ಲಂಡನ್: ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ (UK’s King Charles) ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರೊಂದಿಗೆ ಪತ್ನಿ ರಾಣಿ ಕ್ಯಾಮಿಲ್ಲಾ(Queen Camilla) ಕೂಡ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ʼʼಇದು ಸರ್ಕಾರ ಯೋಜಿತ ಪ್ರವಾಸವಾಗಿದ್ದು, ದಂಪತಿ ಭಾರತದ ಉಪ ಖಂಡಗಳಿಗೆ ಭೇಟಿ ನೀಡಲಿದ್ದಾರೆʼʼ ಎಂದು ಬ್ರಿಟನ್ ಮಾಧ್ಯಮವು ವರದಿ ಮಾಡಿದೆ. ಈ ಪ್ರವಾಸವು ಕೆಲವು ವರ್ಷ ಕ್ಯಾನ್ಸರ್ನಿಂದ ಬಳಲಿದ್ದ ಚಾರ್ಲ್ಸ್ ರಾಜನಿಗೆ ಜೀವನೋತ್ಸಾಹವನ್ನು ತರಲಿದೆ ಎನ್ನಲಾಗಿದೆ (UK’s King Charles, Queen Camilla Plan Visit To India).
ಮೂಲ ಮಾಹಿತಿಯ ಪ್ರಕಾರ ಪ್ರವಾಸದ ವೇಳೆ ರಾಜ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
“ನಾವು ಈಗಿನಿಂದಲೇ ಮುಂದಿನ ವರ್ಷದ ಯೋಜಿತ ಪ್ರವಾಸಕ್ಕಾಗಿ ಕೆಲಸವನ್ನು ಶುರು ಮಾಡಿದ್ದೇವೆ. ಸುದೀರ್ಘ ಪ್ರವಾಸವಾದ್ದರಿಂದ ನಾವು ಆ ಕುರಿತು ಇನ್ನು ಹೆಚ್ಚಿನ ರೀತಿಯಲ್ಲಿ ಯೋಚಿಸುವ ಮತ್ತು ಕೆಲಸ ಮಾಡುವ ಅಗತ್ಯವಿದೆ” ಎಂದು ಲಂಡನ್ ಅರಮನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರಿಟಿಷ್ ಸರ್ಕಾರವು ಕಾಮನ್ವೆಲ್ತ್ ರಾಷ್ಟ್ರ(Common Wealth Nations)ಗಳನ್ನು ಭೇಟಿಯಾಗುವ ಸಲುವಾಗಿ ರಾಜ ಮನೆತನದ ನೇತೃತ್ವದಲ್ಲಿಯೇ ಪ್ರವಾಸಕ್ಕೆ ಹೊರಡಲು ತೀರಾ ಉತ್ಸುಕವಾಗಿದ್ದು, ಬ್ರೆಕ್ಸಿಟ್ ನಂತರದ ಜಗತ್ತಿನಲ್ಲಿ ಇಂಗ್ಲೆಂಡ್ ಯುರೋಪಿನ ಹೊರಗೂ ಗಮನಾರ್ಹವಾದ ಆರ್ಥಿಕ ಸಂಪರ್ಕಗಳನ್ನು ಸಾಧಿಸುವಲ್ಲಿ ಪ್ರಯತ್ನ ನಡೆಸಲಿದೆ ಎನ್ನಲಾಗಿದೆ.
2022ರ ಸೆಪ್ಟೆಂಬರ್ನಲ್ಲಿ ರಾಣಿ ಎಲಿಜಬೆತ್ ಅವರ ಮರಣದಿಂದಾಗಿ ಭಾರತದ ಉಪಖಂಡಕ್ಕೆ ಭೇಟಿ ನೀಡಬೇಕಿದ್ದ ಚಾರ್ಲ್ಸ್ ಭೇಟಿಯನ್ನು ಮುಂದೂಡಲಾಗಿತ್ತು. ಅದಾದ ನಂತರ ರಾಜ ಮೂರನೇ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಕಳೆದ ತಿಂಗಳಷ್ಟೇ ತಮ್ಮ ಖಾಸಗಿ ಪ್ರವಾಸದ ವೇಳೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಇಲ್ಲಿ ಇರುವಷ್ಟು ದಿನ ಸಂಪೂರ್ಣ ವೈದ್ಯಕೀಯ ಸೌಲಭ್ಯದಲ್ಲಿಯೇ ಅವರು ತಂಗಿದ್ದರು ಎಂದು ವರದಿಯಾಗಿದೆ.
ರಾಜ ಮನೆತನದ ಭೇಟಿಗಾಗಿ ಮತ್ತು ಭಾರತ ಮತ್ತು ಇತರ ಸಂಭಾವ್ಯ ಆತಿಥೇಯ ರಾಷ್ಟ್ರಗಳೊಂದಿಗೆ ಚರ್ಚೆಯನ್ನು ನಡೆಸಲು ಬ್ರಿಟಿಷ್ ವಿದೇಶಾಂಗ ಕಚೇರಿಯು ಅಧಿಕಾರಿಗಳಿಗೆ ಅನುಮತಿ ನೀಡಿದ್ದು, ಆ ಸಂಬಂಧದ ಪ್ರಸ್ತಾವನೆಗಳನ್ನು ಸರ್ಕಾರವು ರಚಿಸುತ್ತಿದೆ ಎಂದು ಇಂಗ್ಲೆಂಡ್ನ ʼದಿ ಮಿರರ್ʼ ಪತ್ರಿಕೆ ವರದಿ ಮಾಡಿದೆ.
ವರದಿಯ ಹೇಳುವಂತೆ, ಅವರ ಹಿಂದಿನ ಭೇಟಿ ರದ್ದುಗೊಂಡಿದ್ದರಿಂದ ಈಗ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಿಂಗ್ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಲು ಉತ್ಸಾಹ ತೋರಿದ್ದಾರೆ.
ಕ್ಯಾನ್ಸರ್ನಿಂದ ಬಳಲಿದ್ದ ಚಾರ್ಲ್ಸ್
76ರ ಇಳಿ ವಯಸ್ಸಿನಲ್ಲಿ ದೊರೆ ಚಾರ್ಲ್ಸ್ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅವರು ಸರಿ ಸುಮಾರು ಮೂರು ತಿಂಗಳು ರಾಜಮನೆತನದ ಕರ್ತವ್ಯದಿಂದಲೂ ಹಿಂದೆ ಸರಿದಿದ್ದರು. ಏಪ್ರಿಲ್ನಲ್ಲಿ ಲಂಡನ್ನ ಕ್ಯಾನ್ಸರ್ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಕ್ಯಾನ್ಸರ್ ರೋಗಿಗಳೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಿ ತುಸು ಗೆಲುವಾದ ನಂತರ ತಮ್ಮನ್ನು ರಾಜಮನೆತನದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಕಿಂಗ್ ಚಾರ್ಲ್ಸ್ ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ಮತ್ತು ಸಮೋವಾ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಅಷ್ಟೇ ಅಲ್ಲದೆ ದಕ್ಷಿಣ ಪೆಸಿಫಿಕ್ಗೆ ಅವರು ಹನ್ನೊಂದು ದಿನಗಳ ಪ್ರವಾಸ ಕೈಗೊಂಡಿದ್ದರು. ಈಗ ಬಕಿಂಗ್ಹ್ಯಾಮ್ ಅರಮನೆಯಲ್ಲಿಯೇ ವೈದ್ಯಕೀಯ ಸಲಹೆಗಳನ್ನು ಪಡೆಯುತ್ತಿರುವ ಅವರು ಮುಂದಿನ ವರ್ಷ ಪೂರ್ತಿ ಅಂತಾರಾಷ್ಟ್ರೀಯ ಪ್ರಯಾಣ ಕಾರ್ಯಕ್ರಮವನ್ನು ಪುನರಾರಂಭಿಸುವ ದೀರ್ಘಾವಧಿಯ ಯೋಜನೆಗಳನ್ನು ರೂಪಿಸಿಕೊಂಡಿದ್ದಾರೆ.
ʼದಿ ಮಿರರ್ʼ ಪತ್ರಿಕೆಯ ವರದಿ
“ರಾಜ ಮತ್ತು ರಾಣಿಯು ಮುಂದಿನ ವರ್ಷಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದ್ದಾರೆ. ಆದರೆ ಇದು ದೀರ್ಘಾವಧಿಯದ್ದಾಗಿದೆ. ಪ್ರವಾಸದ ವೇಳೆ ರಾಜ ಮತ್ತು ರಾಣಿ ರಾಯಭಾರಿಗಳಾಗಿ ಸಕ್ರಿಯರಾಗಿರುತ್ತಾರೆ. ಭಾರತೀಯ ಉಪಖಂಡದ ಪ್ರವಾಸವು ಮುಂದಿನ ವರ್ಷದ ಆರಂಭದಲ್ಲಿದ್ದು, ಇಡೀ ಪ್ರವಾಸವು ವಿಶ್ವದ ವೇದಿಕೆಯಲ್ಲಿ ಬ್ರಿಟನ್ಗೆ ದೊಡ್ಡ ರಾಜಕೀಯ ಮತ್ತು ಸಾಂಸ್ಕೃತಿಕ ಲಾಭವನ್ನು ತಂದುಕೊಡುತ್ತದೆʼʼ ಎಂದು ʼದಿ ಮಿರರ್ʼ ಪತ್ರಿಕೆ ಅಭಿಪ್ರಾಯಪಟ್ಟಿದೆ.
ಈ ಸುದ್ದಿಯನ್ನೂ ಓದಿ: ಕಿಂಗ್ ಚಾರ್ಲ್ಸ್ಗೆ ಕ್ಯಾನ್ಸರ್…!