ವಿಶ್ವರಂಗ
ರಂಗಸ್ವಾಮಿ ಮೂಕನಹಳ್ಳಿ
ತೀರಾ ಇತ್ತೀಚೆಗೆ ನನಗೊಬ್ಬರು ಸ್ನೇಹಿತರಾದರು. ಅವರು ಎಂಎನ್ಸಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದರು. ಸಂಸ್ಥೆಯಲ್ಲಿ ಒಂದಲ್ಲಾ ಒಂದು ತೊಡಕು, ಅವಮಾನಗಳು. ಒಟ್ಟಿನಲ್ಲಿ ಕೆಲಸದಲ್ಲಿ ನೆಮ್ಮದಿಯಿಲ್ಲ, ಸದಾ ಕಿರಿಕಿರಿ. ಅವರೊಬ್ಬ ಸಂಸ್ಕೃತ ಜ್ಞಾನವುಳ್ಳ ವ್ಯಕ್ತಿ. ಅಕ್ಕಪಕ್ಕದಲ್ಲಿ, ಸಂಸ್ಥೆಯಲ್ಲಿ ಪೂಜೆ- ಪುನಸ್ಕಾರವೆಲ್ಲ ಇವರದ್ದೇ! ಬಹಳ ನೊಂದಿದ್ದ ಅವರು ಈ ಬಗ್ಗೆ ನನ್ನೊಂದಿಗೆ ಚರ್ಚಿಸಿದರು. ಪೌರೋಹಿತ್ಯ
ವನ್ನೇ ಉಪವೃತ್ತಿಯಾಗಿ ಸ್ವೀಕರಿಸಿ ಎನ್ನುವ ಸಲಹೆ ಯನ್ನು ನೀಡಿದೆ.
ಅಂತೆಯೇ ನಡೆದುಕೊಂಡ ಅವರಿಗೆ ಕೆಲಸದ ಒತ್ತಡದ ಮಧ್ಯೆ ಈ ಉಪವೃತ್ತಿ ಮನಸ್ಸಿಗೆ ಶಾಂತಿ ನೀಡುತ್ತಿದೆ. ಜತೆಗೆ ಹೆಚ್ಚುವರಿ ಆದಾಯದ ಮೂಲವೂ ಆಗಿದೆ. ಮೂಲವೃತ್ತಿಯಲ್ಲಿ ತೊಂದರೆ ಬಂದರೆ ಅದನ್ನು ಬಿಟ್ಟು ಬದುಕಬಲ್ಲೆ ಎನ್ನುವ ಆತ್ಮವಿಶ್ವಾಸ ವೃದ್ಧಿಸಿದೆ. ಹೀಗಾಗಿ ಮೂಲ
ವೃತ್ತಿಯೂ ಚೆನ್ನಾಗಿ ನಡೆಯುತ್ತಿದೆ. ನಾನು ಬಾರ್ಸಿಲೋನಾ ನಗರದಲ್ಲಿ ವಾಸಿಸುವಾಗ ಅಲ್ಲಿ ಸೃಷ್ಟಿಯಾಗಿರುವ ವಿಶೇಷ ವೃತ್ತಿಗಳನ್ನು ಕುರಿತು
ಅತೀವ ಆನಂದವನ್ನು ಮತ್ತು ಆಶ್ಚರ್ಯವನ್ನು ಹೊರಹಾಕುತ್ತಿದ್ದೆ. ಮನೆಮನೆ ಬಾಗಿಲಿಗೆ ಕಾರಿನಲ್ಲಿ ಬಂದು ನಾಯಿಗೆ ಸ್ನಾನಮಾಡಿಸಿ ಹೋಗುವುದು, ಕೆಟ್ಟ ನಡವಳಿಕೆ ಇರುವ ನಾಯಿಗಳನ್ನು ತಹಬಂದಿಗೆ ತರುವುದು, ಅಂದರೆ ಅವುಗಳ ಅಗ್ರೆಸಿವ್ ಗುಣವನ್ನು ಕಡಿಮೆ ಮಾಡಿಸಿ ಜನಸ್ನೇಹಿ ಮಾಡುವುದು, ಅದಕ್ಕೊಂದು ಟಿವಿ ಷೋ ನಡೆಸುವುದು!
ಓಹ್, ನಾವು ಕೇಳಿರದ ಒಂದು ಹೊಸ ಲೈನ್ ಸೃಷ್ಟಿಸಿ, ಅದರಲ್ಲಿ ವಿವಿಧ ಮೂಲದ ಆದಾಯ ಗಳಿಕೆಗೆ ಅನುವು ಮಾಡಿ ಕೊಟ್ಟ ಮನೋಬಲಕ್ಕೆ ನಾನು ಸೋತುಹೋಗಿದ್ದೆ. ಇಂದಿಗೆ ನಾನು ಮೈಸೂರಿನ ನಿವಾಸಿ. ನಮ್ಮ ಪಕ್ಕದ ಮನೆಯಲ್ಲಿನ ನಾಯಿ ಸ್ವಲ್ಪ ಅಗ್ರೆಸಿವ್. ಅದನ್ನು ಟ್ರೈನ್ ಮಾಡಲು ಒಬ್ಬ ಹುಡುಗ ಬರುತ್ತಾನೆ.
ಟ್ರೈನಿಂಗ್ ಮುಗಿದ ಮೇಲೆ ಅದಕ್ಕೊಂದು ಒಳ್ಳೆಯ ಸ್ನಾನ, ಮಸಾಜ್ ಕೊಟ್ಟು ಹಣ ಪಡೆದು ಹೋಗುತ್ತಾನೆ. ‘ಅಬ್ಬಾ’ ಎನಿಸಿತು. ಇವತ್ತು ಭೌಗೋಳಿಕ ವ್ಯತ್ಯಾಸಗಳು ಇಲ್ಲವಾಗಿವೆ. ಮಾಡಬೇಕು ಎನ್ನುವ ಮನಸ್ಸಿದ್ದರೆ, ಹೊಸ ಅವಕಾಶಗಳು ನಮ್ಮ ಮುಂದಿವೆ. ತೀರಾ ಇತ್ತೀಚೆಗೆ, ಅರವಿಂದ ಸ್ವಾಮಿ ಎನ್ನುವ ನಟನ ಬಗ್ಗೆ ರೀಲ್ಸ್ಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ‘ರೋಜಾ’, ‘ಬಾಂಬೆ’ ಮುಂತಾದ ಹಿಟ್ ಸಿನಿಮಾಗಳ ನಂತರ ಅವರು ಮಾಯವಾದರು. 3300 ಕೋಟಿ ರುಪಾಯಿ ವ್ಯಾಪಾರ ಮಾಡುವ ಸಂಸ್ಥೆ ಯನ್ನು ಕಟ್ಟಿ ನಿಲ್ಲಿಸಿರುವ ಇವರು ‘ಪ್ಯಾಶನ್’ಗಾಗಿ ಈಗ ನಟನೆಯಲ್ಲೂ ತೊಡಗಿಕೊಂಡಿದ್ದಾರೆ. ಅಸಾಧ್ಯ ಎನ್ನುವುದೇನಾದರೂ ಇದ್ದರೆ ಅದು ನಮ್ಮಲ್ಲಿದೆ, ನಮ್ಮ ಚಿಂತನೆಯಲ್ಲಿದೆ. ಮನಸ್ಸು ಮಾಡಿದರೆ ಏನು ಬೇಕಾದರೂ ಆಗಬಹುದು. ಏನೂ ಆಗುವ ಬದಲು, ‘ಇದಾಗಬೇಕು’ ಎನ್ನುವ ನಿಖರತೆ ಅದನ್ನು ಇನ್ನಷ್ಟು ಸುಲಭವಾಗಿಸುತ್ತದೆ. ನಿಮ್ಮ ಇಚ್ಛೆಗೆ ತಕ್ಕಂತೆ ಬೇಕಾದ ಮಾರ್ಗವನ್ನು ಆಯ್ದುಕೊಳ್ಳಬಹುದು.
ಪಾಠ ಹೇಳುವ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಎಲ್ಲರಿಗೂ ಮನನವಾಗುವ ರೀತಿಯಲ್ಲಿ ಬೋಧಿಸುತ್ತಾ ಹೋದರೆ ವ್ಯಕ್ತಿ ಒಂದು ಬ್ರ್ಯಾಂಡ್ ಆಗಿ
ರೂಪಾಂತರ ಹೊಂದುತ್ತಾನೆ. ಇದಕ್ಕೆ ನಾವು ಅನೇಕ ಉದಾಹರಣೆಗಳನ್ನು ನೀಡಬಹುದು. ಬೈಜುಸ್ ಸೃಷ್ಟಿಕರ್ತ ರವೀಂದ್ರನ್ ಇದಕ್ಕೊಂದು ದೊಡ್ಡ ಉದಾಹರಣೆ. ಜಗತ್ತಿನ ಅತಿದೊಡ್ಡ ‘ಎಡ್ ಟೆಕ್’ ಕಟ್ಟಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬೈಜುಸ್ ಯಶೋಗಾಥೆ, ನಂತರ ಅವರು ಎಲ್ಲವನ್ನೂ ತಮ್ಮ ತೆಕ್ಕೆಗೆ ಹಾಕಿಕೊಂಡು ಮೊನಾಪಲಿ ಸೃಷ್ಟಿಸುವ ಸಮಯದಲ್ಲಿ ಎಡವಿದ್ದು, ಇಂದಿಗೆ ಯಾವುದೋ ಆಸ್ತಿ ಅಡವಿಟ್ಟು ತಮ್ಮ ನೌಕರರಿಗೆ ಸಂಬಳ ನೀಡಿದ್ದು ಬೇರೆಯ ಕಥೆ.
ವಿನೋದ್ ಕುಮಾರ್ ಬನ್ಸಲ್ ಹೆಸರು ಕೂಡ ನೀವು ಕೇಳಿರುತ್ತೀರಿ. ರಾಜಸ್ಥಾನದ ಕೋಟಾ ಎನ್ನುವ ಜಾಗ ಕೋಚಿಂಗ್ ಕ್ಲಾಸ್ ಚಟುವಟಿಕೆಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ಕೋಟಾಕ್ಕೆ ಇಂಥ ಖ್ಯಾತಿ ಬಂದಿದ್ದು ಬನ್ಸಲ್ರಿಂದ ಎಂದರೆ ತಪ್ಪಾಗುವುದಿಲ್ಲ. ತೀರಾ ವಿರಳವಾದ ‘ಮಸ್ಕ್ಯುಲರ್ ಡೆಸ್ಟ್ರೋಫಿ’ ಎನ್ನುವ ರೋಗಕ್ಕೆ ಬನ್ಸಲ್ ತುತ್ತಾಗುತ್ತಾರೆ, ಕೆಲಸದಿಂದ ಅವರನ್ನು ತೆಗೆದುಹಾಕಲಾಗುತ್ತದೆ. ಆದರೆ ಸಂಸ್ಥೆಯ ಮಾಲೀಕರು ಎರಡು ವರ್ಷಗಳ ಕಾಲ ಕರುಣೆಯ ಆಧಾರದ ಮೇಲೆ ಸಹಾಯ ಮಾಡುತ್ತಾರೆ. ಆಗ ಬನ್ಸಲ್ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್ ಶುರುಮಾಡು ತ್ತಾರೆ. ಇದೆಲ್ಲಾ ಆಗುವಾಗ ಸಮಯ 1981-1985! ಈ ವೇಳೆಗಾಗಲೇ ಸಂಸ್ಥೆಯಲ್ಲಿ ಗಳಿಸುತ್ತಿದ್ದ ಆದಾಯಕ್ಕಿಂತ ನಾಲ್ಕಾರು ಪಟ್ಟು ಹೆಚ್ಚು ಹಣವನ್ನು ಕೋಚಿಂಗ್ ಮೂಲಕ ಪಡೆಯಲು ಅವರು ಆರಂಭಿಸಿರುತ್ತಾರೆ. 2008ರ ವೇಳೆಗೆ, ದೊಡ್ಡ ಕಾಲೇಜಿನಲ್ಲೂ ಇಲ್ಲದಷ್ಟು ಅಡ್ಮಿಷನ್ ಇವರಲ್ಲಿ ಆಗಿರುತ್ತದೆ. 25 ಸಾವಿರಕ್ಕೂ ಮೀರಿ ವಿದ್ಯಾರ್ಥಿಗಳು ಇವರಿಂದ ಕೋಚಿಂಗ್ ಪಡೆಯುತ್ತಿರುತ್ತಾರೆ. ವಾರ್ಷಿಕ ಆದಾಯ 120 ಕೋಟಿಗೂ ಮೀರಿ ಬೆಳೆಯುತ್ತದೆ.
1946ರಲ್ಲಿ ಜನಿಸಿದ ಬನ್ಸಲ್ ಅವರಿಗೆ, ‘ನಿಮಗೆ ಮಸ್ಕ್ಯುಲರ್ ಡೆಸ್ಟ್ರೋಫಿ ಎಂಬ ರೋಗವಿದೆ ಮತ್ತು ನಿಮ್ಮ ಜೀವಿತಾವಧಿ ಬಹಳ ಕಡಿಮೆ’ ಎಂದು 1974ರಲ್ಲಿ ವೈದ್ಯಲೋಕವು ಹೇಳುತ್ತದೆ. ನಿಮಗೆ ಗೊತ್ತಿರಲಿ, ಅವರು ಇಹಲೋಕ ತ್ಯಜಿಸಿದ್ದು ಮೇ 2021ರಲ್ಲಿ, 71ರ ವಯೋಮಾನದಲ್ಲಿ! ಇದರರ್ಥ ಇಷ್ಟೇ- ಏನನ್ನಾದರೂ ಮಾಡಬೇಕು ಎಂಬ ಛಲವು ಅವರ ಜೀವಿತಾವಽಯನ್ನು ಕೂಡ ಹೆಚ್ಚಿಸಿತು, ಜತೆಗೆ ಕೋಟ್ಯಂತರ ರುಪಾಯಿ ವಹಿವಾಟು ನಡೆಸುವ ಸಂಸ್ಥೆಯನ್ನು ಹುಟ್ಟುಹಾಕುವುದಕ್ಕೂ ಕಾರಣ ವಾಯಿತು. ಕೋಟಾ ಎನ್ನುವ ಊರಿನ ಇತಿಹಾಸವನ್ನೇ ಬದಲಿಸಿತು.
ಮೇಲಿನದು ಕೇವಲ ಇಬ್ಬರು ವ್ಯಕ್ತಿಗಳ ಉದಾಹರಣೆ. ಇದೇ ರೀತಿಯಲ್ಲಿ ಹಲವು ಕ್ಷೇತ್ರಗಳಲ್ಲಿ ಹಲವು ಮಹನೀಯರು ಗಣನೀಯ ಸಾಧನೆ ಮಾಡಿ
ದ್ದಾರೆ. ಬೇಜಾರು ಎಂದು ಮನೆಯಲ್ಲಿ ಕೇಕ್ ತಯಾರಿಸಲು ಶುರುಮಾಡಿದ ಮಹಿಳೆ, ಇಂದು ತನ್ನ ಪತಿಯೂ ಸೇರಿದಂತೆ ನೂರಾರು ಜನಕ್ಕೆ ಕೆಲಸ ನೀಡಿರುವ ವಿಷಯವಿರಬಹುದು, 80ರ ಹರೆಯದಲ್ಲಿ ‘ಗ್ರಾನಿ ಕಿಚನ್’ ತೆರೆದು ಸೈ ಎನಿಸಿಕೊಂಡ ಅಜ್ಜಿ ಇರಬಹುದು, ರಸ್ತೆಬದಿಯಲ್ಲಿ ಇಡ್ಲಿ ಮಾರಲು ಶುರುಮಾಡಿದ ಮಹಿಳೆಯೊಬ್ಬರು ಇಂದಿಗೆ ರೆಸ್ಟೋರೆಂಟ್ ಸರಣಿಯನ್ನೇ ಹೊಂದಿರುವ ಯಶೋಗಾಥೆಯಿರಬಹುದು- ಹೀಗೆ ಅವರು
ಮಾಡಲು ಸಾಧ್ಯ ಎಂದರೆ ಅದು ನಮ್ಮಿಂದ ಕೂಡ ಸಾಧ್ಯ. ನಮ್ಮ ಮತ್ತು ನಮ್ಮ ಸಾಧನೆಯ ನಡುವೆ ಇರುವುದು ಕೇವಲ ಕಾರಣಗಳು. ಆಗುವುದಿಲ್ಲ ಎನ್ನುವುದಕ್ಕೆ ಸಾವಿರ ಕಾರಣ, ಮಾಡಬೇಕು ಎನ್ನುವುದಕ್ಕೆ ಒಂದೇ ಕಾರಣ ಸಾಕು.
ನಾವು ಮಾಡುವ ಕೆಲಸ, ಸಂಸ್ಥೆ ಇಷ್ಟವಾಗದಿದ್ದ ಪಕ್ಷದಲ್ಲಿ ಅದಕ್ಕೆ ಪರ್ಯಾಯ ಹುಡುಕಿಕೊಳ್ಳಬೇಕು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದರು ಕೂಡ
ಪರ್ಯಾಯ ಆದಾಯದ ಮೂಲವನ್ನು ಹುಡುಕಿಕೊಳ್ಳಬೇಕು. ನಾವು ಶ್ರೀಮಂತರಾಗಲು ಇರುವುದು ಎರಡು ದಾರಿ. ಒಂದನೆಯದು- ಹೂಡಿಕೆ ಮಾಡುವುದು, ಸರಿಯಾದ ಹೂಡಿಕೆ ಮಾಡುವುದು. ಎರಡನೆಯದು- ಮಾಡುವ ಕೆಲಸ, ನೀಡುವ ಸೇವೆಯಲ್ಲಿ ಶ್ರದ್ಧೆ ಇರಿಸಿಕೊಂಡು ನಾವೇ ಬ್ರ್ಯಾಂಡ್ ಆಗಿ ಬದಲಾಗುವುದು.
ನೆನಪಿರಲಿ, ಕೆಲವೊಮ್ಮೆ ಮುಖ್ಯವಾಹಿನಿ ಕೆಲಸ ಕ್ಕಿಂತ ‘ಇದು ಸೈಡ್ ಬಿಸಿನೆಸ್’ ಎಂದು ನಾವು ಅಂದು ಕೊಂಡ ಕೆಲಸಗಳೇ ಕೈಹಿಡಿಯುತ್ತವೆ. ಸಿರಿವಂತಿಕೆಯ ಕಡೆಗಿನ ಪ್ರಮುಖವಾದ ಹೆಜ್ಜೆಗಳಲ್ಲಿ ಒಂದಕ್ಕಿಂತ ಹೆಚ್ಚು ಆದಾಯದ ಮೂಲಗಳನ್ನು ಸೃಷ್ಟಿಸಿಕೊಳ್ಳುವುದು ಒಂದೆನಿಸಿಕೊಳ್ಳುತ್ತದೆ. ನಮ್ಮ ರಿಯಲ್ ಕಾಲಿಂಗ್, ಅಂದರೆ ನಮಗೇನು ಇಷ್ಟ ಎನ್ನುವುದನ್ನು ತಿಳಿದುಕೊಂಡು ಅದನ್ನೇ ವೃತ್ತಿಯಾಗಿ ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಸಮಾಜಕ್ಕೆ ಹೆದರಿಯೋ ಅಥವಾ ಗೌರವಕ್ಕೋ ವಿಜ್ಞಾನಿ ಅಥವಾ ಎಂಜಿನಿಯರ್ ಆಗಿರಬಹುದು, ಆದರೆ ಹೋಟೆಲ್ ಉದ್ಯಮದ ಸೆಳೆತವಿದ್ದರೆ ಅದನ್ನು ಬಿಡಬಾರದು. ಕೊನೆಗೂ ನಮ್ಮ ಕೈಹಿಡಿಯುವುದು ನಾವು ಇಷ್ಟಪಟ್ಟು ಮಾಡುವ ಕೆಲಸ ಮಾತ್ರ. ಶ್ರೀಮಂತಿಕೆಯ ಕಡೆಗೆ ಒಯ್ಯುವುದು ಕೂಡ ಅದೇ ಅಂಶ. ಹೀಗಾಗಿ ನೀವು ಮಾಡಬೇಕಾದುದು ಇಷ್ಟೇ: ಇಷ್ಟವಾದ ಕೆಲಸವನ್ನು ಆಯ್ದುಕೊಳ್ಳಬೇಕು: ಕೆಲಸವು ನಿಮ್ಮ ಅಭ್ಯಾಸ ಅಥವಾ ಹವ್ಯಾಸಕ್ಕೆ ಹತ್ತಿರವಾಗಿದ್ದರೆ, ಮನಸ್ಸಿಗೆ ಇಷ್ಟವಾಗುವ ಕೆಲಸ ವಾದರೆ, ಅಲ್ಲಿಗೆ ಅದು ಕೆಲಸ ಎನ್ನಿಸಿಕೊಳ್ಳುವುದಿಲ್ಲ.
ಕೈಹಿಡಿದ ಕೆಲಸವನ್ನು ಮಾಡುತ್ತಾ ಹೋಗಬೇಕು: ಈ ದಾರಿಯಲ್ಲಿ ಯಶಸ್ಸು ಅಷ್ಟು ಬೇಗ ಸಿಗುವು ದಿಲ್ಲ. ಮತ್ತೆ ನನ್ನ ಉದಾಹರಣೆಯನ್ನೇ ನೀಡುವೆ. ಈ 6 ವರ್ಷದಲ್ಲಿ 26 ಪುಸ್ತಕಗಳನ್ನು ರಚಿಸಿರುವೆ. ಮೊದಲ 12 ಪುಸ್ತಕ ಪ್ರಕಟವಾದರೂ, ನಾನ್ಯಾರು ಎನ್ನುವುದು ಓದುಗರಿಗೆ ಗೊತ್ತಿರಲಿಲ್ಲ. ಬದು ಕೆಂದರೆ ಹಾಗೆಯೇ. ನನ್ನ ಅಂತಿಮ 8 ಪುಸ್ತಕಗಳು, ಮೊದಲ 18-19 ಪುಸ್ತಕಗಳು ನೀಡಿದ್ದಕ್ಕಿಂತ ಹೆಚ್ಚಿನ ಹಣ ಮತ್ತು ಗೌರವವನ್ನು ತಂದು ಕೊಟ್ಟಿವೆ. ತಾಳ್ಮೆ ಎಂಬುದು ಯಶಸ್ಸಿನ ಅಮ್ಮ. ಬಿಡದೆ ಕೆಲಸ ಮಾಡುವ ಗುಣ, ಅಂದರೆ ಕಂಟಿನ್ಯುಯಿಟಿ ಎಂಬುದು ಅಪ್ಪ.
ಹತ್ತಾರು ಪರ್ಯಾಯ ಮೂಲಗಳನ್ನು ಕಟ್ಟಿಕೊಳ್ಳಬೇಕು: ನನ್ನ ಪರಿಚಯದ ವ್ಯಕ್ತಿಯೊಬ್ಬರು ಮೂಲತಃ ವಿಜ್ಞಾನಿ. ಅದರಲ್ಲೂ ಭೌತಶಾಸ
ವೆಂದರೆ ಅವರಿಗೆ ಉಸಿರು. ಅವರು ಇಂದಿಗೆ ಹೋಟೆಲ್ ಕೂಡ ನಡೆಸುತ್ತಿದ್ದಾರೆ.
ವಿಜ್ಞಾನ ಬೋಧಿಸುತ್ತಾರೆ, ವಿಜ್ಞಾನಿಯಾಗಿ ಕೆಲಸ ಮಾಡುತ್ತಾರೆ, ಜತೆಗೆ ಹೋಟೆಲ್ ಬಿಸಿನೆಸ್ ಮಾಡುತ್ತಾರೆ.
ಸಾಮಾಜಿಕ ಉದ್ಯಮಗಳಲ್ಲಿ ಕೂಡ ಹಣವನ್ನು ಹೂಡಿಕೆ ಮಾಡಿ ಇನ್ವೆಸ್ಟರ್ ಆಗಿದ್ದಾರೆ. ಇವತ್ತು ತಲೆಯ ಮೇಲೆ ಒಂದು ಕ್ಯಾಪ್ ಹಾಕಿ ಕುಳಿತು
ಕೊಳ್ಳುವ ಸಮಯವಲ್ಲ. ಶಕ್ತಿಯಿದ್ದರೆ, ಮಾಡುವ ಅದಮ್ಯ ಬಯಕೆಯಿದ್ದರೆ ಸುಮ್ಮನೆ ಕೂರುವುದು ಅಪರಾಧ. ಶಕ್ತಿ ಇದ್ದಾಗ ಸಂಪತ್ತು ಸೃಷ್ಟಿಸಿಕೊಳ್ಳುವುದು ಜಾಣತನ.
ಸಮಚಿತ್ತತೆ ಕಾಯ್ದುಕೊಳ್ಳಬೇಕು: ನಾನು ಇಕನಾಮಿಕ್ಸ್, ಫೈನಾನ್ಸ್, ಜಿಯೋ ಪಾಲಿಟಿಕ್ಸ್, ಮೋಟಿ ವೇಷನಲ್ ಮತ್ತು ಪ್ರವಾಸಿ ಕಥನಗಳನ್ನು ಬರೆಯುತ್ತೇನೆ. ಹೇಳಿ-ಕೇಳಿ ಇದು ಸೋಷಿಯಲ್ ಮೀಡಿಯಾ ಯುಗ. ತರಲೆಯೊಬ್ಬ, “ನೀನು ಬೆಳಗ್ಗೆ ಮೋಟಿವೇಷನಲ್ ಗುರು, ಮಧ್ಯಾಹ್ನ
ಫೈನಾನ್ಷಿಯಲ್ ಅನಲಿಸ್ಟ್, ಸಾಯುಂಕಾಲ ಪಾಲಿಟಿಕ್ಸ್, ರಾತ್ರಿಯಾಗುತ್ತಿದ್ದಂತೆ ಲೋಕ ವಿಹಾರಿ” ಎಂದು ಕಿಚಾಯಿಸಿದ್ದ. ಅದಕ್ಕೆ ನಾನು,
“ಅಯ್ಯಾ, ನಿನಗೆ ಗೊತ್ತಿರುವುದು ಅಷ್ಟೇ, ಅದಕ್ಕೆ ಹಾಗೆ ಬರೆದಿದ್ದೀಯ. ಜಗತ್ತಿನ 197 ದೇಶಗಳಲ್ಲಿ 181ಕ್ಕೆ ನನಗೆ ವೀಸಾ ಬೇಡ. ಮನಸ್ಸು ಮಾಡಿದರೆ ನಾನು ನಾಳೆಯೇ ಕ್ಯಾಮೆರಾ ಹಿಡಿದು ಲೋಕ ಸಂಚಾರಕ್ಕೆ ಹೊರಟು ಯೂಟ್ಯೂಬರ್ ಆಗ ಬಲ್ಲೆ” ಎಂದಿದ್ದೆ. ಕಿಚಾಯಿಸುವುದೇ ಜಗತ್ತಿನ ಕೆಲಸ, ಹಾಗಂತ ನಾವು ನಮ್ಮ ಸಮತೋಲನ ಕಳೆದುಕೊಳ್ಳಬಾರದು.
ಬೆಳಗ್ಗೆಯಿಂದ ಸಂಜೆಯವರೆಗೆ ದುಡಿದು ಬರುವ ಹಣವನ್ನು ನಾವು ‘ಪ್ರಾಥಮಿಕ ಆದಾಯ’ ಎನ್ನಬಹುದು. ಅಂದರೆ, ಇದು ಯಾವುದಾದರೂ
ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ದೊರೆ ಯುವ ಆದಾಯ. ಇದರ ಜತೆಗೆ ನಾವು ಪರ್ಯಾಯ ಆದಾಯದ ಮೂಲವೊಂದನ್ನು
ಸೃಷ್ಟಿಸಿಕೊಳ್ಳಬೇಕು. ಉದಾಹರಣೆಗೆ, ಗಣಿತ, ವಿಜ್ಞಾನ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯ ವಿದ್ದು ಪಾಠ ಮಾಡಲು ಖುಷಿ ಇರುವವರು,
ಸಂಜೆಯ ವೇಳೆ ನಿತ್ಯವೂ ಒಂದೆರಡು ತಾಸು ಬಿಡುವು ಮಾಡಿಕೊಂಡು, ಅಗತ್ಯವಿರುವವರಿಗೆ ಈ ವಿಷಯವನ್ನು ಕಲಿಸುವುದರ ಮೂಲಕ
ಪರ್ಯಾಯ ಆದಾಯವನ್ನು ಕೂಡ ಗಳಿಸಬಹುದು.
ಇದರಿಂದಾಗಿ ಕಲಿತ ವಿದ್ಯೆಗೆ ಸಾಣೆ ಹಿಡಿದಂತೆ ಕೂಡ ಆಗುತ್ತದೆ. ಹೀಗೆ ಹವ್ಯಾಸದ ಮೂಲಕ ಅಥವಾ ಇಷ್ಟವಾದ ಕೆಲಸವನ್ನು ಮಾಡುವುದರ
ಮೂಲಕ ಗಳಿಸುವ ಆದಾಯವನ್ನು ‘ಎರಡನೆಯ ಅಥವಾ ದ್ವಿತೀಯಕ ಆದಾಯ’ ಎನ್ನಬಹುದು.
ಜತೆಗೆ, ಹೀಗೆ ಗಳಿಸಿದ ಹಣವನ್ನು ನಿಯತವಾಗಿ ಹೂಡಿಕೆ ಮಾಡಿ ಮತ್ತಷ್ಟು ಗಳಿಸಲು ಶುರುಮಾಡಿದರೆ, ಆಗ ನಾವು ಪರ್ಯಾಯ ಆದಾಯ ಮೂಲ ಗಳನ್ನು ಸೃಷ್ಟಿಸಿಕೊಂಡಂತೆ. ನೆನಪಿರಲಿ, ಒಂದು ಆದಾಯದ ಮೂಲವನ್ನೇ ನೆಚ್ಚಿಕೊಂಡಿದ್ದರೆ, ಸದಾ ಚಲನಶೀಲವಾಗಿರುವ ಇಂದಿನ ಸಮಾಜದಲ್ಲಿ ಅಪಾಯಕ್ಕೆ ಆಹ್ವಾನವಿತ್ತಂತೆ. ನಾವು ಬಯಸಿದ್ದನ್ನು ಮಾಡಿದರೆ ಅದು ಕೆಲಸ ಅನ್ನಿಸಿಕೊಳ್ಳುವುದಿಲ್ಲ, ಆಯಾಸವೂ ಆಗುವುದಿಲ್ಲ. ಹೀಗಾಗಿ ಪರ್ಯಾಯ ಆದಾಯ ಮೂಲಗಳನ್ನು ಸೃಷ್ಟಿಸಿಕೊಳ್ಳುವುದು ಕಷ್ಟವೇನಲ್ಲ.
ಇದನ್ನೂ ಓದಿ: Rangaswamy Mookanahalli Column