೆದರ್ಲ್ಯಾಂಡ್: ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರಿಗೆ (Netherland Police) ಡ್ರಗ್ಸ್ನಿಂದಲೇ (Drugs Seized) ಮಾಡಿರುವ ಉದ್ಯಾನದಲ್ಲಿ ಇಡುವ ಸುಮಾರು 2 ಕೆ.ಜಿ. ತೂಕದ ಮೂರ್ತಿ ಸಿಕ್ಕಿದೆ. ಇದನ್ನು ಕಂಡು ಪೊಲೀಸರು ಶಾಕ್ ಆಗಿದ್ದಾರೆ. ಎಂಡಿಎಂಎಯಿಂದ (MDMA) ತಯಾರಿಸಿದ ಬೊಂಬೆ ಇದಾಗಿದೆ.
ಡ್ರಗ್ಸ್ ಸಂಗ್ರಹ ಕುರಿತು ಮಾಹಿತಿ ಮೇರೆಗೆ ದಕ್ಷಿಣ ನೆದರ್ಲ್ಯಾಂಡ್ನ ಪೊಲೀಸರು ಮನೆಯೊಂದರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಎಂಡಿಎಂಎಯಿಂದ ತಯಾರಿಸಿದ 2 ಕೆ.ಜಿ. ತೂಕದ ಉದ್ಯಾನದಲ್ಲಿ ಇಡುವ ಮೂರ್ತಿ ಸಿಕ್ಕಿದೆ. ಎಂಡಿಎಂಎ ನೆದರ್ಲ್ಯಾಂಡ್ನಲ್ಲಿ ಕಾನೂನುಬಾಹಿರ ವಸ್ತುವಾಗಿದ್ದರೂ ಇದನ್ನು ತಯಾರಿಸುವ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಡೊನೆಗ್ಮಂಡ್ ಪೊಲೀಸರು, ಡ್ರಗ್ಸ್ ಡೀಲರ್ಗಳ ಚಾಲಕಿತನವನ್ನು ಕಂಡು ಆಘಾತಗೊಂಡಿರುವುದಾಗಿ ಹೇಳಿದ್ದಾರೆ. ಡ್ರಗ್ಸ್ಗಳು ಹಲವು ಆಕಾರ ಮತ್ತು ಗಾತ್ರಗಳಲ್ಲಿ ಬರುತ್ತವೆ. ಕೆಲವೊಮ್ಮೆ ಇವುಗಳಲ್ಲಿ ಅತ್ಯಂತ ವಿಶೇಷವಾಗಿರುವುದು ಸಿಗುತ್ತವೆ ಎಂದು ಹೇಳಿದ್ದಾರೆ.
ತನಿಖೆಯ ವೇಳೆ ವಿವಿಧ ಶಂಕಿತ ಮಾದಕವಸ್ತುಗಳ ನಡುವೆ ಈ ಮೂರ್ತಿ ಕಂಡು ಬಂದಿದೆ. ಉದ್ಯಾನದಲ್ಲಿ ಇರಿಸುವ ಮೂರ್ತಿಯನ್ನು ಇಲ್ಲಿ ಏಕೆ ಇಟ್ಟಿದ್ದಾರೆ ಎಂದು ಸೂಕ್ಷ್ಮವಾಗಿ ತನಿಖೆ ನಡೆಸಿದಾಗ ಅದು ಡ್ರಗ್ಸ್ನಿಂದ ಮಾಡಿದ ಮೂರ್ತಿ ಎಂದು ತಿಳಿಯಿತು. ಈ ಮೂರ್ತಿ ತಯಾರಿಸಲು ಸುಮಾರು 2 ಕಿಲೋ MDMA ಅನ್ನು ಬಳಸಲಾಗಿದೆ ಎಂದು ಪೋಸ್ಟ್ ನಲ್ಲಿ ಪೊಲೀಸರು ತಿಳಿಸಿದ್ದಾರೆ.
ಮೂರ್ತಿಯು ಅತ್ಯಂತ ಸುಂದರವಾಗಿದ್ದು, ಎರಡು ಕೈಗಳಿಂದ ಅದು ತನ್ನ ಬಾಯಿಯನ್ನು ಮುಚ್ಚಿಕೊಂಡಿರುವ ಭಂಗಿಯಲ್ಲಿದೆ ಎಂದು ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ಪೋಸ್ಟ್ ನೋಡಿ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್ನ ಹೊಸ ಆವಿಷ್ಕಾರಕ್ಕೆ ಮೆಚ್ಚುಗೆ ಮತ್ತು ಪೊಲೀಸರ ತ್ವರಿತ ಕಾರ್ಯಾಚರಣೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ಅನ್ನು ಮರೆಮಾಚಲು ಈ ರೀತಿ ವಿಶೇಷವಾಗಿ ಪ್ರಯತ್ನಿಸುವುದು ಹೊಸದೇನಲ್ಲ. ಕಳೆದ ವರ್ಷ ಬೆಕ್ಕಿನ ಆಹಾರದೊಳಗೆ ಬಚ್ಚಿಟ್ಟ 84,000 ರೂ. ಮೌಲ್ಯದ ಎಂಡಿಎಂಎ ಅನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಸ್ಕಾಟಿಷ್ ವ್ಯಕ್ತಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಹೆಪ್ಪುಗಟ್ಟಿದ ಚಿಕನ್ ಬಾಕ್ಸ್ಗಳೊಳಗೆ 90 ಕೆ.ಜಿ. ಮಾದಕ ದ್ರವ್ಯವನ್ನು ಯುಕೆಗೆ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಇಂಗ್ಲೆಂಡ್ ನ ಲೀಡ್ಸ್ ನಗರದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.