Tuesday, 26th November 2024

AUS vs IND: ದಿಢೀರ್‌ ತವರಿಗೆ ಮರಳಿದ ಕೋಚ್‌ ಗಂಭೀರ್‌

ಸಿಡ್ನಿ: ಆಸ್ಟ್ರೇಲಿಯಾ(AUS vs IND) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯ ಗೆದ್ದ ಖಷಿಯಲ್ಲಿರುವ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌(Coach Gautam Gambhir) ದಿಢೀರ್‌ ಆಗಿ ತವರಿಗೆ ಮರಳಿದ್ದಾರೆ. ಕೌಟುಂಬಿಕ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಗಂಭೀರ್ ಭಾರತಕ್ಕೆ ಮರಳಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಡಿಸೆಂಬರ್ 6 ರಂದು ನಡೆಯುವ ದ್ವಿತೀಯ ಪಂದ್ಯದ ವೇಳೆ ಗಂಭೀರ್‌ ಮತ್ತೆ ತಂಡ ಕೂಡಿಕೊಳ್ಳುವ ನಿರೀಕ್ಷೆ ಇದೆ.

ಎರಡು ದಿನಗಳ ಪಿಂಕ್ ಬಾಲ್ ಪ್ರವಾಸದ ಆಟಕ್ಕಾಗಿ ಭಾರತ ತಂಡ ಬುಧವಾರ ಕ್ಯಾನ್‌ಬೆರಾಗೆ ಪ್ರಯಾಣಿಸಲಿದೆ. ಆದರೆ, ಶನಿವಾರ ಆರಂಭವಾಗಲಿರುವ ಈ ಅಭ್ಯಾಸ ಪಂದ್ಯಕ್ಕೆ ಗೌತಮ್ ಗಂಭೀರ್ ತಂಡದ ಭಾಗವಾಗುವುದಿಲ್ಲ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ತಂಡ ಕೂಡಿಕೊಂಡಿರುವ ರೋಹಿತ್‌ ಶರ್ಮ ಸೋಮವಾರ ನೆಟ್ಸ್‌ನಲ್ಲಿ ಪಿಂಕ್‌ ಬಾಲ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದರು. ಮಂಗಳವಾರ ಟೀಮ್‌ ಇಂಡಿಯಾ ಆಟಗಾರರು ಕೂಡ ಅಭ್ಯಾಸ ಆರಂಭಿಸಿದ್ದಾರೆ.

ಇದನ್ನೂ ಓದಿ Virat Kohli: ಆರ್‌ಸಿಬಿಗೆ ಕೊಹ್ಲಿ ಮತ್ತೆ ನಾಯಕ!

ಪರ್ತ್‌ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 150 ರನ್‌ಗೆ ಕುಸಿದಿದ್ದ ಭಾರತ, ಸಂಘಟಿತ ಬೌಲಿಂಗ್‌ ದಾಳಿ ನಡೆಸಿ ಆಸೀಸ್‌ ತಂಡವನ್ನು 104 ರನ್‌ಗೆ ಕಟ್ಟಿ ಹಾಕಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಮತ್ತು ವಿರಾಟ್‌ ಕೊಹ್ಲಿಯ ಅಮೋಘ ಶತಕದ ನೆರವಿನಿಂದ 6 ವಿಕೆಟ್‌ಗೆ 487 ರನ್‌ ಗಳಿಸಿ ಡಿಕ್ಲೇರ್‌ ಘೋಷಿಸಿ ಆತಿಥೇಯ ಆಸೀಸ್‌ಗೆ 534ರನ್‌ಗಳ ಬೃಹತ್‌ ಗೆಲುವಿನ ಗುರಿ ನೀಡಿತು. ಈ ದೊಡ್ಡ ಮೊತ್ತವನ್ನು ಕಂಡು ಕಂಗಾಲಾದ ಆಸ್ಟ್ರೇಲಿಯಾ 238ರನ್‌ ಸರ್ವಪತನ ಕಂಡಿತು.

ಗೆಲುವಿನೊಂದಿಗೆ ಭಾರತ ಹಲವು ದಾಖಲೆ ನಿರ್ಮಿಸಿತ್ತು. 47 ವರ್ಷದ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಗರಿಷ್ಠ ರನ್‌ ಅಂತರದ ಗೆಲುವು ಸಾಧಿಸಿತು. 1977ರಲ್ಲಿ ನಡೆದಿದ್ದ ಮೆಲ್ಬೋರ್ನ್ ಟೆಸ್ಟ್‌ ಪಂದ್ಯದಲ್ಲಿ ಭಾರತ 222 ರನ್‌ ಗೆಲುವು ಸಾಧಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಏಷ್ಯಾದ ಹೊರಗೆ ಭಾರತದ ದೊಡ್ಡ ಗೆಲುವು (ರನ್‌ ಅಂತರದಲ್ಲಿ)

2019: ವೆಸ್ಟ್‌ ಇಂಡೀಸ್‌ ವಿರುದ್ಧ- ನಾರ್ಥ್‌ಸೌಂಡ್‌ನಲ್ಲಿ 318 ರನ್‌ಗಳ ಜಯ

2024: ಆಸ್ಟ್ರೇಲಿಯಾ ವಿರುದ್ಧ- ಪರ್ತ್‌ನಲ್ಲಿ 295 ರನ್‌ಗಳ ಜಯ

1986: ಇಂಗ್ಲೆಂಡ್‌ ವಿರುದ್ಧ- ಹೆಡಿಂಗ್ಲೆಯಲ್ಲಿ 279 ರನ್‌ಗಳ ಜಯ

2019: ನ್ಯೂಜಿಲೆಂಡ್‌ ವಿರುದ್ಧ- ಆಕ್ಲೆಂಡ್‌ನಲ್ಲಿ 272 ರನ್‌ಗಳ ಜಯ

2019: ವೆಸ್ಟ್‌ ಇಂಡೀಸ್‌ ವಿರುದ್ಧ- ಕಿಂಗ್ಸ್‌ಟನ್‌ನಲ್ಲಿ 257 ರನ್‌ಗಳ ಜಯ