Monday, 25th November 2024

Adani Group: ವಿವಾದದ ಮಧ್ಯೆ ದಾಖಲೆಯ 5 ಲಕ್ಷ ಕೋಟಿ ರೂ. ಆಸ್ತಿ ಘೋಷಿಸಿದ ಅದಾನಿ ಗ್ರೂಪ್

Adani Group

ಹೊಸದಿಲ್ಲಿ: ಭಾರತದ 2ನೇ ಅತಿ ದೊಡ್ಡ ಶ್ರೀಮಂತ ಗೌತಮ್‌ ಅದಾನಿ (Gautam Adani) ವಿರುದ್ಧ ಅಮೆರಿಕದಲ್ಲಿ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಅದಾನಿ ಗ್ರೂಪ್ (Adani Group) ಈ ಹಣಕಾಸು ವರ್ಷದ ಮೊದಲಾರ್ಧ (H1 FY25) ಮತ್ತು 12 ತಿಂಗಳ (Trailing-Twelve-Month-TTM) ಅವಧಿಯ ಫಲಿತಾಂಶಗಳನ್ನು ಪ್ರಕಟಿಸಿದೆ. 2025ರ ಮೊದಲ ತ್ರೈಮಾಸಿಕದಲ್ಲಿ ಕಂಪೆನಿಯು 75,277 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದು, ಒಟ್ಟು ಆಸ್ತಿ ದಾಖಲೆಯ 5.53 ಲಕ್ಷ ಕೋಟಿ ರೂ.ಗೆ ಏರಿದೆ.

2025ರ ಎಚ್ 1 ಹಣಕಾಸು ವರ್ಷದಲ್ಲಿ ಇಬಿಐಟಿಡಿಎ (Earnings Before Interest, Taxes, Depreciation, and Amortization) 44,212 ಕೋಟಿ ರೂ.ಗೆ (ಶೇ. 1.2ರಷ್ಟು ಏರಿಕೆ) ತಲುಪಿದ್ದು, ಟಿಟಿಎಂ ಇಬಿಐಟಿಡಿಎ 83,440 ಕೋಟಿ ರೂ.ಗೆ ತಲುಪಿದೆ (ಶೇ. 17.1 ಶೇಕಡಾ ಏರಿಕೆ) ಎಂದು ಮೂಲಗಳು ತಿಳಿಸಿದೆ.

ಅದಾನಿ ಪವರ್‌ನಲ್ಲಿ ಹಿಂದಿನ ಅವಧಿಯ ಆದಾಯವನ್ನು ಸರಿಹೊಂದಿಸಿದ ನಂತರ ಎಚ್ 1 ಹಣಕಾಸು ವರ್ಷದಲ್ಲಿ ಇಬಿಐಟಿಡಿಎ ಶೇ. 25.5 ಮತ್ತು ಟಿಟಿಎಂ ಶೇ. 34.3ರಷ್ಟು ಹೆಚ್ಚಾಗಿದೆ. ರನ್-ರೇಟ್ ಇಬಿಐಟಿಡಿಎ ಈಗ 88,192 ಕೋಟಿ ರೂ.ಗೆ ತಲುಪಿದೆ ಎಂದು ಗ್ರೂಪ್ ತಿಳಿಸಿದೆ.

“ಎಲ್ಲ ಪೋರ್ಟ್‌ಫೋಲಿಯೊ ಕಂಪೆನಿಗಳು ಕನಿಷ್ಠ ಮುಂದಿನ 12 ತಿಂಗಳವರೆಗೆ ಎಲ್ಲ ಸಾಲ ಸೇವಾ ಅವಶ್ಯಕತೆಗಳನ್ನು ಪೂರೈಸಲು ಸಾಕಷ್ಟು ದ್ರವ್ಯತೆಯನ್ನು ಹೊಂದಿವೆ” ಎಂದು ಮೂಲಗಳು ವಿವರಿಸಿವೆ. ಸೆಪ್ಟೆಂಬರ್‌ಗೆ ಕೊನೆಗೊಂಡ 12 ತಿಂಗಳಲ್ಲಿ ಫಂಡ್ಸ್‌ ಫ್ಲೋ ಫ್ರಂ ಆಪರೇಷನ್ಸ್‌ (FFO) ಹಣದ ಹರಿವು 58,908 ಕೋಟಿ ರೂ.ಗೆ ಏರಿದೆ. ಈ ಮೂಲಕ ಶೇ. 28.4ರಷ್ಟು ಹೆಚ್ಚಳ ದಾಖಲಿಸಿದೆ.

ಇತರ ಉದ್ಯಮಗಳ ಲೆಕ್ಕಾಚಾರ

ಅದಾನಿ ಎಂಟರ್‌ಪ್ರೈಸಸ್‌: ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪ್ರಮಾಣವು ಶೇ. 6ರಷ್ಟು ಏರಿಕೆಯಾಗಿದ್ದರೆ, ಸೌರ ಮಾಡ್ಯೂಲ್ ಮಾರಾಟವು ಶೇಕಡಾ 91ರಷ್ಟು ಹೆಚ್ಚಾಗಿದೆ

ಅದಾನಿ ಗ್ರೀನ್ ಎನರ್ಜಿ: 500 ಮೆಗಾವ್ಯಾಟ್ ಹೈಡ್ರೋ ಪಂಪ್ ಶೇಖರಣಾ ಯೋಜನೆಯ ನಿರ್ಮಾಣ ಪ್ರಾರಂಭವಾಗುವುದರೊಂದಿಗೆ ಕಾರ್ಯಾಚರಣೆಯ ಸಾಮರ್ಥ್ಯವು ಶೇ. 34ರಷ್ಟು ಹೆಚ್ಚಾಗಿದೆ.

ಅದಾನಿ ಎನರ್ಜಿ ಸೊಲ್ಯೂಷನ್ಸ್: ತನ್ನ ಪ್ರಸರಣ ಜಾಲವನ್ನು 2,760 ಸಿಕೆಎಂಗೆ ವಿಸ್ತರಿಸಲಾಗಿದೆ ಮತ್ತು 3 ಹೊಸ ಯೋಜನೆಗಳನ್ನು ಆರಂಭಿಸಲಾಗಿದೆ.

ಅದಾನಿ ಪೋರ್ಟ್ಸ್ ಮತ್ತು ಎಸ್ಇಝಡ್: ಸರಕು ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇ. 9ರಷ್ಟು ಹೆಚ್ಚಾಗಿದೆ.

ಅದಾನಿ ಸಿಮೆಂಟ್ಸ್: ಅದಾನಿ ಸಮೂಹದ ಸಿಮೆಂಟ್ ಸಾಮರ್ಥ್ಯವನ್ನು ವರ್ಷಕ್ಕೆ 97.8 ಮಿಲಿಯನ್ ಟನ್‌ಗಳಿಗೆ ಹೆಚ್ಚಿಸಿವೆ.

ಈ ಸುದ್ದಿಯನ್ನೂ ಓದಿ: Gautam Adani: ಅದಾನಿಗೆ ಮತ್ತೊಂದು ಸಂಕಷ್ಟ; ಅಮೆರಿಕದ ಎಸ್‌ಇಸಿ ನೋಟೀಸ್:‌ “ಉತ್ತರಿಸದೆ ಹೋದಲ್ಲಿ….”