ಮೈಸೂರು: ‘ಕೋಲು ಮಂಡೆ ಜಂಗಮದೇವ’ ಖ್ಯಾತಿಯ ಕಂಸಾಳೆ ಖ್ಯಾತ ಕಲಾವಿದ, ಮೈಸೂರಿನ ಬಂಡಿಕೇರಿಯ ನಿವಾಸಿ ಕುಮಾರಸ್ವಾಮಿ (Kamsale Kumaraswamy) ಅವರು ಸೋಮವಾರ ನಿಧನರಾದರು. ಜಾನಪದ ಕಲಾವಿದ ಕಂಸಾಳೆ ಮಹಾದೇವಯ್ಯ ಅವರ ಪುತ್ರರಾದ ಕುಮಾರಸ್ವಾಮಿ, ಬಾಲ್ಯದಿಂದಲೇ ತಂದೆ ಜತೆ ಕಂಸಾಳೆಯನ್ನು ಮೈಗೂಡಿಸಿಕೊಂಡು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿ ಪ್ರಸಿದ್ಧರಾಗಿದ್ದರು.
ನಟ ಶಿವರಾಜ್ ಕುಮಾರ್ ಅಭಿನಯದ ‘ಜನುಮದ ಜೋಡಿ’ ಚಿತ್ರದ ‘ಕೋಲು ಮಂಡೆ ಜಂಗಮದೇವ’ ಹಾಡಿಗೆ ಕುಮಾರಸ್ವಾಮಿ ಅವರು ಕಂಸಾಳೆ ಸಂಗೀತದ ನೃತ್ಯ ಸಂಯೋಜಿಸಿದ್ದರು. ಆ ಮೂಲಕ ವರನಟ ರಾಜಕುಮಾರ್ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು. 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇವರು, ಇಟಲಿ, ರೋಂ, ಟರ್ಕಿ ಸೇರಿ ದೇಶ- ವಿದೇಶಗಳಲ್ಲಿ 600ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದ್ದರು.
ವರಕೋಡು ಸಮೀಪದ ಬಡಗಲಹುಂಡಿಯಲ್ಲಿ 1951ರಲ್ಲಿ ಜನಿಸಿದ ಇವರು, ತಂದೆ ಕಂಸಾಳೆ ಮಹಾದೇವಯ್ಯ ಅವರಿಂದ ಕಂಸಾಳೆಯನ್ನು ಕಲಿತಿದ್ದರು. 7ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ತಂದೆಯೊಂದಿಗೆ ಪ್ರದರ್ಶನಗಳನ್ನು ನೀಡಲಾರಂಭಿಸಿ, ಅದರಲ್ಲೇ ಮುಂದುವರಿದರು.
ಕಂಸಾಳೆ, ಹಾಡುಗಾರಿಕೆ, ನೃತ್ಯ ಪ್ರಕಾರ, ಬೀಸು ಕಂಸಾಳೆಯಲ್ಲಿ ಪರಿಣತಿ ಗಳಿಸಿದ್ದ ಅವರು, ವಿವಿಧ ವಿಷಯಗಳನ್ನು ಕಂಸಾಳೆಗೆ ಒಗ್ಗಿಸಿಕೊಂಡು ಪ್ರಸ್ತುತಪಡಿಸುತ್ತಿದ್ದರು. ಇವರಿಗೆ ‘ಜಾನಪದ ಲೋಕ’ ಪ್ರಶಸ್ತಿ, ಕನ್ನಡ ಜಾನಪದ ಪರಿಷತ್ತಿನ ‘ಜಾನಪದ ಪ್ರಪಂಚ’, ಕನ್ನಡ ಬಳಗದ ‘ಕಂಸಾಳೆ ಜಾನಪದ ರತ್ನ’, ಕನ್ನಡ ಕ್ರಾಂತಿ ದಳದ ‘ಕಂಸಾಳೆ ಕಂಠೀರವ’ ಬಿರುದು ಸೇರಿ ವಿವಿಧ ಬಿರುದು, ಪ್ರಶಸ್ತಿಗಳನ್ನು ಪಡೆದಿದ್ದರು.
ಇವರಿಗೆ ಪುತ್ರರಾದ ಕಂಸಾಳೆ ರವಿಚಂದ್ರ, ಕಂಸಾಳೆ ಮಾದೇವ್ ಕುಮಾರ, ಪುತ್ರಿಯರಾದ ರೂಪಾ, ಪಾರ್ವತಿ ಇದ್ದಾರೆ. ಅಂತ್ಯಕ್ರಿಯೆಯು ನ.26 ಬೆಳಗ್ಗೆ 11ಕ್ಕೆ ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ | Digital Arrest: ಇಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯಿಂದ 34 ಲಕ್ಷ ರೂ. ದೋಚಿದ ಸೈಬರ್ ಖದೀಮರು