ನೋಯ್ಡಾ: ತಮ್ಮನ್ನು ತಾವು ಜಾರಿ ನಿರ್ದೇಶನಾಲಯದ (ED) ಸೈಬರ್ ಅಧಿಕಾರಿಗಳು (Cyber Crime) ಎಂದು ಹೇಳಿಕೊಂಡು ಮಹಿಳೆಯೊಬ್ಬರಿಗೆ 34 ಲಕ್ಷ ರೂ. ವಂಚಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಸೆಕ್ಟರ್ 41ರ ನಿವಾಸಿ ನಿಧಿ ಪಲಿವಾಲ್ ವಂಚನೆಗೊಳಗಾಗದ ಮಹಿಳೆ (Digital arrest). ನಿಧಿ ಪಲಿವಾಲ್ ಅವರಿಗೆ ಆಗಸ್ಟ್ 8 ರಂದು ರಾತ್ರಿ 10 ಗಂಟೆಗೆ ವಂಚಕರು ಕರೆ ಮಾಡಿದ್ದರು.
ತಮ್ಮನ್ನು ತಾವು ಜಾರಿ ನಿರ್ದೇಶನಾಲಯದ ಸೈಬರ್ ಅಧಿಕಾರಿಗಳು ಎಂದು ಹೇಳಿಕೊಂಡಿದ್ದರು. ಐದು ಪಾಸ್‌ಪೋರ್ಟ್‌ಗಳು, ಎರಡು ಡೆಬಿಟ್ ಕಾರ್ಡ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, 900 ಯುಎಸ್ ಡಾಲರ್ ಮತ್ತು 200 ಗ್ರಾಂ ಮಾದಕವಸ್ತುಗಳನ್ನು ಒಳಗೊಂಡಿರುವ ಆಕೆಯ ಹೆಸರಿನ ಪಾರ್ಸೆಲ್ ಅನ್ನು ಮುಂಬೈನಿಂದ ಇರಾನ್‌ಗೆ ಕಳುಹಿಸುವ ಸಂದರ್ಭದಲ್ಲಿ ಆ ಪಾರ್ಸೆಲ್ ನಮ್ಮ ಕೈಗೆ ಸಿಕ್ಕಿಬಿದ್ದಿದೆ. ನಿಮ್ಮನ್ನು ಈಗಲೇ ಅರೆಸ್ಟ್ ಮಾಡಲಾಗುವುದು ಎಂದು ಅವರ ವಿರುದ್ಧ ವಾಟ್ಸಾಪ್ ಮೂಲಕ ಎರಡು ನೊಟೀಸ್ ಕಳುಹಿಸಿದ್ದಾರೆ. ನಂತರ ಆಕೆಗೆ ವಿಡಿಯೋ ಕಾಲ್ ಮಾಡಿ ಈ ಕೂಡಲೇ ಹಣ ಪಾವತಿಸದಿದ್ದರೆ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.
ವಂಚಕರ ಬಲೆಗೆ ಬಿದ್ದ ಮಹಿಳೆ 34 ಲಕ್ಷ ರೂ. ಗಳನ್ನು ನೀಡಿದ್ದಾರೆ. ನಂತರ ಅವರು ಗೌತಮ್ ಬುದ್ಧ ಸೈಬರ್ ಕ್ರೈಂ ಠಾಣೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಠಾಣೆಯ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಮಾತನಾಡಿ ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತೆಯ ಬಳಿ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ವೃದ್ಧರು ಹಾಗೂ ಮಹಿಳೆಯರ ಮೇಲೆ ವಂಚನೆ ಹೆಚ್ಚಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಕಳೆದ ವರ್ಷವೊಂದೇ ದೇಶದಲ್ಲಿ 11 ಲಕ್ಷ ರೂ. ಸೈಬರ್ ಕ್ರೈಂ ಪ್ರಕರಣ ದಾಖಲಾಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಹೆಚ್ಚಾಗಿ ವಯಸ್ಸಾದವರನ್ನು ಬಲೆಗೆ ಬೀಳಿಸುವ ವಂಚಕರು ಅವರಿಂದ ಹಣ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ಮಹಾನಗರಗಳಲ್ಲಿ ಅತೀ ಹೆಚ್ಚು ಸೈಬರ್ ಕ್ರೈಂ ಪ್ರಕರಣ ದಾಖಲಾಗುತ್ತಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣದ ಬಗ್ಗೆ ಉಲ್ಲೇಖಿಸಿದ್ದು, ಸೈಬರ್ ವಂಚಕರಿಂದ ಆದಷ್ಟು ಸುರಕ್ಷರಾಗಿರಿ ಎಂದು ಹೇಳಿದ್ದರು.
ಇದನ್ನೂ ಓದಿ : Cyber Crime: ಸ್ಟಾಕ್ ಮಾರ್ಕೆಟ್ ತರಬೇತಿ ನೀಡೋದಾಗಿ ನಂಬಿಸಿ 100 ಕೋಟಿ ರೂ. ಪಂಗನಾಮ! ಚೀನಾ ಪ್ರಜೆ ಅರೆಸ್ಟ್