ನವದೆಹಲಿ: ಮನೆ ಕೆಲಸದವಳೊಂದಿಗೆ ಹೇಗೆ ವರ್ತಿಸಬೇಕು ಎಂದು ಕೇಳಿ ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್ನಲ್ಲಿ (Instagram) ಮಾಡಿರುವ ಪೋಸ್ಟ್ ಭಾರಿ ವೈರಲ್ (Viral Video) ಆಗಿದೆ. ದುಬೈನಲ್ಲಿರುವ ಭಾರತೀಯ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮ (Social Media) ಬಳಕೆದಾರರ ಸಹಾಯ ಕೇಳಿ ಇದನ್ನು ಪೋಸ್ಟ್ ಮಾಡಿದ್ದಾರೆ. ಮನೆಯ ಕೆಲಸದವಳು ಸೋಫಾ, ಬೆಡ್ ಮೇಲೆ ಕುಣಿಯುತ್ತಾಳೆ, ಫೋನ್ ಬಳಸುತ್ತಾಳೆ ಎಂದು ಮಹಿಳೆ ದೂರಿದ್ದಾರೆ. ಅವಳಿಗೆ ಹೇಗೆ ಹೇಳುವುದು, ಅವಳೊಂದಿಗೆ ಹೇಗೆ ವರ್ತಿಸುವುದು ಎಂಬುದಾಗಿ ಮಹಿಳೆ ಪ್ರಶ್ನಿಸಿದ್ದಾಳೆ.
ನೀವು ನಿಮ್ಮ ಮನೆಯ ಕೆಲಸದವಳೊಂದಿಗೆ ಹೇಗೆ ವರ್ತಿಸುತ್ತೀರಿ ಎಂಬುದನ್ನು ತಿಳಿಸಿ ಎನ್ನುವ ಸಲಹೆಯನ್ನು ಕೇಳಿದ್ದಾಳೆ. ಈ ವಿಡಿಯೋದಲ್ಲಿ ತನ್ನ ಕೆಲಸದವಳನ್ನು ಅವಾಚ್ಯವಾಗಿ ನಿಂದಿಸಿರುವ ಮಹಿಳೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಡಿಯೋದಲ್ಲಿ ಅನಾಮಿಕಾ ರಾಣಾ ಅವರು ತಮ್ಮ ಮನೆ ಸಹಾಯಕಿ ಸೋಫಾದ ಮೇಲೆ ಒರಗಿಕೊಂಡು ಫೋನ್ ಬಳಸುತ್ತಾರೆ ಎಂದು ದೂರಿದ್ದಾರೆ. ಅಲ್ಲದೇ ಆಕೆಯ ಈ ಕೃತ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದಾಗಿ ಹೇಳಿದ್ದಾರೆ.
ಈ ವಿಡಿಯೋ ನೋಡಿ ಬಹಳಷ್ಟು ಮಂದಿ ಯೋಚಿಸಬಹುದು. ಇದೇನು ದೊಡ್ಡ ವಿಷಯ. ಆದರೆ ಆಕೆಯೊಂದಿಗೆ ನಾನು ಯಾವ ರೀತಿ ವರ್ತಿಸಬೇಕೆಂದು ಎಂಬುದು ತಿಳಿಯುತ್ತಿಲ್ಲ ಎಂದು ರಾಣಾ ತಿಳಿಸಿದ್ದಾರೆ. ಇನ್ನು ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ಗಳು ಬಂದಿವೆ. ಅನೇಕರು ಮಹಿಳೆಯ ದೂರಿನ ವಿಡಿಯೋ ನೋಡಿ ಆಕೆಯನ್ನು ಟೀಕಿಸಿದ್ದಾರೆ.
ಒಬ್ಬ ವ್ಯಕ್ತಿ, ಮನೆ ಕೆಲಸದವಳು ಸೋಫಾದಲ್ಲಿ ಏಕೆ ಕುಳಿತುಕೊಳ್ಳಬಾರದು ಎಂದು ಪ್ರಶ್ನಿಸಿದ್ದರೆ, ಇನ್ನೊಬ್ಬರು ಆಕೆ ಹಾಸಿಗೆಯ ಮೇಲೆ ಕುಳಿತಿರುವುದರಿಂದ ನಿಮಗೆ ಏನು ಸಮಸ್ಯೆ ಎಂದು ಕೇಳಿದ್ದಾರೆ. ಮತ್ತೊಬ್ಬರು ನಮ್ಮ ಸೇವಕಿ ನಮ್ಮೊಂದಿಗೆ ಸೋಫಾದಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಉಪಹಾರ ಸೇವಿಸುತ್ತಾರೆ. ಜನರ ಕೆಲಸ ಮತ್ತು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ತಾರತಮ್ಯ ಮಾಡಲು ನಾವು ಇಷ್ಟಪಡುವುದಿಲ್ಲವಾದ್ದರಿಂದ ನಾವು ಇದನ್ನು ಒಪ್ಪುತ್ತೇವೆ. ಅಲ್ಲದೆ, ಅವಳು ಸಮಯಕ್ಕೆ ಸರಿಯಾಗಿ ಒಳ್ಳೆಯ ಕೆಲಸವನ್ನು ಮಾಡುತ್ತಾಳೆ ಎಂದು ಹೇಳಿದ್ದಾರೆ.
ಮತ್ತೊಬ್ಬರು, ಒಂದು ಸಲಹೆ ನೀವು ಇತರರಿಂದ ಹೇಗೆ ನಿರೀಕ್ಷೆ ಮಾಡುತ್ತಿರೋ ಹಾಗೆಯೇ ಅವಳನ್ನು ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ. ಸಾವಿರಾರು ಕಾಮೆಂಟ್ಗಳ ನಡುವೆ ಕೆಲವರು ಮಹಿಳೆಯ ಪರವಾಗಿ ಮಾತನಾಡಿದ್ದಾರೆ. ಸೋಫಾದಲ್ಲಿ ಕುಳಿತುಕೊಳ್ಳುವುದು ಪರವಾಗಿಲ್ಲ. ಆದರೆ ಬೆಡ್ ಮೇಲೆ ಕುಳಿತುಕೊಳ್ಳದಂತೆ ಆಕೆಗೆ ತಿಳಿ ಹೇಳಿ. ಪತಿ ಮತ್ತು ಮಗುವಿಗೆ ಮಾತ್ರ ನಮ್ಮ ಬೆಡ್ ಮೇಲೆ ಮಲಗಲು ಅನುಮತಿ ಕೊಡುತ್ತೇವೆ. ಬೇರೆಯವರಿಗೆ ಅಲ್ಲ. ನಾವು ಅದನ್ನು ಮಾಡುವುದಿಲ್ಲ. ಹಾಗಾಗಿ ನೀವು ಮಾಡಬಾರದು ಎಂದು ತಿಳಿಸಿ ಎಂದಿದ್ದಾರೆ.
ಇನ್ನೊಬ್ಬರು, ಇದು ನಿಮ್ಮ ಮನೆ ಮತ್ತು ನಿಮ್ಮ ನಿಯಮಗಳು. ಕೆಲವೊಮ್ಮೆ ನಾವು ಮನೆ ಕೆಲಸದವರೊಂದಿಗೆ ಹೆಚ್ಚು ಮೃದುವಾಗಿರುತ್ತೇವೆ. ಅವರು ಅದನ್ನು ಲಘುವಾಗಿ ಪರಿಗಣಿಸುತ್ತಾರೆ. ಆದರೆ ಕಟ್ಟುನಿಟ್ಟಾದ ಕ್ರಮಗಳು ಯಾವಾಗಲೂ ಒಳ್ಳೆಯದು.
ಹಾಸಿಗೆ ಅಥವಾ ಸೋಫಾದಲ್ಲಿ ನೀವು ಅವಳ ವರ್ತನೆ ಬಗ್ಗೆ ತೃಪ್ತರಾಗಿಲ್ಲ ಎನ್ನುವ ಸುಳಿವನ್ನು ನೀವು ಮನೆ ಸಹಾಯಕರಿಗೆ ನೀಡಬಹುದು. ಅವರ ಅಗತ್ಯಗಳಿಗೆ ಸಹಾಯ ಮಾಡಿ. ಆದರೆ ನಮ್ಮ ಸಹಾಯವನ್ನು ಅವರು ದುರ್ಬಳಕೆ ಮಾಡಿಕೊಳ್ಳಬಾರದು ಎಂದಿದ್ದಾರೆ. ಅನಾಮಿಕಾ ರಾಣಾ ಅವರ ಈ ಪೋಸ್ಟ್ ಅನ್ನು 5,130 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.