Tuesday, 26th November 2024

Pak Violence: ಪಾಕಿಸ್ತಾನದಲ್ಲಿ ಭಾರೀ ಹಿಂಸಾಚಾರ; ಇಮ್ರಾನ್‌ ಖಾನ್‌ ಬೆಂಬಲಿಗರಿಂದ ದಾಂಧಲೆ, ಐವರು ಬಲಿ; ಕಂಡಲ್ಲಿ ಗುಂಡು ಆರ್ಡರ್‌!

ಇಸ್ಲಾಮಾಬಾದ್: ಪಾಕಿಸ್ತಾನದ (Pak Violence) ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan) ಬೆಂಬಲಿಗರ ಹಿಂಸಾಚಾರ ಮತ್ತೆ ಮುಂದುವರೆದಿದ್ದು,ಅವರು ವಿವಿಧೆಡೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಾ ಸೋಮವಾರ (ನ.25) ರಾಜಧಾನಿ ಇಸ್ಲಾಮಾಬಾದ್‌ ಪ್ರವೇಶಿಸಿದ್ದಾರೆ. ಈ ವೇಳೆ ಪಿಟಿಐ ಪ್ರತಿಭಟನೆಯು ಹಿಂಸಾ ಸ್ವರೂಪ ಪಡೆದಿದ್ದು, ಪೊಲೀಸರು,ಸೇನೆ ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಪಿಟಿಐನ ಹಿಂಸಾಚಾರದಿಂದಾಗಿ ಓರ್ವ ಪೊಲೀಸ್‌ ಅಧಿಕಾರಿ ಮತ್ತು ನಾಲ್ವರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರ ಪೈಕಿ ಒಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಪಾಕಿಸ್ತಾನ ಸೇನೆ ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶ ನೀಡಿದೆ. ಈ ನಡುವೆ, ಪ್ರತಿಭಟನಾಕಾರರು ಪ್ರತಿಭಟನೆ ನಡೆಸುವುದಕ್ಕಾಗಿ ಡಿ ಚೌಕ್‌ ತಲುಪಲು ಪ್ರಯತ್ನಿಸಿದ್ದರು. ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್‌ (PTI) ನಾಯಕ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ನವೆಂಬರ್ 24 ರಂದು ರಾಷ್ಟ್ರ ವ್ಯಾಪಿ ಪ್ರತಿಭಟನೆ ನಡೆಸುವಂತೆ ನೀಡಿದ್ದ ಕರೆಗೆ ಸ್ಪಂದಿಸಿ ಪಕ್ಷದ ಕಾರ್ಯಕರ್ತರು ಬೆಂಬಲಿಗರು ಹಿಂಸಾಚಾರದ ಪ್ರತಿಭಟನೆ ನಡೆಸಿದ್ದರು. ಇಮ್ರಾನ್‌ ಖಾನ್‌ ಪತ್ನಿ ಬುಶ್ರಾ ಬೀಬಿ (Bushra Bibi) ಪ್ರತಿಭಟನೆಯ ನೇತೃತ್ವ ವಹಿಸಿಕೊಂಡಿದ್ದು,ಪ್ರತಿಭಟನಾಕಾರರನ್ನು ಅವರು ಸೋಮವಾರ ಸಂಜೆ ಇಸ್ಲಾಮಾಬಾದ್‌ (Islamabad) ತಲುಪಿದ್ದಾರೆ ಎನ್ನಲಾಗಿದೆ.

ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಕಾರ್ಯಕರ್ತರು ರಾಜಧಾನಿ ಇಸ್ಲಾಮಾಬಾದ್‌ ಗೆ ಪ್ರವೇಶವಾಗುತ್ತಿದ್ದಂತೆ ನಗರದಲ್ಲಿ ಪರಿಸ್ಥಿತಿಯು ಉದ್ವಿಗ್ನಗೊಂಡಿದ್ದು, ಸರಣಿ ಹಿಂಸಾಚಾರಗಳು ನಡೆದಿವೆ. ಪೊಲೀಸರ ಮೇಲೆ ದಾಳಿ ಮಾಡುತ್ತಾ, ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆಯ ವೇಳೆ ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇಮ್ರಾನ್‌ ಖಾನ್‌ ಪಕ್ಷವು ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನು ಭಾಗಿಯಾಗುವಂತೆ ಒತ್ತಾಯಿಸಿದೆ. ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ್ದಾರೆ. ಹಾಗಾಗಿ ಖೈಬರ್-ಪಖ್ತುಂಖ್ವಾ ಮುಖ್ಯಮಂತ್ರಿ ಅಲಿ ಅಮೀನ್ ಗಂಡಪುರ್ ಮತ್ತು ಬುಶ್ರಾ ಬೀಬಿ ನೇತೃತ್ವದಲ್ಲಿ ಹಿಂಸಾಚಾರದ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.

ಪ್ರತಿಭಟನೆಯನ್ನು ನಿಯಂತ್ರಣಕ್ಕೆ ತರಲು ಶಿಪ್ಪಿಂಗ್ ಕಂಟೈನರ್‌ಗಳು, ಬ್ಯಾರಿಕೇಡ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಪ್ರತಿಭಟನಾಕಾರರನ್ನು ತಡೆಯಲು ಸರ್ಕಾರವು ಹೆದ್ದಾರಿಗಳನ್ನೂ ನಿರ್ಬಂಧಿಸಿತ್ತು . ಆದಾಗ್ಯೂ, ಪ್ರತಿಭಟನಾಕಾರರು ಎಲ್ಲಾ ಅಡೆತಡೆಗಳನ್ನು ದಾಟಿಕೊಂಡು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಇಸ್ಲಾಮಾಬಾದ್ ಬಳಿ ಮತ್ತು ಪಂಜಾಬ್ ಪ್ರಾಂತ್ಯದಾದ್ಯಂತ ನಡೆದ ಘರ್ಷಣೆಯಲ್ಲಿ ಪ್ರತಿಭಟನಾಕಾರರು ಒಬ್ಬ ಪೊಲೀಸ್ ಅಧಿಕಾರಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಪ್ರತ್ಯೇಕ ಹಿಂಸಾಚಾರದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದು, 119 ಮಂದಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ 22 ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಇಬ್ಬರು ಅಧಿಕಾರಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಉಸ್ಮಾನ್ ಅನ್ವರ್ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಜೈಲು ಸೇರಿದ ಇಮ್ರಾನ್‌ಗೆ ಕ್ಯಾರೇ ಎನ್ನುತ್ತಿಲ್ಲವೇಕೆ?