Monday, 25th November 2024

Digital Arrest: ದೇಶದಡಲ್ಲೆಡೆ ವರದಿಯಾಗುತ್ತಿದೆ ಡಿಜಿಟಲ್‌ ಫ್ರಾಡ್‌ ಪ್ರಕರಣ; ಗುಜರಾತ್‌ನಲ್ಲಿ ನಕಲಿ ಐಎಎಸ್‌ ಅಧಿಕಾರಿ ಬಂಧನ

ಗಾಂಧಿನಗರ: ಕಾಲಕ್ಕೆ ತಕ್ಕಂತೆ ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ಇದೀಗ ದೇಶದೆಲ್ಲೆಡೆ ‘ಡಿಜಿಟಲ್​ ಅರೆಸ್ಟ್​’ (Digital Arrest) ಎಂಬ ಸೈಬರ್​ ವಂಚಕರ (Cyber Fraud) ಹೊಸ ಮೋಸದ ಜಾಲದ ಹರಡುತ್ತಿದೆ. ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡುವ ವಂಚಕರು ಅಮಾಯಕರಿಂದ ಹಣ ದೋಚುತ್ತಿರುವ ಪ್ರಕರಣ ಇದಾಗಿದ್ದು, ದೇಶಾದ್ಯಂತ ವರದಿಯಾಗುತ್ತಿದೆ. ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡು ನಡೆಸುತ್ತಿರುವ ಈ ವಂಚನೆ ಜಾಲದಲ್ಲಿ ಹೆಚ್ಚಾಗಿ ಸುಶಿಕ್ಷಿತರೇ ಬಲಿಪಶುಗಳಾಗುತ್ತಿದ್ದಾರೆ.

ಇದೀಗ ಅಂತದೇ ಒಂದು ಪ್ರಕರಣ ಬಯಲಾಗಿದ್ದು, ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹತ್ತಾರು ಜನರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ನಕಲಿ‌ ಐಎಎಸ್ ಅಧಿಕಾರಿಯನ್ನು ಗುಜರಾತ್‌ನ ಅಹಮದಾಬಾದ್ ಪೊಲೀಸರು ಬಂಧಿಸಿದ್ದಾರೆ.

ಗುಜರಾತ್ ನ ಮೋರ್ಬಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಂಧಿತ ಆರೋಪಿಯನ್ನು ಮೆಹುಲ್ ಶಾ ಎಂದು ಗುರುತಿಸಲಾಗಿದೆ. ಈತ ತಾನು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದ. ಇದಕ್ಕಾಗಿ ವಿವಿಧ ಸರಕಾರಿ ಇಲಾಖೆಗಳಿಗೆ ಸೇರಿದ ನಕಲಿ ಪತ್ರಗಳನ್ನು ಬಳಸುತ್ತಿದ್ದ ಎಂದು ತಿಳಿದು ಬಂದಿದೆ. ಬಂಧಿತ ಆರೋಪಿ ಇಲ್ಲಿನ ವಂಕನೇರ್‌ನಲ್ಲಿ 2 ಶಾಲೆಗಳನ್ನು ಹೊಂದಿದ್ದು, ವೃತ್ತಿಯಲ್ಲಿ ಎಂಜಿನಿಯರ್ ಎನ್ನಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಪೊಲೀಸ್ ಇನ್ಸ್‌ಪೆಕ್ಟರ್‌ (ಅಪರಾಧ ವಿಭಾಗ) ಜೆ.ಕೆ.ಮಕ್ವಾನಾ “ಆರೋಪಿಯು ತನ್ನನ್ನು ತಾನು ಕಂದಾಯ ಇಲಾಖೆಯ ನಿರ್ದೇಶಕ ಹಾಗೂ ಐಎಎಸ್ ಅಧಿಕಾರಿ ಎಂದು ಗುರುತಿಸಿಕೊಂಡಿದ್ದ. ಕಾರಿಗೆ ಸೈರನ್ ಮತ್ತು ಪರದೆ ಅಳವಡಿಸಿಕೊಳ್ಳಲು ಪರವಾನಗಿಗಾಗಿ ತಾನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ವಿಜ್ಞಾನ ಮತ್ತು ಸಂಶೋಧನಾಭಿವೃದ್ಧಿ ಇಲಾಖೆಯ ಅಧಿಕಾರಿ ಎಂದು ನಕಲಿ ದಾಖಲೆಗಳನ್ನು ಪ್ರದರ್ಶಿಸಿದ್ದ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಬೀದಿಯಲ್ಲಿ ಭಾರೀ ರಂಪಾಟ; ಮುಖಾಮೂತಿ ನೋಡದೇ ಬಡಿದಾಡಿಕೊಂಡ ವ್ಯಾಪಾರಿಗಳು! ವಿಡಿಯೊ ವೈರಲ್

ಇದದಲ್ಲದೆ, ಆರೋಪಿಯು ದೂರುದಾರರ ಪುತ್ರನಿಗೆ ಸರಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಉದ್ಯೋಗ ಕೊಡಿಸುವುದಾಗಿ ಅಹಮದಾಬಾದ್ ಜಿಲ್ಲಾ ಶಿಕ್ಷಣಾಧಿಕಾರಿ ಕಚೇರಿಯ ಖೋಟಾ ನೇಮಕಾತಿ ಪತ್ರವನ್ನೂ ನೀಡಿದ್ದ. ತನ್ನನ್ನು ಶಾಲೆಯೊಂದರ ಟ್ರಸ್ಟಿ ಎಂದೂ ಆರೋಪಿ ಶಾ ಪರಿಚಯಿಸಿಕೊಂಡಿದ್ದ.

“ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ಆರೋಪಿಯು ಯಾವುದೇ ಅಧಿಕೃತ ಹುದ್ದೆಗಳನ್ನು ಹೊಂದಿರದಿದ್ದರೂ, ಜನರಿಗೆ ಲಕ್ಷಾಂತರ ರೂಪಾಯಿಯನ್ನು ವಂಚಿಸಲು ನಕಲಿ ಕಾರ್ಯ ಪರವಾನಗಿ ಹಾಗೂ ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ಬಳಸಿದ್ದ” ಎಂದು ಅವರು ಹೇಳಿದ್ದಾರೆ. ಪೊಲೀಸರು ಆತನಿಂದ ‘ಭಾರತ್ ಗೌರವ್ ರತ್ನ ಶ್ರೀ ಸಮ್ಮಾನ್ ಕೌನ್ಸಿಲ್’, ‘ವಿಜ್ಞಾನ ಮತ್ತು ಸಂಶೋಧಾನಾಭಿವೃದ್ಧಿ ಇಲಾಖೆಯ ಅಧ್ಯಕ್ಷ’, ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ’ ಹಾಗೂ ‘ರಸ್ತೆ ಮತ್ತು ನಿರ್ಮಾಣ ಇಲಾಖೆ’ ಎಂಬ ತಲೆಬರಹಗಳನ್ನು ಹೊಂದಿರುವ ನಕಲಿ ಗುರುತಿನ ಚೀಟಿಗಳು ಹಾಗೂ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ, ಮೂವರು ಸಂತ್ರಸ್ತರ ದೂರುಗಳನ್ನು ಆಧರಿಸಿ ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿದೆ. “ಶಾನಿಂದ ಯಾವುದೇ ರೀತಿಯಲ್ಲಾದರೂ ವಂಚನೆಗೊಳಗಾಗಿದ್ದರೆ, ಅಂಥವರು ಮುಂದೆ ಬಂದು ದೂರು ಸಲ್ಲಿಸಬೇಕು” ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಮಕ್ವಾನಾ ಮನವಿ ಮಾಡಿದ್ದಾರೆ

ಈ ಹಿಂದೆ ರಾಜ್ಯ ರಾಜಧಾನಿ ಗಾಂಧಿನಗರದಲ್ಲಿ ಮತ್ತೊಂದು ನಕಲಿ ಪೊಲೀಸ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಎಸ್​ಪಿ ಸೋಗಿನಲ್ಲಿ ವ್ಯಕ್ತಿಯೋರ್ವರಿಂದ 1.75 ಕೋಟಿ ರೂ. ವಂಚಿಸಲಾಗಿದೆ. ಈ ಸಂಬಂಧ ತಲಘಟ್ಟಪುರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೇ ಮಹಾರಾಷ್ಟ್ರದಲ್ಲಿ ಸಾವಿರಾರು ಜನರಿಗೆ 300 ಕೋಟಿ ರೂ.ಗೂ ಅಧಿಕ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.