Monday, 25th November 2024

Supreme Court: ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’, ‘ಜಾತ್ಯತೀತ’ ಪದ ತೆಗೆದು ಹಾಕಲು ಸುಪ್ರೀಂ ಕೋರ್ಟ್‌ ಅಸಮ್ಮತಿ

Supreme Court

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಸಂವಿಧಾನದ ಪೀಠಿಕೆ (Constitution’s Preamble)ಯಲ್ಲಿ ‘ಸಮಾಜವಾದಿ’ (Socialist), ‘ಜಾತ್ಯತೀತ’ (Secular) ಮತ್ತು ‘ಸಮಗ್ರತೆ’ (Integrity) ಎಂಬ ಪದಗಳನ್ನು ಸೇರಿಸಿದ್ದ 1976ರ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (Supreme Court) ಸೋಮವಾರ (ನ. 25) ವಜಾಗೊಳಿಸಿದೆ.

ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತ ಪದಗಳನ್ನು ಸೇರಿಸುವುದನ್ನು ಪ್ರಶ್ನಿಸಿ ಮಾಜಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ, ವಕೀಲ ವಿಷ್ಣು ಶಂಕರ್ ಜೈನ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ನ. 22ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ಬಗ್ಗೆ ಇಂದು ತೀರ್ಪು ಪ್ರಕಟಿಸಿದೆ. ಈ ಅರ್ಜಿಗಳ ಬಗ್ಗೆ ವಿವರವಾದ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸಿಜೆಐ ಸಂಜೀವ್ ಖನ್ನಾ ಹೇಳಿದ್ದಾರೆ.

ತುರ್ತು ಪರಿಸ್ಥಿತಿಯ ವೇಳೆ 1976ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು 42ನೇ ತಿದ್ದುಪಡಿಯ ಮೂಲಕ ಭಾರತದ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದವನ್ನು ಸೇರಿಸಿದ್ದರು. ಈ ಪದಗಳ ಸೇರ್ಪಡೆಯು ಸಂವಿಧಾನ ಪೀಠಿಕೆಯ ಮೂಲ ಅಳವಡಿಕೆಗೆ ಅಸಮಂಜಸವಾಗಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ವಾದಿಸಿದ್ದರು. ಪದಗಳು ಮೂಲ ಪಠ್ಯದ ಭಾಗವೆಂದು ಸೂಚಿಸುವ ಬದಲು ಅವುಗಳನ್ನು ನಂತರದ ಸೇರ್ಪಡೆಗಳಾಗಿ ಗುರುತಿಸಬೇಕೆಂದು ಅವರು ಸಲಹೆ ನೀಡಿದ್ದರು.

ಸಿಜೆಐ ಸಂಜೀವ್ ಖನ್ನಾ ಹೇಳಿದ್ದೇನು?

ʼ’ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಎರಡು ಪದಗಳನ್ನು 1976ರಲ್ಲಿ ತಿದ್ದುಪಡಿಗಳ ಮೂಲಕ ಸೇರಿಸಲಾಯಿತು ಮತ್ತು ಸಂವಿಧಾನವನ್ನು 1949ರಲ್ಲಿ ಅಂಗೀಕರಿಸಲಾಯಿತು ಎಂಬ ಅಂಶದಲ್ಲಿ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಮರುಪರಿಶೀಲನೆಯ ವಾದಗಳನ್ನು ಒಪ್ಪಿಕೊಂಡರೆ ಅದು ಎಲ್ಲ ತಿದ್ದುಪಡಿಗಳಿಗೆ ಅನ್ವಯಿಸುತ್ತದೆ. ಈ ಬಗ್ಗೆ ವಿವರವಾದ ವಿಚಾರಣೆ ನಡೆಸುವ ಅಗತ್ಯವಿಲ್ಲ” ಎಂದು ಸಿಜೆಐ ಸಂಜೀವ್ ಖನ್ನಾ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ.

ಸಂಘರ್ಷ ಉಂಟು ಮಾಡುವುದಿಲ್ಲ: ಸುಪ್ರೀಂ

ಸಂವಿಧಾನವನ್ನು ತಿದ್ದುಪಡಿ ಮಾಡುವ ಅನುಚ್ಛೇದ 368ರ ಅಡಿಯಲ್ಲಿ ಸಂಸತ್ತಿನ ಅಧಿಕಾರವು ಪೀಠಿಕೆಗೂ ವಿಸ್ತರಿಸುತ್ತದೆ ಎಂದು ನ್ಯಾಯಪೀಠ ಒತ್ತಿ ಹೇಳಿದೆ. ಹಿಂದಿನ ವಿಚಾರಣೆಗಳಲ್ಲಿ ನ್ಯಾಯಾಲಯವು ‘ಸಮಾಜವಾದ’ದ ಅರ್ಥದ ಬಗ್ಗೆ ಉದ್ಬವಿಸಿದ್ದ ಕಳವಳಗಳನ್ನು ಪರಿಹರಿಸಿದೆ. ಭಾರತೀಯ ಸನ್ನಿವೇಶದಲ್ಲಿ ಈ ಪದವು ಖಾಸಗಿ ವಲಯದ ಬೆಳವಣಿಗೆಯೊಂದಿಗೆ ಸಂಘರ್ಷ ಉಂಟು ಮಾಡುವುದಿಲ್ಲ ಎಂದು ದೃಢಪಡಿಸಿತ್ತು.

“ಭಾರತದಲ್ಲಿ ಸಮಾಜವಾದವೆಂದರೆ ಸಂಪನ್ಮೂಲಗಳ ಸಮಾನ ವಿತರಣೆ ಮತ್ತು ಸಮಾನ ಅವಕಾಶ. ಇದು ನಮ್ಮ ದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಖಾಸಗಿ ಉದ್ಯಮಕ್ಕೆ ಅಡ್ಡಿಯಾಗುವುದಿಲ್ಲ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

ಈ ಸುದ್ದಿಯನ್ನೂ ಓದಿ: Supreme Court: ಬುಲ್ಡೋಜರ್‌ ನೀತಿ ಬಗ್ಗೆ ಸುಪ್ರೀಂ ಮತ್ತೆ ಗರಂ; ಯೋಗಿ ಸರ್ಕಾರಕ್ಕೆ ಫುಲ್‌ ಕ್ಲಾಸ್‌!