Monday, 25th November 2024

Imran Khan: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಿಡುಗಡೆಗೆ ಆಗ್ರಹಿಸಿ ಪಾಕಿಸ್ತಾನದಲ್ಲಿ ಬೃಹತ್‌ ಪ್ರತಿಭಟನೆ

Imran Khan

ಇಸ್ಲಾಮಾಬಾದ್‌: ಆರ್ಥಿಕ ಮುಗ್ಗಟ್ಟಿನಿಂದ ಹೈರಾಣಾಗಿರುವ ಪಾಕಿಸ್ತಾನ (Pakistan) ಮತ್ತೊಂದು ಸುತ್ತಿನ ಬೃಹತ್‌ ಪ್ರತಿಭಟನೆಗೆ ಸಾಕ್ಷಿಯಾಯುತ್ತಿದೆ. ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಅವರ ಸಾವಿರಾರು ಬೆಂಬಲಿಗರು ಖೈಬರ್ ಪಖ್ತುನಖ್ವಾದ ಪೇಶಾವರದಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದು, ಸದ್ಯ ರಾಜಧಾನಿ ಇಸ್ಲಾಮಾಬಾದಿನ ಹೊರವಲಯ ತಲುಪಿದೆ. ಲಾಕ್‌ಡೌನ್‌ ಉಲ್ಲಂಘಿಸಿ ಬೀದಿಗಳಿದ ಪ್ರತಿಭಟನಾಕಾರರು ದೇಶದಲ್ಲಿ ಹೆಚ್ಚುತ್ತಿರುವ ರಾಜಕೀಯ ಉದ್ವಿಗ್ನತೆಯ ಮಧ್ಯೆ ಇಮ್ರಾನ್‌ ಖಾನ್ ಬಿಡುಗಡೆಗೆ ಒತ್ತಾಯಿಸಿದರು. ರ‍್ಯಾಲಿಯು ರಾಜಧಾನಿ ಇಸ್ಲಾಮಾಬಾದ್ ಒಳಗಡೆ ಪ್ರವೇಶಿಸದಂತೆ ತಡೆಯಲು ಸರ್ಕಾರ ಭಾರಿ ಭದ್ರತಾ ವ್ಯವಸ್ಥೆಗಳನ್ನು ಮಾಡಿದೆ.

ಇಸ್ಲಾಮಾಬಾದ್ ಬಳಿ ಪ್ರತಿಭಟನಾಕಾರರೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಮತ್ತು 70 ಜನರು ಗಾಯಗೊಂಡಿದ್ದಾರೆ ಎಂದು ಪಂಜಾಬ್ ಪ್ರಾಂತ್ಯದ ಮಾಹಿತಿ ಸಚಿವ ಉಜ್ಮಾ ಬೊಖಾರಿ ತಿಳಿಸಿದ್ದಾರೆ. ಪ್ರತಿಭಟನಾಕಾರರಿಗೂ ಗಾಯಗಳಾಗಿದ್ದು, ಅವರ ವಿರುದ್ಧ ರಬ್ಬರ್ ಗುಂಡುಗಳು ಮತ್ತು ಅಶ್ರುವಾಯು ಶೆಲ್‌ಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ.

ಹಡಗು ಕಂಟೇನರ್ ಅಳವಡಿಕೆ

ಮುಖ್ಯವಾಗಿ ಖೈಬರ್ ಪಖ್ತುನ್ಖ್ವಾದಲ್ಲಿ ಪ್ರತಿಭಟನಾಕಾರರನ್ನು ಎದುರಿಸಲು ಸರ್ಕಾರ ರಸ್ತೆ ತಡೆಯ ಅಳವಡಿಕೆ, ಇಂಟರ್‌ನೆಟ್‌ ಸ್ಥಗಿತ ಮತ್ತು ಭಾರಿ ಭದ್ರತಾ ಕ್ರಮಗಳನ್ನು ನಿಯೋಜಿಸಿದೆ. ಇಸ್ಲಾಮಾಬಾದ್ ಗೆ ಹೋಗುವ ರಸ್ತೆಗಳಲ್ಲಿ ಹಲವಾರು ಹಡಗು ಕಂಟೇನರ್​​​ಗಳನ್ನು ಅಡ್ಡಲಾಗಿ ಇರಿಸಲಾಗಿದೆ. ಪ್ರತಿಭಟನಾಕಾರರು ಭಾರಿ ಯಂತ್ರೋಪಕರಣಗಳನ್ನು ಬಳಸಿ ಅಡೆತಡೆಗಳನ್ನು ಸರಿಸಿ ರಾಜಧಾನಿಯತ್ತ ಸಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಾಂತಿಯುತ ಪ್ರತಿಭಟನೆಯನ್ನು ಅಧಿಕಾರಿಗಳು ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ ಪಿಟಿಐ ನಾಯಕ ಕಮ್ರಾನ್ ಬಂಗಾಶ್, ಎಲ್ಲ ಅಡೆತಡೆಗಳನ್ನು ನಿವಾರಿಸಿ ಮುಂದೆ ಸಾಗುತ್ತೇವೆ ಎಂದು ಹೇಳಿದ್ದಾರೆ. ಇಮ್ರಾನ್‌ ಖಾನ್ ಅವರ ಪತ್ನಿ ಬಿಶ್ರಾ ಬೀಬಿ (Bishra Bibi) ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಇಮ್ರಾನ್‌ ಖಾನ್ ಅವರ ಬಿಡುಗಡೆಯಾಗುವವರೆಗೂ ರ‍್ಯಾಲಿ ಮುಂದುವರಿಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪಿಟಿಐ ಬೆಂಬಲಿಗರು ಇಸ್ಲಾಮಾಬಾದ್​ನ ಡಿ – ಚೌಕ್‌ನಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. ಇತ್ತ ಸರ್ಕಾರ ಈ ಪ್ರತಿಭಟನೆಯನ್ನು ಹತ್ತಿಕ್ಕುವುದಾಗಿ ಹೇಳಿದೆ.

ಏನಿದು ಪ್ರಕರಣ?

2023ರ ಆಗಸ್ಟ್‌ನಿಂದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ 150ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಇಮ್ರಾನ್‌ ಖಾನ್‌ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ತೋಷಾಖಾನಾ (ಖಜಾನೆ)ಗೆ ಸೇರಬೇಕಾದ ಉಡುಗೊರೆಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದ ಪ್ರಕರಣ ಎದುರಿಸುತ್ತಿದ್ದಾರೆ. ಅವರ ವಿರುದ್ಧ ಕೋರ್ಟ್‌ ಜಾಮೀನು ರಹಿತ ಅರೆಸ್ಟ್‌ ವಾರಂಟ್‌ ಹೊರಡಿಸಿತ್ತು. ತೋಷಾಖಾನಾ ಎಂಬುದು ಇಲಾಖೆಯಾಗಿದ್ದು, ಪ್ರಧಾನಿ ಸೇರಿ ರಾಜಕಾರಣಿಗಳಿಗೆ ನೀಡುವ ಉಡುಗೊರೆಗಳನ್ನು ಖಜಾನೆಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ ಇಮ್ರಾನ್‌ ಖಾನ್‌ ಅವರು ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿದ ಆರೋಪ ಹೊತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ಅವರ ಪಕ್ಷ ಪಿಟಿಐ (Pakistan Tehreek-e-Insaf) ಆರೋಪಿಸಿದೆ.

ಈ ಸುದ್ದಿಯನ್ನೂ ಓದಿ: ಅಂಧರ ಟಿ20 ವಿಶ್ವಕಪ್: ಪಾಕ್‌ ಪ್ರಯಾಣಕ್ಕೆ ಅನುಮತಿ ನೀಡದ ಕೇಂದ್ರ