Monday, 25th November 2024

Viral Video: ಲ್ಯಾಂಡಿಂಗ್ ವೇಳೆ ರಷ್ಯಾ ವಿಮಾನಕ್ಕೆ ಬೆಂಕಿ; ಇಲ್ಲಿದೆ ಭಯಾನಕ ವಿಡಿಯೊ

Viral Video

ಟರ್ಕಿ: ಇಲ್ಲಿನ ಅಂಟಲ್ಯ ವಿಮಾನ ನಿಲ್ದಾಣದ (Antalya Airport) ರನ್‌ವೇಯಲ್ಲಿ ನಿಂತಿದ್ದ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡಿದ್ದು, ಪ್ರಯಾಣಿಕರು ರನ್ ವೇಯಿಂದ ಓಡಿ ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

ಅಂಟಲ್ಯ ಗವರ್ನರ್ ಕಚೇರಿಯ ಡೆಪ್ಯುಟಿ ಸೂಟ್ ಸೆಯಿಟೊಗ್ಲು ಅವರು ಲ್ಯಾಂಡಿಂಗ್ ಸಮಯದಲ್ಲಿ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ದೃಢಪಡಿಸಿದ್ದಾರೆ. ಬಳಿಕ ಅದನ್ನು ಶೀಘ್ರದಲ್ಲೇ ನಿಯಂತ್ರಿಸಲಾಯಿತು ಎಂದು ತಿಳಿಸಿದ್ದಾರೆ.

ನವೆಂಬರ್ 24ರಂದು ಭಾನುವಾರ ಟರ್ಕಿಯ ಅಂಟಲ್ಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ರಷ್ಯಾದ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಪ್ರಯಾಣಿಕರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಇದರ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಅಜಿಮುತ್ ಏರ್‌ಲೈನ್‌ಗೆ ಸೇರಿದ ರಷ್ಯಾದ ಸುಖೋಯ್ ಸೂಪರ್‌ಜೆಟ್ 100 ಪ್ಯಾಸೆಂಜರ್ ವಿಮಾನವು ಸೋಚಿಯಿಂದ ಅಂಟಲ್ಯಕ್ಕೆ ಹೋಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿತು. ಕಠಿಣ ಪರಿಸ್ಥಿತಿಯಲ್ಲಿ ಲ್ಯಾಂಡಿಂಗ್ ಮಾಡಬೇಕಾದ ಕಾರಣದಿಂದ ಎಂಜಿನ್‌ಗಳಲ್ಲಿ ಒಂದಕ್ಕೆ ಹಾನಿಯಾಗಿದೆ. ಬೆಂಕಿ ವೇಗವಾಗಿ ಹರಡಿದ್ದರೂ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಈ ವಿಮಾನದಲ್ಲಿ 89 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಇದ್ದರು.

ಎಲ್ಲಾ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ ಎಂದು ಸೆಯಿಟೊಗ್ಲು ತಿಳಿಸಿದ್ದಾರೆ.

ರಷ್ಯಾದ ಸೋಚಿ ವಿಮಾನ ನಿಲ್ದಾಣದಿಂದ ಅಂಟಲ್ಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಜಿಮುತ್ ಏರ್‌ಲೈನ್ಸ್‌ಗೆ ಸೇರಿದ ಎಸ್‌ಯು 95 ಆರ್ ಎ 89085 ಮಾದರಿಯ ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಂಟಲ್ಯ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಪೈಲಟ್‌ಗಳು ತುರ್ತು ಕರೆ ಮಾಡಿದ್ದಾರೆ. ಲ್ಯಾಂಡ್ ಆದ ವಿಮಾನದಿಂದ ಪ್ರಯಾಣಿಕರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಯಾಣಿಕರು ತಮ್ಮ ಲಗೇಜ್ ಗಳನ್ನು ಬಿಟ್ಟು ಕೇವಲ ಕೈಚೀಲದೊಂದಿಗೆ ಓಡಿ ಬರುತ್ತಿರುವುದನ್ನು ಕಾಣಬಹುದು.

ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳೂ ಬಂದಿದ್ದು, ಒಬ್ಬರು ತುರ್ತು ಸಂದರ್ಭದಲ್ಲಿ ನೀವು ನಿಮ್ಮ ಬ್ಯಾಗ್‌ಗಳನ್ನು ಬಿಡಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ತುಂಬಾ ಆತಂಕಕಾರಿಯಾಗಿದೆ ಎಂದು ತಿಳಿಸಿದ್ದಾರೆ. ಮತ್ತೊಬ್ಬರು, ಅವರೆಲ್ಲರೂ ತಮ್ಮ ಕೈ ಚೀಲವನ್ನು ಮಾತ್ರ ತೆಗೆದುಕೊಂಡಿದ್ದಾರೆ. ಇದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ.

ಇದೇ ಸನ್ನಿವೇಶದ ಮತ್ತೊಂದು ವಿಡಿಯೋದಲ್ಲಿ ತುರ್ತು ಚಿಕಿತ್ಸಾ ವಾಹನಗಳು ಸ್ಥಳದಲ್ಲಿ ಸೇರಿರುವುದನ್ನು ಕಾಣಬಹುದು.

Viral Video: ಬೀದಿಯಲ್ಲಿ ಭಾರೀ ರಂಪಾಟ; ಮುಖಾಮೂತಿ ನೋಡದೇ ಬಡಿದಾಡಿಕೊಂಡ ವ್ಯಾಪಾರಿಗಳು! ವಿಡಿಯೊ ವೈರಲ್

ಸೂಪರ್‌ಜೆಟ್‌ ಲ್ಯಾಂಡಿಂಗ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಇದೇ ಮೊದಲಲ್ಲ. 2019 ರಲ್ಲಿ ಏರೋಫ್ಲೋಟ್ ಫ್ಲೈಟ್ ಎಸ್ ಯು 1492 ಮಾಸ್ಕೋದಿಂದ ಟೇಕ್ ಆಫ್ ಆದ ಅನಂತರ ಮಿಂಚು ಹೊಡೆದು ವಿಮಾನ ತುರ್ತು ಲ್ಯಾಂಡಿಂಗ್ ಮಾಡಿತ್ತು. ಶೆರೆಮೆಟಿವೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಬೆಂಕಿ ಕಾಣಿಸಿಕೊಂಡಿತ್ತು.

ಕೆಲವು ಪ್ರಯಾಣಿಕರು ತಮ್ಮ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಬಯಸಿದ್ದರಿಂದ ಘಟನೆಯಲ್ಲಿ ಸುಮಾರು 41 ಪ್ರಯಾಣಿಕರು ಸಾವನ್ನಪ್ಪಿದ್ದರು.