Tuesday, 26th November 2024

MarilingaGowda MaliPatil Column: ವಿದ್ಯಾಮಂತ್ರಿಗಳೇ, ಇಷ್ಟೊಂದು ಸಿಟ್ಯಾಕೆ ಸಿಡುಕ್ಯಾಕೆ ?

ಕಳಕಳಿ

ಮರಿಲಿಂಗಗೌಡ ಮಾಲಿಪಾಟೀಲ್

ಮಗುವೊಂದು ಆಕ್ಷೇಪಾರ್ಹ ಮಾತನ್ನು ಆಡಿದರೆ ತಪ್ಪು ಮಗುವಿನದಲ್ಲ. ಯಾಕೆಂದರೆ ಮಗುಗಿಳಿಯಿದ್ದಂತೆ; ತಾನು ಕೇಳಿಸಿಕೊಂಡಿದ್ದನ್ನು ಪುನ
ರುಚ್ಚರಿಸುತ್ತದೆಯೇ ಹೊರತು, ಅದು ಮಗುವಿನ ಸ್ವಂತ ಮಾತಲ್ಲ. ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮುಜುಗರಕ್ಕೊಳಗಾದ ಘಟನೆಯೊಂದು ರಾಜ್ಯದಲ್ಲಿ ನಡೆದಿದೆ. ಸಿಇಟಿ, ಜೆಇಇ, ನೀಟ್‌ನಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ಸುಮಾರು ೨೫,೦೦೦ ವಿದ್ಯಾರ್ಥಿಗಳಿಗೆ ಸಜ್ಜುಗೊಳಿಸಲಾಗಿರುವ ಉಚಿತ ಆನ್‌ಲೈನ್ ತರಬೇತಿ ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಸಚಿವರು ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಂಭಾಷಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ, “ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ” ಎಂದು ವಿದ್ಯಾರ್ಥಿ‌ ಯೊಬ್ಬ ಹೇಳಿದ್ದು ಕೇಳಿಬಂತು. ಆಗ ಸಚಿವರು, “ಏನಪ್ಪ ಹಂಗಂದ್ರೆ? ನಾನೇನು ಉರ್ದು ಮಾತಾಡ್ತಿದ್ದೀನಾ?” ಎಂದು ಆರಂಭದಲ್ಲಿ ತಮ್ಮನ್ನು ಸಮರ್ಥಿಸಿಕೊಳ್ಳುವ ಯತ್ನ ಮಾಡಿದರೂ ಅಕ್ಕಪಕ್ಕದಲ್ಲಿದ್ದವರು ನಕ್ಕಾಗ ಕಿರಿಕಿರಿಯಾಗಿ ಆತನ ಟೀಕೆಗೆ ‘ಸ್ಟುಪಿಡ್’ ಎಂದು ಪ್ರತಿಕ್ರಿಯಿಸಿ, ಆತ ಯಾರೆಂದು ತಿಳಿದು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

ಈ ಪ್ರಕರಣವನ್ನು ವಿಶ್ಲೇಷಿಸುವಾಗ ಮೊದಲು ಏಳುವ ಪ್ರಶ್ನೆಯೇ- ‘ಯಾರು ಸ್ಟುಪಿಡ್?’ ಬುದು. ಮಧು ಬಂಗಾರಪ್ಪನವರ ಕನ್ನಡ ಭಾಷೆಯ ಬಗ್ಗೆ ಟೀಕೆ ವ್ಯಕ್ತವಾಗುತ್ತಿರುವುದು ಇದೇ ಮೊದಲಲ್ಲ. ಅವರು ‘ಕರ್ನಾಟಕ’ ಎಂಬ ಪದವನ್ನು ಉಚ್ಚರಿಸಲೂ ತಡವರಿಸುತ್ತಾರೆ ಎಂಬ ಮಾತುಗಳು ಹಿಂದೊಮ್ಮೆ ಕೇಳಿಬಂದಿದ್ದವು. “ತಮಗೆ ಅಷ್ಟು ಚೆನ್ನಾಗಿ ಕನ್ನಡ ಮಾತನಾಡಲು ಬರುವುದಿಲ್ಲವೆಂದು ಮಧು ಬಂಗಾರಪ್ಪ ಅವರೇ ಒಮ್ಮೆ ಹೇಳಿರ ಲಿಲ್ಲವೇ?” ಎಂದು ಪ್ರಹ್ಲಾದ ಜೋಶಿಯವರು ಪ್ರಶ್ನಿಸಿದ್ದಾರೆ. ಒಟ್ಟಾರೆಯಾಗಿ ಸಚಿವರ ಕನ್ನಡದ ಬಗ್ಗೆ ಹಿಂದೆಲ್ಲಾ ಸಾರ್ವಜನಿಕ ವಾಗಿ ಸಾಕಷ್ಟು ಆಕ್ಷೇಪದ ಮಾತುಗಳು ಬಂದಿವೆ. ಈಗ ಅದನ್ನೇ ವಿದ್ಯಾರ್ಥಿಯೊಬ್ಬ ಆಡಿದ್ದಾನೆ, ತಪ್ಪೇನು? ‘ಯಾರು ಸ್ಟುಪಿಡ್?’ ಎಂಬುದನ್ನು ನಿರ್ಧರಿಸಬೇಕಾದ ಕಾಲ ಈಗ ಬಂದಿದೆ.

ಶಿಕ್ಷಣ ಸಚಿವರನ್ನು ಮೆಚ್ಚಿಸಲು ಅಧಿಕಾರಿಗಳು ವಿದ್ಯಾರ್ಥಿಯ ಮೇಲೆ ಕ್ರಮ ಕೈಗೊಳ್ಳುತ್ತಾರಾ? ಅಥವಾ ಆತನ ಟೀಕೆಯನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಕನ್ನಡವನ್ನು ಸುಧಾರಿಸಿಕೊಳ್ಳುವ ಪ್ರಯತ್ನಕ್ಕೆ ಶಿಕ್ಷಣ ಸಚಿವರು ಕೈಹಾಕುತ್ತಾರಾ? ಒಟ್ಟಿನಲ್ಲಿ, ಯಾರು ಸ್ಟುಪಿಡ್ ಎಂಬುದು ಮುಂದಿನ ದಿನ ಗಳಲ್ಲಿ ನಿರ್ಧಾರವಾಗಲಿದೆ. ಸಚಿವರೊಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಒಂದಷ್ಟು ಶಿಷ್ಟಾಚಾರಗಳನ್ನು
ಖಂಡಿತ ಪಾಲಿಸಬೇಕು. ತಮ್ಮ ನಡೆ-ನುಡಿ ಎಲ್ಲವನ್ನೂ ಜನರು ಗಮನಿಸುತ್ತಾರೆ ಎಂಬುದು ಅವರಿಗೆ ಅರಿವಿರಬೇಕು. ಮಧು ಬಂಗಾರಪ್ಪ
ಅವರ ಹೇರ್‌ಸ್ಟೈಲ್ ಕೂಡ ಹಿಂದೊಮ್ಮೆ ಚರ್ಚೆಗೆ ಗ್ರಾಸವಾಗಿತ್ತು; ಆದರೆ ಅವರು ಆ ಟೀಕೆಗೆ ಕಿವಿಗೊಡಲಿಲ್ಲ. ಒಂದು ಕಾಲದಲ್ಲಿ ‘ದೇವಿ’ ಎಂಬ
ಸಿನಿಮಾದಲ್ಲಿ ನಟಿಸಿದ್ದ ಮಧು ಬಂಗಾರಪ್ಪ ಅವರು ‘ಚೆನ್ನಾಗಿ ಕಾಣಿಸಿಕೊಳ್ಳುವುದರ’ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಬಹುದು; ಆದರೆ ಸಚಿವ
ರಾಗಿ ಆ ‘ಚೆನ್ನಾಗಿ’ ಎನ್ನುವುದು ಬೇರೆ ರೀತಿ ಇರುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬಹುದಿತ್ತು.

ಆದರೆ, ಜನರಾಗಲೀ, ಮಾಧ್ಯಮದವರಾಗಲೀ, ಮಧು ಬಂಗಾರಪ್ಪ ಅವರ ಹೇರ್‌ಸ್ಟೈಲ್ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ; ಹಾಗಾಗಿ ಆ ವಿಷಯ ವಿವಾದವಾಗಲಿಲ್ಲ. ಆದರೆ, ತಾವು ಸಾರ್ವಜನಿಕರ ಅಭಿಪ್ರಾಯಕ್ಕೆ ಬೆಲೆ ಕೊಡುವುದಿಲ್ಲ, ತಮ್ಮಿಷ್ಟದಂತೆಯೇ ಇರುವುದು ಎಂಬ ಒಂದು ಬಲವಾದ ಸಂದೇಶವನ್ನು ರಾಜ್ಯದ ಜನತೆಗೆ ಕೊಟ್ಟರು. ಇದು ಹಿತಕರವಾದ ಸಂದೇಶ ವಂತೂ ಆಗಿರಲಿಲ್ಲ.

ಈ ಘಟನೆ ಜನರ ಮನದಲ್ಲಿನ್ನೂ ಹಸಿರಾಗಿರುವಾಗಲೇ ಶಿಕ್ಷಣ ಸಚಿವರ ‘ಕನ್ನಡ’ದ ವೈಖರಿ ಪ್ರಶ್ನಿಸಲ್ಪಟ್ಟಿದೆ. ಇದು ಕೂಡ ನಿರ್ಲಕ್ಷಿಸುವ ವಿಷಯ
ವಲ್ಲ. ಈ ವಿಷಯ ಈ ಮೊದಲೇ ಸಾರ್ವಜನಿಕ ವಾಗಿ ಚರ್ಚೆಯಾಗಿದೆ, ಈ ಬಗ್ಗೆ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ. ಅದನ್ನು ಓದಿ
ಯಾದರೂ ಮಧು ಅವರು ತಮ್ಮನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡಬಹುದಿತ್ತು. ತಮ್ಮ ಕನ್ನಡವನ್ನು ಸುಧಾರಿಸಿಕೊಳ್ಳುವುದು
ಸಾಧ್ಯವೇ ಇಲ್ಲ ಎಂಬುದು ಖಚಿತವಾದರೆ ಖಾತೆ ಬದಲಾವಣೆಗಾದರೂ ಅವರು ಪ್ರಯತ್ನಿಸಬಹುದಿತ್ತು. ಆದರೆ ಅವರು ಆ ಟೀಕೆಯನ್ನೂ
ನಿರ್ಲಕ್ಷಿಸಿ, ತಮಗೆ ಕನ್ನಡದಲ್ಲಿ ಸಂವಹನ ಸಾಧ್ಯವಿದೆ, ಸಚಿವರಾಗಿ ಕರ್ತವ್ಯ ನಿರ್ವಹಿಸಲು ಅಷ್ಟು ಸಾಕು ಎಂಬ ನಿಲುವಿಗೆ ಬಂದಿರಬಹುದು.

ಕನ್ನಡ ಭಾಷೆಗೆ ಸಮೃದ್ಧ ಇತಿಹಾಸವಿದೆ, ೮ ಬಾರಿ ಜ್ಞಾನಪೀಠ ಪ್ರಶಸ್ತಿ ಗಳಿಸಿದ ಹೆಗ್ಗಳಿಕೆಯಿದೆ. ಕನ್ನಡದ ಬಗ್ಗೆ ಕನ್ನಡಿಗರಿಗೆ ಹೆಮ್ಮೆ, ಅಭಿಮಾನ
ಇವೆ. ಹಾಗಂತ, ಶಿಕ್ಷಣ ಸಚಿವರ ಬಾಯಲ್ಲಿ ಕನ್ನಡದ ‘ಕೊಲೆ’ಯಾದರೆ ಜನರು ಏನೂ ಮಾಡಲು ಸಾಧ್ಯವಿಲ್ಲದ ನಿಸ್ಸಹಾಯಕರು. ಆದರೆ
ಸಚಿವರ ಈ ವೈಖರಿಯ ಬಗ್ಗೆ ತಮ್ಮ ಮನೆಯಲ್ಲಿ ಜನರು ಚರ್ಚಿಸುತ್ತಾರೆ, ಅದು ಮಕ್ಕಳ ಕಿವಿಗೆ ಬಿದ್ದೇಬೀಳುತ್ತದೆ, ಮಕ್ಕಳು ಅದನ್ನು ಸಾರ್ವಜನಿಕ
ವಾಗಿ ಆಡುತ್ತಾರೆ. ಇಷ್ಟು ವಿವೇಚನೆಯೂ ಮಧು ಬಂಗಾರಪ್ಪ ಅವರಿಗೆ ಬಂದಿಲ್ಲವೇ? ಹಾಗಾಗಿಯೇ ಇಂಥ ಒಂದು ಸಂದರ್ಭಕ್ಕೆ ಅವರು
ಮುಖಾಮುಖಿಯಾಗುವ ಪರಿಸ್ಥಿತಿ ಎದುರಾಯಿತಾ? ಈ ನಾಡಿನಲ್ಲಿ ಸಾಕಷ್ಟು ಶಿಕ್ಷಣ ಸಚಿವರು ಆಗಿ ಹೋಗಿದ್ದಾರೆ.

ಆದರೆ ಭಾಷೆಯ ಕಾರಣಕ್ಕಾಗಿ ಯಾವ ಶಿಕ್ಷಣ ಸಚಿವರೂ ಹೀಗೆ ಟೀಕೆಗೆ ಒಳಗಾಗಿಲ್ಲ. ಪ್ರಸ್ತುತ ಇದು ರಾಜ್ಯದಲ್ಲಿ ಮಾತ್ರ ಚರ್ಚೆ
ಗೊಳಗಾಗಿರಬಹುದು; ಆದರೆ ಇಂದಿನ ಆನ್ ಲೈನ್ ಜಮಾನಾದಲ್ಲಿ ನಾಳೆ ದೇಶಾದ್ಯಂತ, ವಿಶ್ವಾದ್ಯಂತ ಚರ್ಚೆಗೆ ಗ್ರಾಸ ಒದಗಿಸಬಹುದು.
‘ಕರ್ನಾಟಕದ ಶಿಕ್ಷಣ ಮಂತ್ರಿಗೆ ಕನ್ನಡ ಬರುವುದಿಲ್ಲ’ ಎಂಬ ಟೀಕೆ ಹೊರರಾಜ್ಯದಲ್ಲಿ ಕೇಳಿಸಿದರೆ ಅದು ಯಾರಿಗೆ ಅವಮಾನ ತರುವಂಥ
ವಿಷಯ? ಇದೇನೂ ಉತ್ಪ್ರೇಕ್ಷಿತ ಊಹೆಯಲ್ಲ.

ಕಾವೇರಿ ಗಲಾಟೆಯ ಸಂದರ್ಭದಲ್ಲಿ ನಮ್ಮ ನಾಡಿನ ಚಳವಳಿಯ ನಾಯಕರೊಬ್ಬರನ್ನು ತಮಿಳುನಾಡಿನ ನಟನೊಬ್ಬ ಟೀಕಿಸಿದ್ದು, ಪರಿಣಾಮವಾಗಿ ಆತ ಪ್ರಮುಖ ಪಾತ್ರದಲ್ಲಿದ್ದ ಭಾರಿ ಬಜೆಟ್‌ನ ಚಲನಚಿತ್ರವೊಂದನ್ನು ಬಹಿಷ್ಕರಿಸುವುದಾಗಿ ಕನ್ನಡಿಗರು ಬೆದರಿಕೆ ಹಾಕಿದ್ದು, ಬಳಿಕ ಆ ನಟ ಕ್ಷಮೆ ಕೋರಿದ್ದು ನಾವು ಮರೆತ ವಿಷಯ ಅಲ್ಲ. ಇಂದು ಪ್ರಪಂಚದ ಯಾವ ಮೂಲೆಯಲ್ಲಿ ಏನೇ ನಡೆದರೂ, ಅದು ನಾಳೆಯೇ ಪ್ರಪಂಚ ದಾದ್ಯಂತ ತಿಳಿದುಬಿಡುತ್ತದೆ. ಹೀಗಿರುವಾಗ, ಶಿಕ್ಷಣ ಸಚಿವರ ಕನ್ನಡದ ವೈಖರಿಯ ವಿಷಯವನ್ನಿಟ್ಟುಕೊಂಡು ಪರಭಾಷಿಕರು ನಾಳೆ ಕನ್ನಡಿಗರನ್ನು ಗೇಲಿಮಾಡಿದರೆ ಅದಕ್ಕೆ ಹೊಣೆ ಯಾರು? ಆಗ ಯಾರು ಯಾರ ವಿರುದ್ಧ ಪ್ರತಿಭಟಿಸಬೇಕು? ಪ್ರಶ್ನೆ ಕೇಳುವುದು ಭಾರತೀಯ ಪರಂಪರೆ.

‘ಪ್ರಶ್ನಿಸದೇ ಯಾವುದನ್ನೂ ಒಪ್ಪಬೇಡ’ ಎಂದವರು ಕನ್ನಡಿಗರ ಹೆಮ್ಮೆಯ ಎಚ್.ನರಸಿಂಹಯ್ಯ ನವರು. ಶಾಲೆಯ ಪ್ರವೇಶದ್ವಾರದಲ್ಲಿದ್ದ
‘ಬಾಗಿಲೊಳು ಕೈಮುಗಿದು ಒಳಗೆ ಬಾ’ ಎಂಬ ಘೋಷವಾಕ್ಯವನ್ನು ‘ಧೈರ್ಯವಾಗಿ ಪ್ರಶ್ನಿಸು’ ಎಂದು ಬದಲಾಯಿಸಿದ್ದು ಇದೇ ಕಾಂಗ್ರೆಸ್
ಸರಕಾರ. ಪ್ರಶ್ನಿಸುವುದನ್ನು ಮಕ್ಕಳಿಗೆ ಬಾಲ್ಯ ದಲ್ಲಿಯೇ ಕಲಿಸಿರುವುದು ನಮ್ಮ ಇತಿಹಾಸ. ವಾಜಶ್ರವಸ್ ಎಂಬ ಋಷಿಯು ಯಾಗ
ವೊಂದನ್ನು ಮಾಡಿ ತನ್ನ ಆಶ್ರಮದಲ್ಲಿನ ಗೋವುಗಳನ್ನು ದಾನ ಕೊಡುತ್ತಿರುತ್ತಾನೆ. ಆಗ ಮಗನಚಿಕೇತ, “ನನ್ನನ್ನು ಯಾರಿಗೆ ದಾನ ಕೊಡು
ತ್ತೀಯ ಅಪ್ಪಾ?” ಎಂದು ಪ್ರಶ್ನಿಸಿದಾಗ, “ನಿನ್ನನ್ನು ಯಮನಿಗೆ ದಾನ ಕೊಟ್ಟಿರುವೆ” ಎಂದು ಉತ್ತರಿಸುತ್ತಾನೆ ವಾಜಶ್ರವಸ್. ಆದರೆ
ನಚಿಕೇತನು ಧೈರ್ಯವಾಗಿ ಯಮನಲ್ಲಿಗೆ ಹೋಗಿ, ಆತನನ್ನು ದಿಟ್ಟತನದಿಂದ ಪ್ರಶ್ನಿಸಿ, ಜ್ಞಾನದ ರಾಶಿಯನ್ನೇ ಸಂಪಾದಿಸಿದ್ದು ನಮ್ಮ
ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಸನಾತನ ಧರ್ಮದ ನಿಲುವುಗಳನ್ನು ಪ್ರಶ್ನಿಸಿದ ಚಾರ್ವಾಕನನ್ನು ನಮ್ಮ ಪರಂಪರೆ ಒಪ್ಪಿಕೊಂಡ ಪರಿಣಾಮವಾಗಿ ‘ಚಾರ್ವಾಕ ಸಿದ್ಧಾಂತ’ವೇ ಒಂದು ವಿಭಾಗ ವಾಗಿ ಉಳಿದುಕೊಂಡಿದೆ. ಹೀಗೆ, ಪ್ರಶ್ನಿಸುವುದು ನಮಗೆ ಪರಂಪರೆಯಾಗಿ ಬಂದಿದೆ. ಅಂತೆಯೇ, ಈಗಿನ ನಮ್ಮ ಶಿಕ್ಷಣ ಸಚಿವರ ಕನ್ನಡ ಜ್ಞಾನವೂ ಪ್ರಶ್ನಿಸಲ್ಪಟ್ಟಿದೆ. ಇದನ್ನು ಒಪ್ಪಬೇಕಾದ್ದು ಅನಿವಾರ್ಯ. ಆದರೆ ಉತ್ತರ ಏನು? ಕೊಡಬೇಕಿರುವುದು ಯಾರು? ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಅನಿವಾರ್ಯ. ಟೀಕೆಗೆ ವಿಚಲಿತರಾಗುವವರು ಕಂಬಳಿ ಹೊದ್ದು ಮನೆಯಲ್ಲಿ ಮಲಗಬೇಕೇ ಹೊರತು ರಾಜಕೀಯಕ್ಕೆ ಇಳಿಯಲೇಬಾರದು. ಜನಪ್ರತಿನಿಧಿ ಎಂದಮೇಲೆ ಸಾವಿರ ಮಾತುಗಳು ಬರುತ್ತವೆ.

ಅವುಗಳಲ್ಲಿ ಹುರುಳಿದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ಟೀಕೆ ಸತ್ಯವಾಗಿದ್ದರೆ ತಮ್ಮನ್ನು ತಾವು ತಿದ್ದಿಕೊಳ್ಳಲು ಪ್ರಾಮಾಣಿಕವಾಗಿ
ಯತ್ನಿಸಬೇಕು. ಮಧು ಅವರ ತಂದೆ ಎಸ್.ಬಂಗಾರಪ್ಪನವರು ಎದುರಿಸಿದ್ದ ಟೀಕೆಗಳು ಒಂದೆರಡಲ್ಲ. ಆದರೆ ಅವರು ಟೀಕೆಗೆ ಅಂಜಲಿಲ್ಲ,
ಅಳುಕಲಿಲ್ಲ. ತಂದೆಯನ್ನು ಮಧು ಅವರು ಮಾದರಿಯಾಗಿ ಸ್ವೀಕರಿಸಬೇಕು, ಜನಪ್ರತಿನಿಧಿಯಾಗಿದ್ದುಕೊಂಡು ವಿದ್ಯಾರ್ಥಿಗೆ ಬೆದರಿಕೆ ಹಾಕು
ವಂಥ ಕೆಲಸವನ್ನು ಮಾಡಬಾರದು. ಈ ಮಾತಿಗೆ ಇಷ್ಟು ಒತ್ತುನೀಡಲು ಕಾರಣ, “ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ” ಎಂಬ ವಿದ್ಯಾರ್ಥಿ ಯೊಬ್ಬನ ಮಾತಿಗೆ ಪ್ರತಿಕ್ರಿಯೆಯಾಗಿ “ಇದು ಸುಮ್ಮನಿರುವ ವಿಷಯವಲ್ಲ” ಎಂದಿರುವ ಮಧು ಬಂಗಾರಪ್ಪ ಅವರು, ಹಾಗೆ ಮಾತಾಡಿದ ವಿದ್ಯಾರ್ಥಿ ಯಾರೆಂದು ತಿಳಿದುಕೊಂಡು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆ ವಿದ್ಯಾರ್ಥಿಯನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವಲ್ಲ, ಆದರೆ ಆತನ ಮೇಲೆ ಕ್ರಮ ಕೈಗೊಳ್ಳುವ, ಆತ ಅವಮಾನಕ್ಕೀಡಾಗುವಂತೆ ಮಾಡುವ ಯಾವುದೇ ಚರ್ಯೆಯು ಬುದ್ಧಿವಂತಿಕೆಯ ನಡೆಯಲ್ಲ ಎಂಬುದನ್ನು ಶಿಕ್ಷಣ ಸಚಿವರು ಅರ್ಥಮಾಡಿಕೊಳ್ಳಬೇಕು. ಸಚಿವರು ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾದರಿಯಾಗಿ ತೆಗೆದುಕೊಳ್ಳಬೇಕು. ಸಿದ್ದರಾಮಯ್ಯ ಅವರು ಸಾಧಾರಣವಾಗಿ ಯಾವ ಟೀಕೆಗೂ ವಿಚಲಿತರಾಗುವುದಿಲ್ಲ. ಪತ್ರಕರ್ತರ ಮತ್ತು ಸಾರ್ವಜನಿಕರ ಪ್ರಶ್ನೆಗಳಿಗೆ ಕ್ರೀಡಾಮನೋಭಾವದಿಂದ, ಸಾವಧಾನದಿಂದ ಉತ್ತರಿಸುತ್ತಾರೆ. ಹಾಸ್ಯಪ್ರಜ್ಞೆ- ಬುದ್ಧಿವಂತಿಕೆ ಮೇಳೈಸಿದ ಉತ್ತರಗಳನ್ನು ನೀಡುತ್ತಾರೆ. ಶಾಲೆಗಳಿಗೆ ಹೋದಾಗ, ಮಕ್ಕಳೊಂದಿಗೆ ಮಕ್ಕಳಾಗುತ್ತಾರೆ, ವ್ಯಾಕರಣ ಪಾಠ ಮಾಡುತ್ತಾರೆ. ಅವರ ಪಕ್ಕ ಕುಳಿತ, ಅವರೊಂದಿಗೆ ವೈಯಕ್ತಿಕವಾಗಿ ಸ್ಪಂದಿಸಿದ ಮಕ್ಕಳು ಅದನ್ನು ತಮ್ಮ ಜೀವಮಾನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.

ಮಧು ಬಂಗಾರಪ್ಪರನ್ನು ವಿಮರ್ಶಿಸಿದ ವಿದ್ಯಾರ್ಥಿ ಯಾರೆಂಬುದನ್ನು ತಿಳಿದುಕೊಳ್ಳುವುದು ದೊಡ್ಡ ವಿಷಯವಲ್ಲ. ಆ ವಿದ್ಯಾರ್ಥಿಯ ಪೋಷಕರು ಪ್ರಸ್ತುತ ಮತ್ತೊಂದು ಪಕ್ಷದ ಬೆಂಬಲಿಗರಾಗಿರಬಹುದು, ಮನೆಯಲ್ಲಿ ಅವರು ಆಡುವ ಮಾತನ್ನೇ ಆತ ಕೇಳಿಸಿಕೊಂಡು ಹಾಗೆ ಹೇಳಿರ
ಬಹುದು. ಮಧು ಅವರು ಸ್ವತಃ ಆತನ ಬಳಿಗೆ ಹೋಗಿ ವಿಶ್ವಾಸಕ್ಕೆ ತೆಗೆದುಕೊಂಡು, ತಮಗೆ ಕನ್ನಡ ಚೆನ್ನಾಗಿ ತಿಳಿದಿದೆ ಎಂದು ಮನವರಿಕೆ ಮಾಡಿ
ಕೊಡಬಹುದು; ಆಗ ಆತನಲ್ಲೂ, ತನ್ನ ಒಂದು ಮಾತಿಗೆ ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ ಎಂಬ ಅಭಿಮಾನ ಮೂಡಬಹುದು. ಅದನ್ನು ಬಿಟ್ಟು ಸೇಡಿನ ಕ್ರಮಕ್ಕೆ ಮುಂದಾದರೆ, ಅದು ವಿದ್ಯಾರ್ಥಿಯ ಭವಿಷ್ಯಕ್ಕೆ ಮುಳ್ಳಾಗ ಬಹುದು. ಆದ್ದರಿಂದ ಸದ್ಯಕ್ಕೆ, “ಅಪ್ರಿಯವಾದ ಸತ್ಯವನ್ನು ಸಾರ್ವಜನಿಕವಾಗಿ ಆಡಬೇಡ” ಎಂಬ ಒಂದು ಹಿತವಚನವನ್ನು ಆ ವಿದ್ಯಾರ್ಥಿಗೆ ಹೇಳಿ ಮನವರಿಕೆ ಮಾಡಿಕೊಟ್ಟರೆ ಸಾಕು. ಶಿಕ್ಷಣ ಸಚಿವರು ಆ ವಿದ್ಯಾರ್ಥಿಯ ಪಾಲಿಗೆ ‘ಮಧು’ ವಾಗಲಿ, ತನ್ಮೂಲಕ ಆತನ ಬಾಳನ್ನು ‘ಬಂಗಾರ’ ವಾಗಿಸಲಿ….

(ಲೇಖಕರು ಸಾಮಾಜಿಕ ಹೋರಾಟಗಾರರು)

ಇದನ್ನೂ ಓದಿ: ಸರಕಾರಿ ಶಾಲೆಗಳಿಗೆ ಈಗ ಡಿಮಾಂಡಪ್ಪೋ ಡಿಮಾಂಡು