Monday, 25th November 2024

Israel-Hezbollah: ಮತ್ತೆ ಇಸ್ರೇಲ್‌ ಕೆಣಕಿದ ಹೆಜ್ಬುಲ್ಲಾ; 250 ರಾಕೆಟ್‌ ದಾಳಿ

Israel-Hezbollah

ಬೈರುತ್: ಇಸ್ರೇಲ್‌ ಹಾಗೂ ಹೆಜ್ಬುಲ್ಲಾ (Israel-Hezbollah) ನಡುವೆ ಕದನ ಜೋರಾಗಿದ್ದು, ಸದ್ಯಕ್ಕೆ ನಿಲ್ಲುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ. ಭಾನುವಾರ ಲೆಬನಾನ್‌ನಿಂದ ಹಿಜ್ಬುಲ್ಲಾ, ಇಸ್ರೇಲ್‌ನ ಭೂ ಪ್ರದೇಶಕ್ಕೆ ಸುಮಾರು 250 ರಾಕೆಟ್‌ಗಳ ದಾಳಿ ನಡೆಸಿದೆ (Rockets Attacks On Isreal). ಡೆಡ್ಲಿ ಡ್ರೋನ್‌ ಹಾಗೂ ಇತರ ಸ್ಫೋಟಕಗಳಿಂದ ಇಸ್ರೇಲ್‌ ಮೇಲೆ ಆಕ್ರಮಣ ಮಾಡಿದೆ ಎಂದು ವರದಿ ತಿಳಿಸಿದೆ.

ಹೆಜ್ಬುಲ್ಲಾ ನಡೆಸಿದ ಈ ದಾಳಿಯಲ್ಲಿ ಸಾವು-ನೋವು ಸಂಭವಿಸದಿದ್ದರೂ 7-8 ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇಸ್ರೇಲ್‌ ಪ್ರಮುಖ ನಗರವಾದ ಟೆಲ್ ಅವಿವ್ ಮತ್ತು ದಕ್ಷಿಣ ಇಸ್ರೇಲ್ ಸೇರಿದಂತೆ ಇತರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈ ದಾಳಿಯನ್ನು ನಡೆಸಲಾಗಿದೆ. ಇತ್ತೀಚೆಗೆ ಇಸ್ರೇಲ್‌ ಬೈರೂತ್‌ ನಗರದ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಹಿಜ್ಬುಲ್ಲಾ ಈ ಪ್ರತಿದಾಳಿ ನಡೆಸಿದೆ. 

ವರದಿಯ ಪ್ರಕಾರ, ಹೆಜ್ಬೊಲ್ಲಾ ಹಾರಿಸಿದ ಕೆಲವು ರಾಕೆಟ್‌ಗಳನ್ನು ಇಸ್ರೇಲ್‌ ವಾಯು ಸೇನೆ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿವೆ. ಆದರೆ ಕೆಲ ರಾಕೆಟ್‌ಗಳು ಕೇಂದ್ರ ಇಸ್ರೇಲ್‌ನಲ್ಲಿನ ಮನೆಗಳಿಗೆ ಹಾನಿಯನ್ನುಂಟು ಮಾಡಿವೆ. ಕೆಲವು ಸ್ಪೋಟಕಗಳು ಇಸ್ರೇಲ್‌ನ ಹೃದಯ ಭಾಗದಲ್ಲಿರುವ ಟೆಲ್ ಅವಿವ್ ಪ್ರದೇಶವನ್ನು ತಲುಪಿತ್ತು ಎಂದು ತಿಳಿದು ಬಂದಿದೆ.

ದಕ್ಷಿಣ ಇಸ್ರೇಲ್‌ನ ಅಶ್ಡೋಡ್ ನೌಕಾ ನೆಲೆ, ಗ್ಲಿಲೋಟ್ ಸೇನಾ ಗುಪ್ತಚರ ನೆಲೆ ಹಾಗೂ ಟೆಲ್‌ ಅವಿವ್‌ನ ಮಿಲಿಟರಿ ಕ್ಯಾಂಪ್‌ಗಳ ಮೇಲೆ ಇದೇ ಮೊದಲ ಬಾರಿಗೆ ವೈಮಾನಿಕ ದಾಳಿ ನಡೆಸಿರುವುದಾಗಿ ಹಿಜ್ಬುಲ್ಲಾ ಉಗ್ರರ ಗುಂಪು ಹೇಳಿಕೊಂಡಿದೆ. ಈ ಬೆನ್ನಲ್ಲೇ ಇಸ್ರೇಲ್‌ ಮೇಲೆ ಹಿಜ್ಬುಲ್ಲಾ ಈವರೆಗೆ ನಡೆಸಿದ ದಾಳಿಗಳ ಪೈಕಿ ಅತಿದೊಡ್ಡ ದಾಳಿ ಎಂದು ಇಸ್ರೇಲಿ ಮಿಲಿಟರಿ ಪಡೆಗಳು ಖಚಿತಪಡಿಸಿವೆ. ಹೆಜ್ಬುಲ್ಲಾ ನಡೆಸಿದ ರಾಕೆಟ್‌ ದಾಳಿಯನ್ನು ಖಚಿತ ಪಡಿಸಿದ ಇಸ್ರೇಲ್‌ ವಿದೇಶಾಂಗ ಇಲಾಖೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

2023ರ ಅಕ್ಟೋಬರ್‌ನಿಂದ ಇಸ್ರೇಲ್‌ ಹಾಗೂ ಹೆಜ್ಬುಲ್ಲಾ ನಡುವೆ ಲೆಬನಾನ್‌ನಲ್ಲಿ ಆರಂಭವಾದ ಸಂಘರ್ಷದಲ್ಲಿ ಕನಿಷ್ಠ 3,754 ಜನ ಮೃತ ಪಟ್ಟಿದ್ದಾರೆ. ಇಲ್ಲಿಯವರೆಗೆ 82 ಸೈನಿಕರು ಮತ್ತು 47 ನಾಗರಿಕರು ಅಸುನೀಗಿದ್ದಾರೆ ಎಂದು ಇಸ್ರೇಲ್‌ ಸರ್ಕಾರ ಹೇಳಿಕೆ ನೀಡಿದೆ.

ಇದನ್ನೂ ಓದಿ: Israel Airstrike: ಇರಾನ್‌ ಮೇಲೆ ಇಸ್ರೇಲ್‌ ಎರಡನೇ ಏರ್‌ಸ್ಟ್ರೈಕ್‌; ಇಲ್ಲಿದೆ ಭೀಕರ ದಾಳಿಯ ವಿಡಿಯೋ