Monday, 25th November 2024

Kidnap Case: ಆಸ್ಪತ್ರೆಯಲ್ಲಿ ಅಪಹರಿಸಿದ್ದ ಮಗುವನ್ನು 24 ಗಂಟೆಯೊಳಗೆ ಮರಳಿಸಿದ ಅಪರಿಚಿತ!

ವಿಜಯಪುರ: ಒಂದು ವರ್ಷದ ಮಗುವನ್ನು ಅಪರಿಚಿತ ವ್ಯಕ್ತಿಯೊಬ್ಬ ಅಪಹರಣ (Kidnap Case) ಮಾಡಿದ 24 ಗಂಟೆಯೊಳಗೆ ವಾಪಸ್‌ ತಂದು ಬಿಟ್ಟಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಇದರೊಂದಿಗೆ ಮಗುವಿನ ಕಿಡ್ನ್ಯಾಪ್‌ ಕೇಸ್‌ ಸುಖಾಂತ್ಯ ಕಂಡಿದೆ.

ಸಂದೀಪ ಎಂಬ ಮಗುವನ್ನು ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ಆರೋಪಿ ರವಿ ಛಲವಾದಿ (38) ಅಪಹರಿಸಿದ್ದ. ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ಎಂಬ ಮಹಿಳೆ‌, ತನ್ನ ತಾಯಿ ಪದ್ಮಾ ಪವಾರ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ಜಿಲ್ಲಾಸ್ಪತ್ರೆಗೆ ಬಂದಿದ್ದರು.

ಶನಿವಾರ ಬೆಳಗ್ಗೆ ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ರಾಮೇಶ್ವರಿ, ಮಗು ಸಂದೀಪನನ್ನು ತಾಯಿ ಬಳಿ ಬಿಟ್ಟು ಹೋಗಿದ್ದರು. ಈ ವೇಳೆ ಆರೋಪಿಯು ಮಗುವನ್ನು ಆಟವಾಡಿಸುವ ನೆಪದಲ್ಲಿ ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದ. ರಾಮೇಶ್ವರಿ ಮರಳಿ ಬಂದು ನೋಡಿದಾಗ ಮಗು ಕಾಣಿಸದ ಹಿನ್ನೆಲೆ ಆತಂಕಗೊಂಡಿದ್ದರು.

ವಾರ್ಡ್‌ನಲ್ಲಿ ಹುಡುಕಾಟ ನಡೆಸಿದ ಬಳಿಕ ತಾಯಿ ರಾಮೇಶ್ವರಿ, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಪೊಲೀಸ್ ಠಾಣೆ ಹಾಗೂ ವೈದ್ಯರ ಗಮನಕ್ಕೆ ತಂದಿದ್ದರು. ಬಳಿಕ ಪೊಲೀಸರು ಜಿಲ್ಲಾಸ್ಪತ್ರೆ ಆವರಣ ಮತ್ತು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದರು. ಆಗ ವ್ಯಕ್ತಿಯೊಬ್ಬ ಮಗು ಕದ್ದೊಯ್ಯುವ ದೃಶ್ಯ ಕಂಡುಬಂದಿತ್ತು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮಗು ಪತ್ತೆಗಾಗಿ ಗಾಂಧಿ ಚೌಕ್ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಮಗುವನ್ನು ಆರೋಪಿ ರವಿ ಛಲವಾದಿ ಆಸ್ಪತ್ರೆಗೆ ಮರಳಿ ಕರೆ ತಂದಿದ್ದಾನೆ.

ಆಸ್ಪತ್ರೆಯ ವೈದ್ಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಆರೋಪಿಯು ಮಗುವನ್ನು ತಾಯಿಗೆ ಒಪ್ಪಿಸಿದ್ದಾನೆ. ಮಗು ಮರಳಿ ತನ್ನ ಮಡಿಲು ಸೇರಿದ್ದರಿಂದ ಹೆತ್ತ ಅಮ್ಮ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿನ ಅಪಹರಣದಂತಹ ಘಟನೆ ನಡೆದಿರುವುದು ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಆತಂಕ ಮೂಡಿಸಿದೆ.

ವಾರ್ಡ್‌ನಲ್ಲಿ ಅಜ್ಜಿ ಬಳಿ ಮಗು ಇದ್ದಾಗ, ಯಾರೂ ಇಲ್ಲದ ಕಾರಣ ಆರೋಪಿ ಅಲ್ಲೇ ಎರಡೂರು ಗಂಟೆ ಇದ್ದ. ಅಲ್ಲದೆ ಕಲಬುರಗಿಯಲ್ಲಿ ಸಂಬಂಧಿಕರು ನಿಧನ ಹೊಂದಿದ ವಿಷಯ ತಿಳಿದು ಮಗುವನ್ನು ಅಲ್ಲಿಗೂ ಕರೆದೊಯ್ದಿದ್ದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ. ಹೀಗಾಗಿ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Leopard Captured: ನೆಲಮಂಗಲದಲ್ಲಿ ಮಹಿಳೆಯನ್ನು ಕೊಂದಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನ!

ಕುಡಿದ ಮತ್ತಿನಲ್ಲಿ ತಂದೆಯನ್ನೇ ಕೊಂದು, ಪತ್ನಿ ಜತೆ ಪರಾರಿಯಾದ ಪುತ್ರ!

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ಮಗನೊಬ್ಬ ಸುತ್ತಿಗೆಯಲ್ಲಿ ಹೊಡೆದು ತಂದೆಯನ್ನೇ ಕೊಂದ ಘಟನೆ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿಯೂ ಅಂತಹುದೇ ಘೋರ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತಂದೆಯನ್ನು ಕೊಲೆ ಮಾಡಿದ ಬಳಿಕ ಪತ್ನಿಯೊಂದಿಗೆ ಪುತ್ರ ಪರಾರಿಯಾಗಿದ್ದಾನೆ.

ಹಳೇ ಹುಬ್ಬಳ್ಳಿಯಲ್ಲಿ ಘಟನೆ ನಡೆದಿದೆ. ತಂದೆ ಮಗನ ನಡುವೆ ಆಸ್ತಿ ವಿಚಾರವಾಗಿ ನ. 19ರಂದು ಗಲಾಟೆಯಾಗಿತ್ತು ಎನ್ನಲಾಗಿದೆ. ಇಂದು ಕುಡಿದು ಬಂದ ಮಗ ಏಕಾಏಕಿ ತಂದೆಯನ್ನೇ ಮನಬಂದಂತೆ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ನಾಗರಾಜ್ (77) ಕೊಲೆಯಾದ ತಂದೆ. ಅಣ್ಣಪ್ಪ ತಂದೆಯನ್ನೇ ಕೊಂದ ಮಗ. ಕಂಠಪೂರ್ತಿ ಕುಡಿದು ಬಂದಿದ್ದ ಅಣ್ಣಪ್ಪ ತಂದೆ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಮಗ ಅಣ್ಣಪ್ಪ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಅಣ್ಣಪ್ಪ ಪತ್ನಿ ಜತೆ ಎಸ್ಕೇಪ್ ಆಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Karnataka High Court: ಹಲವು ಕೇಸುಗಳಿರುವ ವಿಚಾರಣಾಧೀನ ಕೈದಿಗೆ ಜಾಮೀನು ಇಲ್ಲ: ಹೈಕೋರ್ಟ್