ತನ್ನಿಮಿತ್ತ
ಪ್ರೊ.ಶ್ರೀನಿವಾಸ ಮೂರ್ತಿ ಎನ್.ಸುಂಡ್ರಹಳ್ಳಿ
ಕೀರ್ತನ ಸಾಹಿತ್ಯವೆಂದರೆ ನೆನಪಾಗುವುದೇ ದಾಸರು. ದಾಸರೆಂದರೆ ನೆನಪಾಗುವುದೇ ಕನಕದಾಸರು ಮತ್ತು ಪುರಂದರ ದಾಸರು. ಇವರಲ್ಲಿ ಕನಕದಾಸರಿಗೆ ವಿಶಿಷ್ಟ ಸ್ಥಾನವಿದೆ.
ಕೀರ್ತನಕಾರರಾಗಿ, ಕವಿಗಳಾಗಿ; ಸಾಹಿತ್ಯ, ಸಂಗೀತ, ಅಧ್ಯಾತ್ಮ, ಸಮಾಜ, ಧರ್ಮ ಹೀಗೆ ಹಲವು ಸ್ತರಗಳಲ್ಲಿ ಕನಕದಾಸರ ಸೇವೆ ಸ್ತುತ್ಯರ್ಹ ಕರ್ನಾಟಕದ ಮಟ್ಟಿಗೆ 15 ಮತ್ತು 16ನೇ ಶತಮಾನ ದಾಸರಯುಗ ಎಂದೇ ದಾಖಲಾಗಿದೆ. ದಾಸ ಪರಂಪರೆಯಲ್ಲಿ
ಬರುವ ಸುಮಾರು 250ಕ್ಕೂ ಹೆಚ್ಚು ದಾಸರಲ್ಲಿ ಪ್ರಮುಖರಾದವರು ಪುರಂದರದಾಸರು ಮತ್ತು ಕನಕದಾಸರು.
ಅದರಲ್ಲೂ ಶ್ರೇಷ್ಠ ದಾಸರು ಮತ್ತು ಶೂದ್ರ ದಾಸರು ಎಂದರೆ ಕನಕದಾಸರು ಮಾತ್ರವೇ ಎಂಬುದು ವಿಶಿಷ್ಟ. ಲೌಖಿಕ ಜೀವನದಲ್ಲಿ ತನಗೆ ಒದಗಿ ಬಂದದ್ದೆಲ್ಲವನ್ನೂ ಇತರರಿಗೆ ದಾನ ಮಾಡಿದ, ಹರಿಯ ಸೇವಕನಾಗಿ ದಾಸರ ಮನೆಯ ದಾಸಾನುದಾಸ ಎಂದು
ಭಕ್ತಿಯಿಂದ ಹಾಡಿದ, ಆ ಮೂಲಕ ತನ್ನಿಡೀ ಬದುಕನ್ನೇ ಹರಿಯ ಸೇವೆಗಾಗಿ ಮುಡುಪಿಟ್ಟು ಹರಿಯ ಶ್ರೀಮುದ್ರೆೆಯೇ ನನಗೆ
ಆಭರಣ ಎಂದು ಧನ್ಯತಾ ಭಾವದಿಂದ ಮುಕ್ತಿ ಪಡೆದ ವ್ಯಕ್ತಿ ಕನಕದಾಸ.
12ನೇ ಶತಮಾನದಲ್ಲಿ ಬಸವೇಶ್ವರರು ವಚನಗಳ ಮೂಲಕ ಜಾತಿ ಭೇದಗಳಿಂದ ಜಡ್ಡುಗಟ್ಟಿದ್ದ ಸಮಾಜವನ್ನು ತಿದ್ದುವ ಕೆಲಸ ಮಾಡಿದರೆ ಕನಕದಾಸರು ಕೀರ್ತನೆಗಳ ಮೂಲಕ ಆ ಕೆಲಸವನ್ನು ಮಾಡುತ್ತಾರೆ. ಏಕ ಕಾಲಕ್ಕೆ ಕವಿಯಾಗಿಯೂ ಮತ್ತು ದಾರ್ಶನಿಕ ನಾಗಿಯೂ ಜೀವಿಸಿದ್ದ ಕನಕದಾಸರ ಮೂಲ ಹೆಸರು ತಿಮ್ಮಪ್ಪ. ಬಂಕಾಪುರದ ಬಾಡ ಗ್ರಾಮದ ಬೀರೇಗೌಡ ಮತ್ತು ಬಚ್ಚಮ್ಮರ ಏಕಮಾತ್ರ ಪುತ್ರ ತಿಮ್ಮಪ್ಪ. ಈತ ಜನಿಸಿದ್ದು ಇವರ ತಾಯಿಯ ತವರೂರಾದ ಕುಮ್ಮೂರಿನಲ್ಲಿ.
ಕುಮ್ಮೂರಿನಲ್ಲಿ ಜನಿಸಿ, ಬಾಡದಲ್ಲಿ ಬೆಳೆದು, ಜಯನಗರದಲ್ಲಿ ಬಾಳಿದ ಈತನ ತಂದೆ ಬೀರಪ್ಪ ನಾಯಕ/ ಬೀರೇ ಗೌಡ 75 ಹಳ್ಳಿಗಳ ಪಾಳೇಗಾರನಾಗಿದ್ದವನು. ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿದ್ದ ಈ ದಂಪತಿಗೆ ಬಹು ವರ್ಷಗಳ ಕಾಲ ಮಕ್ಕಳಿರ ಲಿಲ್ಲ. ಆ ನಂತರ ಅವನ ಅನುಗ್ರಹದಿಂದ ಹುಟ್ಟಿದ ಮಗುವಿಗೆ ತಿಮ್ಮಪ್ಪ ಎಂದು ನಾಮಕರಣ ಮಾಡಿದ್ದರು. ತಮ್ಮ ಒಬ್ಬನೇ ಮಗನಾಗಿದ್ದ ತಿಮ್ಮಪ್ಪನಿಗೆ ಕನ್ನಡ, ಸಂಸ್ಕೃತ, ವ್ಯಾಕರಣ, ರಾಮಾಯಣ, ಮಹಾಭಾರತ, ಭಾಗವತ, ವೇದ ಪುರಾಣ ಮುಂತಾ ದವುಗಳ ಶಿಕ್ಷಣ ಕೊಡಿಸಿದ್ದರು.
ಕಾವ್ಯರಚನೆಯನ್ನೂ ಕೂಡ ಕರಗತವಾಗಿಸಿಕೊಂಡಿದ್ದರು. ಅದು ಆತ ರಚಿಸಿರುವ ಕೀರ್ತನೆಗಳು, ಉಗಾಭೋಗಗಳು, ಡೊಳ್ಳು ಪದ, ಮುಂಡಿಗೆ, ಉದಯರಾಗ ಅಲ್ಲದೆ ದ್ವಿಪದಿ, ತ್ರಿಪದಿ, ಚೌಪದಿ, ಷಟ್ಪದಿ ಸಾಂಗತ್ಯ ಮುಂತಾದ ಕಾವ್ಯಶೈಲಿಯಲ್ಲಿರುವ ಕೃತಿಗಳಿಂದ ವ್ಯಕ್ತವಾಗುತ್ತದೆ. ಇಷ್ಟೇ ಅಲ್ಲದೇ ಸಂಗೀತ, ಯುದ್ಧ ಕಲೆ, ಶಾಸ್ತ್ರ – ತರ್ಕಗಳಲ್ಲಿಯೂ ಕೂಡ ತರಬೇತಿ ಸಿಕ್ಕಿತ್ತು.
ತಾನಿನ್ನೂ ಅಪ್ರಾಪ್ತನಾಗಿರುವಾಗಲೇ ಹೆತ್ತವರನ್ನು ಕಳೆದುಕೊಂಡಿದ್ದ ತಿಮ್ಮಪ್ಪನ ಆಸ್ತಿಯನ್ನು ದೋಚುವ ಮೂಲಕ ಈತನ
ಸಂಬಂಧಿಗಳು ದ್ರೋಹವೆಸಗಿ ಬಿಟ್ಟರು ಎಂಬುದು ಐತಿಹ್ಯ. ಈ ಬಗ್ಗೆ ತಿಮ್ಮಪ್ಪ ನೊಂದುಕೊಂಡವನೇ ಅಲ್ಲ. ಒಮ್ಮೆ ಗೃಹ
ನಿರ್ಮಾಣಕ್ಕೆಂದು ಭೂಮಿ ಅಗೆಯುವಾಗ ಸಿಕ್ಕ ಅಪಾರವಾದ ನಿಧಿಯನ್ನು ದೀನ ದಲಿತರಿಗೆ ನಿಸ್ವಾರ್ಥದಿಂದ ಹಂಚಿಬಿಡುವ
ಮೂಲಕ ತಿಮ್ಮಪ್ಪ ನಾಗಿದ್ದವನು ಜನರ ಬಾಯಲ್ಲಿ ಕನಕಪ್ಪನಾದರು.
ಆ ದೀನ ದಲಿತರಲ್ಲಿ ತನ್ನ ಇಷ್ಟ ದೈವ ಆದಿಕೇಶವನನ್ನು ಕಾಣುವ ಮೂಲಕ ಬಾಹ್ಯಾ ಶ್ರೀಮಂತಿಕೆಗಿಂತ ಅಂತರಂಗದ
ಶ್ರೀಮಂತಿಕೆಯೇ ಶ್ರೇಷ್ಠ ಎಂದು ಸಾರಿದ ಇವರು, ಇರುವ ಸಂಪತ್ತನ್ನು ಅವಶ್ಯವಿದ್ದವರಿಗೆ ಹಂಚದೇ ಬಚ್ಚಿಡುವುದು ಹೀನ
ವೃತ್ತಿ ಎಂಬುದನ್ನು ತನ್ನ ನಡೆ ನುಡಿಯಲ್ಲಿ ಪ್ರತಿಪಾದಿಸಿದರು. ಈ ಮುಂದಿನ ಸಾಲುಗಳನ್ನು ಗಮನಿಸಿದರೆ ಅದು ಅರಿವಾಗುತ್ತದೆ.
ದಾನ ಧರ್ಮವ ಮಾಡಿ ಸುಖಿಯಾಗು ಮನವೇ ಹೀನ ವೃತ್ತಿಯಲಿ ನೀ ಕೆಡಬೇಡ ಮನವೇ. ಈತನಿನ್ನೂ ಕನಕದಾಸನಾಗುವ ಮುಂಚೆ ವಿಜಯ ನಗರ ಸಾಮ್ರಾಜ್ಯದ ಅರಸ ವೀರಸಿಂಹನಿಂದ ಬಂಕಾಪುರದ ಡಣ್ಣಾಯಕ(ದಳಪತಿ)ನಾಗಿ ನೇಮಕಗೊಂಡಿ ದ್ದನು.
ಯುದ್ಧದಲ್ಲಿಯೂ ಪಾಲ್ಗೊಂಡಿದ್ದ. ಇದಕ್ಕೆ ನಿದರ್ಶನ ಕನಕ ದಳದಲಿ ಬಂದು ಫೌಜು ಕಲೆತನೆಂದರೆ ಕನಕ ಮನಕಾಗುವುದು ಹರಿಯೇ ಎಂದು ಹಾಡಿದ್ದಾರೆ. ಇವರು ನಿರ್ವಹಿಸಿದ ಡಣ್ಣಾಯಕ ಹುದ್ದೆ ಮತ್ತು ಆತ ಮಾಡಿದ ಯುದ್ಧವೇ ಮುಂದೆ ಈತನನ್ನು ಹರಿದಾಸನನ್ನಾಗಿಸಿತು ಎಂದರೆ ತಪ್ಪಾಗದು. ಇದು ಕನಕರೇ ರಚಿಸಿರುವ ಈ ಹಾಡಿನಲ್ಲಿ ಈ ರೀತಿ ವ್ಯಕ್ತಗೊಂಡಿದೆ. ದೊರೆತನವ ಬಿಡಿಸಿ ಸುಸ್ಥಿರ ಮಾರ್ಗವ ತೋರಿದೆ ನರಮಾತ್ರದವನೆನದೆ ಹರಿಯೆ !
ಪರಬಲವ ನೋಡಿದರೆ ಉರಿದುರಿದು ಬೀಳ್ವ ಮನ ಸೆರೆ ಹಾಕಿ ನಿಲ್ಲಿಸಿದೆಯೋ ಶ್ರೀಹರಿಯೇ ಎಂದು ತನ್ನಲ್ಲಿದ್ದ ಶೌರ್ಯಕ್ಕೆ ಕಡಿವಾಣ ಹಾಕಿದ ಶ್ರೀ ಹರಿಯನ್ನು ಸ್ಮರಿಸುತ್ತಾನೆ. ಡಣ್ಣಾಯಕನಾಗಿ ಕನಕಪ್ಪ ನಾಯಕ ಎನಿಸಿಕೊಂಡಿದ್ದವನು ದಾಸನಾಗಿ ಹೊರ ಹೊಮ್ಮಿದ ಕತೆ ಇದೆಯಲ್ಲ, ಅದು ತುಂಬಾ ರೋಮಾಂಚನಕಾರಿಯಾದುದು. ‘ಬಂಕಾಪುರ ಪ್ರಾಂತ್ಯದ ಸೈನ್ಯದ ದಳಪತಿ ಯಾಗಿದ್ದ ಈತ ಕದನ ವೊಂದರಲ್ಲಿ ತೀವ್ರವಾಗಿ ಗಾಯಗೊಂಡು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರಬೇಕಾದರೆ, ಅವನ ಇಷ್ಟ ದೈವ ವಾದ ಆದಿಕೇಶವನು ಕನಸಲ್ಲಿ ಪ್ರತ್ಯಕ್ಷನಾಗಿ ಹರಿಯ ಸೇವಕನಾಗುವಂತೆ ಆದೇಶಿಸಿದನಂತೆ.
ಅಂದಿನಿಂದ ಶ್ರೀ ಹರಿಯ ದಾಸ(ಸೇವಕ)ನಾದ ಎಂಬುದು ಐತಿಹ್ಯ. ಇದಕ್ಕೆ ಇಂಬು ನೀಡುವಂತೆ ಕನಕರೇ ಹೀಗೆ ಬರೆದುಕೊಂಡಿ ದ್ದಾರೆ. ರಣದೊಳಗೆ ಅಂಗಾಂಗ ಖಂಡ ತುಂಡಾಗಿ ಪ್ರತಿ ರಣವನುತ್ತರಿಸಿ ಮರಣ ತಾಳಿರೆ ಪ್ರಣವ ಗೋಚರ ನೀನು ಗೋಚರಿಸಿ ಬಂದೆನ್ನ ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮನೆ ದಾಸರಾಗಿ ರೂಪುಗೊಂಡ ಮೇಲೆ ತಿರುಪತಿಯಲ್ಲಿನ ತಿರುಮಲ ತಾತಾ ಚಾರ್ಯರಿಂದ ಹರಿದಾಸ ದೀಕ್ಷೆ ಪಡೆದರು. ಆ ನಂತರ ವಿಜಯನಗರದ ಅರಸ ಶ್ರೀಕೃಷ್ಣ ದೇವರಾಯನ ಗುರುಗಳಾಗಿದ್ದ ವ್ಯಾಸ ರಾಯರಿಂದ ಮಂತ್ರೋಪದೇಶ ಪಡೆದು ಅವರ ಶಿಷ್ಯರಾಗಿ ಮಧ್ವ ತತ್ತ್ವಶಾಸ್ತ್ರವನ್ನು ಕಲಿತರು. ಆತ್ಮ ಮತ್ತು ಪರಮಾತ್ಮ ಎರಡೂ ಒಂದೇ ಅಲ್ಲ ಅವೆರಡೂ ಬೇರೆ ಬೇರೆ ಎಂದು ಸಾರಿದ ದ್ವೆೆತ ಸಿದ್ಧಾಂತವನ್ನು ಅಭ್ಯಸಿಸಿದರು.
ಕೀರ್ತನೆಗಳನ್ನು ರಚಿಸಿ ತಂಬೂರಿ ಹಿಡಿದು ಹಾಡುತ್ತಲೇ ಹರಿಭಕ್ತಿಯ ಪರಾಕಾಷ್ಠೆಯನ್ನು ತಲುಪುತ್ತಿದ್ದವರು ಕನಕದಾಸರು.
ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆ ದೊರಕಿತೀ ಗುರುಸೇವೆ ಹರಿಯೇ. ಎಂಬ ರಚನೆಯನ್ನು ಗಮನಿಸಿದರೆ ಅವರು ಭಕ್ತಿಯ ಔನತ್ಯವನ್ನು ಮುಟ್ಟುವಲ್ಲಿ ತನ್ನ ಗುರು ವ್ಯಾಸರಾಯರ ಮಾರ್ಗದರ್ಶನ ಹಾಗೂ ಅವರು ಗುರುವಿನೆಡೆಗೆ ಹೊಂದಿದ್ದ
ಧನ್ಯತೆಯನ್ನು ಅರಿಯ ಬಹುದು. ಗುರುಗಳಿಗೆ ಇತರ ಶಿಷ್ಯರಿಗಿಂತ ಕನಕರನ್ನು ಕಂಡರೆ ಒಂದು ಹಿಡಿ ಪ್ರೀತಿ ಜಾಸ್ತಿಯೇ ಇತ್ತು ಹಾಗೂ ಅದನ್ನು ಸಹಿಸದವರೂ ಇದ್ದರು.
ಕನಕದಾಸನ ಮೇಲೆ ದಯಮಾಡಲು ವ್ಯಾಸಮುನಿ ಮಠದವರೆಲ್ಲ ದೂರಿಕೊಂಬರೋ ಎಂಬ ಪುರಂದರ ದಾಸರ ಈ ಸಾಲು ಗಳನ್ನು ಗಮನಿಸಿದಲ್ಲಿ ಮಠದಲ್ಲಿಯೂ ಕೂಡ ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳಿದ್ದವು, ವ್ಯಾಸರಾಯರು ಕನಕರ ಬಗ್ಗೆ ತೋರಿದ ವಿಶೇಷ ಕಾಳಜಿಯನ್ನು ಅವು ಸಹಿಸಲಾಗದೇ ಹೋಗಿದ್ದವು ಎಂಬುದು ವೇದ್ಯವಾಗುತ್ತದೆ.
ಹನ್ನೆರಡನೇ ಶತಮಾನದ ಬಸವಣ್ಣನವರ ವಚನ ಗಳಂತೆ ತಮ್ಮ ಕೀರ್ತನೆಗಳ ಮುಖಾಂತರವೇ ಸಮಾಜದ ಅಂಕು ಡೊಂಕು ಗಳತ್ತ ತೀಕ್ಷ್ಣ ನೋಟ ಬೀರಿದವರು ಮತ್ತು ಆ ಮೂಲಕ ಜಾತಿಭೇದವನ್ನು ಬಲವಾಗಿ ಖಂಡಿಸಿದವರು ಕನಕರು. ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಆತ್ಮ ಯಾವ ಕುಲ, ಜೀವ ಯಾವ ಕುಲ? ಆತನೊಲಿದ ಮೇಲೆ ಯಾತರ ಕುಲವಯ್ಯ? ಎಂದು ಭಾರತೀಯ ಸಮಾಜದಲ್ಲಿ ಶತ ಶತಮಾನಗಳಿಂದ ನೆಲೆಯೂರಿದ್ದ ಅಸಮಾನತೆಯ ನಡೆಯನ್ನು ಪ್ರಶ್ನಿಸುವ ಮೂಲಕ ಸಾಮಾಜಿಕ ನ್ಯಾಯ ಪ್ರತಿಪಾದನೆ ಗೆ ಮುಂದಾದವರು. ಈ ಕೀರ್ತನೆಯಲ್ಲಿ ಕುಲಕ್ಕಾಗಿ ಕಚ್ಚಾಡುವವರನ್ನು ಸೌಮ್ಯವಾಗಿ ಪ್ರಶ್ನಿಸುತ್ತಾರೆ.
ಆತನೊಲಿದ ಮೇಲೆ ಯಾತರ ಕುಲವಯ್ಯ? ಎಂದು ಪ್ರಶ್ನಿಸುವ ಮೂಲಕ ಕುಲ ಗೋತ್ರಗಳನ್ನು ಮೀರಿ ನಿಂತ ಕನಕದಾಸರು
‘ಕುಲವಿಲ್ಲದ ದಾಸ ಕುರುಬದಾಸ’ ಎನ್ನುತ್ತಾರೆ. ನಾವು ಕುರುಬರೋ ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರ ಕುರಿ ಹಿಂಡು ಗಳ, ಎಂದು ಹಾಡುತ್ತಾರೆ, ಆ ಮೂಲಕ ಇಡೀ ಜನಸಮೂಹವನ್ನು ಕುರಿಗಳಿಗೆ ಹೋಲಿಕೆ ಮಾಡಿ ಸೃಷ್ಟಿಯನ್ನು ಕಾಯುವ ದೇವ ರನ್ನು ತನ್ನ ಅಜ್ಜನಂತೆಯೇ ಕಾಣುವ ಅಪ್ಯಾಯಮಾನತೆಯನ್ನು ವ್ಯಕ್ತಪಡಿಸಿರುವುದು ಕನಕರ ಭಕ್ತಿ ವಿಶಿಷ್ಟತೆ. ಇವರು ರಚಿಸಿ ರುವ ದೀರ್ಘ ಕೃತಿಗಳೆಂದರೆ ‘ರಾಮಧಾನ್ಯ ಚರಿತೆ, ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಸಾರ, ನೃಸಿಂಹಾಷ್ಟವ’ ಮುಂತಾ ದವುಗಳು. ಇವುಗಳಲ್ಲಿ ಬಹಳ ಪ್ರಮುಖವಾದವುಗಳು ರಾಮಧಾನ್ಯ ಚರಿತೆ ಮತ್ತು ಹರಿಭಕ್ತಸಾರ.
ಭಾಮಿನಿ ಷಟ್ಪದಿಯಲ್ಲಿ ರಚನೆ ಯಾಗಿರುವ ರಾಮಧಾನ್ಯ ಚರಿತೆಯು 156 ಪದ್ಯಗಳಿಂದ ಕೂಡಿದ್ದು ಅದರಲ್ಲಿ ಅವರು ಸಮಾಜದ ಸಮತೆಯೆಡೆಗೆ ಹೊಂದಿದ್ದ ಧೋರಣೆಯನ್ನು ಮತ್ತು ಅವರ ಸಮಾಜಮುಖಿ ನಿಲುವನ್ನು ಗುರುತಿಸ ಬಹುದು. ಸಮಾಜದ ಎರಡು ವರ್ಗಗಳ ನಡುವಿನ ತಿಕ್ಕಾಟ, ಯಾವುದು ಗಟ್ಟಿ ಮತ್ತು ಯಾವುದು ಪೊಳ್ಳು ಎಂಬುದನ್ನು ನಿರೂಪಿಸಲು ಕನಕರು ಆರಿಸಿ ಕೊಂಡಿರುವ ವಸ್ತುವಿಷಯವೇ ತುಂಬಾ ವಿಶಿಷ್ಟತೆಯಿಂದ ಕೂಡಿರುವಂಥದ್ದು. ಶ್ರೀರಾಮ ರಾವಣನನ್ನು ಸಂಹರಿಸಿ ಹಿಂದಿರುಗು ವಾಗ ಗೌತಮ ಮಹರ್ಷಿಯು ರಾಮನಿಗೆ ಔತಣಕೂಟವನ್ನು ಏರ್ಪಡಿಸಿರುತ್ತಾನೆ.
ಅಂದಿನ ಅಡುಗೆಯನ್ನು ನರೆದಲಗ (ರಾಗಿ), ವ್ರಿಹಿಗರ (ಭತ್ತ), ಬರಗು, ಜೋಳ, ಕಂಬ, ನವಣೆ, ಸಾಮೆ, ಹಾರಕ, ಗೋಧಿ ಈ ಒಂಬತ್ತು ಧಾನ್ಯಗಳಿಂದ ತಯಾರಿಸಿರುತ್ತಾರೆ. ಇವುಗಳಲ್ಲಿ ಯಾವುದು ಶ್ರೇಷ್ಠ ಎಂದು ರಾಮ ಪ್ರಶ್ನಿಸಿದಾಗ ಅಲ್ಲಿನ ಮಹರ್ಷಿಗಳು ಒಂದೊಂದರ ಮಹತ್ವವನ್ನು ವಿವರಿಸುತ್ತಾ ಹೋಗುತ್ತಾರೆ. ಆಗ ನರೆದಲೆಗ ಮತ್ತು ವ್ರಿ ಹಿಗರ ನಡುವೆ ತಮ್ಮ ತಮ್ಮ ಶ್ರೇಷ್ಠತೆ ಯನ್ನು ಪ್ರತಿಪಾದಿಸಲು ನಡೆಯುವ ವಾಗ್ವಾದ ವೇ ರಾಮಧಾನ್ಯ ಚರಿತೆ. ಈ ಕಥಾವಸ್ತುನಲ್ಲಿ ನರೆದಲೆಗ ಬಡವ/ ಶೋಷಿತ ವರ್ಗವನ್ನು ಪ್ರತಿನಿಧಿಸಿದರೆ ವ್ರಿಹಿಗ ಮೇಲ್ವರ್ಗವನ್ನು ಪ್ರತಿನಿಧಿಸುತ್ತದೆ.
‘ಏನೆಲವೋ ನರೆದಲೆಗ’ ಎಂದು ವ್ರಿಹಿಗ ಆಡುವ ಅಹಂಕಾರದ ಮಾತಿನಿಂದಲೇ ಚರಿತೆ ಆರಂಭವಾಗುತ್ತದೆ. ‘ನೀ ಶೂದ್ರಾನ್ನ’ ಎಂದು ಟೀಕಿಸುತ್ತಲೇ ಕ್ಷಿತಿಯಮರರುಪನ ಯನದಲಿ /ಸುವ್ರತ ಸುಭೋಜನಗಳಲಿ/ ಮಂತ್ರಾಕ್ಷತೆಗಳಲಿ/ ಶುಭಶೋಭಾನದವ ರಾತಿಯ ಬೆಳಗುವಲಿ/ ಕ್ರತುಗಳೆಡೆಯೋಳ ರಮನೆಗಳಲಿ/ ಪ್ರತಿದಿನವು ರಂಜಿಸುತ ದೇವರಿಗತಿಶಯದ ನೈವವೇದ್ಯವಾಗಿ ಹೆನೆಂದ ನಾವ್ರಿ ಹಿಗ ಎಂದು ಹೊಗಳಿಕೊಳ್ಳುತ್ತಾ;ನಾನು ಶ್ರೇಷ್ಠ, ನೀನು ಭ್ರಷ್ಟ ನನ್ನ ಕಣ್ಣಿಗೆ ಕಾಣದಂತೆ ತೊಲಗು’ ಎನ್ನುವ ಮೂಲಕ ತಾನು ಉತ್ತಮ ಕುಲದವನೆಂಬ ಅಹಂನ್ನು ಪ್ರದರ್ಶಿಸುತ್ತದೆ.
ಬಡವರಿಗೆ ಪ್ರಿಯವಾದ ಸಮಾನತಾವಾದಿ ನರೆದಲೆಗ ಹೇಳುತ್ತೆ ಬಡವರನ್ನು ಕಣ್ಣೆತ್ತಿಯೂ ನೋಡದ, ಧನಿಕರನ್ನು ಬೆಂಬತ್ತಿ ನಡೆವ ನಿನ್ನ ಜನ್ಮ ನಿರರ್ಥಕ. ನಿನ್ನೊೊಡನೆ ನನಗೇನು ಮಾತು ಹೋಗು ಎನ್ನುವಲ್ಲಿ ರಾಗಿಯ ಸ್ವಾಭಿಮಾನ, ಬಡವರ ಪರವಾದ ನಿಲುವನ್ನು ಕಾಣುತ್ತೇವೆ. ಆಗ ಮಧ್ಯೆ ಪ್ರವೇಶಿಸುವ ರಾಮ ಇಬ್ಬರ ಯೋಗ್ಯತೆಯನ್ನು ಅಳೆಯಲು ಇಬ್ಬರನ್ನೂ ಸೆರೆಮನೆಗೆ ತಳ್ಳಿ ಆರು ತಿಂಗಳ ನಂತರ ಕಂಡಾಗ ವ್ರಿಹಿಗ ಸೊರಗಿದ್ದ ಮತ್ತು ನರೆದಲೆಗ ಆರೋಗ್ಯದಿಂದ ಹೊಳೆಯುತ್ತಿದ್ದ. ಇದನ್ನು ಕಂಡ ರಾಮ ನರೆದಲೆಗನಿಗೆ ‘ರಾಘವ’ ಎಂಬ ಹೆಸರು ನೀಡಿ ‘ಸಾರ ಹೃದಯನು ನರೆದಲೆಗ, ನಿಸ್ಸಾರ ನೀ ವ್ರಿಹಿಗ, ಎಲ್ಲ ನವಧಾನ್ಯದಲ್ಲಿ ಈತನೇ ಬಲ್ಲಿದನು’ ಎಂದು ಶಹಬ್ಬಾಷ್‌ಗಿರಿ ಕೊಡುತ್ತಾನೆ.
ಒಟ್ಟಾರೆ ರಾಮಧಾನ್ಯ ಚರಿತೆಯು ಅಂದಿನ ಶೂದ್ರ ಮತ್ತು ಸವರ್ಣೀಯರ ನಡುವಿನ ವರ್ಗ ಸಂಘರ್ಷವನ್ನು ಪರೋಕ್ಷವಾಗಿ ಹೇಳುತ್ತಿದೆ. ಮನುಷ್ಯ ತನ್ನ ಬದುಕಲ್ಲಿ ಮೆರೆಯ ಬೇಕಾದ ಮೌಲ್ಯಗಳ ಆಶಯದ ಹಾಗೂ ಸಮಾನತೆಯ ಆದರ್ಶವನ್ನು ಎತ್ತಿ ಹಿಡಿದಿರುವ ದೃಷ್ಟಿಯಿಂದ ರಾಮಧಾನ್ಯ ಚರಿತೆ ಪ್ರಮುಖ ವಾದುದೆನ್ನಿಸಿದೆ. ಅಲ್ಲದೆ ಇಂದಿನ ಬಂಡಾಯ ಸಾಹಿತ್ಯದ ಮೂಲ ಎಂದರೂ ಕೂಡ ತಪ್ಪಾಗಲಾರದು. ಹಾಗೆಯೇ ಮುಂದುವರಿದು ತಮ್ಮ ಕೀರ್ತನೆಯೊಂದರಲ್ಲಿ ಇನ್ನೆಷ್ಟು ಕಾಲ ಮೈಮರೆತು ಮಲಗುವಿರಿ ನಿನ್ನನೆಟ್ಟಿಸುವವರಾರು ಕಾಣೆನು; ಎಂದು ಹಿಂದುಳಿದವರ ಸ್ಥಿತಿ ಗತಿಯನ್ನು ಕನಕದಾಸರು ವಿವೇಚಿಸಿರುವುದು ಗಮನಾರ್ಹ.
ತಂಬೂರಿ ಹಿಡಿದ ಕನಕರು ‘ತಾಳದಂಡಿಗೆ ಶೃತಿ ಮೇಳ ತಂಬೂರಿಗೊಂಡು ಸೂಳೆಯಂತೆ ಕುಣಿವುದು ಹೊಟ್ಟೆಗಾಗಿ’ ಎಂದು ತನ್ನನ್ನೂ ತಾನು ಕಟು ವಿಮರ್ಶೆಗೆ ಒಳಪಡಿಸಿಕೊಂಡು ಯಾವುದಕ್ಕೂ ಹಿಂಜರಿಯದ ವ್ಯಕ್ತಿತ್ವವನ್ನು ರೂಡಿಸಿ ಕೊಂಡಿದ್ದರು.
ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೇ ಬಯಲು ಆಲಯ ದೊಳಗೋ, ಆಲಯವು ಬಯಲೊಳಗೋ ಬಯಲು ಆಲಯವೆರಡು ನಯನದೊಳಗೋ ನಯನ ಬುದ್ಧಿಯೊಳಗೋ, ಬುದ್ಧಿ ನಯನದೊಳಗೋ ನಯನ ಬುದ್ಧಿಗಳೆರಡು ನಿನ್ನೊಳಗೋ ಹರಿಯೇ’ ಎನ್ನುವ ಮೂಲಕ ಬದುಕಿನ ಬಗೆಗೆ ತನಗಿರುವ ಜಿಜ್ಞಾಸೆ ಯನ್ನು ಹುಟ್ಟುಹಾಕುತ್ತಾರೆ.
ಇವರ ವಿಶಿಷ್ಟ ರಚನೆಯೆಂದರೆ ಮುಂಡಿಗೆಗಳು. ಪುರಾಣ, ಧಾರ್ಮಿಕ, ಅಧ್ಯಾತ್ಮ, ಪೌರಾಣಿಕ ವಿಷಯಗಳು, ಮಾರ್ಗ ದರ್ಶಕಗಳು ಮುಂತಾದ ವಸ್ತು ವಿಷಯಗಳನ್ನೊಳಗೊಂಡಂತೆ ಸುಮಾರು 20 ರಿಂದ 25 ಮುಂಡಿಗೆಗಳನ್ನು ಬರೆದಿದ್ದಾರೆ. ಅಂಧಕನನುಜನ ಕಂದನ ತಂದೆಯ/ ಕೊಂದನ ಶಿರದಲಿ ನಿಂದವನ ಎಂಬ ಮುಂಡಿಗೆಯನ್ನು ಗಮನಿಸಿದರೆ; ಇಲ್ಲಿ ಅಂಧಕ ಎಂದರೆ ಧೃತರಾಷ್ಟ್ರ. ಅಂಧಕನನುಜನ ಎಂದರೆ ಪಾಂಡುರಾಜ. ಇವನ ಕಂದ ಧರ್ಮರಾಯ. ಈತನ ತಂದೆ ಯಮ. ಈತನ ಕೊಂದವ ಈಶ್ವರ. ಈಶ್ವರನ ಶಿರದಲಿ ನಿಂದವನು ಚಂದ್ರ.
ಹೀಗೆ ಗೂಢಾರ್ಥಗಳಿಂದ ಕೂಡಿದವುಗಳೇ ಮುಂಡಿಗೆಗಳು. ಇವು ಪಾಂಡಿತ್ಯಕ್ಕಾಗಿ, ವಿಷಯದ ಗೌಪ್ಯತೆಗಾಗಿ, ಜಿಜ್ಞಾಸೆಗಾಗಿ, ಸ್ವಾರಸ್ಯಕ್ಕಾಗಿ, ಅನುಭವದ ನಿರೂಪಣೆಗಾಗಿ ಹುಟ್ಟಿದವುಗಳು ಎಂದು ಬಿಂದುಮಾಧವರಾವ್ ಬುರ್ಲಿ ಎಂಬುವರು ಹೇಳಿದ್ದಾರೆ.
ದಾಸರಲ್ಲಿಯೇ ಶ್ರೇಷ್ಠರೆನಿಸಿಕೊಂಡ ಇಂತಹ ಅಪೂರ್ವ ವ್ಯಕ್ತಿತ್ವ ಈ ನಾಡಿನಲ್ಲಿಹುಟ್ಟಿತ್ತು, ಇಂಥ ನೆಲದಲ್ಲಿ ನಾವುಗಳು
ಜೀವಿಸುತ್ತಿದ್ದೇವೆ ಎಂಬುದೇ ಧನ್ಯತೆಯ ವಿಷಯ. ಕೆಳ ಸಮುದಾಯದಲ್ಲಿ ಜನಿಸಿದರೂ ಕೂಡ ಅತ್ಯುನ್ನತ ಸ್ಥಾಯಿಗೆ ಏರಿ
ಬರಲು ಈತ ಹಾದು ಬಂದ ಹಾದಿ ಇತ್ತಲ್ಲ, ಅದು ಬಹಳವೇ ಸವಾಲಿನಿಂದ ಕೂಡಿದುದಾದಗಿತ್ತು. ಸುಮಾರು 93 ವರ್ಷ
ಬದುಕಿದ್ದ ಕನಕರ 533ನೇ ಜಯಂತಿ ಇಂದು.
ಧರ್ಮ – ಧರ್ಮಗಳ ಮತ್ತು ಜಾತಿ – ಜಾತಿಗಳ ನಡುವೆ ಸಂಘರ್ಷ ನಡೆಯುತ್ತಿರುವ, ಮಾನವೀಯ ಮೌಲ್ಯಗಳು ನಶಿಸಿ, ಅಸಹಿಷ್ಣುತೆ ಹೆಚ್ಚುತ್ತಿರುವ ಈ ಸಮಾಜಕ್ಕೆ ಕನಕರ ಚಿಂತನೆಗಳು ದಾರಿದೀಪವಾಗಬಲ್ಲವು. ಹಾಗಾಗಬೇಕಾದರೆ ಇವರು ಜನಿಸಿದ
ಕುಲವಷ್ಟೇ ಇವರನ್ನು ಸ್ವೀಕರಿಸುವಂತಾಗದೆ ಎಲ್ಲಾ ಜಾತಿ ಧರ್ಮೀಯರೂ ಇವರನ್ನು ಮತ್ತು ಇವರ ಚಿಂತನೆಗಳನ್ನು
ಸ್ವೀಕರಿಸ ಬೇಕು. ಇವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು. ಆಚರಣೆಗಳು ಆಡಂಬರಕ್ಕೊಳಗಾಗಬಾರದು.
ಕೇವಲ ದಾಖಲೆಗಾಗಿ ಫೋಟೋ ತೆಗೆಸಿಕೊಳ್ಳಲಷ್ಟೇ ಜಯಂತಿಗಳು ಆಗದೆ ಒಂದಿಷ್ಟಾದರೂ ಮಹಾನ್ ವ್ಯಕ್ತಿಗಳನ್ನು ಬದುಕಿನಲ್ಲಿ
ಅಳವಡಿಸಿಕೊಳ್ಳುವಂತಾದರೆ, ಅದೇ ನಾವು ಇಂತಹ ಮೌಲಿಕ ವ್ಯಕ್ತಿಗಳಿಗೆ ನೀಡುವ ಗೌರವವಾಗುತ್ತದೆ.
ಅದು ಕನಕ, ಬುದ್ಧ, ಬಸವ, ಗಾಂಧಿ, ವಾಲ್ಮೀಕಿ ಯಾರೇ ಆಗಬಹುದು. ಇವರ ಚಿಂತನೆಗಳನ್ನು ನಮ್ಮ ಹಾದಿಗೆ ಮಾರ್ಗದರ್ಶನ ವನ್ನಾಗಿ ಮಾಡಿಕೊಂಡರೆ; ಮುಂದಿನ ಪೀಳಿಗೆಗೆ ಅನಿವಾರ್ಯರುವಂಥ ಅಮೂಲ್ಯ ಕನಕ – ರತ್ನಗಳನ್ನು ದಾಟಿಸಲು ಸಾಧ್ಯವಾಗುತ್ತದೆ.