Monday, 25th November 2024

Digital Arrest: ಇಂದೋರ್‌ ಕ್ರೈಂ ಬ್ರಾಂಚ್ ಅಧಿಕಾರಿಯನ್ನೇ ಗುರಿಯಾಗಿಸಿಕೊಂಡು ಕರೆ ಮಾಡಿದ ವಂಚಕರು: ಕೊನೆಗೆ ಆಗಿದ್ದೇನು?

ಇಂದೋರ್‌: ಇತ್ತೀಚಿನ ದಿನಗಳಲ್ಲಿ ಸೈಬರ್‌ ವಂಚನೆಯ ಪ್ರಕರಣ ಅಧಿಕವಾಗುತ್ತಿದೆ. ಅದರಂತೆ ಅರಿವಿಲ್ಲದೆ ಇಂದೋರ್‌ ಕ್ರೈಂ ಬ್ರಾಂಚ್‌ (Indore Crime Branch)ನ ಹೆಚ್ಚುವರಿ ಡಿಸಿಪಿ ರಾಜೇಶ್‌ ದಂಡೋಟಿಯಾ ಅವರನ್ನು ಗುರಿಯಾಗಿಸಿಕೊಂಡು ಕರೆ ಮಾಡಿ ವಂಚಕರು ಬೇಸ್ತು ಬಿದ್ದ ಘಟನೆ ನಡೆದಿದೆ. ಅವರು ಕ್ರೈಂ ಬ್ರಾಂಚ್‌ ಅಧಿಕಾರಿ ಎನ್ನುವುದನ್ನ ತಿಳಿದ ವಂಚಕರು ತಮ್ಮ ಡಿಜಿಟಲ್‌ ಅರೆಸ್ಟ್ (Digital Arrest) ಪ್ರಯತ್ನವನ್ನು ನಿಲ್ಲಿಸಿದ್ದಾರೆ ಎಂದು ʼದಿ ಇಂಡಿಯನ್‌ ಎಕ್ಸ್‌ಪ್ರೆಸ್‌ʼ (The Indian Express) ವರದಿ ಮಾಡಿದೆ.

ಭಾನುವಾರ ಮಧ್ಯಾಹ್ನ 2 ಗಂಟೆ ಸರಿ ಸುಮಾರಿಗೆ ರಾಜೇಶ್‌ ದಂಡೋಟಿಯಾ ಅವರು ತಮ್ಮ ಕಚೇರಿಯಲ್ಲಿದ್ದಾಗ ಈ ಘಟನೆ ನಡೆದಿದ್ದು, ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ “ನೀವು ಕ್ರೆಡಿಟ್‌ ಕಾರ್ಡ್ (Credit Card) ಬಳಸಿ 1,11,930 ರೂ.ಯ ವಂಚನೆಯ ವಹಿವಾಟನ್ನು ನಡೆಸಿದ್ದೀರಿ. ಈ ಕುರಿತು ಎಫ್‌ಐಆರ್ (FIR) ದಾಖಲಿಸಲಾಗಿದೆʼʼ ಎಂದಿದ್ದಾನೆ. ಇನ್ನು 2 ಗಂಟೆಯೊಳಗೆ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಕರೆ ಮಾಡಿದ ವ್ಯಕ್ತಿ ಎಚ್ಚರಿಸಿದ್ದಾನೆ.

ಕರೆ ಮಾಡಿದ ವಂಚಕ ದಂಡೋಟಿಯಾ ಅವರೊಂದಿಗೆ ಮಾತು ಮುಂದುವriಸಿದ್ದಾನೆ. ಆ ವ್ಯಕ್ತಿಯ ಹೇಳಿಕೆಯನ್ನು ರೆಕಾರ್ಡ್‌ ಮಾಡಿಕೊಳ್ಳುವ ಸಲುವಾಗಿ ದಂಡೋಟಿಯಾ ಅವರು ವಿಡಿಯೊ ಕಾಲ್ (Video Call) ಆನ್‌ ಮಾಡಿದ್ದಾರೆ. ವಿಡಿಯೊ ಕಾಲ್‌ನಲ್ಲಿ ವಂಚಕನು ಅವರು ಪೊಲೀಸ್ ಸಮವಸ್ತ್ರದಲ್ಲಿರುವುದನ್ನು ಕಂಡ ಕೂಡಲೇ ಗಾಬರಿಗೊಂಡು ಕರೆಯನ್ನು ಕಟ್‌ ಮಾಡಿದ್ದಾನೆ.

“ವಂಚಕರು ಮೊದಲ ಕರೆಯಲ್ಲಿ ಬ್ಯಾಂಕಿಂಗ್ ಅಧಿಕಾರಿಗಳಂತೆ ನಟಿಸಿದರು. ನಂತರ ಪೊಲೀಸ್ ಅಧಿಕಾರಿಗಳಂತೆ ಮಾತನಾಡಲು ಶುರು ಮಾಡಿದರು. ನಿಮ್ಮ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಈಗಾಗಲೇ ನಿಮ್ಮ ವಿರುದ್ಧ ಎಫ್ಐಆರ್ ಅನ್ನು ದಾಖಲಿಸಲಾಗಿದೆ ಎಂದು ವಂಚಕರಿ ತಿಳಿಸಿದರು” ಎಂಬುದಾಗಿ ದಂಡೋಟಿಯಾ ವಿವರಿಸಿದ್ದಾರೆ.

“ಕರೆ ಮಾಡಿದ ವ್ಯಕ್ತಿ ನಾನು ನನ್ನ ಕ್ರೆಡಿಟ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾಗಿ ಹೇಳಿ ಮುಂಬೈಯ ಅಂಧೇರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ ಎಂದು ಹೇಳಿದನು. ಆ ಸಮಯದಲ್ಲಿ ನಾನು ಪತ್ರಿಕಾಗೋಷ್ಠಿಯಲ್ಲಿದ್ದೆ. ನನ್ನ ಬ್ಯಾಂಕ್ ಖಾತೆಯನ್ನು ಬ್ಲಾಕ್‌ ಮಾಡುವುದಾಗಿ ಹೇಳಿದನು. ಇನ್ನೆರಡು ಗಂಟೆಗಳಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡುವುದಾಗಿ ನಾನು ಹೇಳಿದೆ” ಎಂದು ಅವರು ಹೇಳಿದ್ದಾರೆ.

ದಂಡೋಟಿಯಾ ಅವರು ಹತ್ತು ವರ್ಷಗಳಿಂದ ಮುಂಬೈಗೆ ಹೋಗಿಲ್ಲ. ತಕ್ಷಣವೇ ಅಲ್ಲಿಗೆ ಹೋಗಲು ಕೂಡ ಸಾಧ್ಯವಿಲ್ಲ ಎಂದು ಹೇಳಿದರು. ಅಲ್ಲಿನ ಹಿರಿಯ ಅಧಿಕಾರಿಯೊಂದಿಗೆ ಸಂಪರ್ಕಿಸುವುದಾಗಿ ತಿಳಿಸಿದ್ದರಂತೆ.

ಕರೆ ಮಾಡಿದ ವ್ಯಕ್ತಿಯ ಅಧಿಕೃತ ಹೇಳಿಕೆಯನ್ನು ದಾಖಲಿಸಿಕೊಳ್ಳಲು ದಂಡೋಟಿಯಾ ಮುಂದಾಗಿದ್ದಾರೆ. ಆದರೆ ಆ ವ್ಯಕ್ತಿ ಇವರು ಪೊಲೀಸ್ ಅಧಿಕಾರಿ ಎಂದು ತಿಳಿದೊಡನೆ ಕರೆಯನ್ನು ಕಟ್ ಮಾಡಿದ್ದಾನೆ. “ಈ ರೀತಿಯ ವಂಚನೆಗಳ ಕುರಿತು ಸಾಮಾನ್ಯ ಜನರಿಗೆ ತಿಳಿಸಿ ಅವರಿಗೆ ಅರಿವು ಮೂಡಿಸುವ ಕಾರಣಕ್ಕೆ ನಾನು ಉದ್ದೇಶಪೂರ್ವಕವಾಗಿ ಆ ವ್ಯಕ್ತಿಯೊಂದಿಗೆ ಸಂಭಾಷಣೆಯನ್ನು ಮುಂದುವರಿಸಿದೆ” ಎಂದು ದಂಡೋಟಿಯಾ ʼದಿ ಇಂಡಿಯನ್ ಎಕ್ಸ್‌ಪ್ರೆಸ್‌ʼಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Cyber Crime: ಡಿಜಿಟಲ್‌ ಅರೆಸ್ಟ್‌ ಕೇಸ್‌; ನಿವೃತ್ತ ಇಂಜಿನಿಯರ್‌ಗೆ ಒಂದಲ್ಲ ಎರಡಲ್ಲ..ಬರೋಬ್ಬರಿ 10 ಕೋಟಿ ರೂ. ಪಂಗನಾಮ ಹಾಕಿದ ಖದೀಮರು