Tuesday, 26th November 2024

Viral Video: ಜಸ್ಟ್ ಮಿಸ್! ಸೈಬೀರಿಯಾ ಹುಲಿ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ರೈತ!

ನಮ್ಮಲ್ಲಿ ರೈತರು ಚಿರತೆ, ಕಾಡು ಹಂದಿ, ಆನೆ ಸೇರಿದಂತೆ ಕೆಲವೊಂದು ಕಾಡು ಪ್ರಾಣಿಗಳ ದಾಳಿಗೊಳಗಾಗಿ ತಮ್ಮ ಜೀವವನ್ನು ಕಳೆದುಕೊಳ್ಳುವುದು ಅಥವಾ ಗಾಯಗೊಳ್ಳುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ, ಮಾತ್ರವಲ್ಲದೇ ಅಂತಹ ಕೆಲವೊಂದು ವಿಡಿಯೋಗಳನ್ನೂ ಸಹ ನೋಡಿರುತ್ತೇವೆ. ಅಂತಹುದ್ದೇ ಒಂದು ಎದೆ ಝಲ್ಲೆನಿಸುವ ಘಟನೆಯಲ್ಲಿ ಚೀನಾದ ರೈತನೊಬ್ಬ ಖತರ್ನಾಕ್ ಸೈಬಿರಿಯಾ ಹುಲಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (Viral video)

ಚೀನಾದ ಹೈಲೊಜಿಯಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ರೈತರೊಬ್ಬರು ತಮ್ಮ ಗದ್ದೆಯ ಗೇಟನ್ನು ಮುಚ್ಚುವುದಕ್ಕೂ, ಸೈಬಿರಿಯನ್ ಹುಲಿಯೊಂದು ಆತನೆಡೆಗೆ ನುಗ್ಗಲು ಯತ್ನಿಸುವುದೂ ಏಕಕಾಲಕ್ಕೆ ನಡೆದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳ ನಡುವೆ ಭೀತಿಯ ವಾತಾವರಣಕ್ಕೆ ಕಾರಣವಾಗಿದೆ.

ರಾಯಿಟರ್ಸ್ ಮಾಧ್ಯಮ ವರದಿಯ ಪ್ರಕಾರ, ಚೀನಾದ ಈ ಭಾಗದಲ್ಲಿ ಇತ್ತೀಚೆಗೆ ನಡೆದಿರುವ ಹುಲಿ ಸರಣಿ ದಾಳಿಗಳ ಒಂದು ಭಾಗವಾಗಿದ್ದು, ಸ್ಥಳೀಯಡಾಳಿತ ಈ ಬಗ್ಗೆ ಸ್ಥಳೀಯರಿಗೆ ಎಚ್ಚರಿಕೆಯನ್ನೂ ಸಹ ನೀಡಿದ್ದರು. ಹುಲಿ ದಾಳಿ ಪ್ರಕರಣವೊಂದರಲ್ಲಿ 65 ವರ್ಷ ಪ್ರಾಯದ ದನಗಾಹಿ ರೈತರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲುಗೊಂಡಿದ್ದು, ಇದೀಗ ಹುಲಿ ದಾಳಿಯಿಂದ ಗಾಯಗೊಂಡಿರುವ ಆತನ ಎಡಗೈಯನ್ನು ಉಳಿಸಬೇಕಾದರೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ರೈತನ ಪುತ್ರ ನೀಡಿರುವ ಮಾಹಿತಿಯಂತೆ, ಎರಡು ಹುಲಿಗಳು ಈ ಭಾಗದಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದು, ಅಧಿಕಾರಿಗಳು ಈ ಹುಲಿಗಳನ್ನು ಹಿಡಿಯಲಾಗಿದೆಯೋ ಇಲ್ಲವೋ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇನ್ನೊಂದೆಡೆ, ಯಾವುದೇ ರೀತಿಯ ಹುಲಿ ಸಂಚಾರದ ಚಲನವಲನಗಳು ಕಂಡುಬಂದಲ್ಲಿ ತಮಗೆ ಮಾಹಿತಿ ನೀಡುವಂತೆ ಮತ್ತು ಈ ಭಾಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಸ್ಥಳೀಯರು ತಮ್ಮ ಸಾಕುಪ್ರಾಣಿಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ಸಂಬಂಧಿತ ಗ್ರಾಮಗಳಲ್ಲಿ ಕರಪತ್ರಗಳನ್ನು ಹಂಚಲಾಗಿದೆ. ಇದರಲ್ಲಿ, ಗಸ್ತು ಹೆಚ್ಚಿಸುವಂತೆ, ಎಚ್ಚರಿಕೆಯಿಂದ ಇರುವಂತೆ, ಅದರಲ್ಲೂ ಬೆಳಗ್ಗಿನ ಹೊತ್ತು ಮತ್ತು ಮುಸ್ಸಂಜೆ ಸಮಯದಲ್ಲಿ ಸೈಬೀರಿಯನ್ ಹುಲಿಗಳು ಹೆಚ್ಚು ಚಟುವಟಿಕೆಯಿಂದಿರುವ ಕಾರಣ ಈ ಸಮಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆ ಈ ಕರಪತ್ರದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: Kidnap Case: ಆಸ್ಪತ್ರೆಯಲ್ಲಿ ಅಪಹರಿಸಿದ್ದ ಮಗುವನ್ನು 24 ಗಂಟೆಯೊಳಗೆ ಮರಳಿಸಿದ ಅಪರಿಚಿತ!

“ಸೈಬೀರಿಯಾ ಹುಲಿಗಳು ಮನುಷ್ಯರೊಂದಿಗೆ ಜೀವಿಸಬಲ್ಲವು ಮತ್ತು ಅವುಗಳು ಅಷ್ಟೇನೂ ಆಕ್ರಮಣಕಾರಿಯಲ್ಲ” ಎಂದು ಸರಕಾರಿ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಆದಾಗ್ಯೂ, ಈ ಹುಲಿಗಳೊಂದಿಗೆ ನಿಕಟ ಸಂಪರ್ಕಕ್ಕೆ ಸಿಗದಂತೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ.

ಚೀನಾದಲ್ಲಿ ಸರಿಸುಮಾರು 70 ಸೈಬಿರಿಯನ್ ಹುಲಿಗಳಿದ್ದು, ಇವುಗಳನ್ನು ಸಂರಕ್ಷಿತ ಜೀವಿಗಳ ಪಟ್ಟಿಗೆ ಸೇರಿಸಲಾಗಿದೆ. 2021ರಲ್ಲಿ ನಾರ್ತ್ ಈಸ್ಟ್ ಚೈನಾ ಟೈಗರ್ ಮತ್ತು ಲಿಯೋಪಾರ್ಡ್ ನ್ಯಾಷನಲ್ ಪಾರ್ಕನ್ನು 14,100 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಝಿಲಿನ್ ಮತ್ತು ಹೈಲೋಂಜಿಯಾಂಗ್ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ ಸೈಬಿರಿಯಾ ಹುಲಿಗಳು ಮತ್ತು ಅಮೂರ್ ಚಿರತೆಗಳನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿದೆ.

ಒಟ್ಟಿನಲ್ಲಿ ಚೀನಾದ ಈ ರೈತ ಸೈಬಿರಿಯಾ ಹುಲಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವುದು ಮತ್ತು ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವಿಶ್ವಾದ್ಯಂತ ವೈರಲ್ ಆಗಿರುವುದು ಮಾನವ – ಕಾಡುಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಸಂಬಂಧಿಸಿದಂತೆ ಚರ್ಚೆಗಳನ್ನು ಹುಟ್ಟುಹಾಕಿದೆ.