Tuesday, 26th November 2024

Mohini Dey: ಎ ಆರ್‌ ರೆಹಮಾನ್‌ ಜತೆ ಇರುವ ನಂಟೇನು? ವಿಡಿಯೋ ಮೂಲಕ ಲವ್‌ ರೂಮರ್ಸ್‌ಗೆ ಉತ್ತರಿಸಿದ ಮೋಹಿನಿ ಡೇ

Mohini Day

ಮುಂಬೈ: ಸಂಗೀತ ಮಾಂತ್ರಿಕ ಎಆರ್‌ ರೆಹಮಾನ್‌ (AR Rahman) ಹಾಗೂ ಸಾಯಿರಾ ಬಾನು (Saira Banu) ಇತ್ತೀಚೆಗೆ ವಿಚ್ಛೇದನ ಘೋಷಿಸಿದ್ದರು. ಸುದೀರ್ಘ 29 ವರ್ಷಗಳ ದಾಂಪತ್ಯ ನಂತರ ಈ ಜೋಡಿ ಬೇರ್ಪಡುವುದಾಗಿ ಘೋಷಿಸಿತ್ತು. ಈ ಘಟನೆಯಾಗಿ ಕೆಲವೇ ಗಂಟೆಗಳಲ್ಲಿ ರೆಹಮಾನ್‌  ಅವರ ಮ್ಯೂಸಿಕ್‌ ಟೀಮ್‌ನಲ್ಲಿ ಬಾಸಿಸ್ಟ್‌ ಆಗಿದ್ದ ಮೋಹಿನಿ ಡೇ (Mohini Dey) ಕೂಡ ತನ್ನ ಗಂಡನಿಗೆ ವಿಚ್ಛೇದನ ಘೋಷಿಸಿದ್ದರು. ಮ್ಯೂಸಿಕ್‌ ಕಂಪೋಸರ್‌ ಆಗಿರುವ ಮಾರ್ಕ್‌ ಹಾರ್ಟ್ಸುಚ್‌ನಿಂದ ವಿಚ್ಛೇದನ ಪಡೆದುಕೊಂಡಿರುವುದಾಗಿ ಮೋಹಿನಿ ಡೇ ಸೋಷಿಯಲ್‌ ಮೀಡಿಯಾದಲ್ಲಿ ಘೋಷಿಸಿದ್ದರು.  ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆ ಬೇರೆ ಆಗುತ್ತಿದ್ದೇವೆ ಎಂದು ತಿಳಿಸಿದ್ದರು. ಇಬ್ಬರೂ ಒಂದೇ ದಿನ ವಿಚ್ಛೇದನ ಘೋಷಿಸಿದ್ದರಿಂದ ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಇದೀಗ ಸ್ವತಃ ಮೋಹಿನಿ ಅವರೇ ತಮ್ಮ ಹಾಗೂ ರೆಹಮಾನ್‌ ನಡುವೆ ಇರುವ ಸಂಬಂಧವೇನು ಎಂದು ಹೇಳಿದ್ದಾರೆ.

ಇತ್ತೀಚೆಗೆ ಎಆರ್‌ ರೆಹಮಾನ್‌ ವಿಚ್ಛೇದನದ ನಂತರ ಮೋಹಿನಿ ಡೇ ಜತೆ ಅವರ ಹೆಸರನ್ನು ತಳುಕು ಹಾಕಲಾಗಿತ್ತು. ಇದೀಗ ಮೋಹಿನಿ , ಸೋಷಿಯಲ್‌ ಮಿಡಿಯಾದಲ್ಲಿ ಲೈವ್‌ ಬಂದು, ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಮತ್ತು ರೆಹಮಾನ್‌ ಅವರ ಸಂಬಂಧ ಏನು ಎಂಬ ಬಗ್ಗೆ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ತಿಳಿಸಿದ್ದಾರೆ. ನೋಡಿ, ದಯವಿಟ್ಟು ಇಂಥ ಸುಳ್ಳು ಸುದ್ದಿಗಳನ್ನು ಹರಡಬೇಡಿ.  ಮಾಧ್ಯಮಗಳು ಈ ಎರಡೂ ಘಟನೆಗಳನ್ನು ಒಟ್ಟಿಗೇ ಸೇರಿಸಿ ಸುದ್ದಿ ಹರಡುತ್ತಿರುವುದು ಅಪರಾಧವಾಗಿದೆ.   ರೆಹಮಾನ್‌ ಅವರ ಜತೆ ಎಂಟೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನಾನು ಅವರನ್ನು ತುಂಬಾ ಗೌರವಿಸುತ್ತೇನೆ ಹಾಗೂ ಅವರು ನನ್ನ ತಂದೆಯ ಸಮಾನ. ಅವರಿಗೆ ನನ್ನ ವಯಸ್ಸಿನ ಮಗಳಿದ್ದಾಳೆ. ದಯವಿಟ್ಟು ವದಂತಿಗಳನ್ನು ಹಬ್ಬಿಸಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

ಇತ್ತೀಚೆಗೆ ವದಂತಿಗಳನ್ನು ಹರಡುವವರ ವಿರುದ್ಧ ರೆಹಮಾನ್‌ ಕೂಡ ಕಿಡಿ ಕಾರಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಸಾಯಿರಾ ಬಾನು ಕೂಡ ಆಡಿಯೋ ಮೂಲಕ ಸ್ಪಷ್ಟ ಪಡಿಸಿದ್ದು, ರೆಹಮಾನ್‌ ಮೇಲೆ ನನಗೆ ಪ್ರೀತಿ , ಗೌರವವಿದೆ. ನಾನು ಮಾಧ್ಯಮಗಳು ಹಾಗೂ ಯೂಟ್ಯೂಬರ್‌ಗಳಿಗೆ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ನಮ್ಮ ಮನ ನೋಯಿಸಬೇಡಿʼʼ ಎಂದು ವಿನಂತಿಸಿಕೊಂಡಿದ್ದರು. ತಮ್ಮ ಆರೋಗ್ಯದ ಬಗ್ಗೆಯೂ ಮಾತನಾಡಿದ ಅವರು, ಕೆಲವು ತಿಂಗಳಿನಿಂದ ಮುಂಬೈನಲ್ಲಿ ವಾಸವಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ʼʼನಾನು ಚೆನ್ನೈಯಲ್ಲಿ ಇಲ್ಲದಿರುವುದನ್ನು ತಿಳಿದು ಜನರು ಆಶ್ಚರ್ಯಪಡುತ್ತಾರೆ. ನಾನು ನನ್ನ ಪತಿ ಹಾಗೂ ಮಕ್ಕಳಿಗೆ ತೊಂದರೆ ನೀಡಲು ಬಯಸುವುದಿಲ್ಲʼʼ ಎಂದು ಹೇಳಿದ್ದರು.

ರೆಹಮಾನ್‌ ಬಗ್ಗೆ ಮಾತನಾಡಿದ ಅವರು ರೆಹಮಾನ್‌ ರತ್ನದಂತೆ. ಅವರು ವಿಶ್ವದ ಅತ್ಯುತ್ತಮ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ʼʼಜೀವನದಲ್ಲಿ ನಾನು ಅವರನ್ನು ನಂಬುತ್ತೇನೆ, ಅವರೂ ನನನ್ನು ನಂಬುತ್ತಾರೆ. ಈ ನಿರ್ಧಾರವನ್ನು ಇಬ್ಬರೂ ತೆಗೆದುಕೊಂಡಿದ್ದೇವೆ. ನಾವಿಬ್ಬರೂ ಪರಸ್ಪರ ಗೌರವಿಸುತ್ತೇವೆ. ಈ ಊಹಾಪೋಹಗಳನ್ನು ತಕ್ಷಣ ನಿಲ್ಲಿಸಿʼʼ ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ : AR Rahman : ವಿಚ್ಚೇದನದ ನಂತರ ಎ ಆರ್ ರೆಹಮಾನ್‌‌ ಮೊದಲ ಪೋಸ್ಟ್‌… ಫ್ಯಾನ್ಸ್‌ ದಿಲ್‌ ಖುಷ್‌!