ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೆಗಾ ಹರಾಜಿನಲ್ಲಿ (Mega Auction) ಗಮನ ಸೆಳೆದ 13 ವರ್ಷದ ವೈಭವ್ ಸೂರ್ಯವಂಶಿ (Vaibhav Suryavamshi) ರಾಜಸ್ಥಾನ ರಾಯಲ್ಸ್ ತಂಡಕ್ಕೆ 1.1 ಕೋಟಿ ರೂ.ಗೆ ಹರಾಜಾಗುವ ಮೂಲಕ ಕ್ರಿಕೆಟ್ ಲೋಕದ ಹುಬ್ಬೇರಿಸುವಂತೆ ಮಾಡಿದ್ದರು. ಇವರ ಜತೆಗೆ ಮತೋರ್ವ ಆಟಗಾರ ಕೂಡ ದುಬಾರಿ ಮೊತ್ತ ಪಡೆಯುವ ಮೂಲಕ ಇದೀಗ ಸುದ್ದಿಯಾಗಿದ್ದಾನೆ. ಈ ಆಟಗಾರ ಹೆಸರು ಪ್ರಿಯಾಂಶ್ ಆರ್ಯ(priyansh arya).
ದಿಲ್ಲಿ ಮೂಲದ 23 ವರ್ಷದ ಎಡಗೈ ಬ್ಯಾಟರ್ ಪ್ರಿಯಾಂಶ್ ಆರ್ಯ ಹೆಸರು ಹರಾಜಿಗೆ ಬಂದೊಡನೆ ಅವರ ಖರೀದಿಗಾಗಿ ಹಲವು ಫ್ರಾಂಚೈಸಿಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿತು. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅವರು ಕೊನೆಗೆ 3.80 ಕೋಟಿ ಪಡೆದು ಪಂಜಾಬ್ ಕಿಂಗ್ಸ್ ತಂಡದ ಪಾಲಾದರು. ಪಂಜಾಬ್ ಜತೆಗೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳೂ ಪ್ರಿಯಾಂಶ್ ಆರ್ಯ ಖರೀದಿಗೆ ಭಾರೀ ಪೇಪೋಟಿ ನಡೆಸಿತು.
ಇದನ್ನೂ ಓದಿ IPL Auction 2025: ʻಪಂತ್ ಅತ್ಯಂತ ದುಬಾರಿ ಆಟಗಾರʼ-ಮೆಗಾ ಹರಾಜಿನ ಬಳಿಕ 10 ತಂಡಗಳ ಆಟಗಾರರ ವಿವರ!
6 ಎಸೆತಕ್ಕೆ 6 ಸಿಕ್ಸರ್ ಬಾರಿಸಿದ ಬ್ಯಾಟರ್
ಪ್ರಿಯಾಂಶ್ ಆರ್ಯ ಇದೇ ವರ್ಷ ನಡೆದಿದ್ದ ಡೆಲ್ಲಿ ಟಿ20 ಲೀಗ್‌ನಲ್ಲಿ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಸುದ್ದಿಯಾಗಿದ್ದರು. ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಕೇವಲ ಶತಕ ಮಾತ್ರ ಇದೇ ಪಂದ್ಯದಲ್ಲಿ 6 ಎಸೆತಕ್ಕೆ 6 ಸಿಕ್ಸರ್ ಕೂಡ ಬಾರಿಸಿದ್ದರು. ಈ ಪ್ರದರ್ಶನ ಇದೀಗ ಅವರನ್ನು ಐಪಿಎಲ್ ಅಂಗಳಕ್ಕೆ ಬರುವಂತೆ ಮಾಡಿದೆ. ಇಲ್ಲಿಯೂ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಸಾಧನೆಗೈದರೆ ಅವರ ಪಾಲಿಗೆ ಟೀಮ್ ಇಂಡಿಯಾ ಬಾಗಿಲು ಕೂಡ ತೆರೆಯಬಹುದು. ಡೆಲ್ಲಿ ಪರ ಇದುವರೆಗೆ 11 ಟಿ20 ಪಂದ್ಯಗಳನ್ನಾಡಿರುವ ಪ್ರಿಯಾಂಶ್ 356 ರನ್ ಬಾರಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 2 ಅರ್ಧಶತಕ ಸಿಡಿಸಿದ್ದಾರೆ.