Tuesday, 26th November 2024

Udaipur Royal family: ಬೀದಿಗೆ ಬಂತು ರಾಜ ಮನೆತನದ ಕೌಟುಂಬಿಕ ಕಲಹ; ಇತ್ತಂಡಗಳ ನಡುವೆ ಮಾರಾಮಾರಿ…ಕಲ್ಲು ತೂರಾಟ

Royal family of Udaipur

ಜೈಪುರ: ಉದಯಪುರದ ರಾಜಮನೆತನದ (Udaipur Royal family) ಎರಡು ಬಣಗಳ ನಡುವೆ ಸೋಮವಾರ ರಾತ್ರಿ ಮಾರಾಮಾರಿಯೇ ನಡೆದಿದೆ. ಸಿಟಿ ಪ್ಯಾಲೇಸ್ (City Palace) ಹೊರಗೆ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಯಾಗಿದೆ. ರಾಜಸಮಂದ್‌ನ ಬಿಜೆಪಿ ಶಾಸಕ ಮಹಾರಾಣಾ ವಿಶ್ವರಾಜ್ ಸಿಂಗ್ ಮೇವಾರ್ (Vishvaraj Singh Mewar) ಚಿಕ್ಕಪ್ಪ ಅರವಿಂದ್ ಸಿಂಗ್ ಮೇವಾರ್ ನಡುವೆ ಘರ್ಷಣೆ ಸಂಭವಿಸಿದ್ದು, ವಿಶ್ವರಾಜ್ ಸಿಂಗ್‌ಗೆ ಅರಮನೆಗೆ ಪ್ರವೇಶ ನೀಷೇಧಿಸಿದ ಬೆನ್ನಲ್ಲೇ ಈ ಘರ್ಷಣೆ ಏರ್ಪಟ್ಟಿದೆ ಎಂದು ತಿಳಿದು ಬಂದಿದೆ.

ಈ ತಿಂಗಳ ಆರಂಭದಲ್ಲಿ ವಿಶ್ವರಾಜ್ ಸಿಂಗ್ ತಂದೆ ಮಹೇಂದ್ರ ಸಿಂಗ್ ಮೇವಾರ್ ಅವರು ಮರಣ ಹೊಂದಿದ್ದರು. ಅವರ ಮರಣದ ನಂತರ ಸೋಮವಾರ ಬೆಳಿಗ್ಗೆ ಚಿತ್ತೋರಗಢ ಕೋಟೆಯಲ್ಲಿ ವಿಶ್ವರಾಜ್ ಸಿಂಗ್‌ ಮೇವಾರ್‌ ರಾಜಮನೆತನದ ಮುಖ್ಯಸ್ಥರಾಗಿ ಅಧಿಕಾರ ಪಡೆದುಕೊಂಡರು. ಪಟ್ಟಾಭೀಷೇಕದ ನಂತರ ವಿಧಿವಿಧಾನಗಳ ಭಾಗವಾಗಿ ಉದಯಪುರದ ಏಕಲಿಂಗನಾಥ ದೇವಾಲಯ ಹಾಗೂ ಸಿಟಿ ಪ್ಯಾಲೇಸ್‌ಗೆ ಹೊಸದಾಗಿ ಆಯ್ಕೆಗೊಂಡ ಮುಖ್ಯಸ್ಥರು ಭೇಟಿ ನೀಡುವುದು ವಾಡಿಕೆ. ಆದರೆ ಮಹೇಂದ್ರ ಸಿಂಗ್‌ ಮೇವಾರ್‌ ಹಾಗೂ ಅವರ ಕಿರಿಯ ಸಹೋದರ ಅರವಿಂದ ಸಿಂಗ್‌ ಮೇವಾರ್‌ ನಡುವಿನ ದ್ವೇಷದಿಂದಾಗಿ ವಿಶ್ವರಾಜ್‌ ಸಿಂಗ್‌ ಅವರಿಗೆ ಅರಮನೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ. ಅರಮನೆ ಹಾಗೂ ದೇವಾಲಯ ಎರಡೂ ಅರವಿಂದ ಸಿಂಗ್‌ ಮೇವಾರ್ ಸುಪರ್ದಿಯಲ್ಲಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ವರ್ಷಗಳಿಂದ ಕುಟುಂಬದಲ್ಲಿ ಘರ್ಷಣೆ ನಡೆಯುತ್ತಿತ್ತು ಎಂಬುದು ತಿಳಿದು ಬಂದಿದೆ.

ಪ್ರವೇಶ ನಿರಾಕರಣೆಗೆ ಸಂಬಂಧಿಸಿದಂತೆ ವಿಶ್ವರಾಜ್‌ ಸಿಂಗ್‌ ಬೆಂಬಲಿಗರು ಅರಮನೆಯ ಎದುರಿಗೆ ಹೋಗಿ ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಅರಮನೆ ಸುತ್ತಲೂ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಘಟನೆಯ ಬಗ್ಗೆ ಉದಯಪುರ ಜಿಲ್ಲಾಧಿಕಾರಿ ಮಾತನಾಡಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಎರಡೂ ಬಣಗಳು ಶಾಂತಿ ಕಾಪಡಬೇಕು, ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Baba Siddique: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಗುಜರಿ ವ್ಯಾಪಾರಿ ಪೊಲೀಸ್‌ ಬಲೆಗೆ; ಬಂಧಿತರ ಸಂಖ್ಯೆ 10ಕ್ಕೆ ಏರಿಕೆ