ಹೈದರಾಬಾದ್: ಇಡೀ ದೇಶದ ಸಿನಿ ಪ್ರಿಯರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ʼಪುಷ್ಪ 2ʼ ಬಿಡುಗಡೆಗೆ ದಿನ ಗಣನೆ ಆರಂಭವಾಗಿದೆ. ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) 3 ವರ್ಷಗಳ ಬಳಿಕ ಮತ್ತೊಮ್ಮೆ ತೆರೆ ಮೇಲೆ ಒಂದಾಗುತ್ತಿರುವ ಈ ಆ್ಯಕ್ಷನ್ ಡ್ರಾಮ ಈಗಾಗಲೇ ಹಾಡು, ಟ್ರೈಲರ್‌ನಿಂದಲೇ ಗಮನ ಸೆಳೆದಿದೆ. ಬಹು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿರುವ ಇದು 2021ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದಲ್ಲದೆ, ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದಿತ್ತ ʼಪುಷ್ಪʼ ಚಿತ್ರದ ಸೀಕ್ವೆಲ್. ಮಾಸ್ ನಿರ್ದೇಶಕ ಸುಕುಮಾರ್ (Sukumar) ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿನ ಕಲಾವಿದರಿಗೆ ದಾಖಲೆಯ ಸಂಭಾವನೆ ಸಂದಾಯವಾಗಿದೆ. ಅದರಲ್ಲಿಯೂ ಅಲ್ಲು ಅರ್ಜುನ್ ಅತೀ ಹೆಚ್ಚು ಸಂಭಾವನೆ ಪಡೆದ ಭಾರತದ ನಟ ಎನಿಸಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹಾಗಾದರೆ ಅವರು ಜೇಬಿಗಿಳಿಸಿದ್ದೆಷ್ಟು?
ಅಲ್ಲು ಅರ್ಜುನ್: 300 ಕೋಟಿ ರೂ.
ಪುಷ್ಪರಾಜ್ ಆಗಿ ಅಬ್ಬರಿಸಲಿರುವ ಅಲ್ಲು ಅರ್ಜುನ್ ಈ ಚಿತ್ರಕ್ಕಾಗಿ ಬರೋಬ್ಬರಿ 300 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಈ ಮೂಲಕ ದೇಶದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆದ ನಾಯಕ ಎನಿಸಿಕೊಂಡಿದ್ದಾರೆ. ಸಂಭಾವನೆ ವಿಚಾರದಲ್ಲಿ ಅವರು ಶಾರುಖ್ ಖಾನ್, ರಜನಿಕಾಂತ್, ಯಶ್, ರಾಮ್ ಚರಣ್ ಅವರಂತಹ ಸೂಪರ್ ಸ್ಟಾರ್‌ಗಳನ್ನೇ ಹಿಂದಿಕ್ಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ʼಪುಷ್ಪ 2ʼ ಸಿನಿಮಾದಲ್ಲಿ ಅವರು ವಿವಿಧ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಭರ್ಜರಿ ಫೈಟಿಂಗ್ ದೃಶ್ಯಗಳಲ್ಲಿಯೂ ಭಾಗವಹಿಸಿದ್ದಾರೆ ಎನ್ನಲಾಗಿದೆ.
ರಶ್ಮಿಕಾ ಮಂದಣ್ಣ: 10 ಕೋಟಿ ರೂ.
ಇನ್ನು ಸ್ಯಾಂಡಲ್‌ವುಡ್‌ನಿಂದ ತೆಲುಗಿಗೆ ಹಾರಿ ಇದೀಗ ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೂ ದುಬಾರಿ ಸಂಭಾವನೆ ದೊರೆತಿದೆ. ಪುಷ್ಪರಾಜ್‌ನ ಮನದನ್ನೆ ಶ್ರೀವಲ್ಲಿ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿ ಗ್ಲಾಮರಸ್ ಪಾತ್ರದಿಂದಲೇ ಗಮನ ಸೆಳೆದ ಅವರು ಇಲ್ಲೂ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರಿಗೆ ಬರೋಬ್ಬರಿ 10 ಕೋಟಿ ರೂ. ಸಿಕ್ಕಿದೆ.
ಫಹದ್ ಫಾಸಿಲ್: 8 ಕೋಟಿ ರೂ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜತೆಗೆ ʼಪುಷ್ಪʼ ಚಿತ್ರದಲ್ಲಿ ಗಮನ ಸೆಳೆದಿದ್ದು ಮಲಯಾಳಂ ನಟ ಫಹದ್ ಫಾಸಿಲ್ ನಿರ್ವಹಿಸಿದ ಎಸ್‌ಪಿ ಭನ್ವರ್ ಸಿಂಗ್ ಶೆಖಾವತ್ ಪಾತ್ರ. ಸಹಜಾಭಿನಯದಿಂದಲೇ ಮೋಡಿ ಮಾಡುವ ಅವರು ಈ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಾಯಕ-ನಾಯಕಿ ಜತೆಗೆ ಅವರ ಪಾತ್ರಕ್ಕೂ ಪ್ರಾಮುಖ್ಯತೆ ಇದ್ದು, ಕಥೆಗೆ ಬಹುಮುಖ್ಯ ತಿರುವು ನೀಡುತ್ತಾರೆ ಎನ್ನಲಾಗಿದೆ. ಹೀಗಾಗಿ ಇವರು 8 ಕೋಟಿ ರೂ. ಜೇಬಿಗಿಳಿಸಿದ್ದಾರೆ.
ಶ್ರೀಲೀಲಾ: 2 ಕೋಟಿ ರೂ.
ಸುಕುಮಾರ್, ಅಲ್ಲು ಅರ್ಜುನ್ ಚಿತ್ರ ಎಂದರೆ ಅಲ್ಲಿ ಹಾಡು ಇರಲೇ ಬೇಕು. ಈ ಚಿತ್ರದಲ್ಲಿಯೂ ಹಾಡು ಪ್ರಮುಖವಾಗಿರಲಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಅದರಲ್ಲಿಯೂ ಐಟಂ ಸಾಂಗ್ ಇಲ್ಲದಿದ್ದರೆ ಹೇಗೆ? ಈ ವಿಶೇಷ ಹಾಡಿಗೆ ಕನ್ನಡತಿ ಶ್ರೀಲೀಲಾ ಹೆಜ್ಜೆ ಹಾಕಿದ್ದಾರೆ. ಈ ವಿಶೇಷ ಹಾಡು ʼಕಿಸಿಕ್ʼ ನ. 24ರಂದು ರಿಲೀಸ್ ಆಗಿದ್ದು, ಗಮನ ಸೆಳೆಯುತ್ತಿದೆ. ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಶ್ರೀಲೀಲಾ ಬರೋಬ್ಬರಿ 2 ಕೋಟಿ ರೂ. ಚಾರ್ಜ್ ಮಾಡಿದ್ದಾರಂತೆ.
ಸದ್ಯ ಕಲಾವಿದರ ಸಂಭಾವನೆ ವಿಚಾರಕ್ಕೂ ʼಪುಷ್ಪ 2ʼ ಸದ್ದು ಮಾಡುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿಲ್ಲ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯು ಸುಮಾರು 400-500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿದ ಈ ಸಿನಿಮಾ ಡಿ. 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.
ಈ ಸುದ್ದಿಯನ್ನೂ ಓದಿ: Pushpa 2 Trailer: ಮತ್ತೆ ರೂಲ್ ಮಾಡಲು ಅಲ್ಲು ಅರ್ಜುನ್-ರಶ್ಮಿಕಾ ರೆಡಿ; ‘ಪುಷ್ಪ 2’ ಪವರ್‌ಫುಲ್ ಟ್ರೈಲರ್ ಔಟ್